ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಷ್ಪರಿಣಾಮದ ಅರಿವು ಅಗತ್ಯ

Last Updated 12 ಜುಲೈ 2017, 6:45 IST
ಅಕ್ಷರ ಗಾತ್ರ

ಹಾಸನ: ‘ದೇಶದಲ್ಲಿ ಸೆಕೆಂಡಿಗೆ ಒಂದು  ಮಗುವಿನ ಜನನವಾಗುತ್ತಿದ್ದು, ಜನಸಂಖ್ಯೆ ಹೆಚ್ಚಿದಂತೆ ಮೂಲ ಸೌಲಭ್ಯಗಳ ಕೊರತೆಯೂ ಹೆಚ್ಚುತ್ತಿದೆ’ ಎಂದು ಶಾಸಕ ಎಚ್‌.ಎಸ್‌.ಪ್ರಕಾಶ್‌ ಹೇಳಿದರು. ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ  ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವಿಶ್ವ ಜನಸಂಖ್ಯಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ನಿರುದ್ಯೋಗ, ಅನಕ್ಷರತೆ, ಬಡತನ ಹೆಚ್ಚುತ್ತಿದೆ.  ಆದ್ದರಿಂದ ಜನಸಂಖ್ಯಾ ಸ್ಫೋಟದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಮಿತಿ ಮೀರಿದ ಜನಸಂಖ್ಯೆಯಿಂದ ದೇಶದ ಆರ್ಥಿಕ ಪ್ರಗತಿ ಕ್ಷೀಣಿಸುತ್ತದೆ. ಕೆಲ ಪೋಷಕರಲ್ಲಿ ಗಂಡು–ಹೆಣ್ಣುಗಳೆಂಬ ತಾರತಮ್ಯ ಭಾವನೆ ಇನ್ನೂ ಹೋಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಟುಂಬ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿ ಡಾ.ರಾಜಗೋಪಾಲ್‌ ಮಾತನಾಡಿ, ‘1987ರಲ್ಲಿ ವಿಶ್ವದ ಒಟ್ಟಾರೆ ಜನಸಂಖ್ಯೆ 500 ಕೋಟಿ ಇತ್ತು. ಎಚ್ಚರಿಕೆಯ ಕರೆಗಂಟೆಯಂತೆ ಪ್ರತಿವರ್ಷ ಜುಲೈ 11 ರಂದು ‘ವಿಶ್ವ ಜನಸಂಖ್ಯಾ ದಿನ’ ಆಚರಿಸಲಾಗುತ್ತಿದೆ. ಇದು ಕೇವಲ ವರ್ಷದಲ್ಲಿ ಒಂದು ದಿನಕ್ಕೆ ಮಾತ್ರ ಸೀಮಿತ ಆಗಬಾರದು’ ಎಂದು ಕಿವಿಮಾತು ಹೇಳಿದರು.

ಜನಸಂಖ್ಯೆಯನ್ನು ಸಂಪೂರ್ಣ ನಿಯಂತ್ರಿಸುವುದು ಸರಿಯಲ್ಲ. ಗಂಡು–ಹೆಣ್ಣಿನ ಅನುಪಾತದಲ್ಲಿ ಸಮಾನತೆ ಕಾಯ್ದುಕೊಳ್ಳಬೇಕು. ಲಿಂಗ ತಾರತಮ್ಯ ಮಾಡಬಾರದು. ಬಾಲ್ಯ ವಿವಾಹ ತಡೆಗಟ್ಟಬೇಕು. ಯುವ ಜನರಿಗೆ ಲೈಂಗಿಕ ಶಿಕ್ಷಣದ ಅರಿವು ಮೂಡಿಸಬೇಕು. ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಬೇಕು. ಇವುಗಳ ನಿಯಂತ್ರಣಕ್ಕೆ ಸರ್ಕಾರ ತಂದಿರುವ ಕಾನೂನುಗಳ ಬಗ್ಗೆ  ಅರಿವು ಮೂಡಿಸಬೇಕು.  2050ರ ವೇಳೆಗೆ ಜನಸಂಖ್ಯೆ ಸಾವಿರ ಕೋಟಿ ತಲುಪಿದರೂ ಅಚ್ಚರಿ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು. 

ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಟಾನ ಅಧಿಕಾರಿ ಡಾ.ಉಮೇಶ್‌ ಮಾತನಾಡಿ, ಜುಲೈ 11 ರಿಂದ ಒಂದು ತಿಂಗಳು ಜನಸಂಖ್ಯೆ ಹೆಚ್ಚಳದಿಂದ ಆಗುವ ಪರಿಣಾಮಗಳ ಕುರಿತು ಅರಿವು ಮೂಡಿಸಲಾಗುತ್ತದೆ. ದೇಶದ ಒಟ್ಟು ಜನಸಂಖ್ಯೆ 139 ಕೋಟಿ ಇದ್ದು, 2030 ರ ವೇಳೆಗೆ ಚೀನಾವನ್ನು  ಹಿಂದಿಕ್ಕಬಹುದು ಎಂದರು.

ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು  ನಗರದ ಪ್ರಮುಖ ರಸ್ತೆಗಳಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತು ಜಾಥಾ ನಡೆಸಿದರು. ಸಹಾಯಕ ಪ್ರಾಧ್ಯಾಪಕ ಮುರುಳೀಧರ್‌ ಜನಸಂಖ್ಯೆ ಕುರಿತು ಉಪನ್ಯಾಸ ನೀಡಿದರು.   ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಂಕರ್‌, ಡಾ.ಸುರೇಶ್‌, ವಾರ್ತಾ ಮತ್ತು  ಪ್ರಚಾರ ಇಲಾಖೆಯ ಸಹಾಯಕ ನಿರ್ದೇಶಕ ವಿನೋದ್‌ ಚಂದ್ರ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಮಂಜುನಾಥ್, ಮಂಜುಳಾ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT