ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಡುತೋಪು ಹಗರಣ: ನಿಷ್ಪಕ್ಷಪಾತ ತನಿಖೆಗೆ ಒತ್ತಾಯ

Last Updated 14 ಜುಲೈ 2017, 6:04 IST
ಅಕ್ಷರ ಗಾತ್ರ

ಸಾಗರ: ‘ತಾಲ್ಲೂಕಿನ ಬಹುತೇಕ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಖುದ್ದು ಅಧ್ಯಕ್ಷರೇ ಕೆಲವು ಇಲಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ, ಕ್ಷೇತ್ರದ ಶಾಸಕರೂ ಆಗಿರುವ ಕಾಗೋಡು ತಿಮ್ಮಪ್ಪನವರ ಮೌನವೇ ಭ್ರಷ್ಟಾಚಾರ ಹೆಚ್ಚಲು ಕಾರಣವಾಗಿದೆ. ತಾಲ್ಲೂಕು ಆಡಳಿತ ಸಹ ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ವಿಫಲವಾ ಗಿದೆ’ ಎಂದು ಬಿಜೆಪಿ ಸದಸ್ಯ ಕಲಸೆ ಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸಾಮರ್ಥ್ಯಸೌಧದಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಮೆಸ್ಕಾಂ ಕಾರ್ಯನಿರ್ವಹಣೆಗೆ ಸಂಬಂಧಪಟ್ಟಂತಹ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಿಮ್ಮ ಆಡಳಿತಾವಧಿಯಲ್ಲಿ ಹಿಂದಿನ ಬಾರಿ ಅರಣ್ಯ ಇಲಾಖೆಗೆ ಸಂಬಂಧ ಪಟ್ಟಂತೆ ಸಭೆ ಕರೆದಾಗ ಅರಣ್ಯಾಧಿ ಕಾರಿಗಳು ಹಾಜರಾಗಲಿಲ್ಲ. ಈಗ ಮೆಸ್ಕಾಂನ ಕಾರ್ಯಪಾಲಕ ಎಂಜಿನಿ ಯರ್ ಹಾಜರಾಗಿಲ್ಲ. ಇದರಿಂದ ತಾಲ್ಲೂಕು ಪಂಚಾಯ್ತಿಗೆ ಅವಮಾನ ವಾಗುತ್ತಿದೆ’ ಎಂದು ದೂರಿದರು.

ಬಿಜೆಪಿ ಸದಸ್ಯೆ ಸುವರ್ಣ ಟೀಕಪ್ಪ ಮಾತನಾಡಿ, ‘ಅರಣ್ಯ ಇಲಾಖೆಯಲ್ಲಿ ನೆಡುತೋಪು ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ನೀವು ನಮ್ಮನ್ನೆಲ್ಲಾ ತನಿಖೆಗೆ ಕರೆದುಕೊಂಡು ಹೋಗಿದ್ದೀರಿ. ಭ್ರಷ್ಟಾಚಾರ ನಡೆದಿಲ್ಲ. ಅರಣ್ಯ ಇಲಾಖೆಯವರು ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಗಿಡ ನೆಟ್ಟಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿಯ ನಿಮ್ಮದೇ ಪಕ್ಷದ ಸದಸ್ಯರು ಹೇಳುತ್ತಿದ್ದಾರೆ. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು ಯಾವುದೋ ವೈಯಕ್ತಿಕ ಕಾರಣಕ್ಕೆ ತನಿಖೆ ನಡೆಸುತ್ತಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಸಭೆಗೆ ಸ್ಪಷ್ಟಪಡಿಸಿ’ ಎಂದು ಒತ್ತಾಯಿಸಿದರು.

‘ನಿಮ್ಮ ಪಕ್ಷದಲ್ಲೇ ಗೊಂದಲ ಇರಿಸಿಕೊಂಡು ತನಿಖೆಗೆ ಕರೆದುಕೊಂಡು ಹೋಗಿ ನಮ್ಮನ್ನು ಬಲಿಪಶು ಮಾಡುವ ಪ್ರಯತ್ನ ಸರಿಯಲ್ಲ. ಪ್ರತಿಪಕ್ಷದವರನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಉಪಯೋಗಿಸಿ ಕೊಳ್ಳುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಹಿಂದೆ ಅರಣ್ಯ ಇಲಾಖೆ ನೌಕರನೊಬ್ಬನ ಮೇಲೆ ಹಲ್ಲೆ ನಡೆದಾಗ ಮೊದಲ ದಿನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ ನೀವು, ಎರಡನೇ ದಿನದ ಪ್ರತಿಭಟನೆ ಯಲ್ಲಿ ಪಾಲ್ಗೊಳ್ಳದೆ ಅಂತರ ಕಾಯ್ದು ಕೊಂಡಿರಿ. ನಿಮ್ಮ ಈ ನಡೆ ಅನುಮಾ ನಾಸ್ಪದವಾಗಿದೆ. ಅರಣ್ಯ ಇಲಾಖೆಯಲ್ಲಿ ನಡೆದಿರುವ ಹಗರಣವನ್ನು ಲೋಕಾಯುಕ್ತ ಅಥವಾ ಎಸಿಬಿ ತನಿಖೆಗೆ ವಹಿಸಿ’ ಎಂದು ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ ಆಗ್ರಹಿಸಿದರು.

ಸಚಿವರು ನಿಷ್ಕ್ರಿಯರಾಗಿದ್ದಾರೆ ಎಂದು ಬಿಜೆಪಿ ಸದಸ್ಯರು ಆರೋಪ ಮಾಡಿದಾಗ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದಸ್ಯೆ ಜ್ಯೋತಿ ಮಾತನಾಡಿ, ‘ನಿಮ್ಮ ಸಂಸದರು ಎಷ್ಟು ಅನುದಾನವನ್ನು ಕ್ಷೇತ್ರಕ್ಕೆ ನೀಡಿದ್ದಾರೆ. ಎಷ್ಟು ಸಭೆಗಳನ್ನು ನಡೆಸಿದ್ದಾರೆ, ಅಧಿಕಾರಿಗಳ ಸಭೆಯನ್ನು ತಾಲ್ಲೂಕು ವ್ಯಾಪ್ತಿಯಲ್ಲಿ ಏಕೆ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ‘ಅರಣ್ಯ ಇಲಾಖೆಯ ನೆಡುತೋಪು ಹಗರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದ್ದು, ಶ್ರೀಧರನಾಯ್ಕ್ ಎಂಬುವವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದಾರೆ. ತನಿಖೆಗೆ ಹೋದ ಕಡೆಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದು ಯಾವುದೇ ಒಬ್ಬ ಅಧಿಕಾರಿ ವಿರುದ್ಧದ ತನಿಖೆಯಲ್ಲ. ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಚಿವ ಕಾಗೋಡು ತಿಮ್ಮಪ್ಪನವರು ಬಂದ ಮೇಲೆ ಸಹ ನಿಯೋಗದೊಂದಿಗೆ ತೆರಳಿ ನಡೆದಿರುವ ಅವ್ಯವಹಾರವನ್ನು ಅವರಿಗೆ ಮನವರಿಕೆ ಮಾಡಿ, ತನಿಖೆಗೆ ಒತ್ತಾಯಿಸೋಣ’ ಎಂದರು.

ಮೆಸ್ಕಾಂನಲ್ಲಿ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಸ್ಥಳೀಯ ರೈತರಿಂದ ₹ 50 ರಿಂದ ₹ 70ಸಾವಿರದವರೆಗೆ ಪಡೆಯಲಾಗುತ್ತಿದೆ. ಇದರಲ್ಲಿ ಭಾಗಿಯಾಗಿರುವವರು ಅಧಿಕಾರಿಗಳೋ, ಗುತ್ತಿಗೆದಾರರೋ ಎನ್ನುವ ಸಮಗ್ರ ತನಿಖೆ ನಡೆಸಬೇಕು ಎಂದು ಸದಸ್ಯೆ ಜ್ಯೋತಿ ಒತ್ತಾಯಿಸಿದರು. ಸದಸ್ಯೆ ಪ್ರಭಾವತಿ ಚಂದ್ರಕಾಂತ್ ಅವರೂ ಇದಕ್ಕೆ ದನಿಗೂಡಿಸಿದರು.

ಕೆಲವರು ಶಿಕಾರಿಪುರದಿಂದ ಹಳೇ ಟ್ರಾನ್ಸ್‌ಫಾರ್ಮರ್‌ಗಳನ್ನು ಖರೀದಿಸಿ ತಂದು ತಮ್ಮ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ ಎನ್ನುವ ದೂರುಗಳಿವೆ. ತಕ್ಷಣ ಇಲಾಖೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಲ್ಲಿಕಾರ್ಜುನ ಹಕ್ರೆ ಸೂಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಕೆ.ಎಚ್.ಪರಶುರಾಮ್, ಪ್ರಭಾರ ಕಾರ್ಯನಿರ್ವಾಹಣಾಧಿಕಾರಿ ಡಾ. ಕಲ್ಲಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT