ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರಳೆ ಬೆಲೆ ದುಬಾರಿ; ಕುಗ್ಗದ ಬೇಡಿಕೆ

Last Updated 27 ಜೂನ್ 2017, 6:35 IST
ಅಕ್ಷರ ಗಾತ್ರ

ಮೈಸೂರು: ನಗರಕ್ಕೆ ನೇರಳೆ ಹಣ್ಣು ಪ್ರವೇಶಿಸಿದ್ದು, ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.

ಕಿಲೊವೊಂದಕ್ಕೆ ₹400ರಿಂದ ₹500ರವರೆಗೂ ಇದರ ದರ ನಿಗದಿಯಾಗಿದೆ. ಗಾತ್ರದಲ್ಲಿ ದಪ್ಪವಾಗಿರುವ ನೇರಳೆ ಹಣ್ಣು, ತಿನ್ನುವುದಕ್ಕೂ ರುಚಿಕರವಾಗಿದೆ.
ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ನೇರಳೆ ಹಣ್ಣು ಹೆಚ್ಚಾಗಿ ಇಳುವರಿ ಬರುತ್ತದೆ. ಸದ್ಯ, ಮಾರುಕಟ್ಟೆಯಲ್ಲಿ ಸಿಗುತ್ತಿರುವ ಹಣ್ಣುಗಳಲ್ಲಿ ಬಹಳಷ್ಟು ಮಹಾರಾಷ್ಟ್ರದ ಕಡೆಯಿಂದ ಬಂದಿರುವಂತಹವು. ಜಿಲ್ಲೆಯಲ್ಲಿ ನೇರಳೆಯನ್ನು ಒಂದು ಬೆಳೆಯಾಗಿ ಬೆಳೆದಿರುವ ಉದಾಹರಣೆ ಇಲ್ಲ ಎನ್ನುವಷ್ಟು ಕಡಿಮೆ ಇದೆ.

ಏಕೆ ಹೀಗೆ?: ಜಿಲ್ಲೆಯಲ್ಲಿರುವ ಜಮೀನುಗಳೆಲ್ಲ ತುಂಡು ಭೂಮಿ. ಇದರಲ್ಲಿ ಗಿಡಗಳನ್ನು ನೆಟ್ಟರೆ ಇತರೆ ಬೆಳೆಗಳು ಬೆಳೆಯುವುದು ಕಷ್ಟ. ಅದರಿಂದ ಕೇವಲ ಬದುಗಳಲ್ಲಿ, ಹಿತ್ತಲಲ್ಲಿ ಮಾತ್ರವೇ ನೇರಳೆ ಗಿಡಗಳನ್ನು ಬೆಳೆಸಲಾಗುತ್ತದೆ. ಆದರೆ, ಇದನ್ನೇ ಒಂದು ಬೆಳೆಯಾಗಿ ಬೆಳೆಯುವ ಎಲ್ಲ ಅವಕಾಶಗಳೂ ಇವೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಲಾಭವೇ?: ನೇರಳೆಯಿಂದ ಲಾಭ ಗಳಿಸಬಹುದು ಎಂಬುದು ಅಧಿಕಾರಿಗಳ ಮಾತು. ನಗರ ಪ್ರದೇಶಗಳಲ್ಲಿ ಹೆಚ್ಚಿನ ಬೆಲೆಗೆ ನೇರಳೆ ಮಾರಾಟವಾಗುತ್ತಿದೆ. ಆಯುರ್ವೇದದಲ್ಲಿ ನೇರಳೆ ರಸಕ್ಕೆ ಒಳ್ಳೆಯ ಬೆಲೆ ಇದೆ. ಅತಿಸಾರ, ಭೇದಿ ನಿಲ್ಲಿಸುವ ಔಷಧವಾಗಿಯೂ ಇದು ಹೆಸರಾಗಿದೆ. ನೇರಳೆಹಣ್ಣಿನ ಶರಬತ್ತು ಎಂದೇ ಇದು ಖ್ಯಾತವಾಗಿದೆ. ಇದರ ತಿರುಳನ್ನು ವೈನ್, ವಿನೆಗರ್, ಜೆಲ್ಲಿ, ಜಾಮ್ ತಯಾರಿಕೆಗೂ ಬಳಸಲಾಗುತ್ತದೆ. ಇದರ ಬೀಜದಲ್ಲಿ ಪ್ರೊಟೀನ್, ಕಾರ್ಬೊಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುವುದರಿಂದ ಆಯುರ್ವೇದ, ಯುನಾನಿ ಔಷಧ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ.

ಬೆಳೆಯುವುದು ಹೇಗೆ?:  ದೇಸಿ ತಳಿಯನ್ನು ಹಾಕಿದರೆ ಇಳುವರಿ ಪಡೆಯಲು ಕನಿಷ್ಠ ಎಂದರೂ 8ರಿಂದ 10 ವರ್ಷ ಕಾಯಬೇಕು. ಕಸಿ ಗಿಡ ನೆಟ್ಟರೆ ಕೇವಲ ಮೂರೇ ವರ್ಷದಲ್ಲಿ ಹಣ್ಣುಗಳು ಸಿಗುತ್ತವೆ.  ಮಾರ್ಚ್, ಏಪ್ರಿಲ್‌ನಲ್ಲಿ ಮರ ಹೂ ಬಿಡಲಾರಂಭಿಸುತ್ತದೆ. ನಂತರ, ಜೂನ್ ತಿಂಗಳ ಹೊತ್ತಿಗೆ ಹಣ್ಣಾಗುತ್ತವೆ. ಒಂದು ಮರ ಸುಮಾರು 2 ಕ್ವಿಂಟಲ್‌ನಷ್ಟು ಹಣ್ಣುಗಳನ್ನು ಕೊಡುತ್ತದೆ.

ಟೊಮೆಟೊ ಆವಕವೂ ಹೆಚ್ಚಳ; ದರವೂ ಏರಿಕೆ: ಪೂರೈಕೆ ಹೆಚ್ಚಾದಂತೆ ಬೆಲೆ ಇಳಿಯುತ್ತದೆ ಎಂಬುದು ಅರ್ಥಶಾಸ್ತ್ರದ ನಿಯಮ. ಆದರೆ, ಟೊಮೆಟೊ ವಿಚಾರದಲ್ಲಿ ಈ ನಿಯಮ ಸುಳ್ಳಾಗಿದೆ. ಕಳೆದ ವಾರ ಇದರ ಆವಕ ದಿನವೊಂದಕ್ಕೆ 3 ಸಾವಿರ ಕ್ವಿಂಟಲ್‌ ಆಸುಪಾಸಿನಲ್ಲಿತ್ತು. ಆದರೆ, ಈ ವಾರ ಇದರ ಪೂರೈಕೆ ಪ್ರಮಾಣ ದಿನಕ್ಕೆ 4,162 ಕ್ವಿಂಟಲ್‌ಗೆ ಹೆಚ್ಚಿದೆ. ಪೂರೈಕೆ ಹೆಚ್ಚುತ್ತಿದ್ದಂತೆ ಬೆಲೆ ಇಳಿಯಬೇಕಿತ್ತು. ಕಳೆದ ವಾರ ಸಗಟು ಧಾರಣೆ ಕೆ.ಜಿಗೆ ₹ 24ರಿಂದ 26ರವರೆಗೆ ಇದ್ದದ್ದು, ಈಗ ₹ 26ರಿಂದ ₹ 32ರವರೆಗೆ ಇದೆ. ಕೇರಳದ ವರ್ತಕರ ವ್ಯಾಪಾರ ಭರಾಟೆ ದರ ಏರಿಕೆಗೆ ಕಾರಣ ಎನ್ನಲಾಗಿದೆ.

ಕೋಳಿಮೊಟ್ಟೆ ಸ್ಥಿರ: ಕೋಳಿ ಮಾಂಸ ಇಳಿಕೆ: ಕಳೆದ ವಾರದಿಂದ ಏರಿಕೆಯ ಹಾದಿ ಹಿಡಿದಿದ್ದ ಕೋಳಿ ಮೊಟ್ಟೆ ಧಾರಣೆ ಈ ವಾರ ಸ್ಥಿರವಾಗಿದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಕಳೆದ ವಾರ ₹ 4.10ರಲ್ಲೇ ಮುಂದುವರಿದಿದೆ.

ಕರ್ನಾಟಕ ರಾಜ್ಯ ಪೌಲ್ಟ್ರಿ ಫಾರ್ಮಸ್ ಹಾಗೂ ಬ್ರೀಡರ್ಸ್ ಅಸೋಸಿಯೇಷನ್‌ನ ಫಾರಂ ಕೋಳಿ ಸಗಟು ದರ ಕೆ.ಜಿಗೆ ₹ 114ರಿಂದ ₹ 99ಕ್ಕೆ ಹಾಗೂ ಕರ್ಲ್ ಬರ್ಡ್ ದರ ₹ 110ರಿಂದ ₹ 100ಕ್ಕೆ ಕಡಿಮೆಯಾಗಿದೆ.

**

ನೇರಳೆ ಸಸಿ ಎಲ್ಲಿ ಲಭ್ಯ?
ಜಿಲ್ಲೆಯ ತೋಟಗಾರಿಕಾ ಇಲಾಖೆ ಹಾಗೂ ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕಸಿ ಗಿಡಗಳು ಲಭ್ಯ ಇವೆ. ಮಾಹಿತಿಗೆ ದೂ: 0821–2422255/2591267 ಸಂಪರ್ಕಿಸಬಹುದು.

**

ತರಕಾರಿ * ಹಿಂದಿನ ವಾರದ ದರ * ಈಗಿನ ದರ
ಟೊಮೆಟೊ * 24-26 * 22-32
ಬೀನ್ಸ್ * 33-35 * 39-40
ಕ್ಯಾರೆಟ್ * 40-50 * 40-50
ಎಲೆಕೋಸು * 11-12 * 10-12
ಹಸಿರುಮೆಣಸಿನಕಾಯಿ * 33-35 * 36-38
ಬೀಟ್‌ರೂಟ್ * 18-26 * 16-18
ನುಗ್ಗೆಕಾಯಿ * 35-40 * 35-40

(ಜೂನ್ 23ರ ಎಪಿಎಂಸಿ ಸಗಟು ಧಾರಣೆ ₹ ಗಳಲ್ಲಿ ಪ್ರತಿ ಕೆ.ಜಿ.ಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT