ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಪಠ್ಯ ಪುಸ್ತಕ ಸಿಗದೆ ಪರದಾಟ

ಪ್ರಥಮ ಪಿಯು: ಶೇ 60ರಷ್ಟು ಪುಸ್ತಕ ಮುದ್ರಣ
Last Updated 29 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಥಮ ಪಿಯು  ಕನ್ನಡ ಮತ್ತು ಇಂಗ್ಲಿಷ್ ಭಾಷಾ ಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಇದೇ ತಿಂಗಳ 12ರಿಂದ ಪಿಯು ತರಗತಿ ಆರಂಭವಾಗಿವೆ. ಕಾಲೇಜು ಪ್ರಾರಂಭವಾಗಿ 20 ದಿನಗಳಾದರೂ ಪಠ್ಯಪುಸ್ತಕ ಮಾತ್ರ ಸಿಗುತ್ತಿಲ್ಲ ಎಂಬುದು ವಿದ್ಯಾರ್ಥಿಗಳು ಮತ್ತು ಪೋಷಕರ ಅಳಲು.

‘ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಎಲ್ಲ ಪುಸ್ತಕಗಳ ಸೆಟ್‌ ಸಿಗುತ್ತವೆ. ಆರಂಭದಲ್ಲಿ ಸೆಟ್‌ ಖರೀದಿಸುವಾಗ ಕನ್ನಡ, ಇಂಗ್ಲಿಷ್ ಪುಸ್ತಕ ಇನ್ನೂ ಬಂದಿಲ್ಲ. ಬಳಿಕ ಖರೀದಿಸಿ ಎಂದು ಅಂಗಡಿಯವರು ಹೇಳಿದ್ದರು. ಈಗ ಕೆಲವು ಅಂಗಡಿಗಳಲ್ಲಿ ಲಭ್ಯ ಇರುವ ಭಾಷಾ ಪುಸ್ತಕಗಳನ್ನು ಖರೀದಿಸಲು ಹೋದರೆ ಡಿಯಾಗಿ ನೀಡದೆ ಮತ್ತೆ ಪೂರ್ಣ ಸೆಟ್‌ ಖರೀದಿಸುವಂತೆ ಹೇಳುತ್ತಿದ್ದಾರೆ’ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪುಸ್ತಕ ಇಲ್ಲದೆ ತರಗತಿಗೆ ಬರಬೇಡಿ ಎಂದು ಉಪನ್ಯಾಸಕರು ಹೇಳುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಪುಸ್ತಕ ಸಿಗದಿದ್ದರೆ ಏನು ಮಾಡಬೇಕು’ ಎಂದು ನಗರದ ಕೆಲ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಇನ್ನೂ ಕೆಲವರು ಹಳೆಯ ಪುಸ್ತಕಗಳನ್ನು ಖರೀದಿಸಿ ಅಥವಾ ದ್ವಿತೀಯ ಪಿಯುಸಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಂದ ಪಡೆದುಕೊಂಡು ಸರಿದೂಗಿಸುತ್ತಿದ್ದಾರೆ.

ಬೇಡಿಕೆ ನೋಡಿ ಮುದ್ರಣ: ‘ಒಂದರಿಂದ ಹತ್ತನೇ ತರಗತಿವರೆಗೆ ಸರ್ಕಾರದಿಂದಲೇ ಉಚಿತವಾಗಿ ಪಠ್ಯಪುಸ್ತಕ ಪೂರೈಸಲಾಗುತ್ತದೆ. ಪಿಯುನಲ್ಲಿ ಆ ವ್ಯವಸ್ಥೆ ಇಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ. ಸದ್ಯ ಎಲ್ಲ ಪಠ್ಯಪುಸ್ತಕಗಳೂ ಬದಲಾವಣೆ ಆಗುತ್ತಿರುವುದರಿಂದ ಮುಂದಿನ ವರ್ಷ ಭಾಷಾ ಪುಸ್ತಕಗಳೂ ಬದಲಾವಣೆ ಆಗುತ್ತವೆ ಎಂದು ಮುದ್ರಕರು ಹೆಚ್ಚು ಪುಸ್ತಕಗಳನ್ನು ಮುದ್ರಿಸಲು ಹಿಂದೇಟು ಹಾಕುತ್ತಿದ್ದಾರೆ. ಮಾರಾಟಗಾರರಿಂದ ಎಷ್ಟು ಬೇಡಿಕೆ ಬರುತ್ತದೋ ಅಷ್ಟನ್ನು ಮಾತ್ರ ಮುದ್ರಿಸಿ ಕಳುಹಿಸುತ್ತಾರೆ’ ಎಂದು ಮುದ್ರಣ ಸಂಸ್ಥೆಯ ವ್ಯವಸ್ಥಾಪಕರೊಬ್ಬರು ತಿಳಿಸಿದರು.

ಕನ್ನಡ ಮತ್ತು ಇಂಗ್ಲಿಷ್‌ ಪುಸ್ತಕಗಳ ಮುದ್ರಣಕ್ಕೆ ನೀಡಿದ ಆದೇಶದಲ್ಲಿ ಶೇ60ರಷ್ಟು ಮಾತ್ರ ಪುಸ್ತಕಗಳು ಮುದ್ರಣ ಆಗಿವೆ ಎಂದು ಅವರು ವಿವರಿಸಿದರು.

‘ಕೊರತೆ ಇದ್ದರೆ ಪರಿಶೀಲನೆ’
‘ಕನ್ನಡ ಮತ್ತು ಇಂಗ್ಲಿಷ್‌ನ ತಲಾ 2.5 ಲಕ್ಷ ಪುಸ್ತಕ ಮುದ್ರಿಸುವಂತೆ ಪ್ರಕಾಶಕರಿಗೆ ಆದೇಶ ನೀಡಲಾಗಿದೆ. ಕೊರತೆ ಇರುವ ಬಗ್ಗೆ ದೂರು ಬಂದಿಲ್ಲ. ಇದುವರೆಗೆ ಎಷ್ಟು ಪುಸ್ತಕ ಮಾರುಕಟ್ಟೆಗೆ ಹೋಗಿವೆ  ಎಂದು ಪರಿಶೀಲಿಸುವುದಾಗಿ’ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT