ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳತು ಹೊಸತು

Last Updated 4 ಜುಲೈ 2017, 19:30 IST
ಅಕ್ಷರ ಗಾತ್ರ

‘ಹೊಸತು’ ಎಂದ ಕೂಡಲೇ ಎರಡು ಭಿನ್ನ ಅಭಿಪ್ರಾಯಗಳು ಮೂಡುತ್ತವೆ. ಇಂದಿನವರಿಗೆ ಸಂತಸ; ಹಿಂದಿನವರಿಗೆ ಆತಂಕ. ಈ ಎರಡಕ್ಕೂ ಕಾರಣಗಳು ಇಲ್ಲದಿಲ್ಲ. ಹೊಸತಾದದ್ದು ಇನ್ನೂ ಪರೀಕ್ಷೆಗೆ ಒಳಪಟ್ಟಿಲ್ಲ; ಹೀಗಾಗಿ ಅದು ಹೇಗೆ ವರ್ತಿಸಬಹುದೋ, ಏನೆಲ್ಲ ತೊಂದರೆಗಳನ್ನು ಒಡ್ಡಬಹುದೋ ಎಂಬ ಉದ್ವೇಗ–ಭಯ ‘ಆ ಕಾಲ’ದವರಿಗೆ. ಹೊಸತಾದದ್ದು ಎಂದರೆ ಶಕ್ತಿಯಿಂದ ಮೈ ತುಂಬಿಕೊಂಡಿರುವುದು, ನಮ್ಮ ಜೊತೆಯಲ್ಲಿಯೇ ಹುಟ್ಟಿರುವುದು, ಯಾವುದರ ಭಾರವಿಲ್ಲದೆ ಸ್ವತಂತ್ರವಾಗಿರುವುದು ಎಂಬ ಆತ್ಮೀಯತೆ–ಉಲ್ಲಾಸ ‘ಈ ಕಾಲ’ದವರಿಗೆ.

ಈ ಎರಡು ಪಕ್ಷಗಳವರ ಆಲೋಚನೆಯಲ್ಲಿ ನಿಜಕ್ಕೂ ಸತ್ಯ ಇದೆಯೆ? ಇದ್ದರೆ ಯಾರ ಪಕ್ಷದಲ್ಲಿದೆ? ಎರಡೂ ಪಕ್ಷಗಳವ ಚಿಂತನೆಯಲ್ಲಿ ಸತ್ಯವೂ ಇದೆ, ಸುಳ್ಳೂ ಇದೆ – ಎನ್ನುವುದು ‘ಹೊಸತು–ಹಳತು’ಗಳನ್ನು ವಿಶ್ಲೇಷಿಸಿದರೆ ಸ್ಪಷ್ಟವಾಗುತ್ತದೆ.

‘ಹೊಸತು’ ಎನ್ನುವುದಕ್ಕೆ ವಿರುದ್ಧವಾದುದು ‘ಹಳತು.’ ಹೊಸತು ಎಂದರೇನು ಎನ್ನುವುದು ಗೊತ್ತಾಗಬೇಕಾದರೆ ಹಳತು ಎಂದರೆ ಏನು ಎನ್ನುವುದೂ ಗೊತ್ತಾಗಬೇಕು. ವಾಸ್ತವವಾಗಿ ಇವೆರಡೂ ಕೂಡ ಸಾಪೇಕ್ಷವಾದಂಥವು; ಎಂದರೆ ಒಂದು ಇನ್ನೊಂದನ್ನು ಆಶ್ರಯಿಸಿರುತ್ತದೆ. ಹಳತಾಗುವುದು ಎಂದರೆ ಶಕ್ತಿಯನ್ನು ಕಳೆದುಕೊಳ್ಳುವುದು. ಹೊಸತು ಎಂದರೆ ಶಕ್ತಿಯನ್ನು ತುಂಬಿಕೊಳ್ಳುವುದು. ಇವೆರಡೂ ನಿರಂತರವಾಗಿ ಒಂದು ಇನ್ನೊಂದರಲ್ಲಿ ಸಾಮರಸ್ಯದಿಂದ ಬೆರೆಯದಿದ್ದಾಗ ಜೀವಸಂಚಾರವೇ ಸಾಧ್ಯವಾಗದು. ಇದು ಪ್ರತಿಕ್ಷಣವೂ ಸೃಷ್ಟಿಯಲ್ಲಿಯೂ, ಅಷ್ಟೇಕೆ ನಮ್ಮ ದೇಹದಲ್ಲಿಯೂ, ನಡೆಯುತ್ತಲೇ ಇರುವ ವಿದ್ಯಮಾನ. ಈ ಹೊಸತು–ಹಳತುಗಳ ಚಕ್ರ ಎಲ್ಲಿಯವರೆಗೂ ಸುತ್ತುತ್ತಲೇ ಇರುತ್ತದೆಯೋ ಅಲ್ಲಿಯ ತನಕ ಪ್ರಕೃತಿಯ ಎಲ್ಲ ವಿಧದ ವೈಭವಗಳೂ ಇರಬಲ್ಲದು. ಹೊಸತಿಗೆ ಜನ್ಮ ಕೊಡಬಲ್ಲದ್ದೇ ಹಳತು; ಹಳತಿಗೆ ಸಾಂತ್ವನವನ್ನು ಕೊಡುವಂಥದ್ದೇ ಹೊಸತು; ಒಂದು ಇನ್ನೊಂದನ್ನು ಬಿಟ್ಟು ಇರಲಾರದು.

ಈ ಹೊಸತು–ಹಳತುಗಳನ್ನು ನಮ್ಮ ಕಾಲದ ಬೇರೆ ಬೇರೆ ಆಯಾಮಗಳಲ್ಲೂ ನೋಡಬಹುದು. ನೆನ್ನೆ–ಇಂದು–ನಾಳೆಗಳ ಸುತ್ತಾಟಕ್ಕೂ ಹೊಸತು–ಹಳತುಗಳ ಹೆಣಿಗೆಗೂ ನಂಟಿದೆ. ನಮಗೆ ‘ನೆನ್ನೆ’ ಎನ್ನುವುದು ’ಇಂದಿಗೆ’ ಹೊರೆಯಾಗಬಲ್ಲದ್ದು. ಹೀಗೆ ಹೊರೆಯಾದ ‘ಇಂದು’ ‘ನಾಳೆ’ಯನ್ನೇ ಇಲ್ಲವಾಗಿಸಬಹುದು. ಈ ಮೂರು ಕಾಲಗಳಲ್ಲಿ ನಾವು ಹೇಗಿರುತ್ತೇವೆ ಎನ್ನುವುದರಿಂದಲೇ ಅವು ನೆನ್ನೆಯೋ ಇಂದೋ ಅಥವಾ ನಾಳೆಯೋ ಎನ್ನುವುದು ನಿರ್ಧಾರವಾಗುವಂಥದ್ದು. ಎಂದರೆ ನಾವು ಈ ದಿನವನ್ನು ‘ಈ ದಿನ’ವನ್ನಾಗಿಯೇ ಸವಿಯಬೇಕಾದರೆ ಅದರ ನಡುವೆ ನೆನ್ನೆಯೂ ಬರಬಾರದು, ನಾಳೆಯೂ ಬರಬಾರದು. ನೆನ್ನೆ ನಮಗಾದ ನೋವಿನಲ್ಲಿಯೋ ಅಥವಾ ನಾಳೆ ನಮಗಾಗುವ ತೊಂದರೆಯಲ್ಲೋ ಮನಸ್ಸನ್ನು ಮುಳುಗಿಸಿ ಇಂದಿನ ದಿನವನ್ನು ಏಕಾದರೂ ವ್ಯರ್ಥ ಮಾಡಿಕೊಳ್ಳಬೇಕು? ಇದರ ತಾತ್ಪರ್ಯ: ‘ಇಂದು’ ಎಂದ ಮಾತ್ರಕ್ಕೆ ಅದೇನೂ ಹೊಸತು ಆಗಿರುತ್ತದೆ ಎನ್ನುವಂತಿಲ್ಲ; ಏಕೆಂದರೆ ನಮ್ಮ ನೆನ್ನೆ–ನಾಳೆಗಳ ಚಿಂತೆಗಳ ಭಾರದಲ್ಲಿ ಅದು ಹಳತು ಆಗುವ ಸಾಧ್ಯತೆಯೂ ಇರುತ್ತದೆ.  ಹೀಗಾಗಿ ಹೊಸತು–ಹಳತು ಎನ್ನುವುದು ನಮ್ಮ ಮಾನಸಿಕ ಸ್ಥಿತಿ–ಗತಿಗಳನ್ನು ಅವಲಂಬಿಸಿರುತ್ತವೆಯೇ ಹೊರತು ಹೊರಗಿನ ಕಾಲದ ಎಣಿಕೆಯನ್ನು ಅಲ್ಲ!

-ಹರಿತಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT