ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಬವಣೆ ಪರಿಹರಿಸಲು ಸದಸ್ಯರ ಆಗ್ರಹ

Last Updated 14 ಜುಲೈ 2017, 6:09 IST
ಅಕ್ಷರ ಗಾತ್ರ

ಭದ್ರಾವತಿ: ಶುದ್ಧ ನೀರಿನ ಘಟಕವನ್ನು ಬೇಗ ಪ್ರಾರಂಭಿಸಬೇಕು ಎಂಬ ಒತ್ತಾಯ ಗುರುವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಕೇಳಿಬಂತು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಗೀತಾ ಅವರ ಅಧ್ಯಕ್ಷತೆಯಲ್ಲಿ ಆರಂಭವಾದ ಸಭೆಯಲ್ಲಿ ನೀರಾವರಿ ಇಲಾಖೆ ಎಂಜಿನಿಯರ್ ಕುಡಿಯುವ ನೀರಿನ ಯೋಜನೆ ಕುರಿತು ಮಾಹಿತಿ ನೀಡಲು ಮುಂದಾದರು. ಆಗ ಸದಸ್ಯರು ಹಲವು ಪ್ರಶ್ನೆಗಳನ್ನು ಕೇಳಿ, ಅಧಿಕಾರಿಗಳನ್ನು ತಬ್ಬಿಬ್ಬು ಮಾಡಿದರು.

‘ಸೋಮವಾರ ಕುಡಿಯುವ ನೀರು ಘಟಕ ಹಾಗೂ ಸಂಪರ್ಕ ನಲ್ಲಿಗಳ ಉದ್ಘಾಟನೆ ಮಾಡುತ್ತೇವೆ ಎನ್ನುತ್ತೀರಿ. ಇಲ್ಲಿಯ ತನಕ ಅದರ ಪೂರೈಕೆ ಕುರಿತಾಗಿ ಪರೀಕ್ಷೆಯನ್ನೇ ನಡೆಸಿಲ್ಲ. ಹೇಗೆ ಉದ್ಘಾಟಿಸುವಿರಿ’ ಎಂದು ಸದಸ್ಯ ಕುಮುರಿ ಚಂದ್ರಣ್ಣ ಪ್ರಶ್ನಿಸಿದರು.

ಈಗಾಗಲೇ ಸಬ್ ಟ್ಯಾಂಕ್ ಕನೆಕ್ಷನ್ ಪೂರ್ಣಗೊಂಡಿದೆ. ನೀರಿನ ಹರಿವು ಸರಿಯಿದೆ ಎಂಬ ಮಾಹಿತಿ ಇದೆ. ಇನ್ನೆರಡು ದಿನಗಳಲ್ಲಿ ನೀರು ತುಂಬಲಿದೆ ಎಂದು ಜಯಣ್ಣ ಸಮಜಾಯಿಷಿ ನೀಡಲು ಮುಂದಾದರು. ಸದಸ್ಯರು ಅವರಿಗೆ ಹಲವು ಪ್ರಶ್ನೆಗಳನ್ನು ಹಾಕಿ ಇಕ್ಕಟ್ಟಿಗೆ ಸಿಲುಕಿಸಿದರು.

ಅರಿಶಿಣಘಟ್ಟ ತಾಂಡದಲ್ಲಿ ಪೈಪ್‌ಲೈನ್ ಹಾಕಿಲ್ಲ ಎಂದು ಸದಸ್ಯ ದಿನೇಶ್ ತಕರಾರು ತೆಗೆದರು. ಸೈದರಕಲ್ಲಹಳ್ಳಿ, ಸನ್ಯಾಸಿಕೋಡಮಗ್ಗೆ ಪೈಪ್‌ಲೈನ್ ಪೂರ್ಣ ಆಗಿಲ್ಲ ಎಂದು ಸದಸ್ಯ ರುದ್ರಪ್ಪ ಆಕ್ಷೇಪ ವ್ಯಕ್ತಪಡಿಸಿದರು.

‘ಬೇಸಿಗೆಯಲ್ಲಿ ನೀರು ಕೊಡಲಿಲ್ಲ, ಮಳೆಗಾಲದಲ್ಲಾದರೂ ನೀರು ಕೋಡುತ್ತೀರಾ’ ಎಂದು ಸದಸ್ಯ ಮಂಜುನಾಥ ವ್ಯಂಗ್ಯವಾಡಿದರು.  ಮಲ್ಲಾಪುರ ಶಾಲೆಗೆ ಕುಡಿಯುವ ನೀರಿಲ್ಲ. ಬೇಗ ಅದರ ವ್ಯವಸ್ಥೆ ಮಾಡಿ ಎಂದು ಸದಸ್ಯೆ ಮಂಜುಳಾ ಒತ್ತಾಯಿಸಿದರು.

ಬಸವನಗುಡಿ, ಅಂತರಗಂಗೆ ಭಾಗಕ್ಕೆ ಸಂಪರ್ಕ ಬೇಕು ಎಂದು ಸದಸ್ಯ ಲಕ್ಷ್ಮೀದೇವಿ, ಸದಸ್ಯೆ ಆಶಾ, ಯಶೋದಮ್ಮ, ಪ್ರೇಮಕುಮಾರ್ ಆಗ್ರಹಿಸಿದರು. ಈಗ ದಿನದ 24 ಗಂಟೆ ವಿದ್ಯುತ್ ಪೂರೈಕೆಗೆ ಅವಕಾಶ ಸಿಕ್ಕಿರುವುದರಿಂದ ಯಾವುದೇ ತೊಂದರೆಯಿಲ್ಲದೆ ನೀರು ಒದಗಿಸುವುದಾಗಿ ಅಧಿಕಾರಿಗಳಾದ ನಾರಪ್ಪ, ಅಣ್ಣಪ್ಪ ಹಾಗೂ ಜಯಣ್ಣ ಭರವಸೆ ನೀಡಿದರು.

ಅರಕೆರೆ ಗ್ರಾಮದ ಗೋದಾಮಿನ ಜಾಗಕ್ಕೆ ಒಪ್ಪಿಗೆ, ಹೊಳೆಹೊನ್ನೂರು ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಜಾಗ ಕೋರಿ ಬಂದಿದ್ದ ಪ್ರಸ್ತಾವ ಹಾಗೂ ಕಂಬದಾಳ್ ಹೊಸೂರು ಪಂಚಾಯ್ತಿ ವ್ಯಾಪ್ತಿಯ ಹೆಚ್ಚುವರಿ ಜಾಗದ ಖಾತೆ ಆಗಬೇಕೆಂಬ ಬೇಡಿಕೆಗೆ ಸಭೆ ಒಪ್ಪಿಗೆ ನೀಡಿತು.ಅಧಿಕಾರಿಗಳಾದ ಡಾ. ಗುಡದಪ್ಪ ಕಸಬಿ, ಸಂದೀಪ್, ತಮ್ಮಣ್ಣಗೌಡ, ರಘುನಾಥ, ಟಿ. ಶಂಕರಪ್ಪ ತಂತಮ್ಮ ಇಲಾಖೆಗಳ ಪ್ರಗತಿಯ ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT