ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯ ಏಳಿಗೆಗೆ ಬೇಕು ಪ್ರತಿಜ್ಞೆ

Last Updated 25 ಜೂನ್ 2017, 19:30 IST
ಅಕ್ಷರ ಗಾತ್ರ

ಶಾಲೆ ಇಡೀ ಸಮಾಜದ ಪ್ರಗತಿಯ ಮೂಲಸ್ಥಳ. ಪ್ರತಿಯೊಂದು ಶಾಲೆಯ ಪ್ರಗತಿಯು ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರ ಉತ್ಸಾಹ ಹಾಗೂ ಸೇವಾರ್ಪಣ ಮನೋಭಾವವನ್ನು ಅವಲಂಬಿಸಿರುತ್ತದೆ. ಪ್ರತಿಯೊಬ್ಬರಲ್ಲಿ ಸ್ವಯಂಶಿಸ್ತು, ಬದ್ಧತೆ ಮತ್ತು ಪ್ರಾಮಾಣಿಕತೆಗಳು ಸ್ವಯಂಪ್ರೇರಣೆಯಿಂದ ರೂಢಿಯಾಗುವುದಿಲ್ಲವೋ ಅಲ್ಲಿಯವರೆಗೆ ಅಪೇಕ್ಷಿತ ಪ್ರಗತಿ ಅಸಾಧ್ಯ. ಹೀಗಾಗಿ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರತಿಜ್ಞೆಯನ್ನು ಕೈಗೊಳ್ಳುವ ಮೂಲಕ ಶಿಕ್ಷಣದ ಮೌಲ್ಯಗಳನ್ನು ನಿರಂತರ ಕಾಪಾಡುವ ಸಂಕಲ್ಪವನ್ನು ಮಾಡಬೇಕಿದೆ. ಈ ಪ್ರತಿಜ್ಞೆಯಂತೆ ಎಲ್ಲರೂ ನಡೆದುಕೊಂಡರೆ ಆಗ ಶಿಕ್ಷಣದ ಗುಣಮಟ್ಟ ಹೆಚ್ಚುವುದರಲ್ಲಿ ಸಂಶಯವಿಲ್ಲ.

ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ: ಈ ದೇಶದ ಭವಿಷ್ಯವಾಗಲಿರುವ ನಾನು ಪ್ರತಿದಿನ ಶಾಲೆಗೆ ಹಾಜರಾಗುತ್ತೇನೆ. ಶಾಲೆಯಲ್ಲಿ ನಡೆಯುವ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ. ಕಲಿಕೆಗೆ ಸಿಗುವ ಎಲ್ಲ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತೇನೆ. ನನ್ನ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತ, ಜೀವನಕೌಶಲಗಳನ್ನು ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ.

ಶಿಕ್ಷಕರ ಪ್ರತಿಜ್ಞಾವಿಧಿ: ಇಂದಿನ ಮಕ್ಕಳ ಭವಿಷ್ಯ ರೂಪಿಸಿ, ಬಲಿಷ್ಠ ಭಾರತವನ್ನು ಕಟ್ಟಲು ಗೌರವಯುತ ಸ್ಥಾನ ಪಡೆದಿರುವ ನಾನು ಪ್ರಮಾಣಿಕತೆಯಿಂದ ಶ್ರಮಿಸಿತ್ತೇನೆ. ಶಿಕ್ಷಕವೃತ್ತಿಯೆಂಬ ಗೌರವವನ್ನೂ ಮೌಲ್ಯವನ್ನೂ ಎತ್ತಿ ಹಿಡಿಯುತ್ತೇನೆ. ನಮ್ಮ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ಪಡೆದ ಮಗು ಸಮಾಜಕ್ಕೆ ಕೊಡುಗೆಯಾಗಬೇಕೆಂಬ ಗುರಿ ಹೊಂದಿದ್ದೇನೆ. ಕೈಗೊಂಡಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಕಲ ರೀತಿಯಿಂದಲೂ ಸಿದ್ಧ, ಸೇವೆಯೇ ಪುಣ್ಯದ ಕೆಲಸ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ.

ಪೋಷಕರ ಪ್ರತಿಜ್ಞಾವಿಧಿ: ಈ ದೇಶದ ಅಮೂಲ್ಯ ಸಂಪತ್ತಾದ ನನ್ನ ಮಗ/ಮಗಳನ್ನು ಪ್ರತಿದಿನ ಶಾಲೆಗೆ ಕಳಿಸುತ್ತೇನೆ. ಯಾವುದೇ ಕಾರಣಕ್ಕೂ ಶಿಕ್ಷಣದ ಮಧ್ಯೆ ಶಾಲೆಯನ್ನು ಬಿಡಿಸುವುದಿಲ್ಲ. ಕಲಿಕೆಯ ಮುಕ್ತ ಅವಕಾಶವನ್ನು ನನ್ನ ಮಗುವಿಗೆ ಒದಗಿಸುತ್ತೇನೆ. ಮಗುವಿನ ಆರೋಗ್ಯ ಮತ್ತು ನೈರ್ಮಲ್ಯದ ಕಡೆಗೆ ಗಮನ ವಹಿಸುತ್ತೇನೆ. ಶಾಲೆಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಾಗೂ ಪೋಷಕರ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸುತ್ತೇನೆ. ಮಗುವಿನ ಕಲಿಕೆಯ ಬಗ್ಗೆ ಸಮಾಲೋಚನೆ ನಡೆಸುತ್ತೇನೆಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ.

ಎಸ್‌ಡಿಎಂಸಿಯವರ ಪ್ರತಿಜ್ಞಾವಿಧಿ: ಸಮಾಜಕ್ಕೆ ಭದ್ರ ಬುನಾದಿ ಹಾಕುವ ಅಡಿಗಲ್ಲು ನಿರ್ಮಿಸುವ ಭೂಮಿಕೆಯ ಆಡಳಿತ ಯಂತ್ರದ ಚಕ್ರಗಳಾಗಿರುವ ನಾವು ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಪ್ರಯತ್ನ ಮಾಡುತ್ತೇವೆ. ಶಾಲಾಭಿವೃದ್ಧಿ ಯೋಜನೆಯ ಭಾಗವಾಗಿರುವ ನಾವು ಅದರ ಕಾರ್ಯಯೋಜನಾ ತಂತ್ರಗಳನ್ನು ಅನುಪಾಲಿಸಿ ನಿಗದಿತ ಗುರಿ ಮುಟ್ಟುವುದಕ್ಕಾಗಿ ಶ್ರಮವಹಿಸುತ್ತೇವೆ. ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಭಾಯಿಸುತ್ತೇವೆ.

ಶಾಲೆ ಬಿಡುವ ಹಾಗೂ ಅನಿಯಮಿತ ಗೈರು ಹಾಜರಾಗುವ ಮಕ್ಕಳ ಪೋಷಕರ ಮನವೊಲಿಸಿ ಮಕ್ಕಳನ್ನು ಮುಖ್ಯವಾಹಿನಿಗೆ ಕಳುಹಿಸುತ್ತೇವೆ. ಶಾಲೆಯ ಸಭೆ-ಸಮಾರಂಭಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇವೆ. ಶಾಲೆಯ ಅಭಿವೃದ್ಧಿಗಾಗಿ ಊರಿನ ವಿವಿಧ ಮೂಲಗಳಿಂದ ನೆರವನ್ನು ಪಡೆಯುತ್ತೇವೆ. ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ತೊಂದರೆಯಾಗದಂತೆ ನಮ್ಮ ಹೊಣೆಗಾರಿಕೆಯನ್ನು ನಿರ್ವಹಿಸುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT