ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಭಾವಿತ ಅರಣ್ಯ ಉಳಿಸಲು ಆಗ್ರಹ

Last Updated 8 ಜುಲೈ 2017, 5:29 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯದ ಎಲ್ಲ ಪರಿಭಾವಿತ ಅರಣ್ಯ ಪ್ರದೇಶವನ್ನು ಸರ್ಕಾರ ಅರಣ್ಯ ವ್ಯಾಪ್ತಿಯಲ್ಲೇ ಉಳಿಸಿಕೊಳ್ಳಬೇಕು ಎಂದು ವೃಕ್ಷ ಲಕ್ಷ ಆಂದೋಲನದ ಮುಖ್ಯಸ್ಥ ಅನಂತ ಹೆಗಡೆ ಅಶೀಸರ ಒತ್ತಾಯಿಸಿದರು.

ಪರಿಭಾವಿತ  ಅರಣ್ಯಗಳು ಜಲ ಮೂಲದ ತಾಣಗಳು. ಪಶ್ಚಿಮಘಟ್ಟದ ಅಪಾರ ಜೀವ ವೈವಿಧ್ಯ ಈ ಅರಣ್ಯ ವ್ಯಾಪ್ತಿಯಲ್ಲೂ ಇದೆ. ಇಂತಹ ಪ್ರದೇಶ ಗಳನ್ನು ಅರಣ್ಯೇತರ ಚಟುವಟಿಕೆಗಳಿಗೆ ಬಳಸಬಾರದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸಲಹೆ ನೀಡಿದರು.

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈಚೆಗೆ ಪರಿಭಾವಿತ ಅರಣ್ಯ ಪ್ರದೇಶವನ್ನು ಅರಣ್ಯ ವ್ಯಾಪ್ತಿಯಿಂದ ಹೊರಗಿಡುವ ನಿರ್ಧಾರ ತೆಗೆದುಕೊಂಡಿದೆ. ತಕ್ಷಣವೇ ಈ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ 2014 ಸಮಯದಲ್ಲಿ 65 ಸಾವಿರ ಹೆಕ್ಟೇರ್‌ ಪರಿಭಾವಿತ ಅರಣ್ಯವಿತ್ತು. ಒತ್ತುವರಿಯಿಂದಾಗಿ ಸಾಕಷ್ಟು ಪ್ರದೇಶ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಕಂದಾಯ ಅರಣ್ಯ ಭೂಮಿ ಇದೆ. ಇಂತಹ ಭೂಮಿಯನ್ನೂ ಪರಿಭಾವಿತ ಅರಣ್ಯ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದರು.

ದೇವರಕಾಡು, ಸೊಪ್ಪಿನಬೆಟ್ಟ, ಕಾನು ಅರಣ್ಯ, ಬೆಟ್ಟ, ಹಾಡಿ, ಇನಾಂ ಭೂಮಿ, ಕಾವಲು ಇತ್ಯಾದಿ ಹೆಸರಲ್ಲಿ ಈ ಅರಣ್ಯವಿದೆ.  2017ರ ವರದಿ ಪ್ರಕಾರ 4,98,991 ಹೆಕ್ಟೇರ್‌ಗೆ ಈ ಅರಣ್ಯ ಸೀಮಿತವಾಗಿದೆ. ಈಗ ಮತ್ತೆ ರಾಜ್ಯ ಸರ್ಕಾರವೇ ಅರಣ್ಯ ನಾಶ ಮಾಡಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಪರಿಭಾವಿತ ಅರಣ್ಯ ರಕ್ಷಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ.  ಆದರೆ, ರಾಜ್ಯ ಸರ್ಕಾರ ಕಂದಾಯ ಅರಣ್ಯಗಳು ಅರಣ್ಯಗಳೇ ಅಲ್ಲ ಎಂದು ಘೋಷಣೆ ಮಾಡಲು ಹೊರಟಿದೆ. ಇದು ಅಕ್ಷಮ್ಯ ಎಂದರು.

ಜಿಲ್ಲೆಯಲ್ಲಿ ಎಂಪಿಎಂ ನೆಡುತೋಪು ಇರುವ 25 ಸಾವಿರ ಹೆಕ್ಟೇರ್ ಪ್ರದೇಶವು  ಹಳೇ ಸೊರಬದ ದೇವರಕಾಡು ಸಾಗರ ತಾಲ್ಲೂಕಿನ ಹೊಸಗುಂದ, ತೀರ್ಥಹಳ್ಳಿ ತಾಲ್ಲೂಕಿನ ಕುಳ್ಳುಂಡೆಕಾನು, ಕುಡುಮಲ್ಲಿಗೆಕಾನು, ಹೊಸನಗರದ ತೋಟದ ಕೊಪ್ಪದ ಕಾನು, ಗೌತಮಪುರದ ಇನಾಂ ಪರಿಭಾವಿತ ವ್ಯಾಪ್ತಿಯಲ್ಲಿದೆ.

ಗೌತಮಪುರದ 2,500 ಎಕರೆ ಭೂಮಿಯಲ್ಲಿ 1,500 ಎಕರೆ ಅತಿಕ್ರಮಣವಾಗಿದೆ ಎಂದು ಮಾಹಿತಿ ನೀಡಿದರು. ಪರಿಸರ ತಜ್ಞ ಪ್ರೊ.ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ‘ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಅರಣ್ಯ ನಾಶ ಮಾಡುತ್ತಿದೆ. ಅರಣ್ಯ ಉಳಿದರೆ ಮಳೆಯಾಗುತ್ತದೆ.

ವ ಹವಾಮಾನ ತಜ್ಞರಿಗೂ ಪರಿಸರದ ಸ್ಥಿತಿಗತಿ ಅಂದಾಜು ಮಾಡಲು ಆಗುತ್ತಿಲ್ಲ. ಹೊಸದಾಗಿ ಗಿಡಗ ಬೆಳೆಸದಿದ್ದರೂ ಇರುವ ಗಿಡ, ಮರ ರಕ್ಷಣೆ ಮಾಡಿದರೂ ಅರಣ್ಯ ಉಳಿಯುತ್ತದೆ. ಪರಿಭಾವಿತ ಅರಣ್ಯದ ವಿಚಾರದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಣಯದ ವಿರುದ್ಧ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಪ್ರತಿಭಟನೆ ನಡೆಸಬೇಕು’ ಎಂದು ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ರವಿ ಹನಿಯ, ಮಹಾಬಲಗಿರಿ, ನಿಂಗಪ್ಪ ಗೌಡ, ರಾಘವೇಂದ್ರ ಉಪಸ್ಥಿತರಿದ್ದರು.

* * 

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪರಿಭಾವಿತ ಅರಣ್ಯವನ್ನು ಅರಣ್ಯ ವ್ಯಾಪ್ತಿಯಿಂದ ಹೊರಗಿಡುವ ನಿರ್ಣಯ ಅಘಾತಕಾರಿ ವಿಚಾರ.
–ಅನಂತ ಹೆಗಡೆ ಅಶೀಸರ
ಅಧ್ಯಕ್ಷರು, ವೃಕ್ಷಲಕ್ಷ ಆಂದೋಲನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT