ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಇಲಾಖೆಯಿಂದ ಅತಿಕ್ರಮ ತೋಟ ತೆರವು

ಯಲ್ಲಾಪುರ ತಾಲ್ಲೂಕಿನ ಕಳೆಸೆ ಗ್ರಾಮದಲ್ಲಿ ಕಾರ್ಯಾಚರಣೆ
Last Updated 12 ಜುಲೈ 2017, 6:18 IST
ಅಕ್ಷರ ಗಾತ್ರ

ಯಲ್ಲಾಪುರ: ಹತ್ತಾರು ವರ್ಷಗಳಿಂದ ಜೀವನಕ್ಕೆ ಆಧಾರವಾಗಿದ್ದ  ತೋಟವನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ ಎಂದು ತಾಲ್ಲೂಕಿನ ಕೆಳಾಸೆಯ ಪ್ರಮೀಳಾ ನಾರಾಯಣ ಭಟ್ಟ ಆರೋಪಿಸಿದ್ದಾರೆ.

‘ತಾಲ್ಲೂಕಿನ ಅರಬೈಲ್‌ನ ಕೆಳಾಸೆ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಈ  ಭೂಮಿಯಲ್ಲಿ ಮನೆ ಕಟ್ಟಿಕೊಂಡು ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡು ಜೀವಿಸುತ್ತಿದ್ದೇವೆ. ಸ್ಥಳೀಯ ವ್ಯಕ್ತಿಯೊಬ್ಬರ ಕುಮ್ಮಕ್ಕಿನಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ತೋಟದ ಅತಿಕ್ರಮಣವನ್ನು ಖುಲ್ಲಾಪಡಿಸಿದ್ದು, ಈ ಬಗ್ಗೆ ನ್ಯಾಯ ಒದಗಿಸಿ ಕೊಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಕೆಳಾಸೆ ಗ್ರಾಮ ಸರ್ವೆ ನಂ 42/2 ಮಾಲ್ಕಿ ಜಮೀನಿಗೆ ಹೊಂದಿಕೊಂಡು ಇರುವ ಸ್ವಲ್ಪ ಪ್ರದೇಶ ಅರಣ್ಯ ಭೂಮಿಯಲ್ಲಿ  ಸಾಗುವಳಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿದೆ. ಈ  ಜಾಗೆಯಲ್ಲಿ ಚಿಕ್ಕ ಗುಡಿಸಲನ್ನು ನಿರ್ಮಾಣ ಮಾಡಿಕೊಂಡಿದ್ದು, ನನ್ನ ಮಾವ ವಾಸ ಮಾಡುತ್ತಿದ್ದರು. ಈವರೆಗೂ ಪಂಚಾಯ್ತಿಗೆ ಕರ ಭರಣ ಮಾಡಿಕೊಂಡು ಬರಲಾಗುತ್ತಿದೆ.

ಸ.ನಂ. 42/2 ರ ಮಾಲ್ಕಿ ಜಮೀನಿಗೆ ನೀರು ಮತ್ತು ರಸ್ತೆ ಬರುವ ಸ್ಥಳಗಳನ್ನು ನಾಗಕುಮಾರ ನಾಯ್ಕ ಅತಿಕ್ರಮಿಸಿದ್ದಾರೆ ಎಂದು ದೂರಿ ನಮಗೆ ರಸ್ತೆ, ನೀರು, ಕಾಲುವೆಯನ್ನು ಬಿಡಿಸಿಕೊಡುವಂತೆ  ಅರಣ್ಯ ಇಲಾಖೆ, ತಹಶೀಲ್ದಾರ್‌ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಈ ಹಿಂದಿನಿಂದ ನಮ್ಮ ಮಾವ ಸುಬ್ರಾಯ ನಾರಾಯಣ ಭಟ್ಟ ವಾಸವಾಗಿದ್ದ ಗುಡಿಸಲು ಹಾಗೂ ಅಡಿಕೆ, ಬಾಳೆ, ಸಸಿಯನ್ನು ಬೆಳೆಸಿದ್ದು, ಖಾಲಿ ಇರುವ ಸ್ಥಳದಲ್ಲಿ ತರಕಾರಿಗಳನ್ನು ಬೆಳೆಸಲಾಗಿತ್ತು.

ಅರಣ್ಯ ಇಲಾಖೆಯವರು ಯಾವುದೇ ಮಾಹಿತಿ ನೀಡದೇ ಎರಡು ದಿನಗಳ ಹಿಂದೆ ಏಕಾಏಕಿ ಅಡಿಕೆ-ಬಾಳೆ ಗಿಡಗಳನ್ನು ಕಡಿದು ಖುಲ್ಲಾಪಡಿಸಿದ್ದಾರೆ. ಇದನ್ನೇ ನಂಬಿಕೊಂಡಿದ್ದ ನಮಗೆ ದಿಕ್ಕು ಕಾಣದಂತಾಗಿದೆ’ ಎಂದು ತಿಳಿಸಿದ್ದಾರೆ.

‘ಅತಿಕ್ರಮಣದ ಜಿಪಿಎಸ್ ಮಾಡುವಂತೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ. ಇಲಾಖೆ ಮತ್ತು ಜನಪ್ರತಿನಿಧಿಗಳ ಬಳಿ ದೂರಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಈ ಕುರಿತು ಡಿ.ಸಿ.ಎಫ್. ಯತೀಶಕುಮಾರ ಅವರನ್ನು ಪ್ರಜಾವಾಣಿ ಮಾತನಾಡಿಸಿದಾಗ ‘ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಜಿಪಿಎಸ್ ಆದ ಜಾಗವನ್ನು ಇಲಾಖೆ ಖುಲ್ಲಾಪಡಿಸಿಲ್ಲ. ಇಬ್ಬರೂ ವ್ಯಕ್ತಿಗಳು ಕಳೆದ ಎರಡು ವರ್ಷಗಳಿಂದ ಹೊಸದಾಗಿ ಅತಿಕ್ರಮಣ ಮಾಡಿದ ಸ್ಥಳವನ್ನು  ಇಲಾಖೆ ಪೊಲೀಸ್ ಬಂದೋಬಸ್ತಿನಲ್ಲಿ, ಊರವರ ಸಮ್ಮುಖದಲ್ಲಿ ಖುಲ್ಲಾ ಪಡಿಸಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT