ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಫ್ತಾರ್‌: ಕಣ್ಣು ತೆರೆಸುವ ಕೆಲಸ

Last Updated 2 ಜುಲೈ 2017, 19:30 IST
ಅಕ್ಷರ ಗಾತ್ರ

ಮುಸ್ಲಿಮರಿಗೆ ಪೇಜಾವರ ಮಠದ ವಿಶ್ವೇಶ ತೀರ್ಥರು  ಇಫ್ತಾರ್ ಕೂಟವನ್ನು ಏರ್ಪಡಿಸಿದ್ದುದರ ಪರ-ವಿರೋಧ ಚರ್ಚೆಗಳಾಗುತ್ತಿವೆ. ಇಫ್ತಾರ್ ಕೂಟದಲ್ಲಿ ಯತಿಯೊಬ್ಬರು ಮಠದ ಆವರಣದಲ್ಲಿ ಮುಸ್ಲಿಮರಿಗೆ ತಾವೇ ನೇತೃತ್ವ ವಹಿಸಿ ಉಣಬಡಿಸಿರುವುದಕ್ಕೇ ಕೆಲವು ಕಟ್ಟರ್ ಪಂಥೀಯ ಹಿಂದೂ ಮಿತ್ರರು ಇಷ್ಟು ಬಲವಾದ ವಿರೋಧ ವ್ಯಕ್ತಪಡಿಸುತ್ತಿರಬೇಕಾದರೆ ಇನ್ನು ಮುಸ್ಲಿಮರೊಬ್ಬರು ಹಿಂದೂ ಯತಿಯೊಬ್ಬರನ್ನು ತನ್ನ ಮನೆಗೆ ಆಹ್ವಾನಿಸಿ ಭೋಜನ ನೀಡಿದರೆಂಬ ವಿಷಯ ತಿಳಿದರೆ ಆ ಯತಿಯ ಬಗ್ಗೆ ಈ ಕಟ್ಟರ್ ಪಂಥೀಯರು ಏನು ಹೇಳುತ್ತಾರೋ ತಿಳಿಯದು!

ಆ ಯತಿ ಬೇರಾರೂ ಅಲ್ಲ. ಷಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಧ್ವಜವನ್ನು ಎತ್ತಿಹಿಡಿದ ಅಪ್ರತಿಮ ದೇಶಭಕ್ತ, ಸನ್ಯಾಸಿ ಸ್ವಾಮಿ ವಿವೇಕಾನಂದರು. ಅವರು ಷಿಕಾಗೊಕ್ಕೆ ಹೋಗುವ ಮುನ್ನ ಇಡೀ ದೇಶದ ಪರಿಚಯ ಮಾಡಿಕೊಳ್ಳಬೇಕೆಂದು ಸಂಚರಿಸುತ್ತಿದ್ದಾಗ ಖೇತ್ರಿ ಮಹಾರಾಜರ ಅತಿಥಿಯಾಗಿದ್ದಾಗಲೋ ಏನೋ ಅವರು ದಿನವೂ ನೀಡುತ್ತಿದ್ದ ಉಪನ್ಯಾಸಗಳಿಗೆ ತಪ್ಪದೆ ಹಾಜರಾಗುತ್ತಿದ್ದ ಒಬ್ಬ ಬಡ ಮುಸ್ಲಿಂ ವೃದ್ಧರಿಗೆ ವಿವೇಕಾನಂದರನ್ನು ಮನೆಗೆ ಆಹ್ವಾನಿಸಿ ಭೋಜನ ನೀಡಬೇಕೆಂಬ ಪ್ರಬಲವಾದ ಬಯಕೆ ಉಂಟಾಗುತ್ತದೆ.

ಆದರೆ ತನ್ನಂಥ ಅನ್ಯ ಧರ್ಮೀಯ ನೀಡುವ ಆಹಾರವನ್ನು ಸ್ವಾಮೀಜಿ ಸ್ವೀಕರಿಸುತ್ತಾರೋ ಇಲ್ಲವೋ ಎಂಬ ಅನುಮಾನವೂ ಇರುತ್ತದೆ.  ಇದನ್ನು ಸುಳ್ಳು ಮಾಡಿದ ವಿವೇಕಾನಂದರು, ಅವರು  ನೀಡಿದ ಭೋಜನವನ್ನು ಸಂತೋಷದಿಂದ ಸ್ವೀಕರಿಸಿ, ಅವರ ಆಸೆ ಈಡೇರಿಸುತ್ತಾರೆ (ಸ್ವಾಮಿ ವಿವೇಕಾನಂದ- ಕುವೆಂಪು).

ಮಠಾಧೀಶರೂ ಸೇರಿದಂತೆ ಎಲ್ಲ ಬ್ರಾಹ್ಮಣರೂ ಸನ್ಯಾಸ ಸ್ವೀಕರಿಸುವ ಮುಂಚೆ ಶಿಖೆ ಮತ್ತು ಯಜ್ಞೋಪವೀತಗಳನ್ನು ತ್ಯಜಿಸುತ್ತಾರೆ. ಅದರ ಅರ್ಥ ಸ್ಪಷ್ಟವಿದೆ. ಸನ್ಯಾಸಿಗೆ ಜಾತಿ– ಮತ– ಪಂಥಗಳ ಭೇದವಿಲ್ಲ. ಯಾರ ಮನೆಯಲ್ಲಾದರೂ ಭಿಕ್ಷೆ ಬೇಡಿ ಭುಂಜಿಸಬೇಕೆಂಬುದು ಪರಿವ್ರಾಜಕ ಸನ್ಯಾಸಿಯಾದವರ ಒಂದು ಧರ್ಮ. 

ಆದರೆ ಮಠ ಪರಂಪರೆಯಲ್ಲಿ ಬಂದ ಮಠಾಧೀಶರು ಜುಟ್ಟು- ಜನಿವಾರ ತ್ಯಜಿಸುವುದು ಕೇವಲ ಸಾಂಕೇತಿಕವಾಗಿದೆ.  ಜಾತಿಭೇದ ಪೂರ್ತಿ ತೊರೆದ ಮಠಾಧೀಶರು ಯಾವ ಕಾಲದಲ್ಲೂ  ಇರಲಿಲ್ಲ (ಬಸವಣ್ಣನವರು ಮತ್ತು ರಾಮಾನುಜರು ಅಪವಾದವೆನಿಸುತ್ತದೆ). ಬಹುತೇಕರು  ಭಿಕ್ಷೆ (ಭೋಜನ) ಸ್ವೀಕರಿಸುವುದು ಏನಿದ್ದರೂ ತಮ್ಮ ಪಂಗಡದ ಭಕ್ತರ ಮನೆಗಳಲ್ಲಿಯೇ. ಅದಕ್ಕೆ ಕೊಡುವ ಕಾರಣ ಬಹುಶಃ ಸ್ಪಷ್ಟವಿದೆ. ಅವರು ಕೇವಲ ಸನ್ಯಾಸಿಗಳಲ್ಲ; ಮಠದ ಸಂಪ್ರದಾಯ, ನಡವಳಿಕೆಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವ ಹೊಣೆಗಾರಿಕೆ ಹೊತ್ತವರು. ಅಂಥದ್ದರಲ್ಲಿ ಈ ಕರ್ಮಠ ಪರಂಪರೆಯಲ್ಲೇ ಬಂದ ಪೇಜಾವರರ ಈಗಿನ ನಡೆ ಒಂದು ಹನುಮ ನೆಗೆತವೇ ಸರಿ!

ಪೇಜಾವರರು ದಲಿತರ ಕೇರಿಗೆ ಹೋದಾಗಲೆಲ್ಲ ಅವರನ್ನು ‘ಡೋಂಗಿ ಸ್ವಾಮಿ’ ಎಂದೇ ಟೀಕಿಸುತ್ತಿದ್ದ ಕೆಲವರೂ ಅವರನ್ನು ಮನಸಾರೆ ಮೆಚ್ಚುವಷ್ಟು ಔದಾರ್ಯ ತೋರಿರುವುದೇ ಅವರದು ಸರಿಯಾದ ನಡೆ ಎನ್ನುವುದಕ್ಕೆ ಒಂದು  ಪ್ರಬಲವಾದ ಸಾಕ್ಷಿಯೆನ್ನೋಣವೇ?

ಹಿಂದೂ ಧರ್ಮ ಮೊದಲಿನಿಂದಲೂ ಸಾಗುತ್ತ ಬಂದಿರುವ ಹಾದಿಯನ್ನು ಗಮನಿಸಿದವರಿಗೆ ಇದೇನೂ ಅಂಥ ವಿಶೇಷವೆನಿಸಲಾರದು.  ಅಲ್ಲಾಹುವಿನ ಹೊರತು ಅನ್ಯ ದೈವಕ್ಕೆ ನಮಿಸದಿರುವುದು, ಅವರ ಮಸೀದಿಗಳೊಳಕ್ಕೆ ಇತರೆ ಧರ್ಮೀಯರನ್ನು ಸೇರಿಸಿಕೊಳ್ಳದಿರುವುದು ಇಸ್ಲಾಂ ಧರ್ಮ ಹುಟ್ಟಿದಾಗಿನಿಂದಲೂ ಅನುಸರಿಸಿಕೊಂಡು ಬಂದಿರುವ ಮುಸ್ಲಿಮರ  ನಂಬಿಕೆ ಮತ್ತು ಪದ್ಧತಿಯೇ ಆಗಿದೆ. ಅದನ್ನು ಹಿಂದೂಗಳು ಮೊದಲುಗೊಂಡು ಉಳಿದವರೆಲ್ಲರೂ ಗೌರವಿಸಬೇಕು.

ಆದರೆ ಪರದೈವವೊಲ್ಲೆನೆಂಬ ಛಲ ಹಿಂದೂ ಧರ್ಮಕ್ಕೆ ಯಾವ ಕಾಲಕ್ಕೂ ಇರಲಿಲ್ಲ. ಅದಕ್ಕೆ ನಮ್ಮಲ್ಲಿರುವ ಬಹುದೇವತಾ ಆರಾಧನೆಯೇ ಸಾಕ್ಷಿ. ಅಲ್ಲಾಹು ಅಥವಾ ಏಸುಕ್ರಿಸ್ತನನ್ನೂ ದೈವವೆಂದು ಒಪ್ಪಿಕೊಳ್ಳಲು ಮತ್ತು ನಮಿಸಲು ನಮ್ಮ ಧರ್ಮ ಅಡ್ಡ ಬರುವುದಿಲ್ಲ.   ನಮ್ಮ ದೇವಸ್ಥಾನಗಳಿಗೆ ಯಾರು ಬೇಕಾದರೂ ಬರಬಹುದು. ದಲಿತರನ್ನು ಗಾಂಧೀಜಿ ಬರುವವರೆಗೂ ದೇವಸ್ಥಾನದೊಳಕ್ಕೆ ಬಿಡದಿದ್ದರೆ ಅದಕ್ಕೆ ನಮ್ಮವರ ಮೌಢ್ಯ ಕಾರಣವೇ ಹೊರತು ಇನ್ನೇನಲ್ಲ.
ಅನ್ಯ ಧರ್ಮೀಯರಿಗೆ ಹಿಂದೂ ರಾಜರು ಎಲ್ಲ ಕಾಲದಲ್ಲೂ ಉದಾರವಾದ ಆಶ್ರಯ ನೀಡಿರುವುದಕ್ಕೆ ಇತಿಹಾಸ ಜ್ವಲಂತ ಸಾಕ್ಷಿಯಾಗಿದೆ.

ಹೀಗಿರುವಾಗ  ನಾವು ಅನ್ಯ ಧರ್ಮೀಯರನ್ನು ನಮ್ಮ ಮಠ– ದೇವಸ್ಥಾನದೊಳಕ್ಕೆ ಆಹ್ವಾನಿಸಿದರೆ ಅದು ನಮ್ಮ ಧರ್ಮಕ್ಕೆ ಹೇಗೆ ವಿರೋಧವಾಗುತ್ತದೆ? ಬದಲಿಗೆ ನಮ್ಮ ಎಂದಿನ ಧಾರ್ಮಿಕ ಔದಾರ್ಯಕ್ಕೆ ಮತ್ತೊಂದು ನಿದರ್ಶನವಾಗುತ್ತದೆ ಅಷ್ಟೆ.  ‘ಮಸೀದಿಯಲ್ಲಿ ಗಣೇಶೋತ್ಸವ ಆಚರಿಸುತ್ತಾರೆಯೇ,  ಅವರು ಗೋಮಾಂಸ ಭಕ್ಷಕರಲ್ಲವೇ’ ಎಂದೆಲ್ಲ ಅವರ ಧಾರ್ಮಿಕ ನಂಬಿಕೆ ಮತ್ತು ಆಹಾರ ಪದ್ಧತಿಯನ್ನು ಪ್ರಶ್ನಿಸುತ್ತ ಹೋದರೆ ನಾವು ಒಂದು ಇಂಚೂ ಮುಂದೆ ಹೋಗಲಾಗುವುದಿಲ್ಲ. ಅದು ಅಲ್ಲಿಗೇ ನಿಲ್ಲುತ್ತದೆ.

ನಮ್ಮದು ವ್ಯವಸಾಯ ಪ್ರಧಾನವಾದ ದೇಶವಾದ ಕಾರಣ ಹಸು, ಎತ್ತುಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದವು, ಈಗಲೂ ಆಗಿವೆ. ರೈತನ ಜೀವನಾಡಿಯೇ ಅವು. ಅಲ್ಲದೆ ನಮ್ಮ ಮಕ್ಕಳು, ಮೊಮ್ಮಕ್ಕಳು ಅದರ ಹಾಲು, ಮೊಸರು, ತುಪ್ಪಗಳನ್ನು ತಿಂದು ಬೆಳೆಯುತ್ತಾರೆ. ಪೋಷಣೆ ಹೊಂದುತ್ತಾರೆ. ಈ ಕಾರಣಕ್ಕಾಗಿ ನಮಗೆ ಅದರ ಬಗ್ಗೆ ಮೊದಲಿಗೆ ಇರುವುದು ಎಲ್ಲಿಲ್ಲದ ಕೃತಜ್ಞತೆಯ ಭಾವನೆ.

‘ಬಸವಣ್ಣ ನಿನ್ನ ಕಸವ ಹೊಡೆದ ಕೈ ಕಸ್ತೂರಿ ಗೊನಿನಾತ, ಎಸಳ ಯಾಲಕ್ಕಿ ಗೊನಿನಾತ’ ಎಂಬ ಕನ್ನಡ ಜನಪದ ಗೀತೆಯಲ್ಲಿ ನಮ್ಮ ನಾಡಿನವರ  ಕೃತಜ್ಞತೆಯ ಭಾವ ಸ್ಪಷ್ಟವಾಗಿ ವ್ಯಕ್ತವಾಗಿದೆ. ಆ ಕಾರಣಕ್ಕಾಗಿಯೇ ಗೋವಧೆ ಮಹಾ ಪಾಪವೆಂದು ಹೇಳಿರಬೇಕು. ಗೋವಿನ ಬಗ್ಗೆ ಪಾವಿತ್ರ್ಯದ ಭಾವನೆ ಆನಂತರ ಬಂದದ್ದಿರಬೇಕು. ಕಾರಣ ವೈದಿಕ ಋಷಿಗಳು ಗೋಮಾಂಸ ಭಕ್ಷಿಸುತ್ತಿದ್ದುದಕ್ಕೆ ಬೇಕಾದಷ್ಟು ಪುರಾವೆಗಳಿವೆ. ಬಹುಶಃ ಹೀಗೆ ಪವಿತ್ರವೆಂದು ಧಾರ್ಮಿಕತೆಯನ್ನು ಆರೋಪಿಸಿದರಾದರೂ ಅದರ ವಧೆ ಮಾಡದೆ ಇರಲಿ ಎಂಬುದು ಅದರ ಹಿಂದಿನ ಉದ್ದೇಶವಾಗಿರಬೇಕು.

ಆದರೆ ಅಲ್ಲಿಂದ ನಾವು ಬಹಳ ಮುಂದೆ ಬಂದಿದ್ದೇವೆ. ವೈದಿಕರೂ ಸೇರಿದಂತೆ  ಯಾವುದೇ ಮಠಾಧೀಶರು ಗೋಮಾಂಸವಿರಲಿ, ಮಾಂಸವನ್ನೇ ತ್ಯಜಿಸಿ ಸಹಸ್ರಾರು ವರ್ಷಗಳೇ ಸಂದುಹೋಗಿವೆ. ಹಸು–ಎತ್ತುಗಳು  ಮುದಿಯಾದಾಗ ಸಂಕಟದಿಂದಲಾದರೂ ಅವನ್ನು ಕಟುಕರಿಗೆ ಕೊಡುವುದು ನಮ್ಮಲ್ಲಿ ಇದ್ದೇ ಇದೆ. ಆರ್ಥಿಕತೆ, ವ್ಯಾವಹಾರಿಕತೆ ಅದರೊಂದಿಗೆ ತಳಕು ಹಾಕಿಕೊಂಡಿರುವುದೇನೂ ಸುಳ್ಳಲ್ಲ. ಗೋವು ನಮಗೆ ಮುಖ್ಯ. ಆದರೆ ಅದಕ್ಕಿಂತಲೂ  ಜನರು ಮುಖ್ಯ.

ಒಮ್ಮೆ ಬಂಗಾಳದಲ್ಲಿ ಭೀಕರ ಕ್ಷಾಮವಾಗಿದ್ದಾಗ ಎಲ್ಲೆಲ್ಲೂ ಪರಿಹಾರ ಕೇಂದ್ರಗಳು ನಡೆದಿದ್ದಾಗ ಕೆಲವರು ಗೋರಕ್ಷಕರೆನ್ನುವವರು ಸ್ವಾಮಿ ವಿವೇಕಾನಂದರನ್ನು ಭೇಟಿಯಾಗುತ್ತಾರೆ. ಅವರೊಂದಿಗೆ ಮಾತಾಡುತ್ತ ವಿವೇಕಾನಂದರು- ‘ಗೋ ರಕ್ಷಣೆಯ ನಿಮ್ಮ ಧ್ಯೇಯ ಶ್ಲಾಘನೀಯ. ಆದರೆ ಸುತ್ತ ಆನ್ನಾಹಾರವಿಲ್ಲದೆ ಜನ ಸಾಯುತ್ತಿದ್ದಾರಲ್ಲ ಅವರ ಬಗ್ಗೆ ಏನು ಕಾರ್ಯಕ್ರಮ ಕೈಗೊಂಡಿದ್ದೀರಿ’ ಎಂದು ಪ್ರಶ್ನಿಸುತ್ತಾರೆ.

ಅದಕ್ಕೆ ಅವರು  ‘ಅದರ ಗೊಡವೆ ನಮಗಿಲ್ಲ.  ನಮ್ಮದೇನಿದ್ದರೂ ಗೋರಕ್ಷಣೆ. ಗೋವು ನಮಗೆ ಮಾತೆಯಲ್ಲವೇ? ಅದಕ್ಕೆ ಮೇವು ಆಹಾರ ಒದಗಿಸಿ ರಕ್ಷಿಸುವುದೇ ನಮ್ಮ ಧ್ಯೇಯ’  ಎಂದಾಗ ಸ್ವಾಮೀಜಿ ಕನಲಿ ಕೆಂಡವಾಗಿ- ‘ಆಹಾ! ಎಂಥ ಮೇಧಾವಿಗಳು ನೀವು. ಅತ್ತ ಹಸಿವಿನಿಂದ ಕಂಗಾಲಾಗಿರುವ ಜನರ ಸಂಕಷ್ಟಕ್ಕೆ ಕರಗದೆ ಗೋವಿನ ರಕ್ಷಣೆಗೆ ಮುಂದಾಗುವ ನೀವೆಂಥ ಜನ? ಗೋವೇ ನಿಮ್ಮ ಮಾತೆ! ಆಕೆ ನಿಮ್ಮಂಥ ಅವಿವೇಕಿಗಳನ್ನಲ್ಲದೆ ಇನ್ನೆಂಥವರನ್ನು ಹೆತ್ತಾಳು!’ ಎಂದು ವ್ಯಂಗ್ಯವಾಡುತ್ತಾರೆ(ಸ್ವಾಮಿ ವಿವೇಕಾನಂದ-ಕುವೆಂಪು).

ಸ್ವಾಮಿ ವಿವೇಕಾನಂದರನ್ನು ಮೀರಿಸಿದ ಹಿಂದೂ ಧರ್ಮದ ಭಕ್ತರು ಇದ್ದಾರೆಂದು ಅನಿಸುತ್ತಿಲ್ಲ. ಅದರೆ ಸದಾ ತಮ್ಮ ವಿಚಾರವಂತಿಕೆ ಮತ್ತು ವಿವೇಕವನ್ನು ಜಾಗೃತವನ್ನಾಗಿಟ್ಟುಕೊಂಡ ಆ ದೇಶಭಕ್ತ ಸ್ವಾಮೀಜಿ ನಡೆ ಎಲ್ಲ ಕಾಲಕ್ಕೂ ನಮಗೆ ನಮ್ಮ ಬೆನ್ನ ಹಿಂದಿನ ಬೆಳಕಾಗಬೇಕಲ್ಲವೇ?
ಪೇಜಾವರರ ನಡೆಯನ್ನು ಟೀಕಿಸುವುದು, ಲೇವಡಿ ಮಾಡುವುದು ಸುಲಭ. ಆದರೆ ಅವರ ನಡೆ ಸಮಾಜದ ಕಣ್ಣನ್ನು ಕಿಂಚಿತ್ತಾದರೂ ತೆರೆಸುವಂಥದ್ದು.  ಅದನ್ನು  ಮುಕ್ತವಾಗಿ ಸ್ವಾಗತಿಸುವ ಔದಾರ್ಯ ತೋರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT