ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆಗೆ ಮೂರಂಶದ ಪ್ರಚಾರ

Last Updated 28 ಜೂನ್ 2017, 6:22 IST
ಅಕ್ಷರ ಗಾತ್ರ

ಬಳ್ಳಾರಿ: ಕೇಂದ್ರ ಸರ್ಕಾರದ ಮೂರು ವರ್ಷದ ಸಾಧನೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರೂಪಿಸಿದ ಜನಪರ ಕಾರ್ಯಕ್ರಮಗಳು ಮತ್ತು ಈಗಿನ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳನ್ನೇ  ವಿಧಾನಸಭೆ ಚುನಾವಣೆ ಪ್ರಚಾರದ ಅಂಶಗಳನ್ನಾಗಿ ಬಳಸಲಾಗುವುದು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಭರವಸೆಗಳನ್ನು ಕಾಂಗ್ರೆಸ್‌ ಈಡೇರಿಸದೆ ವಿಫಲವಾಗಿದೆ. ಇದೇ ವೇಳೆ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಇಡೀ ವಿಶ್ವದ ಗಮನ ಸೆಳೆದಿವೆ. ಭಾರತದ ಪ್ರಗತಿ ಅಚ್ಚರಿ ದಾಯಕವಾಗಿದೆ ಎಂದರು.

ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ದೇಶದ ಆದಾಯ ₹ 9 ಲಕ್ಷ ಕೋಟಿ ಇತ್ತು. ಎ.ಬಿ.ವಾಜಪೇಯಿ ಅವರ ಅವಧಿಯಲ್ಲಿ ₹13 ಲಕ್ಷ ಕೋಟಿಗೇರಿತು. ಮೋದಿ ಅವರ ಅವಧಿಯಲ್ಲಿ ₹ 16 ಲಕ್ಷ ಕೋಟಿ ದಾಟಲಿದೆ.

ಜಿಎಸ್‌ಟಿ ಜಾರಿ ಯಿಂದ ಇದು ₹19 ಲಕ್ಷಕ್ಕೇ ಹೆಚ್ಚಾಗುವ ನಿರೀಕ್ಷೆ ಇದೆ. ಆದರೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಒಂದು ದಶಕದ ಅವಧಿಯಲ್ಲಿ ದೇಶದ ಆದಾಯ ಕೇವಲ ₹1 ಲಕ್ಷ ಕೋಟಿಯಷ್ಟು ಮಾತ್ರ ಹೆಚ್ಚಾಗಿತ್ತು ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿ ಕಾರದಲ್ಲಿದ್ದಾಗ ಬಂಡವಾಳ ಹೂಡಿಕೆ, ಕೈಗಾರಿಕಾ ಅಭಿವೃದ್ಧಿ, ಅಭಿವೃದ್ಧಿ ವೆಚ್ಚ, ಯೋಜನಾ ವೆಚ್ಚ ಹೆಚ್ಚಿತ್ತು. ರಾಜ್ಯವನ್ನು ಕಾಂಗ್ರೆಸ್‌ ಮುಕ್ತಗೊಳಿಸಿದರೆ ದೇಶದಿಂದಲೇ ಮುಕ್ತಗೊಳಿಸಿದಂತೆ’  ಎಂದರು.

ಭರವಸೆ ಹುಸಿ: ನಂತರ, ನಗರದ ಬಸವ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ನೀರಾವರಿ ಕ್ಷೇತ್ರಕ್ಕೆ ಪ್ರತಿ ವರ್ಷ ₹ 10 ಸಾವಿರ ಕೋಟಿ ಮೀಸಲಿಡು ವುದಾಗಿ ಸಿದ್ದರಾಮಯ್ಯ ಘೋಷಿಸಿದ್ದರು. ಮುಖ್ಯಮಂತ್ರಿಯಾಗಿ ಅವರು ನಾಲ್ಕು ವರ್ಷದ ಅವಧಿಯಲ್ಲಿ ಅಷ್ಟು ಪ್ರಮಾಣದ ಹಣ ಖರ್ಚು ಮಾಡಿಲ್ಲ. ಆದರೆ  ಸರ್ಕಾರ ₹1,28,361 ಕೋಟಿ ಸಾಲ ಮಾಡಿದೆ’ ಎಂದು ಆರೋಪಿಸಿದರು.

ಸಂಸದರಾದ ಬಿ.ಶ್ರೀರಾಮುಲು, ಶೋಭಾ ಕರಂದ್ಲಾಜೆ, ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್, ಮುಖಂಡರಾದ ಗೋವಿಂದ ಕಾರಜೋಳ, ಜಿ.ಸೋಮಶೇಖರರೆಡ್ಡಿ ಮಾತನಾಡಿದರು. 

ಸಂಸದ ಸಂಗಣ್ಣ ಕರಡಿ, ಶಾಸಕರಾದ ಬಿ.ನಾಗೇಂದ್ರ, ಟಿ.ಎಚ್‌.ಸುರೇಶ್‌ಬಾಬು, ಆನಂದ ಸಿಂಗ್,  ಹಾಲಪ್ಪಾಚಾರ್, ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷೆ ಪಿ.ದೀನಾ, ಜಿಲ್ಲಾ ಘಟಕದ ಪಿ.ಚೆನ್ನಬಸವನಗೌಡ, ಮುಖಂಡರಾದ ಜೆ.ಶಾಂತಾ, ಶಿವ ರಾಮೇಗೌಡ, ನೇಮಿರಾಜನಾಯ್ಕ, ತೇಜಸ್ವಿನಿ, ಕೆ.ಶಿವರಾಮು, ಸೋಮ ಲಿಂಗಪ್ಪ, ಎಸ್‌.ಗುರು ಲಿಂಗನಗೌಡ ಉಪಸ್ಥಿತರಿದ್ದರು.

ಹಲವು ಮುಖಂಡರು ಇದೇ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆ ಯಾದರು. ಕುರ್ಚಿಗಳಿಲ್ಲದೆ ನೂರಾರು ಕಾರ್ಯಕರ್ತರು ಸಭಾಂಗಣದ ನೆಲದಲ್ಲೇ ಕುಳಿತು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಭಾಂಗಣದ ಹೊರಗೂ ವಿಡಿಯೋ ಪರದೆಯಲ್ಲಿ ಕಾರ್ಯಕ್ರಮದ ದೃಶ್ಯಾವಳಿಗಳನ್ನು ನೂರಾರು ಕಾರ್ಯಕರ್ತರು ವೀಕ್ಷಿಸಿದರು.  ನಗರ ಹೊರವಲಯದ ಗೋ ಸಂರಕ್ಷಣಾ ಶಾಲೆಗೆ ಭೇಟಿ ನೀಡಿದರು. ಹೈಮಾಸ್ಟ್‌ ದೀಪ, ಮೇವು ಓದಗಿಸುವಂತೆ ಸಂಘಟಕರು ಕೋರಿದರು.

ಸುಂಕಲಮ್ಮನಿಗೆ ಅನಿಲ ಸ್ಟೌ
ಬಳ್ಳಾರಿ: ನಗರದ ಬಾಪೂಜಿ ನಗರದ ದಲಿತ ಮಹಿಳೆ ಸುಂಕಲಮ್ಮ ಅವರ ಮನೆಯಲ್ಲಿ ಬೆಳಿಗ್ಗೆ ದೋಸೆ–ಚಟ್ನಿ ಉಪಾಹಾರ ಸೇವಿಸಿದ ಬಳಿಕ, ಅಡುಗೆ ಅನಿಲದ ಸ್ಟೌ ಮತ್ತು ಸಿಲಿಂಡರ್‌ ಅನ್ನು ಯಡಿಯೂರಪ್ಪ ಕೊಡುಗೆಯಾಗಿ ನೀಡಿದರು.

ಸಿಮೆಂಟ್‌ ತಗಡು ಹೊದಿಸಿದ ಮನೆಗೆ ಅವರು ಬಂದಾಗ,  ಸೌದೆ ಒಲೆಯ ಮೇಲೆ ಹೆಂಚನ್ನಿಟ್ಟು ದೋಸೆ ಮಾಡಿಕೊಡಲು ಸುಂಕಲಮ್ಮ ಸಿದ್ಧರಾಗಿದ್ದರು. ಆದರೆ ಅದಕ್ಕೆ ಅವಕಾಶ ದೊರಕಲಿಲ್ಲ. ಮೊದಲೇ ಸಿದ್ಧಪಡಿಸಲಾಗಿದ್ದ ದೋಸೆಯನ್ನೇ ಯಡಿಯೂರಪ್ಪ ಸೇವಿಸಿದರು. ಅವರೊಂದಿಗಿದ್ದ ಶೋಭಾ ಕರಂದ್ಲಾಜೆ, ಬಿ.ಶ್ರೀರಾಮುಲು ತಲಾ ಒಂದು ದೋಸೆಯ ರುಚಿ ನೋಡಿದರು. ಹಳೆಯ ಮನೆಯನ್ನು ನವೀಕರಿಸಲು ನೆರವು ಬೇಕೆಂದು ಸುಂಕಲಮ್ಮ ಇದೇ ಸಂದರ್ಭದಲ್ಲಿ ಕೋರಿದರು.

‘ಬಾಹುಬಲಿ’ ಬಿಎಸ್‌ವೈ!
‘ಪಕ್ಷ ಸಂಘಟನೆಗಾಗಿ ಅವಿರತವಾಗಿ ದುಡಿಯುತ್ತಿರುವ ಯಡಿಯೂರಪ್ಪನವರು ಕರ್ನಾಟಕದ ಬಾಹುಬಲಿ’ ಎಂದು ರಾಜ್ಯ ಕಾರ್ಯದರ್ಶಿ ತೇಜಸ್ವಿನಿ ಅವರು ಬಣ್ಣಿಸಿದಾಗ ನೆರೆದಿದ್ದ ನೂರಾರು ಕಾರ್ಯಕರ್ತರು ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು.

ಕುರಿ ಕೊಟ್ಟು, ಕಂಬಳಿ ಹೊದಿಸಿದರು!
ಕುರುಬ ಸಮುದಾಯದ ಮುಖಂಡರು ಯಡಿಯೂರಪ್ಪ ಅವರಿಗೆ ಕುರಿಯನ್ನು ಕೊಡುಗೆ ಯಾಗಿ ನೀಡಿ, ಕಪ್ಪು ಕಂಬಳಿ ಯನ್ನು ಹೊದಿಸಿ ಸನ್ಮಾನಿಸಿದರು. ಜನರ ನಡುವೆ ಅಧೀರಗೊಂಡ ಕುರಿ ಪರಾರಿ ಯಾಗಲು ಯತ್ನಿಸು ತ್ತಿತ್ತು. ಮುಖಂಡರೊಬ್ಬರು ಅದರ ಕಾಲನ್ನು ಬಲವಾಗಿ ಹಿಡಿದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT