ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡುರಂಗನ ಅದ್ಧೂರಿ ಪಲ್ಲಕ್ಕಿ ಉತ್ಸವ

ಭಜನೆ ಮಾಡಿ ದೇವರಿಗೆ ಭಕ್ತಿ ಸಮರ್ಪಿಸಿದ ಭಕ್ತರು, ಮೆರವಣಿಗೆಯಲ್ಲಿ ಪಾಲ್ಗೊಂಡ ಮಹಿಳೆಯರು
Last Updated 11 ಜುಲೈ 2017, 7:22 IST
ಅಕ್ಷರ ಗಾತ್ರ

ಬೀದರ್:  ಪಾಂಡುರಂಗ ದಿಂಡಿ ಸಪ್ತಾಹ ಸಮಾರೋಪದ ಅಂಗವಾಗಿ ನಗರದಲ್ಲಿ ಸೋಮವಾರ ಪಲ್ಲಕ್ಕಿ ಉತ್ಸವ ಜರುಗಿತು. ಓಲ್ಡ್‌ಸಿಟಿಯಲ್ಲಿರುವ ಚೌಬಾರಾದ ಪಾಂಡುರಂಗ ದೇವಸ್ಥಾನದ ಆವರಣದಿಂದ ಬೆಳಿಗ್ಗೆ ಆರಂಭವಾದ ಪಾಂಡುರಂಗನ ಪಲ್ಲಕ್ಕಿ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಭಕ್ತರು ಏಕತಾರಿ, ತಾಳ, ಚಿಟಕಿ ಬಾರಿಸುತ್ತ ಭಜನಾ ಪದಗಳನ್ನು ಹಾಡಿದರು. ಮಹಿಳೆಯರು ಫುಗಡಿ ಆಡುವ ಮೂಲಕ ಗಮನ ಸೆಳೆದರು. ಔರಾದ್ ತಾಲ್ಲೂಕಿನ ಜೋಜನಾ, ಭಾಲ್ಕಿ ತಾಲ್ಲೂಕಿನ ಚಳಕಾಪುರ, ಬಸವಕಲ್ಯಾಣ ತಾಲ್ಲೂಕಿನ ರಾಮತೀರ್ಥ, ಬೀದರ್‌ ತಾಲ್ಲೂಕಿನ ಸೋಲಪುರ, ಮರಕಲ್‌, ಮಾಳೆಗಾಂವ, ಗುಮ್ಮಾ, ಆಣದೂರು ಹಾಗೂ ಬರೂರದ ಭಜನಾ ಮಂಡಳಿಗಳು ಮೆರವಣಿಗೆಯಲ್ಲಿ ಭಾಗವಹಿಸಿ ಭಕ್ತಿ ಸುಧೆ ಹರಿಸಿದವು.

ಯುವಕರು ಮಂಗಲವಾದ್ಯದೊಂದಿಗೆ ಬೃಹತ್‌ ನಂದಿ ಧ್ವಜ, ಛತ್ರಿಚಾಮರಗಳನ್ನು ಹಿಡಿದು ಸಾಗಿದರು. ಮೆರವಣಿಗೆಯಲ್ಲಿ ತರಲಾದ ಮೊಸರು ಗಡಿಗೆಯನ್ನು ಶಹಾಗಂಜ್‌ ಕಮಾನಿನ ಬಳಿ ಇರಿಸಿ ಪೂಜೆ ನೆರವೇರಿಸಲಾಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಯುವಕರು ಕಮಾನಿನ ಮೇಲೇರಿ ಪಾಂಡುರಂಗನ ಪಾದುಕೆಯ ಮೇಲೆ ಬೀಳುವಂತೆ ಮೊಸರು ಗಡಿಗೆಯನ್ನು ಒಡೆದರು. ಮಡಿಕೆಯಿಂದ ಮೊಸರು ಕೆಳಗೆ ಬೀಳುತ್ತಿದ್ದಂತೆಯೇ ಭಕ್ತರು ಬೊಗಸೆಯಲ್ಲಿ ಹಿಡಿದುಕೊಂಡು ತಲೆಯ ಮೇಲೆ ಸವರಿಕೊಂಡರು.

ದಖನ್‌ ಪ್ರದೇಶದಲ್ಲಿ ಆಡಳಿತ ನಡೆಸಿದ ಬಹಮನಿ ಅರಸರ ಆಳ್ವಿಕೆ ಕಾಲದಲ್ಲಿ ಈ ಪ್ರದೇಶದಲ್ಲಿ ಭೀಕರ ಬರ ಇತ್ತು. ಕುಡಿಯುವ ನೀರಿಗಾಗಿ ಜನ ಅಲೆದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೆಳೆ ಬೆಳೆಯದ ಕಾರಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. 

ಬಹಮನಿ ಸಾಮ್ರಾಜ್ಯದ ಹುಮಾಯೂನ್‌ ಆಳ್ವಿಕೆ ಸಂದರ್ಭದಲ್ಲಿ ಉಗ್ರಾಣ ಮುಖ್ಯಸ್ಥನಾಗಿದ್ದ ಧಾಮಾಜಿ ಪಂಥ ಜನರ ಸಂಕಷ್ಟವನ್ನು ನೋಡಲಾಗದೆ ಗೋದಾಮಿನ ಬೀಗ ತೆಗೆದು ಬಡವರಿಗೆ ಆಹಾರ ಧಾನ್ಯ ಹಂಚಿದ್ದ ಎನ್ನುವುದು ಇತಿಹಾಸಕಾರರ ಹೇಳಿಕೆಯಾಗಿದೆ.

ಧಾಮಾಜಿಯ ವಿರೋಧಿಗಳು ಖಜಾನೆ ಖಾಲಿಯಾಗಿದೆ ಎನ್ನುವ ವದಂತಿ ಹರಡಿಸಿ ಅವನಿಗೆ ಶಿಕ್ಷೆ ಕೊಡಿಸಲು ಹೊಂಚು ಹಾಕಿದ್ದರು. ಹುಮಾಯೂನ್‌ನು ಖಜಾನೆಯ ಲೆಕ್ಕ ಕೊಡುವಂತೆ ಧಾಮಾಜಿಗೆ ಸಂದೇಶ ಕಳಿಸಿದ. ಧಾಮಾಜಿ ಎರಡು ರೊಟ್ಟಿ ಕಟ್ಟಿಕೊಂಡು  ಅರಸನ ಭೇಟಿಗೆ ಹೊರಟಿದ್ದಾಗ ಭಿಕ್ಷುಕನೊಬ್ಬ ಎದುರಾದ. ತನ್ನ ಹೊಟ್ಟೆಯೊಳಗಿನ ಹಸಿವಿನ ಬೆಂಕಿಯನ್ನು ಆರಿಸುವಂತೆ ಮನವಿ ಮಾಡಿದ. ಆಗ ಧಾಮಾಜಿ ತನ್ನ ಬಳಿ ಇದ್ದ ಒಂದು ರೊಟ್ಟಿಯನ್ನು ನೀಡಿದ.

ನಂತರ ಪಾಂಡುರಂಗನನ್ನು ಸ್ಮರಿಸುತ್ತ ಸುಲ್ತಾನನ ಆಸ್ಥಾನಕ್ಕೆ ಹೋದ. ಅಷ್ಟರಲ್ಲಿ ಉಗ್ರಾಣದಲ್ಲಿ ಧಾನ್ಯ ತುಂಬಿಕೊಂಡಿರುವ ಮಾಹಿತಿ ಸುಲ್ತಾನ್‌ನಿಗೆ ತಲುಪುತ್ತದೆ. ಪಾಂಡುರಂಗನ ಕೃಪೆಯಿಂದಾಗಿ ಧಾನ್ಯಗಳಿಂದ ಉಗ್ರಾಣ ತುಂಬಿಕೊಂಡಿತು. ಸುಲ್ತಾನ್‌ ಕೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಧಾಮಾಜಿ ಭಾವಿಸುತ್ತಾನೆ. ಇದರ ಸ್ಮರಣೆಗಾಗಿ ಪ್ರತಿವರ್ಷ ನಗರದಲ್ಲಿ ಪಾಂಡುರಂಗನ ಪಲ್ಲಕ್ಕಿ ಉತ್ಸವ ನಡೆಯುತ್ತದೆ.

***

ಆರ್ಯ ವೈಶ್ಯ ಸಮಾಜದವರು ಶ್ರದ್ಧಾ ಭಕ್ತಿಯಿಂದ ಪಾಂಡುರಂಗನ ಪಲ್ಲಕ್ಕಿ ಉತ್ಸವ ನಡೆಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.
ಚಂದ್ರಶೇಖರ ಗಾದಾ, ಆರ್ಯ ವೈಶ್ಯ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT