ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೆಡಿಟ್‌ ಕಾರ್ಡ್‌ನ ಸಾಧಕ ಬಾಧಕಗಳು

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

ಕ್ರೆಡಿಟ್‌ ಕಾರ್ಡ್‌ ಹೊಂದಬೇಕೆಂಬ ಮೋಹ ಎಲ್ಲರಲ್ಲೂ ಇರಬಹುದು, ಆದರೆ,  ಅದರ ಸಾಧಕ ಬಾಧಕಗಳೂ ಹಲವು ಇವೆ.  ಕ್ರೆಡಿಟ್‌ ಕಾರ್ಡ್‌ಗಳು ಕೆಲವು ಸಮಸ್ಯೆಗಳ ಜೊತೆಯಲ್ಲೇ ಬರುವುದರಿಂದ ಅದಕ್ಕಾಗಿ ಅರ್ಜಿ ಸಲ್ಲಿಕೆಗೂ ಮೊದಲು ಕಾರ್ಡ್‌ ಹೊಂದಬೇಕೇ ಬೇಡವೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದು ಸೂಕ್ತ.

‘ಹೆಸರಲ್ಲೇನಿದೆ’ ಎಂಬ ಮಾತಿದೆ.  ಕ್ರೆಡಿಟ್‌ ಕಾರ್ಡ್‌ಗಳ ಹೆಸರೇ ಹೇಳುವಂತೆ ಅವು ವ್ಯಕ್ತಿಗೆ ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್‌ ಮೊದಲೇ ನಿಗದಿ ಮಾಡಿದಷ್ಟು ‘ಸಾಲ’ ಅಥವಾ ‘ಸಾಲ ಸೌಲಭ್ಯ’  ಕೊಡುತ್ತವೆ. ಅರ್ಜಿದಾರರ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿ ಅದಕ್ಕೆ ಅನುಗುಣವಾಗಿ ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್‌ ಅವರ ಸಾಲದ ಪ್ರಮಾಣವನ್ನು ನಿಗದಿ ಮಾಡುತ್ತದೆ. ಇನ್ನೊಂದು ಅರ್ಥದಲ್ಲಿ ಇದು ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್‌ ವ್ಯಕ್ತಿಗೆ ಪೂರ್ವ ಮಂಜೂರು ಮಾಡಿದ ‘ಸಾಲ ಅಥವಾ ಸಾಲ ಸೌಲಭ್ಯ’ ಆಗಿರುತ್ತದೆ.

ಕಾರ್ಡ್‌ ಹೊಂದಿರುವವರು ಆಯ್ದ ವ್ಯಾಪಾರ ಸಂಸ್ಥೆಗಳಲ್ಲಿ ಕಾರ್ಡ್‌ ಸ್ವೈಪ್‌ ಮಾಡುವ ಮೂಲಕ ಖರೀದಿ ಅಥವಾ ವಹಿವಾಟು ನಡೆಸಬಹುದು. ಈಗಂತೂ ಹೀಗೆ ಖರೀದಿ ಮಾಡಲು ಅಥವಾ ಹೋಟೆಲ್‌, ಲಾಜಿಂಗ್‌ ಬಿಲ್‌ಗಳ ಪಾವತಿ ಮಾಡಲು ಸಾಕಷ್ಟು ಅವಕಾಶಗಳಿವೆ. ಪಿನ್‌ (ವೈಯಕ್ತಿಕ ಗುರುತಿನ ಸಂಖ್ಯೆ) ನಮೂದಿಸುವ ಮೂಲಕ ಸುಲಭವಾಗಿ ಈ ವಹಿವಾಟು ಪೂರ್ಣಗೊಳಿಸಬಹುದು.

ಕ್ರೆಡಿಟ್‌ ಕಾರ್ಡ್‌ಗಳ ಖರೀದಿ ಮಿತಿ ನವೀಕರಿಸಬಹುದಾಗಿದೆ. ಒಮ್ಮೆ ಪಡೆದ ಸಾಲ ತೀರಿಸಿದ ಬಳಿಕ ಮತ್ತೆ ಪೂರ್ವ ನಿಗದಿತ ಮಾಡಿದಷ್ಟೇ ಮೊತ್ತದ ಸಾಲ ಪಡೆಯಲು ಗ್ರಾಹಕರಿಗೆ ಅವಕಾಶ ಇರುತ್ತದೆ. ಉದಾಹರಣೆಗೆ; ಗ್ರಾಹಕನೊಬ್ಬನಿಗೆ ಒಂದು ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್‌ ₹80,000 ಮೊತ್ತವನ್ನು ಪೂರ್ವ ನಿಗದಿ ಮಾಡಿದೆ ಎಂದಿಟ್ಟುಕೊಳ್ಳೋಣ. ಬಿಲ್ಲಿಂಗ್‌ ವ್ಯವಸ್ಥೆ ತಿಂಗಳ ಮೊದಲ ದಿನದಿಂದ ಆರಂಭವಾಗುತ್ತದೆ. ಗ್ರಾಹಕ ಅಷ್ಟೂ ಹಣ ಖರ್ಚು ಮಾಡಿಯಾಗಿದೆ ಎಂದಿಟ್ಟುಕೊಳ್ಳೋಣ.  ತಿಂಗಳ ಕೊನೆಯ ದಿನ ಸ್ಟೇಟ್‌ಮೆಂಟ್‌ ಸಿದ್ಧವಾಗುತ್ತದೆ.

ಅಂದರೆ, ಮುಂದಿನ ತಿಂಗಳ 20ನೇ ತಾರೀಕು ಪಡೆದ ಸಾಲ ಮರುಪಾವತಿಗೆ ಕಡೆಯ ದಿನವಾಗಿರುತ್ತದೆ. ಅಷ್ಟೂ ಮೊತ್ತ ಮರುಪಾವತಿ ಆದರೆ ಗ್ರಾಹಕ ಮತ್ತೆ ₹ 80,000 ಸಾಲ ಪಡೆಯಲು ಅರ್ಹರಾಗುತ್ತಾರೆ.

ಕ್ರೆಡಿಟ್‌ ಕಾರ್ಡ್‌ ಹೊಂದುವುದರ ಲಾಭವೆಂದರೆ, ಸಕಾಲದಲ್ಲಿ ಮರುಪಾವತಿ ಮಾಡುವ ಗ್ರಾಹಕರಿಗೆ 50ದಿನಗಳ ಅವಧಿಗೆ ಬಡ್ಡಿ ಇಲ್ಲದೆಯೇ ಪೂರ್ವ ನಿಗದಿತ ಮೊತ್ತದಷ್ಟು ಸಾಲ ಲಭ್ಯವಾಗುತ್ತದೆ. ಆದರೆ ಗೋಲ್ಡ್‌ ಕಾರ್ಡ್‌, ಡೈಮಂಡ್‌ ಕಾರ್ಡ್‌, ಸಿಲ್ವರ್‌ ಕಾರ್ಡ್‌ ಮುಂತಾಗಿ ತಾವು ಪಡೆದ ಕಾರ್ಡ್‌ಗೆ ಅನುಗುಣವಾಗಿ ಗ್ರಾಹಕರು ವಾರ್ಷಿಕ ₹ 500 ರಿಂದ ₹5000 ದವರೆಗೂ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

ಕಾರ್ಡುದಾರರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ ಹಿನ್ನೆಲೆ ಹೊಂದಿದ್ದರೆ ಕೆಲವೊಮ್ಮೆ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆ ಪೂರ್ವ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಮಂಜೂರು ಮಾಡುವ ಸಾಧ್ಯತೆಯೂ ಇದೆ. ಕಾರ್ಡ್‌ ವ್ಯವಹಾರಗಳು ಸಂಪೂರ್ಣ ಪಾರದರ್ಶಕವಾಗಿರುವುದರಿಂದ ಸರ್ಕಾರವೂ ಈ ರೀತಿಯ ವಹಿವಾಟನ್ನು ಪ್ರೋತ್ಸಾಹಿಸುತ್ತದೆ.

ಕಾರ್ಡ್‌ ಮೂಲಕ ಮಾಡಿರುವ ವೆಚ್ಚಕ್ಕೆ ಪ್ರತಿಯಾಗಿ ಗ್ರಾಹಕರಿಗೆ ರಿವಾರ್ಡ್‌ ಪಾಯಿಂಟ್‌ಗಳು ಲಭಿಸುತ್ತವೆ. ಇವನ್ನು ಹಣವಾಗಿ ಪರಿವರ್ತಿಸಿ ಉಡುಗೊರೆಗಳನ್ನು ಖರೀದಿಸಲೂ ಅವಕಾಶ ಇದೆ. ಕೆಡಿಟ್‌ ಕಾರ್ಡ್‌ಗಳ ಅಪಾಯ ಏನೆಂದರೆ, ಪಡೆದ ಸಾಲದ ಹಣವನ್ನು ಕೂಡಲೇ ಮರುಪಾವತಿ ಮಾಡಬೇಕಾದ ಅಗತ್ಯ ಇಲ್ಲದಿರುವುದರಿಂದ, ಕಾರ್ಡುದಾರರು ಹೆಚ್ಚು ಹಣ ವೆಚ್ಚ ಮಾಡುವ ಆಮಿಷಕ್ಕೆ ಒಳಗಾಗುತ್ತಾರೆ.

ಕ್ರೆಡಿಟ್‌ ಕಾರ್ಡ್‌  ಮೂಲಕ ಮಾಡಿರುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡದಿದ್ದರೆ ಆ ಹಣಕ್ಕೆ ದೊಡ್ಡ ಪ್ರಮಾಣದಲ್ಲಿ ಬಡ್ಡಿ ವಿಧಿಸಲಾಗುತ್ತದೆ. ಹೀಗಾಗಿ ಕಾರ್ಡುದಾರರು ಹೆಚ್ಚು ಕಷ್ಟ ಅನುಭವಿಸುವ ಅಪಾಯ ಇದೆ. ಕಾರ್ಡ್‌ ಇದ್ದರೂ ಆಮಿಷಗಳನ್ನು ನಿಯಂತ್ರಣದಲ್ಲಿಟ್ಟು ತುರ್ತು ಸಂದರ್ಭದಲ್ಲಿ ಮಾತ್ರ ಬಳಸುವುದು ಬುದ್ಧಿವಂತಿಕೆ.

ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ  ಪೂರ್ವ ನಿಗದಿತ ಮೊತ್ತದ ಶೇ 40ರಷ್ಟು ಹಣವನ್ನು ಎಟಿಎಂಗಳಿಂದ ನಗದು ರೂಪದಲ್ಲಿ ಪಡೆಯಲೂ ಅವಕಾಶ ಇರುತ್ತದೆ. ಆದರೆ ಇದು ದುಬಾರಿಯಾಗುತ್ತದೆ. ಪಡೆದ ನಗದಿನ ಶೇ 2.5ರಷ್ಟು ಅಥವಾ  ₹ 300 ನಗದು ಮುಂಗಡ ಶುಲ್ಕ ಮತ್ತು ಶೇ 2.5ರಿಂದ ಶೇ 3ರಷ್ಟು ಮಾಸಿಕ ಬಡ್ಡಿ (ವಾರ್ಷಿಕ ಶೇ 30 ರಿಂದ ಶೇ 36) ವಿಧಿಸಲಾಗುತ್ತದೆ. ಹಣ ಪಡೆದ ದಿನದಿಂದ ಮರುಪಾವತಿ ಮಾಡುವ ದಿನದವರೆಗಿನ ಅವಧಿಗೆ ಈ ಶುಲ್ಕ ಅಥವಾ ಬಡ್ಡಿ  ಅನ್ವಯವಾಗುತ್ತವೆ.

ಕಾರ್ಡುದಾರರಿಗೆ ತಾನು ಪಡೆದ ಸಾಲದ ಅಷ್ಟೂ ಮೊತ್ತವನ್ನು ಮರುಪಾವತಿಯ ಕೊನೆಯ ದಿನಾಂಕದೊಳಗೆ ಒಂದೇ ಬಾರಿ ಪಾವತಿಸಲು ಅಥವಾ ಶೇ 5ರಷ್ಟು ಹಣ ಕನಿಷ್ಠ ₹ 200 (ಯಾವುದು ಹೆಚ್ಚೋ ಅದು) ಬಾಕಿ ಉಳಿಸಿಕೊಳ್ಳಲು ಅವಕಾಶ ಇದೆ. ಆದರೆ ಈ ಉಳಿಕೆ ಹಣಕ್ಕೆ ಮಾಸಿಕ ಶೇ 2.5ರಿಂದ ಶೇ 3ರ (ವಾರ್ಷಿಕ ಶೇ 30 ರಿಂದ ಶೇ 36) ಬಡ್ಡಿ ಅನ್ವಯವಾಗುತ್ತದೆ.

ಮರುಪಾವತಿ ತಡವಾದರೆ ಬಡ್ಡಿಯ ಜೊತೆಗೆ ₹ 200ರಿಂದ ₹750ರವರೆಗೆ ದಂಡ ವಿಧಿಸಲೂ ಅವಕಾಶ ಇದೆ. ಅದೂ ಅಲ್ಲದೆ ವಿಳಂಬವಾಗಿರುವುದು ಅಥವಾ ಹಣ ಪಾವತಿ ಮಾಡದಿರುವ ವಿಚಾರ ಸಿಐಬಿಐಎಲ್‌ನಲ್ಲಿ ದಾಖಲಾಗುತ್ತವೆ. ಇವು ಕಾರ್ಡುದಾರರ ಮರುಪಾವತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

ಮೈಕ್ರೊಚಿಪ್‌ ಸುರಕ್ಷಿತ
ಈಚಿನ ದಿನಗಳಲ್ಲಿ ಮೈಕ್ರೊಚಿಪ್‌ ಸಹಿತ ಕ್ರೆಡಿಟ್‌ ಕಾರ್ಡ್‌ಗಳು ಬರುತ್ತಿದ್ದು, ಸಂಪೂರ್ಣ ಸುರಕ್ಷಿತವಾಗಿವೆ. ಗ್ರಾಹಕರು ಕಾರ್ಡ್‌ನ ಸಂಖ್ಯೆ, ಪಿನ್‌ ಸಂಖ್ಯೆ, ವಿಳಾಸ, ಮೊಬೈಲ್‌ ಸಂಖ್ಯೆ ಮುಂತಾದ ಮಾಹಿತಿಗಳನ್ನು ಯಾರಿಗೂ ಕೊಡಬಾರದು. ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆ ಪ್ರತಿನಿಧಿಗಳು ಎಂದು ಕರೆ ಮಾಡುವವರಿಗೂ ಈ ಮಾಹಿತಿಗಳನ್ನು ಕೊಡಬಾರದು.

ಹೀಗೆ ನಕಲಿ ಕರೆ ಮಾಡಿ ಹಣ ಲಪಟಾಯಿಸುವವರ ಸಂಖ್ಯೆ ಈಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಕಾರ್ಡ್‌ಅನ್ನು  ಬ್ಲಾಕ್‌ (ಸ್ಥಗಿತಗೊಳಿಸುವುದು) ಮಾಡುವುದೂ ಸಹ ಈಗ ನೀರು ಕುಡಿದಷ್ಟೇ ಸರಳವಾಗಿದೆ. ಶುಲ್ಕರಹಿತ ಸಂಖ್ಯೆಗೆ ಒಂದು ಕರೆ ಮಾಡಿ ಕಾರ್ಡ್‌ ಬ್ಲಾಕ್‌ ಮಾಡಬಹುದು. ಅಲ್ಲಿಂದ ‘ಟಿಕೆಟ್‌ ಸಂಖ್ಯೆ’ಯನ್ನು ಪಡೆದು ತಮ್ಮ ಮುಂದಿನ ದಾಖಲೆಗಳಿಗಾಗಿ ಬಳಸಿಕೊಳ್ಳಬಹುದು.

ಕಾರ್ಡ್‌ದಾರರ ಸಂಖ್ಯೆಯಲ್ಲಿ ಹೆಚ್ಚಳ
ಕ್ರೆಡಿಟ್‌ ಕಾರ್ಡುದಾರರ ಸಂಖ್ಯೆ ಈಚಿನ ದಿನಗಳಲ್ಲಿ ಏರಿಕೆಯಾಗುತ್ತಿರುವುದನ್ನು ನೋಡಿದರೆ ಅಚ್ಚರಿ ಆಗಬಹುದು. ಕ್ರೆಡಿಟ್‌ ಕಾರ್ಡ್‌ ಬಗ್ಗೆ ಜನರಲ್ಲಿ ವ್ಯಾಮೋಹ ಇಲ್ಲದಿದ್ದರೆ ಕಾರ್ಡ್‌ ವಹಿವಾಟು ಈ ಮಟ್ಟದಲ್ಲಿ ಏರಿಕೆ ಆಗುತ್ತಿರಲಿಲ್ಲ. ಒಂದು ಕ್ರೆಡಿಟ್‌ ಕಾರ್ಡ್‌ ಹೊಂದುವ ವಿಚಾರ ಖುಷಿಯನ್ನೇನೋ ಕೊಡಬಹುದು. ಆದರೆ ಸುಸ್ತಿದಾರರಾದರೆ ಭಾರಿ ಮೊತ್ತದ ಬಡ್ಡಿಯನ್ನು ಕೊಡಬೇಕಾಗುತ್ತದೆ ಎಂಬ ಎಚ್ಚರ ಇರಬೇಕು. ಅನೇಕ ಜನರು ಈಗಾಗಲೇ ಸುಸ್ತಿದಾರರಾಗಿ ದೊಡ್ಡ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಎಸ್‌.ಎಸ್‌. ಕುಲಕರ್ಣಿ( ನಿವೃತ್ತ ಬ್ಯಾಂಕ್‌ ಅಧಿಕಾರಿ)

***

ವಹಿಸಬೇಕಾದ ಎಚ್ಚರ
* ಕಾರ್ಡ್‌  ಬಳಸಿ ನಗದು ಪಡೆಯಬಾರದು
* ಬಾಕಿ ಮೊತ್ತವನ್ನು ಸಕಾಲದಲ್ಲಿ  ಪಾವತಿ ಮಾಡಬೇಕು
* ಯಾವುದೇ ಕಾರಣಕ್ಕೂ ಸುಸ್ತಿದಾರರಾಗದಂತೆ ನೋಡಿಕೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT