ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಶಕ್ತಿಗಿಂತ ದೊಡ್ಡಶಕ್ತಿ ಇಲ್ಲ

ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ
Last Updated 11 ಜುಲೈ 2017, 9:18 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ‘ಜನಶಕ್ತಿಗಿಂತ ದೊಡ್ಡಶಕ್ತಿ ಜಗತ್ತಿನಲ್ಲಿ ಇಲ್ಲ. ಸಂಕಷ್ಟಗಳನ್ನು ರಾಜಕಾರಣಿಗಳು ದೂರ ಮಾಡುತ್ತಾರೆ ಎಂದು ಜನ ಕೈ ಕಟ್ಟಿ ಕುಳಿತುಕೊಳ್ಳಬಾರದು. ಒಗ್ಗೂಡಿ ಜನ ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗುವ ಕಾಲ ಬಂದಿದೆ’ ಎಂದು ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನಲ್ಲಿ ಕೆಲಸಗಳು ಆಗಬೇಕೆಂದರೆ ಹೋರಾಟ ಇರಬೇಕು, ಜತೆಗೆ ಅಹಿಂಸೆ ಇಲ್ಲದಂತಹ ಶಾಂತಿ ಪ್ರತಿಭಟನೆ ಇರಲಿ ಈ ಮೂಲಕ ಸರ್ಕಾರದ ಗಮನ ಸೆಳೆಯೋಣ ಎಂದರು.

ತೀವ್ರ ಬರಗಾಲಕ್ಕೆ ತುತ್ತಾಗಿರುವ ತಾಲ್ಲೂಕಿನ ತೆಂಗು ಬೆಳೆಗಾರರ ರಕ್ಷಣೆಗೆ ಸರ್ಕಾರಗಳು ಧಾವಿಸಬೇಕು ಹಾಗೂ ಪುನಶ್ಚೇತನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ರೈತರಿಗಾಗಿ ಇರುವ ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆಗಳಲ್ಲಿನ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಪ್ರಮುಖ ಮಠಾಧ್ಯಕ್ಷರ ನೇತೃತ್ವದಲ್ಲಿ ಜನ ಬೀದಿಗಿಳಿದರು.

ತಾಲ್ಲೂಕು ಶೆಟ್ಟಿಕೆರೆ ಹೋಬಳಿ  ಕುಪ್ಪೂರಿನಿಂದ ಆರಂಭಗೊಂಡ ಪಾದಯಾತ್ರೆ 11 ಕಿ.ಮೀ ಸಾಗಿ ಬಂತು. ತೋಟಗಾರಿಕೆ ಇಲಾಖೆ ಎದುರು ಪ್ರತಿಭಟನೆ ನಡೆಸಲಾಯಿತು. 

ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಡಾ.ರವಿಕೃಷ್ಣಾರೆಡ್ಡಿ, ಮಲ್ಲಿಕಾರ್ಜುನ್ ಬಟ್ಟರಹಳ್ಳಿ ರೈತರ ಜತೆ ಹೆಜ್ಜೆ ಹಾಕಿದರು.

ಪಟ್ಟಣದ ತೋಟಗಾರಿಕೆ ಇಲಾಖೆ ಬಳಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಗೋಡೇಕೆರೆ ಮಠದ ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಹಾಗೂ ಮೃತ್ಯುಂಜಯ ದೇಶೀಕೇಂದ್ರಸ್ವಾಮೀಜಿ ಪಾಲ್ಗೊಂಡರು.ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹಾಗೂ  ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾರ್ಜುನದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ರೈತರು ತಮ್ಮ ಬೇಡಿಕೆಗಳಿಗಾಗಿ ಒಗ್ಗೂಡಿ ಹೋರಾಡಿ. ಮಠಾಧೀಶರಾದ ನಾವುಗಳು ಸದಾ ಜೊತೆಯಲ್ಲಿರುತ್ತೇವೆ. ಸಮಾಜಮುಖಿ ಕಾರ್ಯಗಳಿಗೆ ಮಠದ ಸೇವೆಯನ್ನು ಬಳಸಿಕೊಳ್ಳಿ ಎಂದರು.

ಗೋಡೆಕೆರೆ ಮಠದ ಸಿದ್ದರಾಮದೇಶೀಕೇಂದ್ರಸ್ವಾಮೀಜಿ ಮಾತನಾಡಿ, ‘ಅಧಿಕಾರ ಶಾಶ್ವತವಲ್ಲ, ರಾಜಕಾರಣಿಗಳು ಹಾಗೂ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಿ  ತಮಗೆ ದೊರತಿರುವ ಶಕ್ತಿಯನ್ನು ಒಳ್ಳೆಯ ಕೆಲಸಗಳಿಗೆ ಬಳಸಿ’ ಎಂದರು.

ಬರ ಚಿತ್ರಿಸಿದ ಡ್ರೋಣ್: ಒಣಗಿದ ಬೋಳು ತೋಟಗಳ ಮೇಲೆ ಡ್ರೋಣ್ ಹಾರಾಡಿ ಬರದ ತೀವ್ರತೆಯನ್ನು ಚಿತ್ರೀಕರಿಸಿತು.ಚಿತ್ರೀಕರಣದ ನೇತೃತ್ವ ವಹಿಸಿದ್ದ ಛಾಯಾಗ್ರಾಹಕ ರಾಜು ಬಡಗಿ ಮಾತನಾಡಿ, ‘ಬರ ಸಮೀಕ್ಷೆಯ ಹೆಸರಿನಲ್ಲಿ ರೈತರ ಕಣ್ಣಿಗೆ ಮಣ್ಣು ಎರೆಚಲಾಗುತ್ತಿದೆ. ವ್ಯವಸ್ಥೆಯ ಕಣ್ಣು ತೆರೆಸುವ ಉದ್ದೇಶದಿಂದ ಬರದ ನಿಜ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಮುಂದಿನ ಹಂತದ ಹೋರಾಟಕ್ಕಾಗಿ ಈ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT