ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲು ಕೆದರಿ ಚೀನಾ ಜಗಳ

ಸಿಕ್ಕಿಂ ವಲಯದಲ್ಲಿ ಗಡಿ ಕೆದಕಿ ಸಂಘರ್ಷಕ್ಕೆ ಯತ್ನ
Last Updated 28 ಜೂನ್ 2017, 19:04 IST
ಅಕ್ಷರ ಗಾತ್ರ

ಬೀಜಿಂಗ್‌: ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಯಂತ್ರಿಸುವಂತೆ ಪಾಕಿಸ್ತಾನದ ಮೇಲೆ ಭಾರತ ಮತ್ತು ಅಮೆರಿಕ ಜಂಟಿಯಾಗಿ ಒತ್ತಡ ಹೇರಿದ ಬೆನ್ನಲ್ಲೇ ಪಾಕಿಸ್ತಾನದ ಬೆಂಬಲಕ್ಕೆ ಚೀನಾ ನಿಂತಿದೆ. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕಿಸ್ತಾನ ಮುಂಚೂಣಿಯಲ್ಲಿದೆ ಎಂದು ತನ್ನ  ಮಿತ್ರ ದೇಶವನ್ನು ತಾರೀಫು ಮಾಡಿದೆ.

‘ಉಗ್ರವಾದದ ವಿರುದ್ಧ ಹೋರಾಟದಲ್ಲಿ ಅಂತರರಾಷ್ಟ್ರೀಯ ಸಮುದಾಯದ ಸಹಕಾರ ಇನ್ನಷ್ಟು ಹೆಚ್ಚಬೇಕು. ಈ ನಿಟ್ಟಿನಲ್ಲಿ ಪಾಕಿಸ್ತಾನದ ಪ್ರಯತ್ನವನ್ನು ಗುರುತಿಸಬೇಕು ಮತ್ತು ಅದಕ್ಕೆ ಮಾನ್ಯತೆ ನೀಡಬೇಕು’ ಎಂದು ಚೀನಾದ ವಿದೇಶಾಂಗ ವಕ್ತಾರ ಲು ಕಂಗ್‌ ಹೇಳಿದ್ದಾರೆ.

ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಜಂಟಿ ಹೇಳಿಕೆಗೆ ಚೀನಾ ಈ ರೀತಿ ತಿರುಗೇಟು ನೀಡಿದೆ. ಪಾಕಿಸ್ತಾನದ ನೆಲ ಭಯೋತ್ಪಾದನೆಗೆ ಬಳಕೆಯಾಗದಂತೆ ಖಾತರಿಪಡಿಸಬೇಕು ಎಂದು ಜಂಟಿ ಹೇಳಿಕೆ ಆಗ್ರಹಿಸಿದೆ.

ಭಾರತ ವಿರುದ್ಧ ನೇರ ಆರೋಪ: ಸಿಕ್ಕಿಂ ವಲಯದಲ್ಲಿನ ಸೇನಾ ಸಂಘರ್ಷದಲ್ಲಿ ಭಾರತ ‘ರಹಸ್ಯ ಕಾರ್ಯಸೂಚಿ’ ಹೊಂದಿದೆ ಎಂದು ಚೀನಾ ಆರೋಪಿಸಿದೆ. ಭೂತಾನ್‌ ಜತೆಗೆ ಚೀನಾ ಗಡಿ ವಿವಾದ ಹೊಂದಿದೆ.

ಸಿಕ್ಕಿಂ ವಲಯದ ಡಾಂಗ್‌ಲಾಂಗ್‌ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಿಸುತ್ತಿದೆ. ಇದು ತನ್ನ ಭೂಪ್ರದೇಶ ಎಂದು ಭೂತಾನ್‌ ಹೇಳುತ್ತಿದೆ. ಚೀನಾದ ಜತೆಗೆ ಭೂತಾನ್‌ ರಾಜತಾಂತ್ರಿಕ ಸಂಬಂಧ ಹೊಂದಿಲ್ಲ. ಹಾಗಾಗಿ ಭೂತಾನ್‌ ಪರವಾಗಿ  ಭಾರತ ಆಕ್ಷೇಪ ವ್ಯಕ್ತಪಡಿಸಿದೆ. 
ಇದನ್ನು ಇಷ್ಟಪಡದ ಚೀನಾ, ಭೂತಾನ್‌ ಸ್ವತಂತ್ರ ದೇಶ ಎಂದು ಇಡೀ ಜಗತ್ತೇ ಅಂಗೀಕರಿಸಿದೆ. ಆ ದೇಶದ ವಿಚಾರದಲ್ಲಿ ಭಾರತ ಮಧ್ಯಪ್ರವೇಶ ಮಾಡಬಾರದು ಎಂದು ತಿರುಗೇಟು ನೀಡಿದೆ.

‘ದೇಶಗಳು ಇತರ ದೇಶಗಳ ಸಾರ್ವಭೌಮತ್ವವನ್ನು ಗೌರವಿಸಬೇಕು ಎಂಬುದು ನಮ್ಮ ಭಾವನೆ. ಚೀನಾ ಮತ್ತು ಭೂತಾನ್‌ ನಡುವಣ ಗಡಿ ರೇಖೆಯನ್ನು ಗುರುತಿಸಲಾಗಿಲ್ಲ. ಈ ವಿಚಾರದಲ್ಲಿ ಮೂರನೆಯವರ ಹಸ್ತಕ್ಷೇಪ ಅಥವಾ ಬೇಜವಾಬ್ದಾರಿ ಹೇಳಿಕೆ ಅಥವಾ ನಡವಳಿಕೆಗೆ ಅವಕಾಶವೇ ಇಲ್ಲ’ ಎಂದು ಚೀನಾದ ವಿದೇಶಾಂಗ ವಕ್ತಾರ ಲು ಕಂಗ್‌ ಹೇಳಿದ್ದಾರೆ.

‘ಭಾರತ ತಪ್ಪು ತಿದ್ದಿಕೊಳ್ಳಬೇಕು’: ನಾಥೂ ಲಾ ಮಾರ್ಗದ ಮೂಲಕ ಭಾರತದ ಯಾತ್ರಿಕರು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವುದಕ್ಕೆ ಅವಕಾಶ ನೀಡುವುದು ಭಾರತ ‘ಲೋಪಗಳನ್ನು ತಿದ್ದಿಕೊಳ್ಳುವುದರ ಮೇಲೆ ಅವಲಂಬಿತ’ ಎಂದು ಚೀನಾ ಹೇಳಿದೆ.
ಭಾರತದ ಜತೆಗೆ ಉತ್ತಮ ಸಂಬಂಧ ಇರಬೇಕು ಎಂಬ ಕಾರಣಕ್ಕೆ ಹಿಂದಿನಿಂದಲೂ ಭಾರತದ ಯಾತ್ರಿಕರಿಗೆ ಭಾರಿ ಅನುಕೂಲಗಳನ್ನು ಮಾಡಿಕೊಡಲಾಗಿದೆ. ಸಿಕ್ಕಿಂ ವಲಯದ ಗಡಿಯನ್ನು 2015ರಲ್ಲಿ ಗುರುತಿಸಲಾಗಿದೆ ಮತ್ತು ಎರಡೂ ದೇಶಗಳು ಅದಕ್ಕೆ ಮಾನ್ಯತೆ ನೀಡಿವೆ. ಆ ಕಾರಣಕ್ಕಾಗಿಯೇ ನಾಥೂ ಲಾ ಮಾರ್ಗದ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಗೆ ಭಾರತದ ಯಾತ್ರಿಕರಿಗೆ ಅವ
ಕಾಶ ನೀಡಲಾಗಿತ್ತು ಎಂದು ಚೀನಾ ತಿಳಿಸಿದೆ.

ಈ ವರ್ಷವೂ ಯಾತ್ರಿಕರನ್ನು ಸ್ವಾಗತಿಸಲು ಚೀನಾದ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು. ಅದನ್ನು ಭಾರತಕ್ಕೆ ತಿಳಿಸಲಾಗಿತ್ತು. ಆದರೆ ಈಗ ಸಿಕ್ಕಿಂನಲ್ಲಿ ಇರುವ ಸಂಘರ್ಷ ಸ್ಥಿತಿಯಿಂದಾಗಿ ಯಾತ್ರೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ಚೀನಾ ಹೇಳಿದೆ.

ಈ ಮಾರ್ಗ ಯಾತ್ರಿಕರಿಗೆ ಯಾವಾಗ ಮುಕ್ತವಾಗುತ್ತದೆ ಎಂಬುದು ಭಾರತ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮಾತ್ರ ಅವಲಂಬಿತವಾಗಿದೆ ಎಂದು ಚೀನಾ ಸ್ಪಷ್ಟಪಡಿಸಿದೆ.

‘ತಪ್ಪು ತಿದ್ದಿಕೊಳ್ಳಬೇಕು’

ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವುದಕ್ಕೆ ಅವಕಾಶ ನೀಡುವುದು ಭಾರತ ‘ಲೋಪಗಳನ್ನು ತಿದ್ದಿಕೊಳ್ಳುವುದರ ಮೇಲೆ ಅವಲಂಬಿತ’ ಎಂದು ಚೀನಾ ಹೇಳಿದೆ.

ಚೀನಾದಿಂದ ಬಂಕರ್‌ ನೆಲಸಮ: ಸಿಕ್ಕಿಂನಲ್ಲಿ ಭಾರತ–ಚೀನಾ–ಭೂತಾನ್‌ ಗಡಿಯಲ್ಲಿ ಭಾರತದ ಹಳೆಯ ಬಂಕರ್‌ ಅನ್ನು ಚೀನಾ ನೆಲಸಮ ಮಾಡಿದೆ. ಬೃಹತ್ ಸಮರನೌಕೆ:  ಜಾಗತಿಕ ನೌಕಾ ಸಾಮರ್ಥ್ಯದಲ್ಲಿ  ಪ್ರಾಬಲ್ಯ ಸಾಧಿಸುವ ನಿಟ್ಟಿನಲ್ಲಿ 10 ಸಾವಿರ ಟನ್ ತೂಕದ ಹೊಸ ತಲೆಮಾರಿನ ವಿಧ್ವಂಸಕ ನೌಕೆಗೆ  ಚೀನಾ ಬುಧವಾರ ಚಾಲನೆ ನೀಡಿದೆ.

ಹಕ್ಕು ಸಾಧನೆ

ಪಶ್ಚಿಮ ಭೂತಾನ್‌ನ ದೋಕ್‌ ಲಮ್‌ ಪ್ರಸ್ಥಭೂಮಿಯಲ್ಲಿನ 89 ಚದರ ಕಿ.ಮೀ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಚೀನಾ ಯತ್ನಿಸುತ್ತಿದೆ. ಈ ಪ್ರದೇಶ ಭಾರತ–ಚೀನಾ–ಭೂತಾನ್‌ ಗಡಿ ಸಂಪರ್ಕಿಸುವ ಚುಂಬಿ ಕಣಿವೆಯ ಸಮೀಪದಲ್ಲಿದೆ. ರಕ್ಷಣೆಗೆ ಸಂಬಂಧಿಸಿ ಇದು ಭಾರಿ ಮಹತ್ವದ ಸ್ಥಳ. ಈ ಪ್ರದೇಶ ಕೈವಶವಾದರೆ ಯಾವುದೇ ಸಂಘರ್ಷ ಸಂದರ್ಭದಲ್ಲಿ ಭೌಗೋಳಿಕ ಕಾರಣಕ್ಕೇ ಚೀನಾ ಮೇಲುಗೈ ಸಾಧಿಸುತ್ತದೆ.

ಭೂತಾನ್‌ ಮನವಿಗೆ ಅಸಡ್ಡೆ: ದೋಕ್‌ ಲಮ್‌ನಲ್ಲಿ ರಸ್ತೆ ಕಾಮಗಾರಿ ನಿಲ್ಲಿಸುವಂತೆ ಚೀನಾವನ್ನು ಭೂತಾನ್‌ ಕೋರಿದೆ. ಆದರೆ ಅದಕ್ಕೆ ಚೀನಾ ಮಾನ್ಯತೆ ನೀಡಿಲ್ಲ.

ಭಾರತ ನಿರಾಕರಣೆ

ಭೂತಾನ್‌ ಸಾರ್ವಭೌಮತ್ವದಲ್ಲಿ ಹಸ್ತಕ್ಷೇಪ ನಡೆಸಲಾಗಿದೆ ಎಂಬ ಚೀನಾದ ಆರೋಪವನ್ನು ಭಾರತ ತಳ್ಳಿ ಹಾಕಿದೆ. ಪರಸ್ಪರ ವಿಶ್ವಾಸ, ನಂಬಿಕೆಯ ಮೇಲೆ ಭಾರತ–ಭೂತಾನ್‌ ದ್ವಿಪಕ್ಷೀಯ ಸಂಬಂಧ ನಿಂತಿದೆ. ಭೂತಾನ್‌ನ ಹಿತಾಸಕ್ತಿಗಳಿಗೆ ಸಂಬಂಧಿಸಿ ಭಾರತ ಹೆಚ್ಚು ಸಂವೇದನಾಶೀಲವಾಗಿದೆ ಎಂದು ಮೂಲಗಳು ತಿಳಿಸಿವೆ.

ಚೀನಾದಿಂದ ಬಂಕರ್‌ ನೆಲಸಮ

ನವದೆಹಲಿ: ಸಿಕ್ಕಿಂನಲ್ಲಿ ಭಾರತ–ಚೀನಾ–ಭೂತಾನ್‌ ಗಡಿ ಭಾಗದಲ್ಲಿದ್ದ ಭಾರತದ ಹಳೆಯ ಬಂಕರೊಂದನ್ನು ಚೀನಾ ನೆಲಸಮ ಮಾಡಿದೆ.
ಈ ಬಂಕರನ್ನು ನಾಶ ಮಾಡುವಂತೆ ಭಾರತವನ್ನು ಚೀನಾ ಕೋರಿತ್ತು. ಆದರೆ ಭಾರತ ಅದಕ್ಕೆ ಮಾನ್ಯತೆ ನೀಡದ ಕಾರಣ ಬುಲ್‌ಡೋಜರ್‌ ಬಳಸಿ ಬಂಕರನ್ನು ನಾಶ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಿಕ್ಕಿಂನ ದೋಕ ಲಾ ಪ್ರದೇಶದಲ್ಲಿ ಈ ತಿಂಗಳ ಮೊದಲ ವಾರದಲ್ಲಿ ಇದು ನಡೆದಿದೆ. ನಂತರ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷವೂ ಉಂಟಾಗಿತ್ತು.

ಸಿಕ್ಕಿಂ ಗಡಿ ಪ್ರದೇಶದ ಉದ್ದಕ್ಕೂ ಭಾರತ ಹೊಸ ಬಂಕರ್‌ಗಳನ್ನು ನಿರ್ಮಿಸುತ್ತಿದೆ ಮತ್ತು ಹಳೆಯ ಬಂಕರ್‌ಗಳನ್ನು ನವೀಕರಿಸುತ್ತಿದೆ. ಇದು ಚೀನಾದ ಅತೃಪ್ತಿಗೆ ಕಾರಣ ಎಂದು ಮೂಲಗಳು ಹೇಳಿವೆ.

ಜಮ್ಮು ಮತ್ತು ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗೆ ಭಾರತ ಮತ್ತು ಚೀನಾ ನಡುವೆ 3,488 ಕಿ.ಮೀ ಉದ್ದದ ಗಡಿ ಇದೆ. ಅದರಲ್ಲಿ 220 ಕಿ.ಮೀ ಸಿಕ್ಕಿಂನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT