ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್‌ಗೆ ಪರ್ಯಾಯವೇ ಹೊಸ ಐಪ್ಯಾಡ್ ಪ್ರೊ?

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನ ಕ್ಷೇತ್ರ  ಕ್ಷಣಕ್ಷಣಕ್ಕೂ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿರುತ್ತದೆ. ಇಂದು ಮಾರುಕಟ್ಟೆಗೆ ಬಂದ ಸಾಧನಕ್ಕೆ ನಾಳೆ ಪರ್ಯಾಯ ಸಾಧನವೊಂದು ಸಿದ್ಧವಾಗಿರುತ್ತದೆ.

ಇದೇ ನಿರೀಕ್ಷೆಯೊಂದಿಗೆ ಕಂಪ್ಯೂಟರ್‌ಗೆ ಪರ್ಯಾಯ ಎನ್ನುವಂತೆ ಆ್ಯಪಲ್‌ ಐಪ್ಯಾಡ್‌ 2010ರಲ್ಲಿ ಮಾರುಕಟ್ಟೆ ಪ್ರವೇಶಿಸಿತು. ಆದರೆ, ಇದುವರೆಗೂ ಆ ಸ್ಥಾನ ತುಂಬಲು ಸಾಧ್ಯವಾಗಿಲ್ಲ. ಇದೀಗ ಐಪ್ಯಾಟ್‌ ಪ್ರೋ ಬಿಡುಗಡೆ ಆಗಿದ್ದು, ಪರ್ಯಾಯದ ನಿರೀಕ್ಷೆಯನ್ನು ಗರಿಗೆದರಿಸಿದೆ. ಹೇಳಿಕೆಯಾಗೇ ಉಳಿದಿದೆ

‘ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ಫೋನ್ ನಡುವಣ ಒಂದು ಸಾಧನ ಐಪ್ಯಾಡ್’ ಹೀಗೆ ಹೇಳಿದ್ದು ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಆ್ಯಪಲ್‌ನ ಸಂಸ್ಥಾಪಕ ಸ್ಟೀವ್ ಜಾಬ್ಸ್. 2010ರಲ್ಲಿ ಮೊದಲ ಐಪ್ಯಾಡ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದರು.

ಇದಾದ ಐದು ವರ್ಷಗಳ ನಂತರ ಅವರ ಉತ್ತರಾಧಿಕಾರಿ ತಿಮೋಥಿ ಡಿ. ಕುಕ್ ‘ಐಪ್ಯಾಡ್ ಪ್ರೊ’ ಬಿಡುಗಡೆ ಮಾಡಿದ್ದರು. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಕಂಪ್ಯೂಟರ್‌ಗೆ ಪರ್ಯಾಯವಾಗಿ ಇದು ಕಾರ್ಯನಿರ್ವಹಿಸಲಿದೆ’ ಎಂದು ಹೇಳಿದ್ದರು.

ಆದರೆ, ಅಂತರರಾಷ್ಟ್ರೀಯ ಮಟ್ಟದ ಹಲವು ತಜ್ಞರ, ವೃತ್ತಿಪರರ ಅಭಿಪ್ರಾಯಗಳ ಪ್ರಕಾರ ಅವರ ಹೇಳಿಕೆ ಇನ್ನೂ ನಿಜವಾಗಿಲ್ಲ. ಹೆಚ್ಚಿನ ವೃತ್ತಿಪರರು ಕಂಪ್ಯೂಟರ್ ಜತೆ ಐಪ್ಯಾಡ್‌ ಅನ್ನು ಹೆಚ್ಚುವರಿಯಾಗಿ ಬಳಸುತ್ತಿದ್ದಾರೆಯೇ ವಿನಾ ಪರ್ಯಾಯವಾಗಿ ಬಳಸುತ್ತಿಲ್ಲ. ಹೀಗಾಗಿ ಒಟ್ಟಾರೆಯಾಗಿ ಐಪ್ಯಾಡ್‌ ಮಾರಾಟದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಇಳಿಕೆ ಕಂಡುಬಂದಿದೆ.

ಐಪ್ಯಾಡ್‌ ಪ್ರೊ:
ಆ್ಯಪಲ್‌ನ ಹೊಸ ‘ಐಪ್ಯಾಡ್ ಪ್ರೊ’ ಟ್ಯಾಬ್ಲೆಟ್‌ ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಕಂಪ್ಯೂಟರ್‌ಗೆ ಪರ್ಯಾಯವಾಗುವ ನಿಟ್ಟಿನಲ್ಲಿ ಹೊಸ ‘ಐಪ್ಯಾಡ್ ಪ್ರೊ’ ಒಂದು ಹೆಜ್ಜೆ ಮುಂದಡಿಯಿಟ್ಟಿದೆ ಎಂಬುದು ತಜ್ಞರ ಅಭಿಮತ.

10.5 ಇಂಚು ಮತ್ತು 12.9 ಇಂಚಿನ ಪರದೆ ಅಥವಾ ಸ್ಕ್ರೀನ್ ಹೊಂದಿರುವ ‘ಐಪ್ಯಾಡ್ ಪ್ರೊ’ ಮಾದರಿಗಳು ಹಿಂದಿನ ಐಪ್ಯಾಡ್‌ಗಳಿಗೆ ಹೋಲಿಸಿದರೆ ಬಹಳಷ್ಟು ಉತ್ತಮ ಫೀಚರ್‌ಗಳನ್ನು ಹೊಂದಿವೆ. ಆದಾಗ್ಯೂ, ಲ್ಯಾಪ್‌ಟಾಪ್ ಜತೆ ತುಲನೆ ಮಾಡಿದಾಗ ಸಾಕಷ್ಟು ಸಮಸ್ಯೆಗಳೂ ಕಂಡುಬಂದಿವೆ ಎನ್ನುತ್ತಾರೆ ತಜ್ಞರು.

ಪ್ರಯೋಜನಗಳು
* ಉತ್ತಮ ವೇಗ:
ಹಿಂದಿನವುಗಳಿಗೆ ಹೋಲಿಸಿದರೆ ಹೊಸ ‘ಐಪ್ಯಾಡ್‌ ಪ್ರೊ’ದ ಕಾರ್ಯನಿರ್ವಹಣಾ ಸಾಮರ್ಥ್ಯ ಶೇ 50ರಷ್ಟು ಹೆಚ್ಚಿದೆ. ಹೈ ರೆಸಲ್ಯೂಷನ್ ಫೋಟೊಗಳ ಎಡಿಟಿಂಗ್, ಹೆಚ್ಚಿನ ಆ್ಯಪ್‌ಗಳ ಬಳಕೆ, ಗ್ರಾಫಿಕ್ಸ್, ಗೇಮ್ಸ್‌ಗಳಿಗೆ ಪೂರಕವಾಗಿದೆ.

* ಹೆಚ್ಚಿನ ಸ್ಕ್ರೀನ್ ರಿಫ್ರೆಷ್‌ ರೇಟ್: ಹೊಸ ‘ಐಪ್ಯಾಡ್‌ ಪ್ರೊ’ ಹೆಚ್ಚಿನ ಸ್ಕ್ರೀನ್ ರಿಫ್ರೆಷ್‌ ರೇಟ್ ಹೊಂದಿದೆ. ಇದು ಆ್ಯಪ್‌ಗಳನ್ನು ವೇಗವಾಗಿ ಓಪನ್ ಮಾಡಲು, ಕ್ಲೋಸ್ ಮಾಡಲು ಮತ್ತು ವೆಬ್‌ಸೈಟ್‌ಗಳಲ್ಲಿ ಮಾಹಿತಿಗಳನ್ನು ವೇಗವಾಗಿ ಸ್ಕ್ರೋಲ್ ಮಾಡಲು ನೆರವಾಗಲಿದೆ.

* ಹೆಚ್ಚು ಗಾತ್ರದ ಪರದೆ: ಹೊಸ ಐಪ್ಯಾಡ್‌ ಪ್ರೊ, ಹಿಂದಿನವುಗಳಿಗಿಂತ ಹೆಚ್ಚು ಗಾತ್ರದ ಪರದೆಯನ್ನು ಹೊಂದಿರುವುದು ಗಮನಿಸಬೇಕಾದ ಅಂಶ. ಟ್ಯಾಬ್ಲೆಟ್‌ನ ಒಟ್ಟು ಗಾತ್ರವೂ ಸ್ವಲ್ಪ ದೊಡ್ಡದಾಗಿದ್ದು, ಸ್ಮಾರ್ಟ್‌ ಕಿಬೋರ್ಡ್‌ ಸಹ ಉತ್ತಮವಾಗಿದೆ. ಜತೆಗೆ ತೀಕ್ಷ್ಣವಾದ ಡಿಸ್‌ಪ್ಲೇಯನ್ನೂ ಹೊಂದಿದೆ.
ಸಮಸ್ಯೆಗಳೇನು?

* ಟೈಪಿಂಗ್‌ ಕಷ್ಟ: ತಜ್ಞರು ಹೇಳುವ ಪ್ರಕಾರ, ಹೊಸ ‘ಐಪ್ಯಾಡ್‌ ಪ್ರೊ’ದಲ್ಲಿ ಸ್ಮಾರ್ಟ್‌ ಕೀಬೋರ್ಡ್ ಸರಳ ಮತ್ತು ಸುಲಲಿತ ಟೈಪಿಂಗ್‌ಗೆ ಪೂರಕವಾಗಿಲ್ಲ. ಕೀಬೋರ್ಡ್ ಬಹಳ ತೆಳ್ಳಗಿದ್ದು, ಸರಳವಾಗಿ ಪ್ರೆಸ್ ಮಾಡುವುದು ಸಾಧ್ಯವಾಗುತ್ತಿಲ್ಲ. ಮ್ಯಾಕ್‌ಬುಕ್‌ ಪ್ರೊ ಅಥವಾ ಮ್ಯಾಕ್‌ಬುಕ್ ಏರ್‌ ಜತೆ ಹೋಲಿಸಿದರೆ ಅವುಗಳ ಕೀಬೋರ್ಡ್‌ನಷ್ಟು ಉತ್ತಮ ಅನುಭವ ನೀಡುವುದಿಲ್ಲ. ಕೀಬೋರ್ಡ್ ಜತೆ ಟಚ್‌ಸ್ಕ್ರೀನ್ ಬಳಕೆ ಕಷ್ಟವಾಗುತ್ತಿದೆ.

ಟೈಪ್ ಮಾಡುತ್ತಿರುವ ಸಂದರ್ಭದಲ್ಲಿ ಯಾವುದಾದರೂ ಲಿಂಕ್ ಓಪನ್ ಮಾಡಬೇಕಾದರೆ ಹೆಚ್ಚಿನ ಶ್ರಮಪಡಬೇಕಾಗುತ್ತದೆ. ತರಾತುರಿಯಲ್ಲಿ ಕಾರ್ಯನಿರ್ವಹಿಸುವ ವೇಳೆ ಇದಕ್ಕಿಂತಲೂ ಲ್ಯಾಪ್‌ಟಾಪ್‌ನ ಕೀಬೋರ್ಡ್ ಬಳಸುವುದೇ ಆರಾಮದಾಯಕ ಎನಿಸುತ್ತದೆ.

* ಸಾಫ್ಟ್‌ವೇರ್ ಸಂಬಂಧಿತ ಸಮಸ್ಯೆಗಳು: ಸಾಫ್ಟ್‌ವೇರ್ ಸಂಬಂಧಿತ ಕೆಲವು ಸಮಸ್ಯೆಗಳು ‘ಐಪ್ಯಾಡ್ ಪ್ರೊ’ದಲ್ಲಿ ಕಂಡುಬಂದಿದ್ದು, ಈ ವರ್ಷವೇ ಅವುಗಳನ್ನು ಪರಿಹರಿಸುವುದಾಗಿ ಆ್ಯಪಲ್ ಹೇಳಿದೆ.

ಉದಾಹರಣೆಗೆ: ಎರಡು ಆ್ಯಪ್‌ಗಳನ್ನು ಜತೆಯಾಗಿ ಓಪನ್ ಮಾಡಲು ಐಪ್ಯಾಡ್ ಪ್ರೊದಲ್ಲಿ ಸಾಧ್ಯವಿದೆ. ಆದರೆ, ಎರಡೂ ಆ್ಯಪ್‌ಗಳ ಮಧ್ಯೆ ಸಂವಹನ ಸಾಧ್ಯವಾಗುತ್ತಿಲ್ಲ. ಅಂದರೆ, ಓಪನ್ ಆಗಿರುವ ಆ್ಯಪ್‌ ಒಂದರಿಂದ ಮತ್ತೊಂದಕ್ಕೆ ಫೋಟೊ ಅಥವಾ ದಾಖಲೆಗಳನ್ನು ಡ್ರ್ಯಾಗ್ ಆ್ಯಂಡ್ ಮೂವ್ ಮಾಡಲು ಸಾಧ್ಯವಾಗುವುದಿಲ್ಲ.

ಅದೃಷ್ಟವಶಾತ್, ಐಒಎಸ್‌ 11ರಲ್ಲಿರುವ (ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ) ‘ಡ್ರ್ಯಾಗ್ ಆ್ಯಂಡ್ ಡ್ರಾಪ್’ ಫೀಚರ್ ಅನ್ನು ಮುಂದೆ ಬಿಡುಗಡೆ ಮಾಡಲಿರುವ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಲು ಆ್ಯಪಲ್ ಮುಂದಾಗಿದೆ. ಏಕಕಾಲಕ್ಕೆ ಮೂರು ಆ್ಯಪ್‌ಗಳನ್ನು ತೆರೆದಿಡುವ ಮತ್ತು ಕಾರ್ಯನಿರ್ವಹಿಸುವಂತೆ ಮಾಡುವ ವ್ಯವಸ್ಥೆಯೂ ಅದರಲ್ಲಿ ಇರಲಿದೆ. ಇದರಿಂದ ಆ್ಯಪ್‌ಗಳ ಕಾರ್ಯನಿರ್ವಹಣೆ ಸುಲಭವಾಗಲಿದೆ.

ಯಾರು ಖರೀದಿಸಬಹುದು?: ಸದ್ಯದ ಪರಿಸ್ಥಿತಿಯಲ್ಲಿ, ಟೈಪಿಂಗ್‌ ಅನ್ನೇ ಹೆಚ್ಚು ಅವಲಂಬಿಸಿರದ ವೃತ್ತಿಪರರು ಹೊಸ ‘ಐಪ್ಯಾಡ್‌ ಪ್ರೊ’ ಖರೀದಿಸಬಹುದು. ಆರ್ಟಿಸ್ಟ್‌ಗಳು, ಇಲಸ್ಟ್ರೇಟರ್‌ಗಳು ‘ಸ್ಟೈಲಸ್‌’ ಬಳಸಿಕೊಂಡು ಐಪ್ಯಾಡ್‌ ಪ್ರೊದಲ್ಲಿ ಕಾರ್ಯನಿರ್ವಹಿಸಬಹುದು. ಕಂಪ್ಯೂಟರ್‌ ಜತೆಗೆ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ಬಳಸುವುದರಿಂದ ವೃತ್ತಿಪರರಿಗೆ ಹೆಚ್ಚಿನ ನೆರವಾಗಲಿದೆ ಎಂಬುದು ತಜ್ಞರ ಅಂಬೋಣ.

ಅಂತರ್ಜಾಲ ಬಳಕೆ, ಪುಸ್ತಕಗಳ ಓದುವಿಕೆ, ಇ–ಮೇಲ್ ಕಳುಹಿಸುವುದು ಮತ್ತಿತರ ಕೆಲಸಗಳಿಗಾಗಿ ಮಾತ್ರ ಟ್ಯಾಬ್ಲೆಟ್‌ಗಳನ್ನು ಬಳಸುವವರಾದರೆ ಆ್ಯಪಲ್ ಕೀಬೋರ್ಡ್ ಅಥವಾ ‘ಸ್ಟೈಲಸ್‌’ ಒಳಗೊಂಡಿರುವ ಸ್ಟ್ಯಾಂಡರ್ಡ್‌ ಐಪ್ಯಾಡ್ ಖರೀದಿಸಬಹುದು. ಇಲ್ಲವಾದಲ್ಲಿ ದೊಡ್ಡ ಪರದೆಯ ಸ್ಮಾರ್ಟ್‌ಫೋನ್ ಖರೀದಿಸಬಹುದು.

ತಜ್ಞರು ಹೇಳುವ ಪ್ರಕಾರ, ಸಂಶೋಧನೆಯಂಥ ಕೆಲಸ ಮಾಡುವವರಾದರೆ ಓದುವುದು, ಮಾಹಿತಿ ಕಲೆಹಾಕುವುದು, ಟಿಪ್ಪಣಿಗಳ ಪರಾಮರ್ಶೆ ಮತ್ತಿತರ ಕೆಲಸಗಳಿಗೆ ‘ಐಪ್ಯಾಡ್ ಪ್ರೊ’ ಬಳಸಿಕೊಂಡು ದಾಖಲೀಕರಣ, ಬರೆಯುವುದು ಮತ್ತಿತರ ಕಾರ್ಯಗಳಿಗೆ ಮ್ಯಾಕ್‌ಬುಕ್ ಏರ್ ಅಥವಾ ಲ್ಯಾಪ್‌ಟಾಪ್ ಬಳಸಿಕೊಳ್ಳುವುದು ಕಾರ್ಯಸಾಧುವಾಗಿದೆ.

ಬ್ರೈನ್‌ ಎಕ್ಸ್‌. ಚೈನ್‌, ನ್ಯೂಯಾರ್ಕ್‌ ಟೈಮ್ಸ್‌
***

ಅಮೆರಿಕದಲ್ಲಿ ಹೊಸ ಐಪ್ಯಾಡ್ ಪ್ರೊ ದರ
*l 12.9 ಇಂಚು ಗಾತ್ರದ ಪರದೆಯದ್ದು – 799 ಡಾಲರ್‌ನಿಂದ ಆರಂಭ (ಭಾರತದಲ್ಲಿ ಅಂದಾಜು ದರ ₹ 80 ಸಾವಿರ)
* 10.5 ಇಂಚು ಗಾತ್ರದ ಪರದೆಯದ್ದು – 649 ಡಾಲರ್‌ನಿಂದ ಆರಂಭ (ಭಾರತದಲ್ಲಿ ಅಂದಾಜು ದರ ₹ 60 ಸಾವಿರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT