ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಭದ್ರತೆ ಒದಗಿಸುವ ಸಿರಿಧಾನ್ಯ

Last Updated 14 ಜುಲೈ 2017, 9:04 IST
ಅಕ್ಷರ ಗಾತ್ರ

ಅರಕಲಗೂಡು: ಸಾಕಷ್ಟು ಮಳೆ ಬೀಳದ ಇಂದಿನ ದಿನಗಳಲ್ಲಿ ಸಿರಿಧಾನ್ಯಗಳನ್ನು ಬೆಳೆದರೆ ರೈತರು ಆರ್ಥಿಕವಾಗಿ ಲಾಭ ಹೊಂದಬಹುದು. ಆರೋಗ್ಯಕರ ಬದುಕಿಗೂ ನೆರವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ವಿಭಾಗದ ನಿರ್ದೇಶಕ ವಿಜಯಕುಮಾರ್ ನಾಗನಾಳ ತಿಳಿಸಿದರು.

ತಾಲ್ಲೂಕಿನ ದೊಡ್ಡಮಗ್ಗೆ ಬಿಜಿಎಸ್ ಸಮುದಾಯ ಭವನದಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏರ್ಪಡಿಸಿದ್ದ ಸಿರಿಧಾನ್ಯಗಳ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಕಡಿಮೆ ನೀರು, ಗೊಬ್ಬರ ಬಳಸಿಕೊಂಡು ಸಿರಿಧಾನ್ಯಗಳಾದ ನವಣೆ, ರಾಗಿ ಮತ್ತು ಸಾಸಿವೆ ಬೆಳೆಯನ್ನು ಕೈಗೊಳ್ಳುವುದು ಹೆಚ್ಚು ಲಾಭದಾಯಕ ಎಂದರು. ಕೃಷಿ ವಿಜ್ಞಾನಿ ಡಾ.ಚನ್ನಕೇಶವ ಮಾತನಾಡಿ, ‘ಕಿರು ಧಾನ್ಯಗಳೆಂದರೆ ಗಾತ್ರದಲ್ಲಿ ಕಿರಿದಾದ, ಪೋಷಣೆಯಲ್ಲಿ ಹಿರಿದಾದ ಒಂದು ಕಾಳಿನಿಂದ ಸಾವಿರಾರು ಕಾಳುಗಳನ್ನು ಹುಟ್ಟಿಸಬಲ್ಲ ಧಾನ್ಯಗಳು.

ರಾಗಿ, ಸಾಮೆ, ನವಣೆ, ಹಾರಕ, ಊದಲು, ಜೋಳ ಮುಂತಾದವು ಈ ವರ್ಗಕ್ಕೆ ಸೇರಿದವು. ಇವು ವಿಶ್ವದ ಅನೇಕ ದೇಶಗಳ ಪ್ರಮುಖ ವಾಣಿಜ್ಯ ಬೆಳೆಗಳು. ಭಾರತ ಹಾಗೂ ಆಫ್ರಿಕಾ ಖಂಡಗಳಲ್ಲಿ 100 ಮಿಲಿಯನ್ ಎಕರೆ ಒಣ ಪ್ರದೇಶದಲ್ಲಿ ಇವುಗಳನ್ನು ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಹೆಚ್ಚಿನದಾಗಿ ಹಿರಿಯೂರು, ಶಿರಾ, ಅರಸೀಕೆರೆ ತಾಲ್ಲೂಕು ಕಣೆಕಟ್ಟೆ ಭಾಗದಲ್ಲಿ ಇದರ ಕೃಷಿ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ಇನ್ನೊಬ್ಬ ಕೃಷಿ ವಿಜ್ಞಾನಿ ಡಾ.ಶಿವಶಂಕರ್ ಮಾತನಾಡಿ, ‘ಸಿರಿಧಾನ್ಯದ ಬೆಳೆಗಳು ತಾಪಮಾನ ವೈಪರಿತ್ಯ ಸಹಿಷ್ಣುತೆ ಹೊಂದಿವೆ. ಅತಿ ಕಡಿಮೆ ತೇವಾಂಶದಲ್ಲಿ ಸಮಾಧಾನಕರ ಇಳುವರಿ ಕೊಡಬಲ್ಲ, ಪರಿಸರ ಮಿತ್ರ ಬೆಳೆಗಳಾಗಿವೆ. ಕೀಟ ಮತ್ತು ರೋಗ ಬಾಧೆ ಕಡಿಮೆ ಇದ್ದು ಸಾವಯವ ಕೃಷಿಗೆ ಸೂಕ್ತವಾಗಿವೆ.

ಉತ್ತಮ ಪೋಷಕಾಂಶಗಳನ್ನು ಹೊಂದಿದ್ದು ಜಾನುವಾರುಗಳ ಮೇವಿಗೂ ಬಹಳ ಸೂಕ್ತ’ ಎಂದು ಹೇಳಿದರು. ಜಿ.ಪಂ. ಸದಸ್ಯ ಬಿ.ಎಂ.ರವಿ, ರೈತ ಸಂಘದ ಅಧ್ಯಕ್ಷ ಎಸ್.ವಿ.ಯೋಗಣ್ಣ, ಪ್ರಗತಿಪರ ರೈತ ಸುಬ್ಬೇಗೌಡ ಮಾತನಾಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ರಂಗನಾಥ್, ಸಂಸ್ಥೆಯ ಕೃಷಿ ಅಧಿಕಾರಿ ಶಶಿಧರ್, ಮೇಲ್ವಿಚಾರಕ ಐತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT