ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಕ್ಕನ್ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ದಸಂಸ ಆಗ್ರಹ

ಅಧಿಕ ಶುಲ್ಕ ವಸೂಲಿ, ಅಸಮರ್ಪಕ ಚಿಕಿತ್ಸೆ ಆರೋಪ; ಆಸ್ಪತ್ರೆಯ ಪರವಾಗಿ ನಾಗರಿಕ ವೇದಿಕೆ ಮನವಿ
Last Updated 11 ಜುಲೈ 2017, 9:47 IST
ಅಕ್ಷರ ಗಾತ್ರ

ಚಿಂತಾಮಣಿ: ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡದೆ ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ನಗರದ ಡೆಕ್ಕನ್‌ ಖಾಸಗಿ ಆಸ್ಪತ್ರೆಯ  ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ತಾಲ್ಲೂಕು ವೈದ್ಯಾಧಿಕಾರಿ ಚೇರಿ ಮುಂದೆ ಪ್ರತಿಭಟನೆ ನಡೆಸಿದರು.

‘ನಗರದ ದಲಿತ ಸಮುದಾಯದ ಗಂಗುಲಪ್ಪ ಎಂಬುವವರಿಗೆ ಸೂಕ್ತ ಚಿಕಿತ್ಸೆ ನೀಡದೆ ಸಾವಿಗೆ ಕಾರಣವಾಗಿದೆ. ಕುಟುಂಬದವರ ಅನುಮತಿ ಇಲ್ಲದೆಯೇ ರಾಧಮ್ಮ ಎಂಬುವವರಿಗೆ ಗರ್ಭಪಾತ ಮಾಡಿಸಿದ್ದಾರೆ. ರೋಗಿಗಳ ಕಾಯಿಲೆಗಳ ಬಗ್ಗೆ ಆಸ್ಪತ್ರೆಯವರು ನಿರ್ಲಕ್ಷ್ಯ  ತೋರಿಸುತ್ತಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಆರೋಪಿಸಿದರು.

‘ಗಂಗುಲಪ್ಪ ಕುಟುಂಬಕ್ಕೆ ಹಾಗೂ ರಾಧಮ್ಮ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು. ಇಲಾಖೆ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ಶುಲ್ಕ  ಪಡೆಯುತ್ತಿದ್ದು ಕ್ರಮಕೈಗೊಳ್ಳಬೇಕು, ಔಷಧಿಗಳನ್ನು ನಿಗದಿತ ಬೆಲೆಗೆ ಮಾರಾಟ ಮಾಡಬೇಕು. ರೋಗಿಗಳ ತಪಾಸಣೆ ಶುಲ್ಕ ಹಾಗೂ ಔಷಧಿಗಳ ಬೆಲೆಗಳ ಪಟ್ಟಿ ಅಳವಡಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮುಖಂಡರಾದ ವಿಜಯನರಸಿಂಹ, ರಮೇಶ್‌, ರವಿಕುಮಾರ್‌, ಸುನೀಲ್‌ಕುಮಾರ್‌, ಎನ್‌.ಬಾಬು, ಮುನಿಯಪ್ಪ, ವೆಂಕಟ ರವಣಪ್ಪ, ಎನ್‌.ಸಂತೋಷ್‌, ಶ್ರೀನಿವಾಸ ಇದ್ದರು.

ಆಸ್ಪತ್ರೆಯ ಪರವಾಗಿ ನಾಗರಿಕ ವೇದಿಕೆ: 
ನಾಗರಿಕ ವೇದಿಕೆ ಮುಖಂಡರು ನಿಯೋಗದಲ್ಲಿ ತೆರಳಿ ಆಸ್ಪತ್ರೆ ಪರವಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.  ಡೆಕ್ಕನ್ ಆಸ್ಪತ್ರೆ ನಗರದಲ್ಲಿ ದಿನದ 24 ಕಾರ್ಯನಿರ್ವಹಿಸುವ ಏಕೈಕ ಆಸ್ಪತ್ರೆಯಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ.   ಒತ್ತಡಗಳಿಗೆ ಮಣಿದು ಕ್ರಮಕೈಗೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.

‘ಸಂಘಸಂಸ್ಥೆಗಳ ಕಾಟ ತಾಳಲಾರದೆ ಆಸ್ಪತ್ರೆ ರಾತ್ರಿ ಸೇವೆ ಸ್ಥಗಿತಗೊಳಿಸಿದೆ. ಇದರಿಂದ ರೋಗಿಗಳು ಪರದಾಡುವಂತಾಗಿದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಗಂಗುಲಪ್ಪ ಮತ್ತು ರಾಧಮ್ಮ ಪ್ರಕರಣಗಳನ್ನು ಕರ್ನಾಟಕ ವೈದ್ಯಕೀಯ ಮಂಡಳಿ (ಕೆಎಂಸಿ) ಪರಿಶೀಲನೆ ನಡೆಸಿದೆ. ಗಂಗುಲಪ್ಪನವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ದಾಖಲಿಸಲಾಗಿದೆ. ರಾಧಮ್ಮ ಅವರಿಗೆ ಮನೆಯಲ್ಲಿಯೇ ಹೆಚ್ಚಿನ ರಕ್ತಸ್ರಾವವಾಗಿದೆ. ಆದರೂ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.  ಹೀಗಿದ್ದರೂ  ಸಲ್ಲದ ನೆಪಗಳಿಂದ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT