ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಣವಾಗದ ರೈಲ್ವೆ ಕೆಳಸೇತುವೆ

ವಿದ್ಯಾರ್ಥಿಗಳು, ಉದ್ಯೋಗಸ್ಥರಿಗೂ ಪರದಾಟ, ಪ್ರಯಾಣಿಕರಿಗೆ ಕಿರಿಕಿರಿ
Last Updated 10 ಜುಲೈ 2017, 5:33 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿವಮೊಗ್ಗ–ಹೊಳೆಹೊನ್ನೂರು ರಸ್ತೆಯಲ್ಲಿ ಕೆಳಸೇತುವೆ ನಿರ್ಮಾಣ ಮಾಡುವ ಯೋಜನೆಗೆ ರೈಲ್ವೆ ಇಲಾಖೆ ಸಮ್ಮತಿ ನೀಡಿದ್ದರೂ ಇದುವರೆಗೆ ಕಾಮಗಾರಿ ಆರಂಭಗೊಂಡಿಲ್ಲ.

ಶಿವಮೊಗ್ಗದಿಂದ ಹೊಳೆ ಹೊನ್ನೂರು ರಸ್ತೆ ಮೂಲಕ ನಿತ್ಯವೂ ಚನ್ನಗಿರಿ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಸಂಚರಿ ಸುತ್ತವೆ. ಆದರೆ, ಬಿ.ಎಚ್. ರಸ್ತೆಯ ವಿದ್ಯಾನಗರದ ಬಳಿ ಇರುವ ರೈಲ್ವೆ ಗೇಟ್‌ ಅನ್ನು ರೈಲು ಸಂಚರಿಸುವ ಸಂದರ್ಭ ದಲ್ಲಿ ದಿನಕ್ಕೆ ನಾಲ್ಕೈದು ಬಾರಿ ಮುಚ್ಚು ವುದರಿಂದ ವಾಹನ ದಟ್ಟಣೆಯಾಗುತ್ತಿದೆ.

ಬೆಳಗಿನ ಜಾವ 4 ಗಂಟೆಗೆ ಬೆಂಗಳೂರಿಗೆ ಹೊರಡುವ ಪ್ಯಾಸೆಂಜರ್ ರೈಲು, 6.30ರ ಬೆಂಗಳೂರು ಇಂಟರ್‌ ಸಿಟಿ, ಬೆಳಿಗ್ಗೆ 7.50ರ ಮೈಸೂರು ಪ್ಯಾಸೆಂಜರ್, ನಂತರ 10.10ರ ಮೈಸೂರು ಫಾಸ್ಟ್ ಪ್ಯಾಸೆಂಜರ್, ಸಂಜೆ 4.40ಕ್ಕೆ ಹೊರಡುವ ಮೈಸೂರು ಇಂಟರ್‌ಸಿಟಿ,  ರಾತ್ರಿ 8.40ಕ್ಕೆ ಬೆಂಗಳೂರಿನಿಂದ ಬರುವ ಇಂಟರ್‌ಸಿಟಿ ರೈಲುಗಳು ಸಂಚರಿಸುವ ವೇಳೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಕಿರಿದಾದ ರಸ್ತೆ: ಇಲ್ಲಿನ ರೈಲ್ವೆ ಹಳಿ ರಸ್ತೆಯು ಕಿರಿದಾಗಿರುವುದರಿಂದ ವಾಹನಗಳ ದಟ್ಟಣೆ ಸಹಜವಾಗಿ ಹೆಚ್ಚುತ್ತಿದೆ. ಉಬ್ಬು ಇರುವ ಕಾರಣ ಕೆಲವೊಮ್ಮೆ ವಾಹನಗಳು ಮುಂದೆ ಸಾಗದೆ, ಹಿಂದೆ ನಿಂತಿರುವ ವಾಹನಗಳಿಗೆ ತಗಲುತ್ತವೆ. ಇನ್ನು ಕೆಲ ವಾಹನಗಳು ರೈಲು ಹಳಿ ಮೇಲೆ ಕೆಟ್ಟು ನಿಂತ ಉದಾಹರಣೆಗಳೂ ಇವೆ. ಸಂಚಾರ ಪೊಲೀಸರೂ ಈ ಎಲ್ಲ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ಗೇಟ್ ಹಾಕಿದ್ದ ಸಂದರ್ಭದಲ್ಲಿ ಆಂಬುಲೆನ್ಸ್‌ಗಳು ಸಕಾಲಕ್ಕೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗುವುದಿಲ್ಲ. ರೋಗಿಗೆ ತುರ್ತು ಚಿಕಿತ್ಸೆ ಸಿಗದೆ ಸಾವನ್ನಪ್ಪುವ ಸಂಭವವೂ ಉಂಟು.

ಸಮೀಪದಲ್ಲಿಯೇ ಇರುವ ಆಂಜನೇಯ ದೇವಸ್ಥಾನದ ಬಳಿ ಚನ್ನಗಿರಿ, ನಲ್ಲೂರು, ದಾವಣಗೆರೆ, ಚಿತ್ರದುರ್ಗಕ್ಕೆ ಹೋಗುವ ಪ್ರಯಾಣಿಕರು ಮಳೆ, ಬಿಸಿಲೆನ್ನದೆ ಬಸ್‌ಗಾಗಿ ಕಾಯುತ್ತಾ ನಿಲ್ಲುತ್ತಾರೆ. ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಅನೇಕ ಸಂಘ–ಸಂಸ್ಥೆಗಳು ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ.

‘ರೈಲ್ವೆ ಗೇಟ್ ಹಾಕಿದ್ದ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಕಚೇರಿಗೆ ತೆರಳಲು ಸಾಧ್ಯವಾಗುವುದಿಲ್ಲ. ಶಾಲಾ ಮಕ್ಕಳಿಗೂ ತೊಂದರೆಯಾಗು ತ್ತಿದೆ. ಶೀಘ್ರದಲ್ಲೇ ಇಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಿಸಿದರೆ ಅನುಕೂಲ’ ಎನ್ನುತ್ತಾರೆ ಖಾಸಗಿ ಕಂಪೆನಿ ಉದ್ಯೋಗಿ ರಾಘವೇಂದ್ರ.

‘ಶಾಲಾ–ಕಾಲೇಜು ವಾಹನಗಳು ಬೆಳಿಗ್ಗೆ 10ರ ಒಳಗಾಗಿಯೇ ಹಳಿ  ದಾಟಬೇಕು. ಸಂಜೆಯೂ ರೈಲ್ವೆ ಗೇಟ್ ಹಾಕುವ ಸಮಯದಲ್ಲಿ ವಿದ್ಯಾರ್ಥಿಗಳು 20 ನಿಮಿಷ ಕಾಯಬೇಕಾದ ಪರಿಸ್ಥಿತಿ ಇದೆ. ಬಿ.ಎಚ್.ರಸ್ತೆಯು ಸಂಪೂರ್ಣ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು’ ಎನ್ನುತ್ತಾರೆ ಶ್ರೀನಿವಾಸ್.

‘ಹೊಳೆಹೊನ್ನೂರು ರಸ್ತೆಯಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣ ಯೋಜ ನೆಗೆ ರೈಲ್ವೆ ಇಲಾಖೆ ಅನುಮತಿ ನೀಡಿದೆ. ಆದರೆ, ರಾಜ್ಯ ಸರ್ಕಾರ ಸ್ಥಳ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿದೆ. ಹಾಗಾಗಿ ಯೋಜನೆ ಕುಂಟುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ ಶಿವಮೊಗ್ಗ ಕ್ಷೇತ್ರದ ಸಂಸತ್‌ ಸದಸ್ಯರ ಆಪ್ತ ಸಹಾಯಕ ಪುರುಷೋತ್ತಮ್‌.
***

ಕೇಂದ್ರ ಸರ್ಕಾರ ಕೆಳಸೇತುವೆ ನಿರ್ಮಾಣಕ್ಕೆ ಶೇ 50ರಷ್ಟು ಅನುದಾನ ಬಿಡುಗಡೆ ಮಾಡಿದಲ್ಲಿ ರಾಜ್ಯ ಸರ್ಕಾರ ದಿಂದಲೂ ಶೇ 50ರಷ್ಟು ಅನುದಾನ ದೊರಕಿಸಲು  ಪ್ರಯತ್ನಿಸುವೆ
–ಕೆ.ಬಿ.ಪ್ರಸನ್ನ ಕುಮಾರ್, ಶಾಸಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT