ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಉನ್ನತೀಕರಣಕ್ಕೆ ಯೋಜನೆ

ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಪೂರ್ವಭಾವಿ ಸಭೆ: ಡಾ.ಕೃಪಾ ಆಳ್ವ ಹೇಳಿಕೆ
Last Updated 12 ಜುಲೈ 2017, 6:31 IST
ಅಕ್ಷರ ಗಾತ್ರ

ಬಾಗಲಕೋಟೆ: ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶ ದಿಂದ ಸರ್ಕಾರಿ ಶಾಲೆ ಉನ್ನತೀಕರಣಕ್ಕೆ ವಿನೂತನ ಯೋಜನೆ ರೂಪಿಸಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಆಳ್ವ ಹೇಳಿದರು.

ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ನಡೆದ ಸರ್ಕಾರಿ ಶಾಲೆಗಳ ಉನ್ನತೀಕರಣ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಡವರು ಕೂಡ ತಮ್ಮ ಮಕ್ಕಳು ಉನ್ನತ ಶಿಕ್ಷಣ ಹಾಗೂ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿಕೊಳ್ಳುವಂತಾಗಲಿ ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಿ ಉತ್ಕೃಷ್ಟವಾದ ಶಿಕ್ಷಣ ಪಡೆಯುವಂತಾಗಲಿ ಎಂದು ಈ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದರು.

ಆಯೋಗವು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಬಾಲ್ಯ ವಿವಾಹ ನಿರ್ಮೂನೆಗಾಗಿ ಈಗಾಗಲೇ ವಿಶೇಷ ಆಂದೋಲನ ಹಮ್ಮಿಕೊಂಡಿದೆ. ರಾಜ್ಯವು ಬಾಲ್ಯ ವಿವಾಹ ಪ್ರಕರಣಗಳಲ್ಲಿ ದೇಶದಲ್ಲಿಯೇ 7ನೇ ಸ್ಥಾನದಲ್ಲಿದೆ ಕಳವಳ ವ್ಯಕ್ತಪಡಿಸಿದರು.

ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಶಾಲೆ ಕಡೆ ನನ್ನ ನಡೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನಂತರ ಕರ್ನಾಟಕ ರಾಜ್ಯ ಸೇವಾ ಪ್ರಾಧಿಕಾರದ ಸಹ ಯೋಗದಲ್ಲಿ ಬಾಲ್ಯ ವಿವಾಹ ತಡೆಗೆ ಸಂಚಾರಿ ವಾಹನದ ಮೂಲಕ         ವಿಶೇಷ ಆಂದೋಲನ ಸಹ ಹಮ್ಮಿಕೊಳ್ಳಲಾಗಿತ್ತು. ದಕ್ಷಿಣ ಕರ್ನಾಟಕದಲ್ಲಿ ಬಾಲ್ಯ ವಿವಾಹ ಪ್ರಮಾಣ ಕಡಿಮೆ ಇದ್ದು, ಅತೀ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ಉತ್ತರ ಕರ್ನಾಟಕದಲ್ಲಿಯೇ ಕಂಡು ಬಂದಿದ್ದರಿಂದ ಈ ಭಾಗಕ್ಕೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದರು.

ಶಿಕ್ಷಣದಿಂದ ಮಾತ್ರ ಇಂತಹ ಅನಿಷ್ಟ ಪದ್ಧತಿಗಳಿಗೆ ಕೊನೆಯಾಡಲು ಸಾಧ್ಯ ವಿದ್ದು, ಜಿಲ್ಲೆಯಲ್ಲಿರುವ ಪ್ರತಿ ಯೊಂದು ಮಗು ಶಿಕ್ಷಣದಿಂದ ವಂಚಿತರಾಗದಂತೆ ಸಮುದಾಯ ಹಾಗೂ ಶಿಕ್ಷಣ ಇಲಾಖೆ ಜವಾಬ್ದಾರಿತನದಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಶಾಲೆ ಉನ್ನತೀಕರಿಸುವ ನಿಟ್ಟಿನಲ್ಲಿ ಈಗಿರುವ ಶಾಲೆಗಳ ವಿವಿಧ ಮೂಲ ಭೂತ ಸ್ಥಿತಿಗತಿಗಳ ಬಗ್ಗೆ ವಿವರಣೆ ಪಡೆಯಲಾಗುತ್ತಿದೆ ಎಂದ ಕೃಪಾ, ಮುಖ್ಯವಾಗಿ ಶಾಲೆಯಲ್ಲಿ ಶೌಚಾಲಯ ಬಳಕೆ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಮಾತನಾಡಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿಯು ಶಿಕ್ಷಣ ಸುಧಾರಣೆಗಾಗಿ ಹೆಚ್ಚಿನ ಗಮನ ಹರಿಸಿದೆ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ರಜೆ ದಿನಗಳಲ್ಲಿ ಕೂಡ ಮಕ್ಕಳಿಗೆ ವಿಶೇಷ ಬೋಧನಾ ಕಾರ್ಯಕ್ರಮ ಹಾಕುವ ಮೂಲಕ ಜಿಲ್ಲೆಯಲ್ಲಿ ಶಿಕ್ಷಣ ಕಾಳಜಿ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ ಎಂದರು.

ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ, ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಚನ್ನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಬಸವರಾಜ ಶಿರೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT