ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಿಥ್ಯ, ಹೊಗಳಿಕೆ ಮತ್ತು ಅಪ್ಪುಗೆ...; ಮೊದಲ ಭೇಟಿಯಲ್ಲೇ ಗಟ್ಟಿಗೊಂಡ ಮೋದಿ–ಟ್ರಂಪ್‌ ವೈಯಕ್ತಿಕ ಸಂಬಂಧ

Last Updated 27 ಜೂನ್ 2017, 19:53 IST
ಅಕ್ಷರ ಗಾತ್ರ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವಣ ಆತ್ಮೀಯ ಕ್ಷಣಗಳಿಗೆ ಶ್ವೇತಭವನ ಸಾಕ್ಷಿಯಾಯಿತು.

ಇಬ್ಬರೂ ನಾಯಕರು, ಪರಸ್ಪರರನ್ನು ಇನ್ನಿಲ್ಲದಂತೆ ಹೊಗಳಿ ಎರಡು ಬಾರಿ ಅಪ್ಪಿಕೊಂಡದ್ದು, ಶ್ವೇತಭವನದಲ್ಲಿ ನಡೆದ ವಿವಿಧ ಕಾರ್ಯಕ್ರಮ ಮತ್ತು ಮಾತುಕತೆಗೆ ಮೆರಗು ನೀಡಿತು.

ಟ್ರಂಪ್ ಮಾತನಾಡಿ, ‘ಅಧ್ಯಕ್ಷೀಯ ಚುನಾವಣೆ ವೇಳೆ, ನಾನು ಅಧ್ಯಕ್ಷನಾದರೆ ಭಾರತ ಅಮೆರಿಕದ ನಿಜವಾದ ಸ್ನೇಹಿತನಾಗಲಿದೆ ಎಂದು ಹೇಳಿದ್ದೆ. ಈಗ ನೋಡಿ, ಆ ಕ್ಷಣ ನಿಜವಾಗಿದೆ’ ಎಂದರು.

‘ಮೋದಿಯವರೇ, ನೀವು ಮತ್ತು ಭಾರತೀಯರು ಒಟ್ಟಿಗೆ ಅಪಾರ ಸಾಧನೆ ಮಾಡಿದ್ದೀರಿ. ನಿಮ್ಮ ಈ ಸಾಧನೆಗೆ ವಂದನೆ ಹೇಳಲು ನಾನು ಕಾತರನಾಗಿದ್ದೇನೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ‘ನಿಮ್ಮ ನಾಯಕತ್ವದ ಅಡಿಯಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ಆಯಾಮ, ಹೊಸ ಶಕ್ತಿ ಮತ್ತು ಹೊಸ ಹಾದಿ ಸಿಗಲಿದೆ ಎಂಬ ಭರವಸೆ ನನಗಿದೆ’ ಎಂದು ಪ್ರಶಂಶಿಸಿದರು.

ನಂತರ ಮಾತನಾಡಿದ ಟ್ರಂಪ್, ‘ನಮ್ಮಿಬ್ಬರ ನಡುವಣ ಮಾತುಕತೆಯಿಂದ ಬಹಳ ಲಾಭವಾಯಿತು’ ಎಂದರು. ಟ್ರಂಪ್ ಮಾತು ಮುಗಿಸುತ್ತಿದ್ದಂತೆ ಅವರತ್ತ ಸಾಗಿದ ಮೋದಿ, ಅವರನ್ನು  ಅಪ್ಪಿಕೊಂಡರು.  ಮೋದಿ ಅವರು ಶ್ವೇತಭವನದಿಂದ ಹೊರಡಲು ಅಣಿಯಾಗುತ್ತಿದ್ದಂತೆ ಅವರತ್ತ ಬಂದ ಟ್ರಂಪ್ ಮತ್ತೆ ಅಪ್ಪಿಕೊಂಡರು.

‘ನಾವಿಬ್ಬರು ಜಾಗತಿಕ ನಾಯಕರು’

‘ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ಸಾಮಾಜಿಕ ಜಾಲತಾಣಗಳಲ್ಲಿ ಜಾಗತಿಕ ನಾಯಕರು. ಇದು ನಮ್ಮನ್ನು ಆರಿಸಿದ ಜನರ ಜತೆ ನೇರವಾಗಿ ಮಾತನಾಡಲು, ಅವರ ಮಾತನ್ನು ನೇರವಾಗಿ ಕೇಳಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ’ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದರು.

ಟ್ವಿಟರ್‌ನಲ್ಲಿ ಟ್ರಂಪ್ ಅವರಿಗೆ 3.28 ಕೋಟಿ ಜನರು ಹಿಂಬಾಲಕರಿದ್ದರೆ, ಮೋದಿ ಅವರನ್ನು 3.1 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಮೋದಿ ಅವರಿಗೆ 4.18 ಕೋಟಿ ಹಿಂಬಾಲಕರಿದ್ದರೆ, ಟ್ರಂಪ್ ಅವರನ್ನು 2.36 ಕೋಟಿ ಜನ ಹಿಂಬಾಲಿಸುತ್ತಿದ್ದಾರೆ.

ಎನ್‌ಎಸ್‌ಜಿ; ಭಾರತಕ್ಕೆ ಬೆಂಬಲ

‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನಕ್ಕೆ ಬೆಂಬಲವಿದೆ’ ಎಂದು ಅಮೆರಿಕ ಹೇಳಿದೆ.

ಜತೆಗೆ, ‘ಪರಮಾಣು ಪೂರೈಕೆದಾರರ ಗುಂಪಿನಲ್ಲಿ ಭಾರತಕ್ಕೆ ಸದಸ್ಯತ್ವ ನೀಡಬೇಕು ಎಂಬುದನ್ನು ಅಮೆರಿಕ ಒಪ್ಪುತ್ತದೆ. ಅಲ್ಲದೆ, ರಸಾಯನಿಕ ಮತ್ತು ಜೈವಿಕ ಬಾಂಬ್‌ಗಳ ಪ್ರಸರಣ ತಡೆಯುವ ಉದ್ದೇಶದ ‘ಆಸ್ಟ್ರೇಲಿಯಾ ಗ್ರೂಪ್’ ಮತ್ತು  ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಪ್ರಸರಣ ನಿಯಂತ್ರಣ ಉದ್ದೇಶದ ‘ವಾಸೆನಾರ್‌ ಒಪ್ಪಂದ’ಕ್ಕೆ ಸೇರುವ ಭಾರತದ ಪ್ರಯತ್ನವನ್ನು ಅಮೆರಿಕ ಬೆಂಬಲಿಸುತ್ತದೆ’ ಎಂದು ಭಾರತ–ಅಮೆರಿಕ ನೀಡಿದ ಜಂಟಿ ಹೇಳಿಕೆಯಲ್ಲಿ ಘೋಷಿಸಿವೆ.

ಕುಟುಂಬದವರಿಗೆ ಭಾರತಕ್ಕೆ ಆಹ್ವಾನ

ಪ್ರಧಾನಿ ನರೇಂದ್ರ ಮೋದಿ ಅವರು, ‘ನೀವು ಮತ್ತು ನಿಮ್ಮ ಕುಟುಂಬದವರು ಭಾರತಕ್ಕೆ ಬರಬೇಕು. ನಿಮ್ಮನ್ನು ಸ್ವಾಗತಿಸಲು ಮತ್ತು ನಿಮಗೆ ಆತಿಥ್ಯ ನೀಡಲು ನಾವು ಉತ್ಸುಕರಾಗಿದ್ದೇವೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಆಹ್ವಾನ ನೀಡಿದರು.

ಜತೆಗೆ, ಟ್ರಂಪ್ ಮಗಳಾದ ಇವಾಂಕ ಟ್ರಂಪ್‌ ಅವರನ್ನು ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಜಾಗತಿಕ ಉದ್ದಿಮೆದಾರರ ಶೃಂಗಸಭೆಗೆ ಆಹ್ವಾನಿಸಿದರು. ‘ಈ ಆಹ್ವಾನವನ್ನು ಇವಾಂಕ ಒಪ್ಪಿದ್ದಾಳೆ ಎಂದು ನಾನು ಭಾವಿಸಿದ್ದೇನೆ’ ಎಂದು ಟ್ರಂಪ್ ಹೇಳಿದರು.

ಉಡುಗೊರೆ

ಮೋದಿ ಅವರು, ಟ್ರಂಪ್ ದಂಪತಿಗೆ ಅಬ್ರಹಾಂ ಲಿಂಕನ್ ಅವರ ಜನ್ಮ ಶತಮಾನೋತ್ಸವದ ಅಂಚೆ ಚೀಟಿಗಳನ್ನು ಉಡುಗೊರೆಯಾಗಿ ನೀಡಿದರು. ಟ್ರಂಪ್ ಅವರಿಗೆ, ಕೈಕುಸರಿಯ ಬೆಳ್ಳಿಯ ಬ್ರೇಸ್‌ಲೆಟ್ ಒಂದನ್ನು ಉಡುಗೊರೆಯಾಗಿ ನೀಡಿದರು. ಇವುಗಳ ಜತೆಯಲ್ಲಿ, ಹಿಮಾಚಲ ಪ್ರದೇಶದ ಕಂಗರಾ ಕಣಿವೆಯ ಟೀ–ಪುಡಿ ಮತ್ತು ಜೇನುತುಪ್ಪ ಹಾಗೂ ಕಾಶ್ಮೀರಿ ಶಾಲನ್ನು ನೀಡಿದರು.

ಮುಜುಗರ ತಪ್ಪಿಸಿದ ಡೊಭಾಲ್

ರೋಸ್‌ ಗಾರ್ಡನ್‌ನಲ್ಲಿ ಮೊದಿ ಅವರಿಗೆ ಆಗಬಹುದಾಗಿದ್ದ ಮುಜುಗರವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ತಪ್ಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಮಾತನಾಡುತ್ತಿದ್ದರು. ಟ್ರಂಪ್ ಮಾತನ್ನು ಮೋದಿ ತದೇಕಚಿತ್ತದಿಂದ ಕೇಳುತ್ತಿದ್ದರು. ಈ ವೇಳೆ, ಜೋರಾಗಿ ಗಾಳಿ ಬೀಸಿತು. ಆಗ, ಮೋದಿ ಅವರ ಕೈಯಲ್ಲಿದ್ದ ಕೆಲವು ಹಾಳೆಗಳು ಹಾರಿ ಹೋದವು. ಆ ಹಾಳೆಗಳಲ್ಲಿ ಸಿದ್ಧಪಡಿಸಿದ್ದ ಹೇಳಿಕೆಗಳಿದ್ದವು. ತಕ್ಷಣ ಅಜಿತ್ ಡೊಭಾಲ್ ಓಡಿ ಹೋಗಿ, ಆ ಹಾಳೆಗಳನ್ನು ತಂದುಕೊಟ್ಟರು. ಕೆಲವೇ ನಿಮಿಷಗಳಲ್ಲಿ ಮತ್ತೆ ಇಡೀ ಘಟನೆ ಪುನರಾವರ್ತನೆಯಾಯಿತು. ಆಗಲೂ, ಡೊಬಾಲ್ ಹಾಳೆಗಳನ್ನು ಹೆಕ್ಕಿ ತಂದುಕೊಟ್ಟರು.

‘ನಿರಾಶಾದಾಯಕ ಹೇಳಿಕೆ’

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್‌ ಭೇಟಿಯ ನಂತರ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯನ್ನು ಕಾಂಗ್ರೆಸ್‌ ಪಕ್ಷವು ಟೀಕಿಸಿದೆ.

ಉಗ್ರವಾದದ ವಿಚಾರವಾಗಿ ಪ್ರಸ್ತಾಪಿಸಲಾಗಿರುವ ಅಂಶಗಳು ಇಸ್ಲಾಂ ಭಯೋತ್ಪಾದನೆಯ ಕುರಿತ ಅಮೆರಿಕದ ನಿಲುವಿಗೆ ಹತ್ತಿರವಾಗಿದೆ ಎಂದು ಅದು ಹೇಳಿದೆ.

ಇದು ನಿರಾಶಾದಾಯಕ ಹೇಳಿಕೆ ಎಂದು ಹೇಳಿರುವ ಕಾಂಗ್ರೆಸ್‌ ವಕ್ತಾರ ಮನೀಶ್‌ ತಿವಾರಿ ಅವರು, ಇದರಲ್ಲಿ ಎರಡೂ ರಾಷ್ಟ್ರಗಳ ಸಂಬಂಧಗಳ ಸುಧಾರಣೆಗೆ ಸಂಬಂಧಿಸಿದಂತೆ ಹೊಸದಾದ ಅಥವಾ ದೊಡ್ಡ ಯೋಚನೆಗಳನ್ನು ಪ್ರಸ್ತಾಪಿಸಲಾಗಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT