ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧಗಳಲ್ಲಿ ಪ್ರಾಣಿಲೋಕ-ಸಸ್ಯಲೋಕ

Last Updated 30 ಜೂನ್ 2017, 19:30 IST
ಅಕ್ಷರ ಗಾತ್ರ

ಸಸ್ಯಾಹಾರ ಮತ್ತು ಮಾಂಸಾಹಾರ ಕಣ್ಣಿಗೆ ಕಾಣುವ ಜಗತ್ತಿಗೆ ಮಾತ್ರ ಮೀಸಲು. ನಮ್ಮ ಔಷಧಗಳನ್ನೂ ಸಸ್ಯಲೊಕ–ಪ್ರಾಣಿಲೋಕಗಳು ಆವರಿಸಿವೆ. ಪ್ರಾಣಿಜನ್ಯ ಪದಾರ್ಥಗಳು ಸಾಂಸ್ಕೃತಿಕವಾಗಿ ಒಗ್ಗುವುದಿಲ್ಲ; ಇತ್ತ ಸಸ್ಯಜನ್ಯ ರಸಾಯನಿಕಗಳ ಸಂಸ್ಕರಣೆಯಿಂದ ಉತ್ಪಾದಿಸಲ್ಪಟ್ಟ ಉತ್ಪನ್ನವೂ ಸಮಸ್ಯೆಗಳಿಂದ ಹೊರತಲ್ಲ. ನಮ್ಮ ಮಾನಸಿಕ ಆರೋಗ್ಯಕ್ಕೂ ನಮ್ಮ ಸಾಂಸ್ಕೃತಿಕ ಹಿನ್ನೆಲೆಗೂ ಇರುವ ಸಂಬಂಧಗಳನ್ನು ಅಲ್ಲಗಳೆಯುವಂತಿಲ್ಲ.

ಇತ್ತೀಚಿಗೆ ಕೇಂದ್ರ ಆರೋಗ್ಯ ಸಚಿವಾಲಯವು ತಜ್ಞರ ಸಮಿತಿಯೊಂದನ್ನು ರಚಿಸಿ, ಔಷಧಗಳ ಪ್ರಾಣಿಜನ್ಯ ಕ್ಯಾಪ್ಸೂಲ್‌ಗಳಿಗೆ ಪರ್ಯಾಯವಾಗಿ ಸಸ್ಯಜನ್ಯ ಪದಾರ್ಥಗಳನ್ನು ಬಳಸುವ ಬಗ್ಗೆ ಸಾರ್ವಜನಿಕರ, ಔಷಧ ಕಂಪನಿಗಳ ಹಾಗೂ ಇತರ ಪಾಲುದಾರರ ಅಭಿಪ್ರಾಯಗಳನ್ನು ಸಂಗ್ರಹಿಸುವಂತೆ ಆದೇಶ ನೀಡಿದೆ. ನಮ್ಮಲ್ಲಿ ಸುಮಾರು ಶೇ. 40ರಷ್ಟು ಸಸ್ಯಾಹಾರಿಗಳಿದ್ದಾರೆ. ಪ್ರಾಣಿಜನ್ಯ ಪದಾರ್ಥಗಳಿಂದ ಕ್ಯಾಪ್ಸೂಲ್ ತಾಯಾರಿಸಿ ಅದರೊಳಗೆ ಔಷಧವನ್ನು ತುಂಬಿಸಿ ಕೊಡುವುದರಿಂದ ಅವರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಹಲವು ವರ್ಷಗಳಿಂದಲೂ ಇದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಮೊದಲು ರಚಿಸಲಾಗಿದ್ದ ಸಮಿತಿ ಕೂಡ ವರದಿ ನೀಡಿರುವುದನ್ನು ಗಮನಿಸಬಹುದು. ಈಗ ಇದಕ್ಕೆ ಪರಿಹಾರ ಕಂಡುಕೊಳ್ಳಲು ಕೇಂದ್ರಸಚಿವೆ ಮೇನಕಾ ಗಾಂಧಿ ಪ್ರಯತ್ನ ಮತ್ತು ಒತ್ತಡ ಕೂಡ ಕಾರಣವಾಗಿದೆ.

ಪ್ರಾಣಿಜನ್ಯ ಜೆಲಟಿನ್ ಈಗಿನ ಕ್ಯಾಪ್ಸೂಲ್‌ಗಳಿಗೆ ಮೂಲ ಸಾಮಗ್ರಿ. ಜೆಲಟಿನ್ ತಾಯಾರಿಸಲು ಕಸಾಯಿಖಾನೆಯಿಂದ ಮೂಳೆಗಳನ್ನು ಸಂಗ್ರಹಿಸಿ, ಅವನ್ನು ಕಾರ್ಖಾನೆಯಲ್ಲಿ ಲಘು ಆಮ್ಲದಲ್ಲಿ ಕರಗಿಸಿ ಮೂಳೆಯಲ್ಲಿರುವ ರಂಜಕಯುಕ್ತ ಸುಣ್ಣವನ್ನು ಬೇರ್ಪಡಿಸಿದಾಗ ಪ್ರೊಟೀನ್‌ಯುಕ್ತ ಒಸ್ಸೀನ್ ಹೊರಬರುತ್ತದೆ. ಇದನ್ನು ನಂತರ ಸಂಸ್ಕರಿಸಿದಾಗ ಜೆಲಟಿನ್ ಉಂಟಾಗುತ್ತದೆ. ಈ ಜೆಲಟಿನ್ ಮಾತ್ರೆಗಳ ಹೊರಪದರ, ಕ್ಯಾಪ್ಸೂಲ್‌ಗಳನ್ನು ತಯಾರಿಸಲು ಮಾತ್ರವಲ್ಲದೆ, ಐಸ್ ಕ್ರೀಮ್ ಉದ್ಯಮದಲ್ಲಿ, ಮಾರ್ಸ್‌ಮೆಲೋ ಮತ್ತು ಇತರ ಆಹಾರಪದಾರ್ಥಗಳಲ್ಲೂ ಹೇರಳವಾಗಿ ಬಳಸಲಾಗುತ್ತಿದೆ.

ಸುಣ್ಣ ಮತ್ತು ರಂಜಕ ಸೇರಿ ಡೈಕ್ಯಾಲ್ಸಿಯಂ ಫಾಸ್ಫೇಟ್ ಆಗುವುದು. ಇದನ್ನು ಹಲ್ಲುಜ್ಜುವ ಪೇಸ್ಟ್‌ಗಳಲ್ಲಿ, ದಂತಚಿಕಿತ್ಸೆಯಲ್ಲಿ ಬಳಸಲಾಗುವುದು. ಇದಕ್ಕೆ ಪರ್ಯಾಯವಾಗಿ ಇಂದು ಹೇರಳವಾಗಿ ರಾಕ್ ಪಾಸ್ಪೇಟ್ ಗಣಿಗಾರಿಕೆ ಮಾಡಿ ಇದೇ ಡೈಕಾಲ್ಸಿಂ ಪಾಸ್ಪೇಟ್‌ಗೆ ಪರ್ಯಾಯವಾಗಿ ಬಳಸಲಾಗುತ್ತಿದೆ. ಆದರೆ ಪ್ರಾಣಿಜನ್ಯ ಕ್ಯಾಪ್ಸೂಲ್‌ಗಳಿಗೆ ಪರ್ಯಾಯವಾಗಿರುವ ಸೆಲ್ಯೂಲೊಸ್ ಉತ್ಪನ್ನ ಇನ್ನೂ ಬಳಕೆಗೆ ಬಂದಿರುವುದು ಅತ್ಯಲ್ಪ. ಇದಕ್ಕೆ ಮುಖ್ಯ ಕಾರಣ  ಬೆಲೆ; ಜೆಲಟಿನ್‌ನಷ್ಟು ಸುಲಭವಾಗಿ, ಸಹಜವಾಗಿ ಒಗ್ಗುವಂಥದ್ದಲ್ಲ. ಜಲೆಟಿನ್‌ನ ಬಳಕೆ ಸುಮಾರು ಎರಡು ಶತಮಾನಗಳಿಂದ ನಡೆಯುತ್ತಿದೆ.

’ಸೆಲ್ಯೂಲೊಸ್’ ಆಹಾರ ಮತ್ತು ಇತರ ಸಸ್ಯಗಳಲ್ಲಿನ ನಾರು. ಇದನ್ನು ಹೈಡ್ರಾಕ್ಸಿಪ್ರೊಪೈಲ್‌ ಮೀತೈಲ್‌ಸೆಲ್ಯೂಲೊಸ್ ಆಗಿ ಪರಿವರ್ತಿಸಲು ಅಷ್ಟು ಸುಲಭವಲ್ಲ; ಅದಕ್ಕಾಗಿ ರಸಾಯನಿಕಗಳ ಸುರಿಮಳೆಯೇ ಬೇಕು. ಇದೇ ರೀತಿ ತಯಾರಿಸಿದ ಕಾರ್ಬಾಕ್ಸಿ ಮೀಥೈಲ್ ಸೆಲ್ಯೂಲೊಸ್ ಆಹಾರ ಸಂಸ್ಕರಣೆಯಲ್ಲಿ ಯಥೇಚ್ಛವಾಗಿ ಬಳಸುತ್ತಾರೆ. ಇದರಿಂದ ಅನೇಕ ಆರೋಗ್ಯಸಮಸ್ಯೆಗಳೂ ಉಂಟಾಗುತ್ತವೆ ಎಂದು ‘ನೇಚರ್’ ನಿಯತಕಾಲಿಕದಲ್ಲಿ ವರದಿ ಪ್ರಕಟವಾಗಿದೆ.

ಪ್ರಾಣಿಜನ್ಯ ಪದಾರ್ಥಗಳು ಸಾಂಸ್ಕೃತಿಕವಾಗಿಯೂ ಒಗ್ಗುವುದಿಲ್ಲ; ಇತ್ತ ಸಸ್ಯಜನ್ಯ ರಸಾಯನಿಕಗಳ ಸಂಸ್ಕರಣೆಯಿಂದ ಉತ್ಪಾದಿಸಲ್ಪಟ್ಟ ಉತ್ಪನ್ನವೂ ಸಮಸ್ಯೆಗಳಿಂದ ಹೊರತಲ್ಲ. ಪ್ರಾಣಿಜನ್ಯ ಪದಾರ್ಥಗಳಿಂದ ಉತ್ಪಾದಿಸಲಾಗುತ್ತಿದ್ದ ಇನ್ಸುಲಿನ್, ಇತರ ಹಾರ್ಮೋನ್‌ಗಳನ್ನು ಇಂದು ಸುಲಭವಾಗಿ ಕುಲಾಂತರಿ ತಂತ್ರಜ್ಞಾನವೆನ್ನಬಹುದಾದ ರಿಕಾಂಬಿನ್ಯಾನ್ಟ್ ಡಿಎನ್‌ಎ ತಂತ್ರದಿಂದ ತಯಾರಿಸಲಾಗುತ್ತಿದೆ.

ವಿಟಮಿನ್ ಡಿ ಇಂದಿಗೂ ಹೆಚ್ಚಾಗಿ ಬಳಕೆಯಾಗುತ್ತಿರುವುದು ಕುರಿ ಮತ್ತು ಮೇಕೆಯ ಉಣ್ಣೆಯಿಂದ. ಇದಕ್ಕೆ ‘ಸಸ್ಯಾಹಾರ’ ಎಂಬ ಪ್ರಮಾಣಪತ್ರವನ್ನು ಬ್ರಿಟನ್ನಿನ ವೆಜಿಟೇರಿಯನ್ ಸೊಸೈಟಿ ನೀಡುತ್ತದೆ. ಇದಕ್ಕೆ ಅವರು ಕೊಡುವ ಕಾರಣ, ಉಣ್ಣೆಯನ್ನು ತೆಗೆಯುವಾಗ ಆ ಪ್ರಾಣಿಗಳಿಗೆ ಯಾವುದೇ ಹಿಂಸೆಯಾಗುವುದಿಲ್ಲ ಮತ್ತು ರಕ್ತಸ್ರಾವವಾಗದು ಎಂದು. ಉಣ್ಣೆಯಲ್ಲಿರುವ ಕೊಲೆಸ್ಟ್ರಾಲ್‌ ಅನ್ನು ವಿಟಮಿನ್ ಡಿ3ಯಾಗಿ ಪರಿವರ್ತಿಸಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಪಾಚಿಯಿಂದ ವಿಟಮಿನ್ ಡಿ2ನ್ನು ತಯಾರಿಸಲಾಗುತ್ತಿದೆ.

ಅಲ್ಲದೆ ಇಂದು ಹೆಚ್ಚಿನ ವಿಟಮಿನ್‌ಗಳನ್ನು ಕಚ್ಚಾತೈಲೋತ್ಪನ್ನಗಳಿಂದಲೇ ತಯಾರಿಸಲಾಗುತ್ತದೆ. ಕಚ್ಚಾತೈಲದಿಂದ ತಿನ್ನುವ ಪದಾರ್ಥಗಳು ಸಿದ್ಧವಾಗುವುದು ಕೂಡ ಭಾವನಾತ್ಮಕ ನೆಲೆಯಿಂದ ಖುಷಿ ಕೊಡುವಂಥದ್ದೇನಲ್ಲ. ಇಂತಹ ವಿಷಯಗಳನ್ನು ಗಮನಿಸಿ ಹಿಂದಿನ ಸರ್ಕಾರ ರಚಿಸಿದ್ದ ಸಮಿತಿಯು ಔಷಧಗಳನ್ನು ನೋಡುವ ದೃಷ್ಟಿಗೂ ಆಹಾರವನ್ನು ನೋಡುವ ದೃಷ್ಟಿಗೂ ವ್ಯತ್ಯಾಸವಿರಬೇಕು ಎಂದಿತ್ತು. ಆಹಾರ ನಮ್ಮ ಆಯ್ಕೆಗೆ ಸಂಬಂಧಿಸಿದ್ದು; ಔಷಧ ರೋಗಿಗೆ ವೈದ್ಯ ನಿರ್ಧರಿಸುವ ವಿಷಯ ಎಂದಿತ್ತು.

ಮುಸಲ್ಮಾನರು ಮತ್ತು ಯಹೂದಿಗಳಿಗೆ ಪ್ರಾಣಿಜನ್ಯ ಜೆಲಟಿನ್ ಆಗಬಹುದು. ಆದರೆ ಹಂದಿಮೂಳೆಯಿಂದ ತಯಾರಾಗಿರಕೂಡದು. ಅಮೆರಿಕೆಯ ವೀಗನ್ ಸಮಾಜದವರು ಹಾಲನ್ನು ಕೂಡ ದ್ರವರೂಪದ ಮಾಂಸ ಎನ್ನುತ್ತಾರೆ. ಅಲ್ಲಿ ಹಲವರು ಹಾಲುವರ್ಜಿತವಾದ ವೇಗನ್ ಆಹಾರದ ಅಭ್ಯಾಸದಿಂದ ವಿಟಮಿನ್ ಬಿ12ರ ಕೊರತೆಯಿಂದ ನರಳುತ್ತಿದ್ದಾರೆ.  ನಮ್ಮಲ್ಲಿ ಸಸ್ಯಹಾರಿಗಳಲ್ಲಿ ಬಿ12 ಕೊರತೆ ಕಾಣದಿರಲು ಹುಳ–ಹಪ್ಪಟೆಗಳನ್ನು ತಿಳಿಯದೆ ಅಲ್ಪಸ್ವಲ್ಪ ಪ್ರಮಾಣದಲ್ಲಿ ದೇಹವನ್ನು ಸೇರುವುದರಿಂದ ಎನ್ನಲಾಗುತ್ತದೆ.‘ಇಷ್ಟು ಕೀಟದ ಭಾಗ ಇದ್ದರೆ’ ತೊಂದರೆಯಿಲ್ಲ ಎಂಬ ಅಭಿಪ್ರಾಯ ಆಹಾರ ಕಾಯಿದೆಯಲ್ಲೂ ಇತ್ತು. ಸಸ್ಯಾಹಾರ ಮತ್ತು ಮಾಂಸಾಹಾರ ಕಣ್ಣಿಗೆ ಕಾಣುವ ಜಗತ್ತಿಗೆ ಮಾತ್ರ ಮೀಸಲು. ಹಿಂಸೆ–ಅಹಿಂಸೆಗಳು ಕೂಡ ಅಷ್ಟಕ್ಕೇ ಸೀಮಿತ. ಕಣ್ಣಿಗೆ ಕಾಣದ ಜೀವಜಗತ್ತು ನಮ್ಮ ಮೊಸರು, ಇಡ್ಲಿ, ದೋಸೆ, ಬ್ರೇಡ್‌ಗಳಲ್ಲಿ ಅಪಾರ ಪ್ರಮಾಣದಲ್ಲಿರುತ್ತವೆ. ಕಣ್ಣಿಗೆ ಕಾಣದನ್ನು ಲೆಕ್ಕಿಸದಿರುವುದೇ ಲೇಸು.

ನಮ್ಮ ದೇಹವೇ ಕೆಲವು ಜೀವಕೋಶಗಳನ್ನು ನಮ್ಮನ್ನು ಬದುಕಿಸಲು ಅವನ್ನು ಅತ್ಮಹತ್ಯೆಗೆ ದೂಡುತ್ತವೆ. ರಕ್ತ ಕೆಂಪಾಗಿದ್ದರೆ ಅದು ಹಿಂಸೆಗೆ ಸಂಕೇತ. ಆದರೆ ಕೆಲವು ಜೀವಿಗಳ ರಕ್ತವೇ ಕೆಂಪಾಗಿರುವುದಿಲ್ಲ. ಸುಮಾರು 650 ಸಸ್ಯಗಳೂ ಸಹ ಮಾಂಸಾಹಾರಿಗಳಾಗಿರುವುದು ಗಮನಿಸುವಂಥದ್ದು. ಇಂತಹ ವಾಸ್ತವ ವಿಷಯಗಳಿಗೆ ಗಮನ ಕೊಡಬೇಕಾಗುತ್ತದೆ. ನಾವು ಹೆಚ್ಚು ಭಾವುಕ ಜೀವಿಗಳೇ ಹೊರತು ಕೇವಲ ಕಾರ್ಯ–ಕಾರಣ ಸಂಬಂಧಗಳಿಗೆ ಒತ್ತು ಕೊಡುವವರಲ್ಲ. ಹೀಗಿದ್ದರೂ ನಮ್ಮ ಮಾನಸಿಕ ಆರೋಗ್ಯಕ್ಕೂ ನಮ್ಮ ಸಾಂಸ್ಕೃತಿಕ ಹಿನ್ನೆಲೆಗೂ ಇರುವ ಸಂಬಂಧಗಳನ್ನು ಅಲ್ಲಗಳೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT