ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿನಲ್ಲಿ ರಾತ್ರಿಯಿಡೀ ನಡೆದ ಪೂಜೆ

Last Updated 12 ಜುಲೈ 2017, 7:08 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮ ವಲಯದಲ್ಲಿರುವ ಕಲ್ಕೆರೆ ವಲಯದಲ್ಲಿರುವ ಐನೂರ ಮಾರಮ್ಮ ದೇವಿಯ ಪೂಜಾ ಕಾರ್ಯಕ್ರಮ ಮತ್ತು ಕೊಂಡೋತ್ಸವ ಅರಣ್ಯ ಇಲಾಖೆ ಅಧಿಕಾರಿಗಳ ವಿರೋಧದ ನಡುವೆಯೂ ರಾತ್ರಿಯಿಡೀ ನಡೆಯಿತು.

ಕಾಡಿನೊಳಗಿರುವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಸೋಮವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಅವಕಾಶ ನಿರಾಕರಿಸಿದ್ದರು. ಇದರಿಂದ ಕುಪಿತರಾದ ಭಕ್ತರು ಚೆಕ್‌ಪೋಸ್ಟ್‌ ಗೇಟ್‌ ಮುರಿದು ಕಾಡಿನೊಳಗೆ ಪ್ರವೇಶಿಸಿದ್ದರು.

ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗಿನ ಜಾವದವರೆಗೆ ಕಾಡಿನಲ್ಲಿಯೇ ತಂಗಿದ್ದ ಭಕ್ತರು, ದೇವಿಯ ಪೂಜೆ ಮತ್ತು ಕೊಂಡೋತ್ಸವವನ್ನು ಆಚರಿಸಿದರು. ರಾತ್ರಿ ಹತ್ತಕ್ಕೆ ಶುರುವಾದ ಪೂಜೆ ಮಧ್ಯರಾತ್ರಿಯವರೆಗೆ ನಡೆಯಿತು.

ತಮಟೆ ಡೋಲುಗಳನ್ನು ಬಾರಿಸಿ ದೇವಿಗೆ ಘೋಷಗಳನ್ನು ಕೂಗಿ ಸಂಭ್ರಮಾಚರಣೆ ಮಾಡಿದರು. ಮಂಗಳವಾರ ಬೆಳಗ್ಗೆ 6ಗಂಟೆಗೆ ದೇವಿಯ ಉತ್ಸವ ಮೂರ್ತಿಯನ್ನು ಕಾಡಿನಲ್ಲಿಯೇ ಮೆರವಣಿಗೆ ಮಾಡಿ ನಂತರ ಕೊಂಡ ಹಾಯಲಾಯಿತು. ದೇವಿಗೆ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ನಂತರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಾಡಿನಿಂದ ಹೊರಗೆ ಬರತೊಡಗಿದರು.

ಕಾಡಿನಲ್ಲಿಯೇ ಕಟ್ಟಿಗೆ ಕಡಿದು ಕೊಂಡ ಸಿದ್ಧಪಡಿಸಲಾಯಿತು. ನೆರೆದಿದ್ದ ಸಾವಿರಾರು ಜನರಿಗೆ ಅಲ್ಲಿಯೇ ಆಹಾರ ತಯಾರಿಸಿ ಹಂಚಲಾಯಿತು. ಅರಣ್ಯಾಧಿಕಾರಿಗಳು ಸ್ಥಳದಲ್ಲಿಯೇ ಇದ್ದರೂ ಅಸಹಾಯಕರಾಗಿದ್ದರು.

ದೇವಸ್ಥಾನದ ಆವರಣವನ್ನು ಸ್ವಚ್ಛ ಮಾಡಿದ ನಂತರ ಭಕ್ತರನ್ನು ಕಾಡಿನಿಂದ ಹೊರಕಳುಹಿಸಲಾಯಿತು ಎಂದು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ತಿಳಿಸಿದರು.
ಭಕ್ತರು ಪ್ರವೇಶಿಸದಂತೆ ತಡೆಯ ಬೇಕು ಎಂಬ ಉದ್ದೇಶದಿಂದ ಕಾಡಿನೊಳಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ದೊಡ್ಡ ಗುಂಡಿ ತೆಗೆಯಲಾಗಿತ್ತು. ಆದರೆ ಭಕ್ತರು ಗುಂಡಿಯನ್ನು ಕಟ್ಟಿಗೆಗಳಿಂದ ಮುಚ್ಚಿ ಕಾಡಿನೊಳಗೆ ವಾಹನ ಚಲಾಯಿಸಿದ್ದರು.

ಪ್ರಕರಣ ದಾಖಲಿಸಲು ಚಿಂತನೆ: ಕಾನೂನಿಗೆ ವಿರುದ್ಧವಾಗಿ ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿರುವ ಜನರ ವಿರುದ್ಧ ಪ್ರಕರಣ ದಾಖಲಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಸೋಮವಾರದಿಂದ ಮಂಗಳವಾರದವರೆಗೆ ನಡೆದ ಎಲ್ಲ ಘಟನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಿಡಿಯೊದಲ್ಲಿ ದಾಖಲಿಸಿಕೊಂಡಿದ್ದಾರೆ.

ಕ್ರಮ ತೆಗೆದುಕೊಳ್ಳುವ ಕುರಿತು ಕಲ್ಕೆರೆ ವಲಯದ ವಲಯ ಅರಣ್ಯಾಧಿಕಾರಿ ಹರೀಶ್‌ ಕುಮಾರ್ ಅವರು ಸರ್ಕಲ್ ಇನ್‌ಸ್ಪೆಕ್ಟರ್ ಕೃಷ್ಣಪ್ಪ ಮತ್ತು ತಹಶೀಲ್ದಾರ್ ಸಿದ್ದು ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ವಿಡಿಯೊ ಚಿತ್ರೀಕರಣ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮ ವಲಯದಲ್ಲಿರುವ ಐನೋರ ಮಾರಮ್ಮ ದೇವಿ ದೇವಸ್ಥಾನಕ್ಕೆ ತೆರಳಲು ಚೆಕ್‌ಪೋಸ್ಟ್‌ ಮತ್ತು ಬ್ಯಾರಿಕೇಡ್‌ ಮುರಿದು ನುಗ್ಗಿದ್ದವರ ವಿರುದ್ಧ ಪ್ರಕರಣ ದಾಖಲಾಗಿದೆ. ತಾಲ್ಲೂಕಿನ ಮದ್ದೂರು ವಲಯದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.  ಘಟನೆಯ ದೃಶ್ಯಾವಳಿ ಆಧರಿಸಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT