ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿಜೀವಿಗಳ ಅಪಹಾಸ್ಯಕಾರರಿಗೆ ಸುಖದ ಕಾಲ

ಪ್ರೊ.ಬಸವರಾಜ್ ತೂಲಹಳ್ಳಿ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ ವ್ಯಂಗ್ಯ
Last Updated 11 ಜುಲೈ 2017, 6:13 IST
ಅಕ್ಷರ ಗಾತ್ರ

ದಾವಣಗೆರೆ: ‘ದೇಶದಲ್ಲಿ ಸಾಹಿತಿ, ಬುದ್ಧಿಜೀವಿಗಳನ್ನು ಅಪಹಾಸ್ಯ ಮಾಡುವವರಿಗೆ ಈಗ ಸುಖದ ಕಾಲ’ ಎಂದು ನವದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ.ಪುರುಷೋತ್ತಮ ಬಿಳಿಮಲೆ ವ್ಯಂಗ್ಯವಾಡಿದರು.

ವಿದ್ಯಾನಗರದ ರೋಟರಿ ಟ್ರಸ್ಟ್ ಸಭಾಂಗಣದಲ್ಲಿ ನಿವೇದಿತ ಪ್ರಕಾಶನ ಬೆಂಗಳೂರು, ಕೋಲಾ ಬುಕ್ಸ್‌ ದಾವಣಗೆರೆ ಸಂಯುಕ್ತವಾಗಿ ಸೋಮ ವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಂಶೋಧಕ ಪ್ರೊ. ಬಸವರಾಜ್ ತೂಲಹಳ್ಳಿ ಅವರ ‘ಪಿಂಗಳೇಶನ ಜಾತಕ’ ಹಾಗೂ ‘Between the land and the killer’ ಕಥಾಸಂಕಲನಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಬುದ್ಧಿಜೀವಿಗಳನ್ನು ಲೇವಡಿ ಮಾಡುವಷ್ಟು ದೇಶ ಬೆಳೆದಿದೆ. ಮುಂದೆಯೂ ಇದು ಇನ್ನಷ್ಟು ಬೆಳೆಯ ಲಿದೆ’ ಎಂದು ಅವರು ವ್ಯಂಗ್ಯವಾಡಿದರು.

‘ನಿಗೂಢ ಸತ್ಯಗಳನ್ನು ಆಧುನಿಕ ಯುಗದಲ್ಲಿ ಒರೆಗೆಹಚ್ಚಿ ಬರೆಯುವವರ ಸಂಖ್ಯೆ ಈಗ ಕಡಿಮೆಯಾಗಿದೆ. ಧ್ಯಾನಿಸಿ ಬರೆಯುವ ತಲೆಮಾರನ್ನೇ ನಾವು ಕಳೆದುಕೊಂಡಿದ್ದೇವೆ. ಇಂದಿನ ಯುವಜನಾಂಗ ಫೇಸ್‌ಬುಕ್‌ನಲ್ಲಿ ನಾಲ್ಕು ಸಾಲು ಬರೆದು ದಿಢೀರ್ ಪ್ರಚಾರ ಪಡೆಯುವ ಅವಸರದಲ್ಲಿದೆ. ಈ ಮಧ್ಯೆ ಕಾಲದ ಒತ್ತಡವನ್ನು ತಿರಸ್ಕರಿಸಿ ಕೃತಿಕಾರ ಬಸವರಾಜ್‌ ಬರೆಯುತ್ತಿದ್ದಾರೆ’ ಎಂದು ಹೇಳಿದರು.

‘ಸಂಶೋಧನೆ ಮತ್ತು ಸೃಜನಶೀಲ ಸಾಹಿತ್ಯ ಎರಡನ್ನೂ ಮಿಶ್ರಣ ಮಾಡಿದರೆ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ಸಿಗುತ್ತದೆ. ಇಂತಹದೊಂದು ಆಯಾಮ ಕೊಡುವ ಶಕ್ತಿ ಬಸವರಾಜ್‌ ಅವರಿಗಿದೆ’ ಎಂದು ಪ್ರಶಂಸಿಸಿದರು.

‘ಸಮುದಾಯಗಳನ್ನು ಆಧರಿಸಿ ಕರ್ನಾಟಕ ಚರಿತ್ರೆ ಹೇಳುವ ಪರಂಪರೆ ಕನ್ನಡದಲ್ಲಿ ಅಪರೂಪ. ಶಂಬಾ ಜೋಶಿ ಇಂತಹದೊಂದು ದೊಡ್ಡ ಪರಂಪರೆ ಹಾಕಿಕೊಟ್ಟರು. ಅವರ ಉತ್ತರಾಧಿಕಾರಿ ಎಂದು ತಮ್ಮನ್ನು ಕರೆದುಕೊಳ್ಳುತ್ತಿದ್ದ ಮಲ್ಲೇಪುರಂ ವೆಂಕಟೇಶ ಈ ಪರಂಪರೆ ಹಾಳು ಮಾಡಿದರು’ ಎಂದು ಟೀಕಿಸಿದರು.

ಕೃತಿಗಳ ಬಗ್ಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಸಿರಾಜ್‌ ಅಹಮದ್‌ ಮಾತನಾಡಿ, ‘ಸಾಹಿತ್ಯದ ಸಿದ್ಧ ಚೌಕಟ್ಟಿನಿಂದ ಆಚೆ ಈ ಕೃತಿಗಳನ್ನು ವಿಶ್ಲೇಷಿಸಿದರೆ ಹೊಸ ರೀತಿಯ ಅರ್ಥ ನೀಡುತ್ತವೆ’ ಎಂದರು.

‘ಗ್ರಾಮೀಣ ಬದುಕು, ಭಾಷೆಯ ಅಂತರ್‌ ಸತ್ವವನ್ನು ಹಾಗೂ ಮಧ್ಯ ಕರ್ನಾಟಕದ ಭಾಗದ ದಾವಣಗೆರೆ ಸೀಮೆಯ ಭಾಷೆಯನ್ನು ಬಸವರಾಜ್‌ ತೂಲಹಳ್ಳಿ ಅವರು ತಮ್ಮ ಕೃತಿಗಳಲ್ಲಿ ಸೊಗಸಾಗಿ ಪರಿಚಯಿಸಿದ್ದಾರೆ’ ಎಂದು ಹೇಳಿದರು.

‘ಇತಿಹಾಸ, ಸಮಾಜಶಾಸ್ತ್ರ, ಪ್ರಾಣಿಶಾಸ್ತ್ರ ಎಲ್ಲದರ ಬಗ್ಗೆ ಗಂಭೀರವಾಗಿ ಸಂಶೋಧಿಸುವ ಮೂಲಕ ಸೃಜನಶೀಲತೆ ಚಿಂತನೆಯ ವಿಚಾರಗಳನ್ನು ಒಟ್ಟೊಟ್ಟಿಗೆ ತಮ್ಮ ಬರವಣಿಯಲ್ಲಿ ಬಳಸಿದ್ದಾರೆ. ಇವರ ಕೃತಿಗಳಲ್ಲಿ ಬಂಡಾಯದ ಆಕ್ರೋಶ ಮೇಲ್ನೋಟಕ್ಕೆ ಕಂಡುಬಂದರೂ ಇವೆಲ್ಲಕ್ಕಿಂತ ಮಿಗಿಲಾದ ಗಂಭೀರ ಸ್ವರೂಪದ ಸಂವೇದನೆಯೂ ಇದೆ’ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಕೆ.ನಾರಾಯಣಸ್ವಾಮಿ, ‘ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಕೃತಿಗಳು ಸಾಕಷ್ಟು ಬಿಡುಗಡೆಯಾಗುತ್ತಿವೆ. ಆದರೆ, ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಕ್ಷೀಣವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಪ್ರೊ.ಬಸವರಾಜ್‌ ತೂಲಹಳ್ಳಿ ಉಪಸ್ಥಿತರಿದ್ದರು. ರೇವಣಸಿದ್ದಪ್ಪ ಸ್ವಾಗತಿಸಿದರು. ಪ್ರೊ.ಮಂಜಣ್ಣ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT