ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ರಾಜ್ಯಭಾರದಲ್ಲಿ ಕಾರು ವಹಿವಾಟು ಹೇಗೆ?

Last Updated 28 ಜೂನ್ 2017, 19:30 IST
ಅಕ್ಷರ ಗಾತ್ರ

ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ರಾಜ್ಯಭಾರ ಇನ್ನೇನು ಎರಡು ದಿನಗಳಲ್ಲಿ ಶುರುವಾಗಲಿದೆ. ಈ ಹೊಸ ತೆರಿಗೆ ರಾಜ್ಯಭಾರ ಕಾರು ಉದ್ಯಮದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? ಜಿಎಸ್‌ಟಿ ವ್ಯವಸ್ಥೆಯಿಂದ ಪ್ರೀಮಿಯಂ ಕಾರುಗಳ ಖರೀದಿದಾರರು ಲಾಭ ಪಡೆಯಲಿದ್ದಾರೆ ಎನ್ನುತ್ತಾರೆ ತೆರಿಗೆ ವಿಶ್ಲೇಷಕರು.

ಹೊಸ ತೆರಿಗೆ ವ್ಯವಸ್ಥೆಯಲ್ಲಿ ಕಾರುಗಳ ಮೇಲೆ ಶೇ 28ರಷ್ಟು ತೆರಿಗೆ ಜತೆಗೆ ಆಯಾ ಕಾರುಗಳ ಗಾತ್ರಕ್ಕೆ ತಕ್ಕಂತೆ ಶೇ 1ರಿಂದ ಶೇ 15ರವರೆಗೆ ಸೆಸ್‌ ವಿಧಿಸಲಾಗುತ್ತದೆ.

ಸಣ್ಣ ಕಾರುಗಳಿಗೆ ಜಿಎಸ್‌ಟಿಯಲ್ಲಿ ನಿಗದಿಯಾದ ಅತ್ಯಧಿಕ ದರದ (ಶೇ 28) ಜತೆಗೆ ಹೆಚ್ಚುವರಿಯಾಗಿ ಶೇ 1ರಷ್ಟು ಸೆಸ್‌ ವಿಧಿಸಲಾಗುತ್ತದೆ. ಮಧ್ಯಮ ಗಾತ್ರದ ಕಾರುಗಳು ಜಿಎಸ್‌ಟಿ ದರವಲ್ಲದೆ ಶೇ 3ರಷ್ಟು ಹಾಗೂ ಲಕ್ಸುರಿ ಕಾರುಗಳು ಶೇ 15ರಷ್ಟು ಸೆಸ್‌ ಭರಿಸಬೇಕು.

ಐಷಾರಾಮಿ ಕಾರುಗಳಿಗೆ ಸದ್ಯ ಶೇ 52ರಿಂದ ಶೇ 55ರವರೆಗೆ ತೆರಿಗೆಯಿದೆ. ಜಿಎಸ್‌ಟಿ ಅಡಿಯಲ್ಲಿ ಅದರ ಪ್ರಮಾಣ ಶೇ 43ಕ್ಕೆ ತಗ್ಗಲಿದೆ. ‘ಕಾರುಗಳ ಮೇಲಿನ ಮೂಲ ತೆರಿಗೆ ಶೇ 28ರಷ್ಟಿದ್ದು, ಗರಿಷ್ಠ ಶೇ 15ರಷ್ಟು ಸೆಸ್‌ ವಿಧಿಸುವುದರಿಂದ ಐಷಾರಾಮಿ ಕಾರುಗಳ ತೆರಿಗೆ ಪ್ರಮಾಣ ಶೇ 43ಕ್ಕಿಂತ ಹೆಚ್ಚಾಗುವುದಿಲ್ಲ’ ಎಂದು ಹೇಳುತ್ತಾರೆ ಆಟೊಮೊಬೈಲ್‌ ಉದ್ಯಮದ ತಜ್ಞ ರಾಜೀವ್‌ ಪ್ರತಾಪ್‌ ಸಿಂಗ್‌.

‘ಕಾರುಗಳ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಹಲವು ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಜಿಎಸ್‌ಟಿ ಮಂಡಳಿಯಿಂದ ಹೊರಬೀಳಲಿರುವ ಅಧಿಸೂಚನೆಗಾಗಿ ಕಾದಿದ್ದೇವೆ’ ಎಂದು ಅಭಿಪ್ರಾಯಪಡುತ್ತಾರೆ ಮರ್ಸಿಡೆಸ್‌ ಬೆಂಜ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಲಾಂಡ್‌ ಫಾಲ್ಗರ್‌.
‘ಐಷಾರಾಮಿ ಕಾರುಗಳ ಉದ್ಯಮ 2016ರಿಂದ ಮಂದಗತಿಯಲ್ಲಿದೆ. ಹೊಸ ತೆರಿಗೆ ದರಗಳು ಉದ್ಯಮಕ್ಕೆ ಮತ್ತೆ ಚೈತನ್ಯ ನೀಡುವ ನಿರೀಕ್ಷೆಯಿದೆ’ ಎಂಬ ನಿರೀಕ್ಷೆಯನ್ನು ಅವರು ಇಟ್ಟುಕೊಂಡಿದ್ದಾರೆ.

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಸಣ್ಣ ಕಾರುಗಳ ಮೇಲೆ ಶೇ 29ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಹೊಸ ತೆರಿಗೆ ರಾಜ್ಯಭಾರದಲ್ಲೂ ಈ ದರ ಹಾಗೆಯೇ (ಶೇ 28 ಜಿಎಸ್‌ಟಿ + ಶೇ 1 ಸೆಸ್‌) ಉಳಿಯಲಿದೆ. ಹೀಗಾಗಿ ಸಣ್ಣ ಕಾರುಗಳ ಉದ್ಯಮದ ಮೇಲೆ ಜಿಎಸ್‌ಟಿ ಯಾವುದೇ ಪರಿಣಾಮವನ್ನು ಬೀರುವುದಿಲ್ಲ.

ಜಿಎಸ್‌ಟಿ ವ್ಯವಸ್ಥೆಯಲ್ಲಿ ಹೊಡೆತ ಬೀಳಲಿರುವುದು ಹೈಬ್ರಿಡ್‌ ಕಾರುಗಳ ಉದ್ಯಮಕ್ಕೆ. ಏಕೆಂದರೆ, ಈ ವಿಧದ ಕಾರುಗಳ ತೆರಿಗೆ ದರ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ. ಜಿಎಸ್‌ಟಿ ದರವಲ್ಲದೆ (ಶೇ 28) ಹೆಚ್ಚುವರಿಯಾಗಿ ಶೇ 15ರಷ್ಟು ಸೆಸ್‌ ಭರಿಸಬೇಕಾದ ಕಾರಣ ಈ ಉದ್ಯಮ ಮಾತ್ರ ಪ್ರತಿಕೂಲ ಪರಿಣಾಮ ಎದುರಿಸುವಂತಾಗಿದೆ.

350 ಸಿ.ಸಿಗಿಂತ ಹೆಚ್ಚಿನ ಸಾಮರ್ಥ್ಯದ ಎಂಜಿನ್‌ ಹೊಂದಿದ ಬೈಕ್‌ಗಳ ಮೇಲಿನ ತೆರಿಗೆ ಪ್ರಮಾಣವೂ ಹೆಚ್ಚಲಿದೆ ಎಂದು ಅಂದಾಜು ಮಾಡಲಾಗಿದೆ. ಈ ಬೈಕ್‌ಗಳ ಖರೀದಿ ಮೇಲೆ ಹೆಚ್ಚಿನ ಸೆಸ್‌ ವಿಧಿಸುವ ಸಾಧ್ಯತೆ ಇರುವುದೇ ಇದಕ್ಕೆ ಕಾರಣ. ಸದ್ಯ ಎಲ್ಲ ವಿಧದ ಬೈಕ್‌ಗಳ ಮೇಲೆ ಶೇ 28ರಿಂದ ಶೇ 35ರವರೆಗೆ ತೆರಿಗೆ ವಿಧಿಸಲಾಗುತ್ತಿದೆ.

‘ಒಟ್ಟಾರೆ ಆಟೊಮೊಬೈಲ್‌ ಉದ್ಯಮಕ್ಕೆ  ಹೊಸ ತೆರಿಗೆ ವ್ಯವಸ್ಥೆ ಲಾಭದಾಯಕವಾಗಿದೆ. ಸದ್ಯದ ಬೇಕಾಬಿಟ್ಟಿ ತೆರಿಗೆ ದರಗಳಿಗೆ ಇದರಿಂದ ಮಂಗಳಹಾಡಲು ಸಾಧ್ಯವಾಗಲಿದೆ. ಜಿಎಸ್‌ಟಿ ವ್ಯವಸ್ಥೆ ಬಂದಮೇಲೆ ಉದ್ಯಮ ಚೇತರಿಕೆ ಕಾಣಲಿದೆ’ ಎಂದು ಭಾರತೀಯ ಆಟೊಮೊಬೈಲ್‌ ಉತ್ಪಾದಕರ ಒಕ್ಕೂಟದ ಅಧ್ಯಕ್ಷ ವಿನೋದ್‌ ದಾಸರಿ ಹೇಳುತ್ತಾರೆ.     

***

ಒಂದಿಷ್ಟು ಲೆಕ್ಕಾಚಾರ
ಜಿಎಸ್‌ಟಿ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಮೂರು ಉದಾಹರಣೆಗಳ ಮೂಲಕ ನೋಡೋಣ. ರೆನೊ ಕ್ವಿಡ್‌ ಆರ್‌ಎಕ್ಸ್‌ಎಲ್‌ 0.8 ಕಾರಿನ ಎಕ್ಸ್‌ ಷೋರೂಂ ಬೆಲೆ ನವದೆಹಲಿಯಲ್ಲಿ ಸದ್ಯ ₹ 3,32,312 ಇದೆ. ದೆಹಲಿಯಲ್ಲಿ ಈ ಕಾರಿಗೆ ಸದ್ಯ ಶೇ 26ರಷ್ಟು ತೆರಿಗೆ ಇದೆ. ಹೀಗಾಗಿ ಈ ಕಾರಿನ ಸದ್ಯದ ಎಕ್ಸ್‌ ಫ್ಯಾಕ್ಟರಿ ದರ ₹ 2,63,739. ಜಿಎಸ್‌ಟಿ ರಾಜ್ಯಭಾರದಲ್ಲಿ ಈ ಕಾರಿಗೆ ಶೇ 29 ತೆರಿಗೆ ವಿಧಿಸಲಾಗುತ್ತದೆ. ಆಗ ಕಾರಿನ ಎಕ್ಸ್‌ ಷೋರೂಮ್‌ನ ಪರಿಷ್ಕೃತ ದರ ₹ 3,40,223 ಆಗಲಿದೆ.

ಹೀಗಾಗಿ ಜಿಎಸ್‌ಟಿ ವ್ಯವಸ್ಥೆಯಲ್ಲಿ ಕ್ವಿಡ್‌ ಕಾರಿನ ಬೆಲೆ ₹ 7,911ರಷ್ಟು ಹೆಚ್ಚಲಿದೆ. ಈಗ ಬಿಎಂಡಬ್ಲ್ಯು 320ಡಿ ಲಕ್ಸುರಿ ಲೈನ್‌ ಕಾರಿನ ಬೆಲೆ ಗಮನಿಸೋಣ. ನವದೆಹಲಿಯಲ್ಲಿ ಈ ಕಾರಿನ ಎಕ್ಸ್‌ ಷೋರೂಮ್‌ ಬೆಲೆ ₹ 42,70,000. ಸದ್ಯ ದೆಹಲಿಯಲ್ಲಿ ಈ ಕಾರಿಗೆ ಶೇ 44.50ರಷ್ಟು ತೆರಿಗೆಯಿದೆ. ಹೀಗಾಗಿ 320ಡಿ ಲಕ್ಸುರಿಯ ಎಕ್ಸ್‌ ಫ್ಯಾಕ್ಟರಿ ದರ ₹ 29,55,017. ಜಿಎಸ್‌ಟಿ ಅನುಷ್ಠಾನಕ್ಕೆ ಬಂದ ಬಳಿಕ ಈ ಕಾರಿನ ಮೇಲಿನ ತೆರಿಗೆ ಶೇ 43ಕ್ಕೆ ನಿಗದಿಗೊಳ್ಳಲಿದೆ.

ಹೀಗಾಗಿ ಅದರ ಎಕ್ಸ್‌ ಷೋರೂಮ್‌ ಬೆಲೆ ₹ 42,25,674 ಆಗಲಿದೆ. ಇದರಿಂದ 320ಡಿ ಲಕ್ಸುರಿಯ ಬೆಲೆ ಜಿಎಸ್‌ಟಿ ಬಳಿಕ ₹ 44,326ರಷ್ಟು ಕಡಿಮೆ ಆಗಲಿದೆ. ಟೊಯೊಟಾ ಫಾರ್ಚೂನರ್‌ 4x4 ಆಟೊಮೆಟಿಕ್‌ ಡಿಸೇಲ್‌ ವಾಹನಕ್ಕೆ ನವದೆಹಲಿಯಲ್ಲಿ ಎಕ್ಸ್‌ ಷೋರೂಮ್‌ ಬೆಲೆ ₹ 31,86,000ರಷ್ಟಿದೆ.

ಅದರಲ್ಲಿ ಶೇ 48.50ರಷ್ಟು ತೆರಿಗೆ ಸೇರಿದೆ. ಹೀಗಾಗಿ ಎಕ್ಸ್‌ ಫ್ಯಾಕ್ಟರಿ ಬೆಲೆ ₹ 21,45,454. ಜಿಎಸ್‌ಟಿ ಅನುಷ್ಠಾನದ ಬಳಿಕ ತೆರಿಗೆ ಪ್ರಮಾಣ ಶೇ 43ಕ್ಕೆ ಕುಗ್ಗಲಿದೆ. ಆಗ ಈ ವಾಹನದ ಎಕ್ಸ್‌ ಷೋರೂಮ್‌ ದರ ₹ 30,68,000. ಇದರಿಂದ ಈ ವಾಹನದ ಬೆಲೆ ₹ 1,18,000ದಷ್ಟು ಕಡಿಮೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT