ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಅಕ್ರಮಕ್ಕೆ ತಡೆ ಅನರ್ಹತೆಯಷ್ಟೇ ಸಾಲದು

Last Updated 5 ಜುಲೈ 2017, 19:30 IST
ಅಕ್ಷರ ಗಾತ್ರ

ಚುನಾವಣಾ ಖರ್ಚು ವೆಚ್ಚಗಳ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದಕ್ಕಾಗಿ ಮತ್ತು ಸತ್ಯವನ್ನು ಮುಚ್ಚಿಟ್ಟಿದ್ದಕ್ಕಾಗಿ ಮಧ್ಯಪ್ರದೇಶದ ಜಲಸಂಪನ್ಮೂಲ ಮತ್ತು ಸಂಸದೀಯ ವ್ಯವಹಾರಗಳ ಸಚಿವ ನರೋತ್ತಮ್ ಮಿಶ್ರಾ ಅವರನ್ನು ಮೂರು ವರ್ಷ ಅನರ್ಹಗೊಳಿಸಿ ಚುನಾವಣಾ ಆಯೋಗ ಹೊರಡಿಸಿರುವ ಆದೇಶ ರಾಜಕಾರಣಿಗಳಿಗೆಲ್ಲ ಎಚ್ಚರಿಕೆಯ ಗಂಟೆ.

ಚುನಾವಣಾ ಪಾವಿತ್ರ್ಯ ಕಾಪಾಡುವ ನಿಟ್ಟಿನಲ್ಲಿ ಒಳ್ಳೆಯ ಕ್ರಮ. ಆದರೆ ಇದು ತುಂಬ ತಡವಾಯಿತು. ಏಕೆಂದರೆ ಮಿಶ್ರಾ ಅಕ್ರಮ ಎಸಗಿದ್ದು 2008ರಲ್ಲಿ ಅಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ. ಅವರ ಚುನಾವಣಾ ಅಕ್ರಮಗಳ ಬಗ್ಗೆ ಆಯೋಗದ ಎದುರು ದೂರು ದಾಖಲಾಗಿದ್ದು 2009ರ ಏಪ್ರಿಲ್‌ನಲ್ಲಿ.  ಆದರೆ ವಿಚಾರಣೆ ಪೂರ್ಣಗೊಂಡು ಆದೇಶ ಹೊರ ಬಿದ್ದದ್ದು ಕಳೆದ ತಿಂಗಳು, ಅಂದರೆ 8 ವರ್ಷಗಳ ನಂತರ. ಇಷ್ಟರಲ್ಲಿ ಮಿಶ್ರಾ ‘ವಿವಾದಾತ್ಮಕ’ ಅವಧಿಯನ್ನು ಪೂರೈಸಿ ಮತ್ತೊಂದು  ಅವಧಿಗೆ ಆಯ್ಕೆಯಾಗಿ ಮೂರೂವರೆ ವರ್ಷಗಳು  ಕಳೆದಿವೆ.

ಅವರೀಗ ಮಂತ್ರಿ ಸ್ಥಾನವನ್ನೂ ಅನುಭವಿಸುತ್ತಿದ್ದಾರೆ. ಮೂರು ವರ್ಷಗಳ ಅವಧಿಗೆ ಅನರ್ಹರಾಗಿರುವುದರಿಂದ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಅಷ್ಟೆ. ಇದು ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಇರುವ ಲೋಪಕ್ಕೊಂದು ಉದಾಹರಣೆ. ಇವನ್ನು ಸರಿಪಡಿಸುವ, ಕಾನೂನನ್ನು ಮತ್ತಷ್ಟು ಬಿಗಿಗೊಳಿಸುವ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಿದೆ.

ಚುನಾವಣೆಗೆ ಮಾಡುವ ಖರ್ಚಿನ ವಿವರಗಳನ್ನು ನಿಗದಿತ ನಮೂನೆಯಲ್ಲಿ ನಿರ್ದಿಷ್ಟ ಕಾಲಮಿತಿಯ ಒಳಗೆ ಸಲ್ಲಿಸದೇ ಇರುವುದು, ನಾಮಪತ್ರ ಸಲ್ಲಿಸುವಾಗ ಘೋಷಣಾ ಪತ್ರದಲ್ಲಿ ತಪ್ಪು ಮಾಹಿತಿ ಕೊಡುವುದು ಚುನಾವಣಾ ಅಕ್ರಮಗಳ ವ್ಯಾಪ್ತಿಗೆ ಬರುತ್ತದೆ. ಮಿಶ್ರಾ ಮಾಡಿದ್ದೂ ಅದನ್ನೇ. ಎಲ್ಲಕ್ಕಿಂತ ಹೆಚ್ಚಾಗಿ ‘ಸುದ್ದಿಗಾಗಿ ಕಾಸು’ ವಾಮಮಾರ್ಗ ತುಳಿದರು. ಹಣ ಕೊಟ್ಟು ಮಾಧ್ಯಮಗಳಲ್ಲಿ ತಮ್ಮ ಪರವಾಗಿ ಸುದ್ದಿ ಪ್ರಕಟವಾಗುವಂತೆ ನೋಡಿಕೊಂಡರು. ಅದು ಜಾಹೀರಾತಿಗೆ ಸಮ. ಮತದಾರರಿಗೆ ಮಾಡಿದ ಮಹಾ ವಂಚನೆ. ಜಾಹೀರಾತಿನ ರೂಪದಲ್ಲಿ  ಬಂದರೆ ಅದಕ್ಕೆ ಪಾವತಿಸಿದ ಹಣವನ್ನು ಚುನಾವಣಾ ಖರ್ಚಿನ ಲೆಕ್ಕಕ್ಕೆ ಸೇರಿಸಬೇಕಾಗುತ್ತದೆ.

ಹೀಗಾಗಿ ಆಯೋಗಕ್ಕೆ, ಕಾನೂನಿನ ಕಣ್ಣಿಗೆ ಮಣ್ಣೆರಚಲು ಆ ಖರ್ಚನ್ನು ಚುನಾವಣಾ ಲೆಕ್ಕಪತ್ರದಲ್ಲಿ ತೋರಿಸಲೇ ಇಲ್ಲ. ತಾವು ಚುನಾವಣೆಗೆ ಮಾಡಿದ ವೆಚ್ಚ ಕಾನೂನಿನ ಮಿತಿಯೊಳಗೇ ಇದೆ ಎಂದು ಸುಳ್ಳು ಲೆಕ್ಕ ಕೊಟ್ಟರು. ಈ ಬಗ್ಗೆ ತನಿಖೆಗಾಗಿ  ಆಯೋಗವೇ ನೇಮಕ ಮಾಡಿದ್ದ  ಹಿರಿಯ ಪತ್ರಕರ್ತರೊಬ್ಬರು ಹಾಗೂ ಅಧಿಕಾರಿಗಳನ್ನೊಳಗೊಂಡ ಸಮಿತಿ ಇಂತಹ 42 ‘ಸುದ್ದಿಗಾಗಿ ಕಾಸು’ ಪ್ರಕರಣಗಳನ್ನು ಪತ್ತೆ ಮಾಡಿತು. ಅವರ ಅಕ್ರಮ ಸಾಬೀತಾಯಿತು.  ಮೂರು ವರ್ಷ ಚುನಾವಣೆಗೆ ಸ್ಪರ್ಧಿಸುವುದರ ಮೇಲೆ ಕಡಿವಾಣ ಬಿತ್ತು.

ಕಾನೂನಿನ ಕುಣಿಕೆ ಗಟ್ಟಿಯಾಗಿಯೇ ಇರುತ್ತದೆ, ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಇದು ತೋರಿಸಿಕೊಟ್ಟಿದೆ. ಆದರೆ ತಪ್ಪಿಸ್ಥರಿಗೆ ತಕ್ಕ ಶಿಕ್ಷೆ ಆಗದಿದ್ದರೆ, ವಿಪರೀತ ವಿಳಂಬವಾದರೆ ಏನು ಪ್ರಯೋಜನ? ಏಕೆಂದರೆ 1951ರ ಪ್ರಜಾಪ್ರತಿನಿಧಿ  ಕಾಯ್ದೆ ಕಲಂ 10 ಎ ಪ್ರಕಾರ ಆಯೋಗಕ್ಕೆ ಅಭ್ಯರ್ಥಿ ಅಥವಾ ಚುನಾಯಿತ ಪ್ರತಿನಿಧಿಯನ್ನು ನಿರ್ದಿಷ್ಟ ಅವಧಿವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಲು ಮಾತ್ರ ಸಾಧ್ಯ.

ಆ ವ್ಯಕ್ತಿ ಆಯ್ಕೆಯಾಗಿ ಶಾಸಕ ಅಥವಾ ಸಂಸದ ಸ್ಥಾನದಲ್ಲಿ ಮುಂದುವರಿದಿದ್ದರೆ ಅದನ್ನು ರದ್ದು ಮಾಡುವ  ಅಧಿಕಾರ ಅದಕ್ಕೆ ಇಲ್ಲ. ಅದೇನಿದ್ದರೂ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ತೀರ್ಮಾನಕ್ಕೆ ಒಳಪಟ್ಟದ್ದು. ಕಾನೂನಿನ ಮಿತಿಯನ್ನೂ ಮೀರಿ ಚುನಾವಣೆಗೆ ಹಣ ಖರ್ಚು ಮಾಡಿದ್ದಾರೆ, ಕಾಸು ಕೊಟ್ಟು ಸುದ್ದಿ ಬರೆಸಿಕೊಂಡು ಮತದಾರರ ಹಾದಿ ತಪ್ಪಿಸಿದ್ದಾರೆ, ನಾಮಪತ್ರ ಸಲ್ಲಿಕೆ ವೇಳೆ ಘೋಷಣಾ ಪತ್ರದಲ್ಲಿ ಆಸ್ತಿ ಪಾಸ್ತಿ ಮರೆ ಮಾಚಿದ್ದಾರೆ ಎನ್ನುವುದು ಸಂದೇಹಕ್ಕೆ ಎಡೆ ಇಲ್ಲದಂತೆ ಸಾಬೀತಾದರೂ ಅಂತಹವರು  ಶಾಸಕ, ಸಂಸದರಾಗಿ ಮುಂದುವರಿಯುವುದು ಜನತಂತ್ರದ ವಿಡಂಬನೆಯೇ ಸರಿ.

ಯಾವುದೇ ಸ್ವರೂಪದ ಅಕ್ರಮ ಕೂಡ ತಮ್ಮ ಸ್ಥಾನಕ್ಕೆ ಸಂಚಕಾರ ತರುತ್ತದೆ ಮತ್ತು ಅದನ್ನು ತೀರ್ಮಾನಿಸುವ ಅಧಿಕಾರ ಆಯೋಗದ ಕೈಯಲ್ಲಿ ಇರುತ್ತದೆ ಎನ್ನುವುದು ಗೊತ್ತಾದರೆ ಅಭ್ಯರ್ಥಿಗಳ ಠೇಂಕಾರಕ್ಕೆ ಕಡಿವಾಣ ಬೀಳುತ್ತದೆ. ಚುನಾವಣಾ ವ್ಯವಸ್ಥೆ ಶುದ್ಧೀಕರಿಸುವ ಕಾಳಜಿ ಸರ್ಕಾರಕ್ಕೆ ಇರುವುದೇ ನಿಜವಾದರೆ ಈಗಿರುವ ಕಾನೂನಿನಲ್ಲಿನ ಓರೆಕೋರೆಗಳನ್ನು ಸರಿಪಡಿಸಬೇಕು. ಈ ಕೊರತೆಗಳ ನಡುವೆಯೂ ಮಿಶ್ರಾ ಪ್ರಕರಣದಲ್ಲಿ ಆಯೋಗದ ಕ್ರಮ ಒಂದಿಷ್ಟು ಬಿಸಿ ಮುಟ್ಟಿಸಿದೆ. ಅದು ಸ್ವಾಗತಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT