ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಿ ಅಂಶದಲ್ಲಿ ಏರುಪೇರು:ಅಸಮಾಧಾನ

ಶಾಲೆಯಿಂದ ಹೊರಗುಳಿದ ಮಕ್ಕಳು: ಡಿಡಿಪಿಐಗೆ ಕೃಪಾ ಆಳ್ವಾ ತರಾಟೆ, ಅಧಿಕಾರಿಗಳ ವಿರುದ್ಧ ಗರಂ
Last Updated 13 ಜುಲೈ 2017, 11:28 IST
ಅಕ್ಷರ ಗಾತ್ರ

ಬಳ್ಳಾರಿ: ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ 24480 ಬಾಲಕಿಯರು ಶಾಲೆಯಿಂದ ಹೊರಗಿದ್ದಾರೆ. ಆದರೆ ನಿಮ್ಮ ಇಲಾಖೆ ಪ್ರಕಾರ ಕೇವಲ 817 ಮಕ್ಕಳು ಹೊರಗಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಒಂದು ಮಗು ಶಾಲೆಯಿಂದ ಹೊರಗೆ ಕಂಡರೂ ನಿಮ್ಮ ಮೇಲೆ ಕ್ರಮ ಕೈಗೊಳ್ಳ ಬೇಕಾಗುತ್ತದೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ ಅವರು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಶ್ರೀಧರನ್‌ ಅವರಿಗೆ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸರ್ಕಾರಿ ಶಾಲೆಗಳ ಬಲವರ್ಧನ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಸಭೆಯ ಆರಂಭದಲ್ಲೇ ಕೃಪಾ ಅವರು ಅಂಕಿ–ಅಂಶದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಅಂಕಿ–ಅಂಶದಲ್ಲಿ ಇಷ್ಟೊಂದು ಅಂತರ ಹೇಗೆ ಸಾಧ್ಯ? ನೀವು ಕೊಟ್ಟಿರುವ ಅಂಕಿ ಅಂಶ ಸರಿಯಿಲ್ಲ. ಮಕ್ಕಳಿಗೆ ವಂಚನೆ ಮಾಡಬೇಡಿ. ನಿಮ್ಮ ಆತ್ಮಸಾಕ್ಷಿಯನ್ನು ಒಮ್ಮೆ ಮುಟ್ಟಿ ನೋಡಿಕೊಳ್ಳಿ’ ಎಂದರು. ‘ಅಧಿಕಾರಿಗಳು ಸಮೀಕ್ಷೆ ನಡೆಸಿದ ಬಳಿಕವೇ ಈ ಅಂಕಿ–ಅಂಶವನ್ನು ಸಿದ್ಧಪಡಿಸಲಾಗಿದೆ’ ಎಂಬ ಡಿಡಿಪಿಐ ಸ್ಪಷ್ಟನೆಯನ್ನು ಕೃಪಾ ಅವರು ಒಪ್ಪಲಿಲ್ಲ.

ಮರು ಸಮೀಕ್ಷೆ: ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಡಾ.ಕೆ.ವಿ.ರಾಜೇಂದ್ರ, ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಮರುಸಮೀಕ್ಷೆ ನಡೆಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಶೌಚಾಲಯ: ಜಿಲ್ಲೆಯ ಒಟ್ಟು 1544 ಶಾಲೆಗಳ ಪೈಕಿ ಎಲ್ಲ ಶಾಲೆಗಳಲ್ಲಿ ಬಾಲಕಿಯರ ಶೌಚಾಲಯಗಳಿವೆ. 1541 ಶಾಲೆಗಳಲ್ಲಿ ಬಾಲಕರ ಶೌಚಾಲಯಗಳಿವೆ ಎಂದು ಡಿಡಿಪಿಐ ಮಾಹಿತಿ ನೀಡಿದರು.

‘ಅವುಗಳ ಪೈಕಿ ಎಷ್ಟು ಬಳಕೆ ಯಾಗುತ್ತಿವೆ. ನೀರು, ಬಾಗಿಲು ಇರುವ ಮತ್ತು ಇಲ್ಲದ ಶೌಚಾಲಯಗಳೆಷ್ಟು’ ಎಂಬ ಅಧ್ಯಕ್ಷೆಯ ಪ್ರಶ್ನೆಗೆ ಡಿಡಿಪಿಐ ಸಮರ್ಪಕ ಉತ್ತರ ನೀಡಲು ಆಗಲಿಲ್ಲ.

ಸಭೆಗೆ ಬರುವ ಮುನ್ನ ರೇಡಿಯೋ ಪಾರ್ಕ್‌ನಲ್ಲಿರುವ ಸರ್ಕಾರಿ ಶಾಲೆ, ಗಡಂಗ್‌ ಬೀದಿಯಲ್ಲಿರುವ ಉರ್ದು ಶಾಲೆಗೆ ಭೇಟಿ ನೀಡಿದ ವೇಳೆ, ಶೌಚಾ ಲಯಗಳೇ ಇಲ್ಲದಿರುವುದು ಕಂಡು ಬಂತು ಎಂದು ಆಯೋಗದ ಸದಸ್ಯೆ ಅಪರ್ಣಾ ಎಂ ಕೊಳ್ಳ ಗಮನ ಸೆಳೆದರು.

ಬೀಗ ಏಕೆ?: ಶಿಕ್ಷಕರು ಮಾತ್ರ ಬಳಸಬೇಕು ಎಂಬ ಕಾರಣದಿಂದ ಶೌಚಾಲಯಗಳಿಗೆ ಬೀಗ ಹಾಕಿದರೆ, ಮಕ್ಕಳು ಎಲ್ಲಿಗೆ ಹೋಗಬೇಕು ಎಂಬ ಅಧ್ಯಕ್ಷೆಯ ಪ್ರಶ್ನೆಗೂ ಉತ್ತರ ದೊರಕಲಿಲ್ಲ. ಡಿಡಿಪಿಐ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಗಳು, ಬ್ಲಾಕ್‌ ಮತ್ತು ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳು ಪ್ರತಿದಿನ ಎಷ್ಟು ಶಾಲೆಗಳಿಗೆ ಭೇಟಿ ನೀಡುತ್ತೀರಿ ಎಂಬ ಪ್ರಶ್ನೆಯೂ ನಿರುತ್ತರವಾಯಿತು.

ನಲ್ಲಿ ನೀರು:  ಕುಡಿಯುವ ನೀರಿನ ಸೌಕರ್ಯದ ಕುರಿತು ಮಾಹಿತಿ ನೀಡುವ ವೇಳೆ ಡಿಡಿಪಿಐ ಅವರು, ‘ಎಲ್ಲ ಶಾಲೆ ಗಳಿಗೂನಲ್ಲಿ ಸಂಪರ್ಕವಿದೆ’ ಎಂದು ತಿಳಿಸಿದರು. ಅದರಿಂದ ಅಸಮಾಧಾನ ಗೊಂಡ ಅಧ್ಯಕ್ಷೆ, ‘ಅಧಿಕಾರಿಗಳು ಮಾತ್ರ ಬಾಟಲ್‌ ನೀರು ಕುಡಿಯುತ್ತೀರಿ. ಸರ್ಕಾರಿ ಶಾಲೆ ಮಕ್ಕಳಿಗೆ ಮಾತ್ರ ಶುದ್ಧವಲ್ಲದ ನಲ್ಲಿ ನೀರು ಕುಡಿಸುವುದು ಸರಿಯೇ’ ಎಂದು ಪ್ರಶ್ನಿಸಿದರು.

‘ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ದಾನಿಗಳು, ಯುವಕ ಸಂಘಗಳು, ಮಹಿಳಾಸಂಘಗಳಿಂದ ನೆರವು ಪಡೆದು ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲು ಕ್ರಮ ಕೈಗೊಳ್ಳಿ’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಆಯೋಗದ ಸದಸ್ಯೆ ವನಿತಾ ಎಂ.ತೊರ್ವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ.ಎಸ್‌.ಕಲಾದಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT