ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

Last Updated 14 ಜುಲೈ 2017, 5:25 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಅನುದಾನ ಬಿಡುಗಡೆ ಮತ್ತು ಕುಡಿಯುವ ನೀರು ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ನಗರಸಭೆ ಆವರಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಶಾಸಕ ಸಿ.ಟಿ.ರವಿ ವಿರುದ್ಧ ಘೋಷಣೆ ಕೂಗಿದರು.

ಕಲ್ದೊಡ್ಡಿ ವಾರ್ಡ್‌ನ ನಗರಸಭೆ ಸದಸ್ಯೆ ಸುರೇಖಾ ಮಾತನಾಡಿ, ‘ಟ್ಯಾಂಕ ರ್‌ ಮೂಲಕ ಕಾಟಾಚಾರಕ್ಕೆ ಒಂದು ಬೀದಿಯಲ್ಲಿ ಒಂದೇ ಮನೆಗೆ ನೀರು ವಿತರಿಸಲಾಗುತ್ತಿದೆ. ಬೇರೆ ಮನೆಗಳಿಗೆ ನೀರು ವಿತರಿಸುತ್ತಿಲ್ಲ. ವಾರಕ್ಕೊಮ್ಮೆ ಯಾದರೂ ಎಲ್ಲ ಮನೆಗಳಿಗೆ ನೀರು ವಿತರಿಸಬೇಕು’ ಎಂದರು.

‘ಫಿಲ್ಟರ್ ಬೆಡ್‌ಗೆ ನಗರಸಭೆ ಸದಸ್ಯರು ಪ್ರವೇಶಿಸಬಾರದು ಎಂಬ ಕಾನೂನಿದೆ. ನಗರಸಭೆ ಬಿಜೆಪಿ ಸದಸ್ಯರೊಬ್ಬರು ಫಿಲ್ಟರ್ ಬೆಡ್‌ ಒಳಗೆ ಪ್ರವೇಶಿಸಿ ತಮ್ಮ ವಾರ್ಡಿಗೆ ನೀರು ತಿರುಗಿಸಿಕೊಳ್ಳುತ್ತಾರೆ. ಇದರಿಂದ ಬೇರೆ ವಾರ್ಡ್‌ಗಳಿಗೆ ನೀರು ಸಿಗದಂತಾಗಿದೆ. ಈ ಸದಸ್ಯರ ವಿರುದ್ಧ ವಿರುದ್ಧ ಕ್ರಿಮಿನಲ್‌ ಪ್ರಕರಣದ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

‘ಕ್ರೀಡಾಂಗಣ ಸ್ವಚ್ಛ ಮಾಡಲು ಜೆಸಿಬಿ ಕಳುಹಿಸುತ್ತಾರೆ. ವಾರ್ಡ್ ಚರಂಡಿ ಸ್ವಚ್ಛಗೊಳಿಸಲು ಜೆಸಿಬಿ ಕೇಳಿದರೆ ಇಂದಾವರಕ್ಕೆ ಕಸದ ಕೆಲಸಕ್ಕೆ ಕಳುಹಿಸಿದೆ ಎಂದು ಸಬೂಬು ನೀಡುತ್ತಾರೆ. ನಗರಸಭೆ ಜೆಸಿಬಿಯನ್ನು ಖಾಸಗಿ ಕಾಮಗಾರಿಗಳಿಗೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬಿಜೆಪಿ ಸದಸ್ಯರ ವಾರ್ಡ್‌ಗಳಿಗೆ ₹ 10 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಕಾರ್ಮಿಕರೆ ವಾಸಿಸುವ ಕಲ್ದೊಡ್ಡಿ ವಾರ್ಡ್‌ಗೆ ₹ 1 ಲಕ್ಷ ಅನುದಾನ ನೀಡಾಗಿದೆ.  ವಾರ್ಡ್‌ನಲ್ಲಿ  ಬೀದಿ ದೀಪಗಳಿಲ್ಲ. ಹಾವು ಕಚ್ಚಿ ಎರಡು ಮಕ್ಕಳು ಮೃತಪಟ್ಟಿದ್ದಾರೆ’ ಎಂದರು.

ನಗರಸಭೆ ಸದಸ್ಯ ರೊಬೆನ್‌ ಮೊಸೆಸ್ ಮಾತನಾಡಿ, ‘ಗೌರಿ ಕಾಲುವೆ ವಾರ್ಡ್‌ನ ಪಾರ್ಕ್ ಅಭಿವೃದ್ಧಿಗೆ ₹ 5 ಲಕ್ಷ ಅನುದಾನ ಮಂಜೂರಾಗಿದೆ. ಆದರೆ, ಹಣ ಬಿಡುಗಡೆಯಾಗಿಲ್ಲ. ಕಾಮಗಾರಿ ಮತ್ತು ಎಸ್ಎಫ್‌ಸಿ ಅನುದಾನ ಬಿಡು ಗಡೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಸದಸ್ಯ ಹಿರೇಮಗಳೂರು ಪುಟ್ಟ ಸ್ವಾಮಿ ಮಾತನಾಡಿ, ‘ಹಿರೇಮಗಳೂರು ವಾರ್ಡ್‌ಗೆ ಎಸ್‌ಎಫ್‌ಸಿ, 14 ನೇ ಹಣಕಾಸು ಯೋಜನೆ ಸೇರಿದಂತೆ ಯಾವ ಯೋಜನೆಯಲ್ಲಿಯೂ ಅನುದಾನ ನೀಡಿಲ್ಲ. ಕಾಂಗ್ರೆಸ್‌ ಸದಸ್ಯರ ವಾರ್ಡ್‌ ಗಳಿಗೆ ಅನುದಾನ ಬಿಡುಗಡೆಯಾಗದೆ ಕೆಲಸಗಳು ಆಗುತ್ತಿಲ್ಲ. ನಗರೋತ್ಥಾನ ಯೋಜನೆಯಡಿ ವಿಶೇಷ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸ ಕರು ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದರು.

ವಿಧಾನಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಡಿ.ಎಲ್. ವಿಜಯಕುಮಾರ್, ಬ್ಲಾಕ್‌ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್‌.ಪಿ.ಮಂಜೇಗೌಡ, ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಶಿವಕುಮಾರ್ ಇದ್ದರು.

ಅಮರನಾಥ ಯಾತ್ರಿಕರಿಗೆ ರಕ್ಷಣೆ ನೀಡಿ
ಚಿಕ್ಕಮಗಳೂರು: ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರು ಈಚೆಗೆ ನಡೆಸಿದ ದಾಳಿ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.ನಗರದ ಆಜಾದ್‌ ಪಾರ್ಕ್‌ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್‌ ಮಾತನಾಡಿ, ಪ್ರಧಾನಿ ಮೋದಿ ಮೃದು ಧೋರಣೆಯಿಂದ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಅಮರನಾಥ ಯಾತ್ರಿಕರಿಗೆ ರಕ್ಷಣೆ ನೀಡಬೇಕು. ಸೈನಿಕರಿಗೆ ಆಧುನಿಕ ಶಸ್ತ್ರಾಸ್ತ್ರ ಒದಗಿಸಬೇಕು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಹನೀಫ್ ಮಾತನಾಡಿ, ಯಾತ್ರಿಗಳ ಮೇಲಿನ ದಾಳಿಗೆ ಭದ್ರತಾ ವೈಫಲ್ಯ ಕಾರಣವಾಗಿದೆ. ಜಮ್ಮು ಕಾಶ್ಮೀರ ಹಾಗೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.

ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ಗುಪ್ತಚರ ಇಲಾಖೆಯ ಮಾಹಿತಿ ಇದ್ದರೂ ದಾಳಿ ತಡೆಯವಲ್ಲಿ ವಿಫಲವಾಗಿರುವುದು ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಮುಖಂಡ ಎಂ.ಎಲ್.ಮೂರ್ತಿ, ಪಂಚಾಯತ್‌ರಾಜ್ ಸಂಘಟನೆಯ ಸಂಚಾಲಕ ಬಿ.ಎಂ. ಸಂದೀಪ್, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ನಿಸಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT