ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕೋಟೆ ಛಿದ್ರಕ್ಕೆ ಕಾರ್ಯತಂತ್ರ

ಸಭೆಯಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವು ಮಾದಪ್ಪ
Last Updated 11 ಜುಲೈ 2017, 10:21 IST
ಅಕ್ಷರ ಗಾತ್ರ

ಮಡಿಕೇರಿ: ‘ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎರಡು ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸಲಾಗುವುದು’ ಎಂದು ಕಾಂಗ್ರೆಸ್‌ನ ನೂತನ ಜಿಲ್ಲಾ ಅಧ್ಯಕ್ಷ ಶಿವು ಮಾದಪ್ಪ ಘೋಷಿಸಿದರು.

ನಗರದ ಕಾಂಗ್ರೆಸ್‌ ಜಿಲ್ಲಾ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಕೊಡಗಿನಿಂದ ಬಿಜೆಪಿ ಶಾಸಕರೇ ವಿಧಾನಸಭೆ ಪ್ರವೇಶಿಸುತ್ತಿರುವ ಕಾರಣ ಈ ಎರಡೂ ಕ್ಷೇತ್ರಗಳನ್ನು ಹೊರತುಪಡಿಸಿಯೇ ರಾಜ್ಯ ವರಿಷ್ಠರೂ ಲೆಕ್ಕಾಚಾರ ಹಾಕುತ್ತಾರೆ. ಈ ಬಾರಿಯ ಚುನಾವಣೆಯಲ್ಲಿ ಇದನ್ನು ಸುಳ್ಳಾಗಿಸಬೇಕು.

ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಗಳಿಸಬೇಕು. ಅದಕ್ಕೆ ಅಗತ್ಯವಿರುವ ಎಲ್ಲಾ ತಂತ್ರಗಾರಿಕೆಯನ್ನು ಈಗಲೇ ಸಿದ್ಧಮಾಡಿಕೊಳ್ಳಬೇಕು’ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

‘ಪಕ್ಷ ಸಂಘಟನೆ ಎಂಬುದು ಸುಗಮವಾದ ದಾರಿಯಲ್ಲ. ನಾನೂ ತಳಹಂತದಿಂದಲೂ ಕಾಂಗ್ರೆಸ್‌ ಅನ್ನು ಸಂಘಟಿಸಿರುವೆ. ಈಗಲೂ ಕುಟ್ಟದಲ್ಲಿ ಕಾಂಗ್ರೆಸ್‌ ಬೆಂಬಲಿತರಿಂದಲೇ ಆಡಳಿತ ನಡೆಯುತ್ತಿದೆ. ಜನಸೇವೆ ಎಂದು ಪ್ರಹಸನ ಅಲ್ಲ. ಮನಸ್ಸಿನಲ್ಲೇ ಸೇವೆಯ ಮನೋಭಾವ ಮೂಡಬೇಕು. ಜಿಲ್ಲಾ ಅಧ್ಯಕ್ಷ ಸ್ಥಾನಮಾನ ಹಣ ಮಾಡಲು ಇರುವುದಲ್ಲ; ಸೇವೆಗೆ ಸಿಕ್ಕ ಅವಕಾಶವಾಗಿದ್ದು ಉತ್ತಮವಾಗಿ ಬಳಸಿಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

‘ನನ್ನ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಪಕ್ಷ ಸಂಘಟಿಸುತ್ತೇನೆ. ಹಿಂದಿನ ಅವಧಿಯಲ್ಲಿ ನಡೆದ ತಪ್ಪುಗಳು ಈ ಅವಧಿಯಲ್ಲಿ ಮರುಕಳುಹಿಸಲು ಬಿಡುವುದಿಲ್ಲ. ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವ ಮುಖಂಡರಿಗೆ ಐದು ಬ್ಲಾಕ್‌ನ ಉಪಾಧ್ಯಕ್ಷ ಸ್ಥಾನ ನೀಡಲಾಗುವುದು. ಬ್ಲಾಕ್‌ಮಟ್ಟದಲ್ಲಿ ಆಗುವ ಸಮಸ್ಯೆಗಳು ಜಿಲ್ಲಾ ಸಮಿತಿಯವರೆಗೂ ಬರಬಾರದು. ಸಣ್ಣಪುಟ್ಟ ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಉತ್ತರ ಕೊಡಗಿನ ಕೊಡ್ಲಿಪೇಟೆಯಿಂದ ದಕ್ಷಿಣ ಕೊಡಗಿನ ಕುಟ್ಟ ಗ್ರಾಮದವರೆಗೆ ಮುನಿಸಿಕೊಂಡ ಪಕ್ಷದ ಹಿರಿಯ ನಾಯಕರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡಲಾಗುವುದು. ಈಗಾಗಲೇ ಕೆಲವು ಮುಖಂಡರ ಮನೆಗೆ ಭೇಟಿ ನೀಡಿದ್ದೇನೆ’ ಎಂದು ಹೇಳಿದರು. 

ನಗರ ಕಾಂಗ್ರೆಸ್‌ ಅಧ್ಯಕ್ಷ ಕೆ. ಅಬ್ದುಲ್‌ ರಜಾಕ್‌ ಮಾತನಾಡಿ, ‘ಹಗಲು ಕಾಂಗ್ರೆಸ್‌, ರಾತ್ರಿ ಬಿಜೆಪಿ ಎನ್ನುವ ಸಂಸ್ಕೃತಿ ಕೆಲವರಲ್ಲಿ ಇತ್ತು. ಅದಕ್ಕೆ ಇನ್ನು ಅವಕಾಶವಿಲ್ಲ. ನೀವು ಕಾಂಗ್ರೆಸ್‌ ಬಲಪಡಿಸಿ, ನಿಮ್ಮ ಕೈಯನ್ನು ನಾವು ಬಲಪಡಿಸುತ್ತೇವೆ’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾನಂಡು ಪ್ರಥ್ಯು, ಲತೀಫ್‌, ನಗರಸಭೆಯ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಮ್ಮಿ ದೇವಯ್ಯ, ತನ್ನೀರಾ ಮೈನಾ, ಪ್ರಕಾಶ್‌ ಆಚಾರ್ಯ, ಸುರಯ್ಯಾ ಅಬ್ರಾರ್‌ ಹಾಜರಿದ್ದರು. 

ಅದ್ಧೂರಿ ಸ್ವಾಗತ: ಇದಕ್ಕೂ ಮೊದಲು ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಶಿವು ಮಾದಪ್ಪಗೆ ಅದ್ದೂರಿ ಸ್ವಾಗತ ಕೋರಲಾಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿ ಮನೆಯಲ್ಲೂ ಸಣ್ಣಪುಟ್ಟ ಗೊಂದಲಗಳಿರುವುದು ಸಹಜ. ಇಷ್ಟು ದೊಡ್ಡ ರಾಷ್ಟ್ರೀಯ ಪಕ್ಷದಲ್ಲೂ ಸಣ್ಣಪುಟ್ಟ ಗೊಂದಲಗಳಿವೆ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವ ಪ್ರಯತ್ನ ಮಾಡಲಾಗುವುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಂತರ ನಗರದ ಸೇಂಟ್‌ ಮೈಕಲ್‌ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

***

ಬಹುತೇಕರು ಗೈರು
ಮಡಿಕೇರಿ:
ಜಿಲ್ಲಾ ಕಾಂಗ್ರೆಸ್‌ನಲ್ಲಿನ ಭಿನ್ನಮತ ಇನ್ನೂ ಶಮನವಾಗಿಲ್ಲ ಎಂಬುದಕ್ಕೆ ಸೋಮವಾರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಸಾಕ್ಷಿಯಾಯಿತು.

ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್‌, ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದ ಬಿ.ಎಸ್‌. ತಮ್ಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ಸೇರಿದಂತೆ ಹಲವರು ಸಭೆಗೆ ಗೈರಾಗಿದ್ದರು. ಇನ್ನು ಕೆಲವರು ಸಭೆಯಿಂದ ದೂರ ಉಳಿಯುವ ಪ್ರಯತ್ನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT