ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಣದೇ ಸೊರಗಿದ ದೊಡ್ಡ ಕೆರೆ

Last Updated 27 ಜೂನ್ 2017, 6:13 IST
ಅಕ್ಷರ ಗಾತ್ರ

ಕೂಡ್ಲಿಗಿ: ತುಂಗಭದ್ರಾ ಜಲಾಶಯ ಸೇರಿದಂತೆ ಜಿಲ್ಲೆಯಾದ್ಯಂತ ರೈತರಿಂದ ಸ್ವಯಂ ಪ್ರೇರಿತವಾಗಿ ಹಾಗೂ ಸರ್ಕಾರದ ಅನುದಾನದಲ್ಲಿ ಕೆರೆಗಳ ಹೂಳೆತ್ತುವ ಕಾರ್ಯ ಭರದಿಂದ ನಡೆಸಲಾಯಿತು. ಆದರೆ ತಾಲ್ಲೂಕಿನ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಕೂಡ್ಲಿಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ದೊಡ್ಡ ಕೆರೆಯು ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ರೈತರ ನಿರಾಸಕ್ತಿಯಿಂದ ಯಾವುದೇ ಅಭಿವೃದ್ಧಿ ಕಾಣದೆ ಸೊರುಗುತ್ತಿದೆ.

ಕಳೆದ ವರ್ಷ ಕೆರೆಗೆ ಸ್ವಲ್ಪ ಪ್ರಮಾಣದ ನೀರು ಬಂದಿದ್ದು ಬಿಟ್ಟರೆ ಸುಮಾರು ನಾಲ್ಕೈದು ವರ್ಷಗಳಿಂದ ಕೆರೆ ತುಂಬಿಲ್ಲ. ಇದರಿಂದ ಕೆರೆ ಅಂಗಳದಲ್ಲಿ ಗಿಡ, ಮರಗಳು ಬೆಳೆದು ನಿಂತಿವೆ. ಅಲ್ಲದೆ ಕೆರೆಯ ಏರಿಯ ಮೇಲೆ ಎರಡು ಕಡೆ ಬಳ್ಳಾರಿ ಜಾಲಿ, ಇತರೆ ಗಿಡ, ಬಳ್ಳಿಗಳು ಬೆಳೆದು ಏರಿಯ ಮೇಲೆ ನಡೆದಾಡುವುದೇ ದುಸ್ಥರವಾಗಿದೆ.

ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿರುವ ಈ ಕೆರೆ 92.53 ಹೆಕ್ಟೇರ್‌ ವಿಸ್ತೀರ್ಣ ಹೊಂದಿದ್ದು, 40.60 ಎಂಸಿಎಫ್‌ಟಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೆರೆಯ ಏರಿಯ ಉದ್ದ 990ಮೀ ಇದ್ದು 109 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರು ನೀಡಲಾಗುತ್ತದೆ. ಅಲ್ಲದೆ ಕೆರೆ ಕಾವಲರಹಟ್ಟಿ, ಅಮ್ಮನಕೆರೆ, ಕಕ್ಕುಪ್ಪಿ, ಕೂಡ್ಲಿಗಿ, ಮೊರಬನಹಳ್ಳಿ ಗ್ರಾಮಗಳ ಕುರಿ, ಮೇಕೆ, ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲವಾಗಿದ್ದು, ಈ ಕೆರೆ ತುಂಬಿದರೆ ಸುತ್ತ ಮುತ್ತಲ ರೈತ ಹೊಲಗಳಲ್ಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುತ್ತದೆ. ಇಂತಹ ಕೆರೆ ಇದೀಗ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ.

2012ರಲ್ಲಿ ₹95 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದ್ದು ಇದರಲ್ಲಿ ₹14 ಲಕ್ಷ ವೆಚ್ಚದಲ್ಲಿ 31 ಸಾವಿರ ಕ್ಯೂಬಿಕ್ ಹೂಳೆತ್ತಲಾಗಿದೆ. ಉಳಿದಂತೆ ₹ 4.76 ಲಕ್ಷ  ಏರಿಯ ಅಭಿವೃದ್ಧಿಗೆ,  ₹8 ಲಕ್ಷ ಕೋಡಿ ಅಭಿವೃದ್ಧಿಗೆ, ₹5 ಲಕ್ಷ ಕಾಲುವೆ ಅಭಿವೃದ್ಧಿಗೆ  ವೆಚ್ಚ ಮಾಡಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗ ತಿಳಿಸಿದ್ದಾರೆ. ಆದರೆ ಎಲ್ಲಿಯೂ ಅಭಿವೃದ್ಧಿಯ ಲಕ್ಷಣಗಳು ಕಾಣಿಸುತ್ತಿಲ್ಲ.

ಕೆರೆಯ ತೂಬಿನ ಹಿಂಭಾಗದಲ್ಲಿ ಗಿಡ ಗಂಟಿಗಳು ಬೆಳೆದಿದ್ದು, ತೂಬಿನಿಂದ ಕಾಲುವೆ ಮುಚ್ಚಿ ಹೋಗಿದೆ. 2 ಕಿ.ಮೀ. ಉದ್ದದ ಎಡದಂಡೆ ಕಾಲುವೆ, 1.6 ಕಿ.ಮೀ. ಉದ್ದದ ಬಲದಂಡೆ ಕಾಲುವೆ ಕಾಲುವೆಗಳು ಅನೇಕ ಕಡೆ ಒಡೆದು ಹೋಗಿವೆ. ಕೆರೆ ತುಂಬಿದರೆ, ರೈತರ ಗದ್ದೆಗಳು ಕೆರೆ ನೀರಿನಲ್ಲಿ ಮುಳುಗಲಿವೆ ಎಂಬ ದೂರುಗಳು ಕೇಳಿ ಬಂದಿವೆ.

ಉದ್ಯೋಗ ಖಾತ್ರಿ ಯೋಜನೆಯಡಿ ಕೂಡಲೇ ಕೆರೆಯ ಏರಿಯ ಮೇಲಿನ ಗಿಡ, ಗಂಟಿಗಳನ್ನು ತೆರವುಗೊಳಿಸುವ ಕೆಲಸ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಕೆರೆಯ ಹಿನ್ನೀರು ಪ್ರದೇಶದಲ್ಲಿ ಎಲ್ಲೆಂದರಲ್ಲಿ ಗುಂಡಿಗಳನ್ನು ತೋಡಿ ಮರಳು ಸಾಗಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ದೊಡ್ಡ ಕೆರೆಯ ಅಂಕಿ ಅಂಶ (ಹೆಕ್ಟೇರ್‌ಗಳಲ್ಲಿ)
92.53 ಒಟ್ಟು ಕೆರೆಯ ವಿಸ್ತೀರ್ಣ

40.60 ಎಂಸಿಎಫ್‌ಟಿ, ನೀರು ಸಂಗ್ರಹ ಸಾಮರ್ಥ್ಯ

109 ಕೆರೆಯ ಅಚ್ಚುಕಟ್ಟು ಪ್ರದೇಶ

₹95ಲಕ್ಷ ಕೆರೆ ಅಭಿವೃದ್ಧಿಗೆ ಮಾಡಿರುವ ವೆಚ್ಚ

* * 

ತಾಲ್ಲೂಕಿನ ದೊಡ್ದ ಕೆರೆಗಳಲ್ಲಿ ಒಂದಾಗಿರುವ ಕೂಡ್ಲಿಗಿ ಕೆರೆಯಲ್ಲಿನ ಹೂಳು ತೆಗೆಸಿ, ಕೆರೆಗೆ ಶಾಶ್ವತ ನೀರು ತುಂಬಿಸುವ ಯೋಜನೆ ಮಾಡಬೇಕು
ಎ.ಎಂ. ಚನ್ನಯ್ಯ, ಗೌಡ್ರು ಬಸವರಾಜ 
ಮಾಗಣಿ ರೈತರು, ಕೂಡ್ಲಿಗಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT