ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವಿದ್ಯಾಲಯದಂತೆ ದುಡಿದ ಸಾಹಿತಿ ಗಿರಿಜಾ

ಪ್ರಾಂಶುಪಾಲ ಮಲ್ಲಿಕಾರ್ಜುನ ಕಲಮರಹಳ್ಳಿ
Last Updated 10 ಜುಲೈ 2017, 5:00 IST
ಅಕ್ಷರ ಗಾತ್ರ

ದಾವಣಗೆರೆ:  ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಹಳ್ಳಿಗಳ ಚರಿತ್ರೆ ಕಟ್ಟಿಕೊಡಲು ಟಿ.ಗಿರಿಜಾ ಅವರು ವಿಶ್ವವಿ ದ್ಯಾಲಯದಂತೆ ದುಡಿದರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಸ್ಮರಿಸಿದರು.

  ರೋಟರಿ ಬಾಲಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ, ವನಿತಾ ಸಾಹಿತ್ಯ ವೇದಿಕೆ, ವನಿತಾ ಸಮಾಜದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮ ಹಾಗೂ ಸಾಹಿತಿ ಟಿ.ಗಿರಿಜಾ ಅವರ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಹಳ್ಳಿಗಳಿಗೆ ಭೇಟಿ ನೀಡಿ, ಅಲ್ಲಿನ ಸಾಂಸ್ಕೃತಿಕ ಚರಿತ್ರೆಯನ್ನು ದಾಖಲಿಸಿದ ಟಿ.ಗಿರಿಜಾ ಅವರ ಸಾಧನೆ ಶ್ಲಾಘನೀಯ. ‘ಚಿತ್ರದುರ್ಗ ಜಿಲ್ಲಾ ದರ್ಶಿನಿ’ ಹಾಗೂ ‘ಇದು ನಮ್ಮ ದಾವಣಗೆರೆ’ ಕೃತಿಗಳು ಗೆಜೆಟಿಯರ್‌ನಂತೆ ಇವೆ. ಈ ಕೃತಿಗಳನ್ನು ರಾಜ್ಯದ ಪ್ರಥಮ ಗ್ರಾಮೀಣ ಚರಿತ್ರಾ ಗ್ರಂಥಗಳು’  ಎಂದರು.

‘ಬರವಣಿಗೆಯಲ್ಲಿ ಬದ್ಧತೆ, ತಾತ್ವಿಕ ಸಿದ್ಧಾಂತದಲ್ಲಿ ನಿಷ್ಠುರವಾದಿಯಾಗಿದ್ದ ಟಿ.ಗಿರಿಜಾ ಅವರು, ದಾವಣಗೆರೆ ವಿಶ್ವವಿದ್ಯಾಲಯ ಕೈಗೊಂಡ ‘ಗ್ರಾಮ ಚರಿತ್ರೆ’ ಕರಡು ಪರಿಶೀಲನಾಕಾರರಾಗಿ ಕಾರ್ಯನಿರ್ವಹಿಸಿದರು. ಸಮೀಕ್ಷೆಯಂತೆ ಚರಿತ್ರೆ ಬರೆಯುವ ವಿಶ್ವವಿದ್ಯಾಲಯದ ಕ್ರಮವನ್ನು ಅವರು ವಿರೋಧಿಸಿದರು. ಸಾಂಸ್ಕೃತಿಕ ಕ್ರಮದಲ್ಲಿ ಗ್ರಾಮ ಚರಿತ್ರೆ ಬರೆಯುವಂತೆ ಸಲಹೆ ನೀಡಿದ್ದರು’ ಎಂದು ನೆನಪಿಸಿಕೊಂಡರು.

ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ ಮಾತನಾಡಿ, ‘ಸ್ತ್ರೀ ಸಂವೇದನೆಯ ಅರಿವನ್ನು ಹೆಚ್ಚಿಸುವ, ಅಸಮಾನತೆಯನ್ನು ತೀಕ್ಷ್ಣ ವಾಗಿ ಟೀಕಿಸುವ ಸ್ವಭಾವ  ಗಿರಿಜಾ ಅವರದ್ದು.  ಅವರ ಸಾಹಿತ್ಯ ಸಾಧನೆ ಗುರುತಿಸುವಂತಹದ್ದು’ ಎಂದರು.

ಕಾಲೇಜು ಉಪನ್ಯಾಸಕಿಯರು ಸೀರೆಯನ್ನೇ ಉಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಶಿಕ್ಷಣ ಇಲಾಖೆ ಇತ್ತೀಚೆಗೆ ಆದೇಶ ಹೊರಡಿಸಿದೆ. ಹೆಣ್ಣಿನ ಉಡುಪು, ಚಿಂತನೆಗಳ ಮೇಲೆ ವಿಚಾರಗಳನ್ನು ಹೇರುವ ಇಂತಹ ಪ್ರಯತ್ನಗಳು ಸರಿಯಲ್ಲ. ಹೆಣ್ಣನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳುವ ಕೆಲಸ ನಡೆಯಬೇಕಿದೆ ಎಂದು ಹೇಳಿದರು.

ಸ್ತ್ರೀ ಸಂವೇದನೆ, ಕೇವಲ ಗಂಡನ್ನು ದೂಷಿಸುವುದಕ್ಕೆ, ಸೌಮ್ಯ ಪ್ರತಿಭಟನೆಗೆ ಸೀಮಿತವಾಗಬಾರದು. ಹೆಣ್ಣು, ಗಂಡು ಇಬ್ಬರನ್ನೂ ಒಳಗೊಂಡ ಸಮನ್ವಯದ ಸ್ತ್ರೀವಾದ ರೂಪುಗೊಳ್ಳುವ ಅವಶ್ಯಕತೆ ಯಿದೆ ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಿರಿಗೆರೆ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಎಸ್‌.ಬಿ. ರಂಗನಾಥ್‌ ಮಾತನಾಡಿ, ‘ದಾವಣಗೆರೆಯಲ್ಲಿ ಕುವೆಂಪು ಕನ್ನಡ ಭವನ ನಿರ್ಮಾಣಕ್ಕೆ ಟಿ.ಗಿರಿಜಾ ಅವರ ಇಚ್ಛಾಶಕ್ತಿಯೇ ಕಾರಣ. ಅವರ ಒತ್ತಾಸೆ ಇರದಿದ್ದರೆ ಈ ಕಾರ್ಯ ನಡೆಯುತ್ತಲೇ ಇರಲಿಲ್ಲ’ ಎಂದು ನೆನಪಿಸಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು.  ಲೇಖಕಿ ಟಿ.ಎಸ್‌.ಶೈಲಜಾ, ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಎಸ್‌.ಎಂ.ಮಲ್ಲಮ್ಮ ಇದ್ದರು.  ಸಾಲಿಗ್ರಾಮ ಗಣೇಶ್‌ ಶೆಣೈ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT