ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು

Last Updated 7 ಜುಲೈ 2017, 19:30 IST
ಅಕ್ಷರ ಗಾತ್ರ

1. ನಾನು ಸುರೇಶ ಅನಗಲ್ಲಿ. ಶಾಲಾ ಶಿಕ್ಷಕ. ನನಗೆ ಮೂವತ್ತೊಂಬತ್ತು ವರ್ಷ. ಮದುವೆಯಾಗಿ 15 ವರ್ಷ ಆಗಿದೆ. ವ್ಯಕ್ತಿಯೊಬ್ಬನ ಜೊತೆ ನನ್ನ ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಳು; ಈಗ ಅವನೊಂದಿಗೆ ಓಡಿಹೋಗಿದ್ದಾಳೆ. ಪೊಲೀಸ್ ಕೇಸು ದಾಖಲಿಸಿ ಮೂರು ತಿಂಗಳು ಕಳೆದರೂ ಯಾವುದೇ ಸುಳಿವು ಸಿಗಲಿಲ್ಲ. ಮಕ್ಕಳಿಗೆ ಅಡುಗೆ ಮಾಡಲು ಯಾರು ಇಲ್ಲದೇ ಖಾಸಗಿ ಹಾಸ್ಟೆಲ್‌ನಲ್ಲಿ ಇರಿಸಿದ್ದೇನೆ. ಈಗ ನಾನು ಮತ್ತು ಮಕ್ಕಳು ಮಾನಸಿಕವಾಗಿ ನೊಂದಿದ್ದೇವೆ. ಅವಳ ತವರು ಮನೆಯವರು ಅವಳು ನಮ್ಮ ಪಾಲಿಗೆ ಸತ್ತಿದ್ದಾಳೆ ಎನ್ನುತ್ತಿದ್ದಾರೆ. ನಾನು ಡೈಪೋರ್ಸ್ ನೀಡಿ ಬೇರೆ ಮದುವೆಯಾಗಲೇ? ಅಥವಾ ಒಂಟಿಯಾಗಿ ಹೀಗೆ ಜೀವನ ಸಾಗಿಸಲೇ? ದೊಡ್ಡ ಮಗ ‘ಇನ್ನೊಂದು ಮದುವೆ ಆಗು, ಅಡುಗೆ ಮಾಡುವ ಚಿಂತೆ ಯಾಕೆ’ ಎನ್ನುತ್ತಿದ್ದಾನೆ. ಆದರೆ ನನ್ನನ್ನು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಹೆಣ್ಣು ಸಿಗಲು ಸಾಧ್ಯವೇ? ನನಗೆ ಹೆಣ್ಣು ಸಿಗಬಹುದೆ? ಮುಂದೆ ನನ್ನ ಜೀವನ ಚೆನ್ನಾಗಿರಬಹುದೆ?
ನೀವು ಹಾಗೂ ನಿಮ್ಮ ಮಕ್ಕಳು ಎಂತಹ ಕಠಿಣ ಹಾದಿಯಲ್ಲಿ ಸಾಗುತ್ತಿದ್ದೀರಿ ಎಂಬುದು ನನಗೆ ಅರ್ಥವಾಗುತ್ತಿದೆ. ಮನೆಯ ಹಿರಿಯರು ಹಾಗೂ ನಿಮ್ಮ ಮಕ್ಕಳ ಒಪ್ಪಿಗೆ ಪಡೆದು ಒಬ್ಬ ಉತ್ತಮ ಲಾಯರ್ ಕಂಡು ವಿಚ್ಛೇದನಕ್ಕೆ ಪ್ರಯತ್ನಿಸಿ. ವಿಚ್ಛೇದನ ದೊರಕಿದ ಮೇಲಷ್ಟೇ ನೀವು ಇನ್ನೊಂದು ಮದುವೆಯಾಗಲು ಸಾಧ್ಯ. ಕೋರ್ಟ್‌ನ ಎಲ್ಲಾ ವಿಧಿಗಳು ಮುಗಿದ ಮೇಲೆ ಖಂಡಿತ ನಿಮ್ಮ ಸಂಸಾರದ ಜೊತೆಗೆ ಮಕ್ಕಳನ್ನು ನೋಡಿಕೊಳ್ಳುವ ಸೂಕ್ತ ಎನ್ನಿಸುವ ಸಂಗಾತಿಯನ್ನು ಹುಡುಕಬಹುದು.

2. ನನ್ನ ಹೆಸರು ಸ್ವಂದನ. ದ್ವಿತೀಯ ಪಿಯು ಓದುತ್ತಿದ್ದೇನೆ. ಕಾಲೇಜಿನಲ್ಲಿ ಮೊದಲ ಹಾಗೂ ಎರಡನೇ ತರಗತಿಗಳಲ್ಲಿ ಸರಿಯಾಗಿ ಪಾಠ ಕೇಳಿಸಿಕೊಳ್ಳುತ್ತೇನೆ. ನಂತರದ ತರಗತಿಗಳಲ್ಲಿ ಪಾಠ ಕೇಳಲು ಆಸಕ್ತಿಯೇ ಇರುವುದಿಲ್ಲ. ನನಗೆ ಓದಿನ ಮೇಲೆ ಏಕಾಗ್ರತೆ ಇಲ್ಲ. ಆದರೆ ನಾನು ಪಿಯುವನ್ನು ಯಶಸ್ವಿಯಾಗಿ ಮುಗಿಸಿಬೇಕು ಎಂಬುದು ನನ್ನ ಆಸೆ. ದಯವಿಟ್ಟು ನನಗೆ ಸಹಾಯ ಮಾಡಿ.
ಓದಿನ ಕಡೆಗೆ ಗಮನ ಹರಿಸಬೇಕೆಂದರೆ ಮೊದಲು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರಬೇಕು. ಅಲ್ಲದೇ ನೀವು ಈಗ ನಿಮ್ಮ ಜೀವನದ ಮುಖ್ಯ ಘಟ್ಟದಲ್ಲಿದಿದ್ದೀರಿ. ನಿಮ್ಮ ದೈಹಿಕ ಆರೋಗ್ಯದ ಮೇಲೆ ನಿಗಾ ವಹಿಸಿ. ಡಯೆಟ್‌, ಜೀವನಶೈಲಿ ಹಾಗೂ ವ್ಯಾಯಾಮ ಇವೆಲ್ಲವೂ ಉತ್ತಮ ಆರೋಗ್ಯಕ್ಕೆ ಸಹಕಾರಿ. ಉತ್ತಮ ಆರೋಗ್ಯದಿಂದಷ್ಟೇ ನೀವು ಜೀವನದ ಗುರಿ ತಲುಪಲು ಸಾಧ್ಯ. ವೇಳಾಪಟ್ಟಿಯೊಂದನ್ನು ಹಾಕಿಕೊಂಡು ಅದರ ಪ್ರಕಾರ ನಡೆದರೆ ಗೊಂದಲಗಳನ್ನು ಕಡಿಮ ಮಾಡಿಕೊಳ್ಳಲು ಸಾಧ್ಯ. ಯೋಗ ಮತ್ತು ಪ್ರಾಣಾಯಾಮಗಳು ಗಮನವನ್ನು ಕೇಂದ್ರಿಕರಿಸಲು ಸಹಾಯ ಮಾಡುತ್ತದೆ; ಓದನ್ನು ಗಂಭೀರವಾಗಿ ತೆಗೆದುಕೊಳ್ಳಲು ಕೂಡ ಅದರಿಂದ ಸಾಧ್ಯವಾಗುತ್ತದೆ. ಒಮ್ಮೆ ನಿಮ್ಮ ಗಮನ ಹೆಚ್ಚಿದಂತೆ ನೀವು ತರಗತಿಯಲ್ಲಿ ಪಾಠದ ಮೇಲೆ ಗಮನ ಹರಿಸಿ, ಉತ್ತಮ ಅಂಕ ಗಳಿಸಲು ಸಾಧ್ಯ. ನಿಮಗೆ ನೀವೇ ಪ್ರೇರಣೆಯಾಗಿ. ‘ಇದು ನನ್ನಿಂದ ಸಾಧ್ಯ’ ಎಂದು ನಿಮಗೆ ನೀವೇ ಹೇಳಿಕೊಳ್ಳಿ. ವೇಳಾಪಟ್ಟಿಯನ್ನು ಅನುಸರಿಸುವ ಮೂಲಕ ದ್ವೀತಿಯ ಪಿಯುಸಿಯನ್ನು ಗಂಭೀರವಾಗಿ ಪರಿಗಣಿಸಿ.

3.  ನನಗೆ ಇಪ್ಪತ್ತೆಂಟು ವರ್ಷ. ಪಿಯು ಉಪನ್ಯಾಸಕರ ಹುದ್ದೆಗೆ ತಯಾರಿ ನಡೆಸಿದ್ದೇನೆ. ಆದರೆ ನನಗೆ ಕುಟುಂಬದ ಒತ್ತಡ ಜವಬ್ದಾರಿಗಳಿವೆ. ಪ್ರೀತಿಸಿದ ಹುಡುಗಿಯ ತಂದೆ–ತಾಯಿ ನಮ್ಮ ಮದುವೆಗೆ ಒಪ್ಪಿಕೊಳ್ಳೋತ್ತಾರೋ ಇಲ್ಲವೋ? ಈ ಎಲ್ಲ ಸಮಸ್ಯೆಗಳಿಂದ ನಿದ್ದೆ ಮಾಡುವುದಕ್ಕೆ ಆಗುತ್ತಿಲ್ಲ.  ಆರೋಗ್ಯವೂ ಕೆಟ್ಟು ಹೋಗುತ್ತಿದೆ ಎನ್ನುವ ಆತಂಕ ಎಡಬಿಡದೆ ಕಾಡುತ್ತಿದೆ. ನಿದ್ದೆಯ ತೊಂದರೆ ನನಗೆ ಎರಡು ವರ್ಷದಿಂದ ಕಾಡುತ್ತಿದೆ. ಯೋಗ ಮಾಡಿದರೂ ಏಕಾಗ್ರತೆ ಇಲ್ಲ. ಒಟ್ಟಾರೆ ನೂರೆಂಟು ಸಮಸ್ಯೆಯಿಂದ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ. ದಯವಿಟ್ಟು ಪರಿಹಾರ ತಿಳಿಸಿ.
ಅತಿಯಾದ ಆಲೋಚನೆ ನಮ್ಮ ಸಂತಸವನ್ನು ಹಾಳು ಮಾಡುತ್ತದೆ. ನೀವು ತುಂಬ ಸಮಯದಿಂದ ಇಲ್ಲಿಯವರೆಗೆ ಅತಿಯಾಗಿ ಆಲೋಚನೆಯನ್ನು ಮಾಡಿಕೊಂಡೇ ಬಂದಿದ್ದೀರಿ. ಇದರಿಂದ ಒತ್ತಡ ಅಧಿಕವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಒಂದರ ನಂತರ ಒಂದು ಸಮಸ್ಯೆಯನ್ನು ಕ್ರಮವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಆದ್ಯತೆಗಳನ್ನು ತಿಳಿದುಕೊಳ್ಳಿ. ಆಗ ನಿಮ್ಮ ಸಮಸ್ಯೆಗಳಿಂದ ನಿಧಾನವಾಗಿ ಹೊರಬರಲು ಸಾಧ್ಯ. ಈಗ ನೀವು ಓದಿನ ಕಡೆ ಗಮನ ಹರಿಸಿ, ಓದಿಗೆ ಆಧ್ಯತೆ ನೀಡಿ ಉತ್ತಮ ಕೆಲಸ ಗಿಟ್ಟಿಸಿಕೊಳ್ಳಿ, ಆಗ ಎಲ್ಲವೂ ತಾನಾಗೇ ನಿಮ್ಮ ಮುಂದಿರುತ್ತದೆ, ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ. ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳಿ. ಯೋಗನಿದ್ರಾ ಅಭ್ಯಾಸ ಮಾಡಿ, ಇದರಿಂದ ಮನಸ್ಸು ರಿಲ್ಯಾಕ್ಸ್‌ ಆಗಿ, ನಿದ್ದೆಯ ಸಮಸ್ಯೆ ನಿಮ್ಮಿಂದ ದೂರಾಗಬಹುದು, ಖುಷಿ ಖುಷಿಯಾಗಿರಿ, ಆಗ ಎಲ್ಲವೂ ನಿಮ್ಮ ಜೊತೆಯಾಗುತ್ತದೆ.

4. ನನಗೆ ಯಾವಾಗಲೂ ಎಲ್ಲದರ ಮೇಲೂ ಅನುಮಾನ. ಈ ಅನುಮಾನದ ಕಾಯಿಲೆಗೆ ಹೇಗೆ ಹೊರಬರಬೇಕು ತಿಳಿಸಿ.
ಅನುಮಾನ ಮನುಷ್ಯನ ಸಹಜಗುಣ. ಅದು ಒಂದು ಮಿತಿಯಲ್ಲಿದ್ದರೆ ಯಾರು ಅದರತ್ತ ಗಮನ ವಹಿಸುವುದಿಲ್ಲ. ಆದರೆ ಅದು ಮಿತಿದರೆ ನಂಬಿಕೆ ಹಾಗೂ ನಿರೀಕ್ಷೆಗಳ ನಡುವಿನ ಸಮತೋಲನ ತಪ್ಪುತ್ತದೆ. ಅಲ್ಲದೇ ಅದೊಂದು ಕಾಯಿಲೆಯಾಗಿ ಪರಿವರ್ತನೆಯಾಗುತ್ತದೆ. ಈ ಕಾಯಿಲೆಯಿಂದ ನೀವು ಹೊರ ಬರಬೇಕಾದರೆ ನೀವೇ ಪ್ರಯತ್ನಿಸಬೇಕು. ಪರಿಣಾಮಕಾರಿ ಸಂವಹನ, ನಿಮ್ಮ ಸುತ್ತಲಿನ ಜನರ ಮೇಲೆ ನಂಬಿಕೆ, ಕಳೆದುಹೋದ ನಂಬಿಕೆಯನ್ನು ಮರಳಿ ಪಡೆಯುವುದು ಮತ್ತು ಕ್ಷಮಾಗುಣದಿಂದ ನೀವು ಅನುಮಾನದ ಕಾಯಿಲೆಯಿಂದ ಹೊರಗಡೆ ಬರಬಹುದು. ಅತಿಯಾದ ಅನುಮಾನ ನಿಮ್ಮ ಸಂತೋಷವನ್ನು ಹಾಳು ಮಾಡುತ್ತದೆ. ಜೀವನದ ಪ್ರತಿ ಕ್ಷಣವೂ ಸಂತೋಷ ಮತ್ತು ಸಂತಸದಿಂದ ಕೂಡಿದೆ. ನೀವು ಅನುಮಾನಪ್ರವೃತ್ತಿಯಿಂದ ಹೊರಬರಬೇಕಾದರೆ ಸಮಯ ಹಿಡಿಯಬಹುದು. ತಾಳ್ಮೆಯಿಂದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT