ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಲಾಭ ಗ್ರಾಹಕರಿಗೆ ದೊರಕೀತೆ?

Last Updated 14 ಜುಲೈ 2017, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯೋತ್ತರ  ಭಾರತದಲ್ಲಿ ಅತ್ಯಂತ ಚರ್ಚೆಗೆ ಒಳಪಟ್ಟು ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಧಿನಿಯಮ ಯಾವ್ಯಾವ ವರ್ಗದ ಮೇಲೆ ಎಷ್ಟು ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ತಿಳಿಸಿಕೊಡಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ. ರಾಷ್ಟ್ರದಾದ್ಯಂತ ಇಡೀ ಮಾಧ್ಯಮ ಜಿಎಸ್‌ಟಿಯಿಂದ ತುಂಬಿದೆ. ಸರಕು ತಯಾರಕರು, ಸರಬರಾಜುದಾರರು, ವಿತರಕರು ಮತ್ತು ಮಾರಾಟಗಾರರಿಗೆ ಜಿಎಸ್‌ಟಿ ಅಡಿಯಲ್ಲಿ ಅವರ ಜವಾಬ್ದಾರಿ ಬಗ್ಗೆ ಮನವರಿಕೆ ಮಾಡಿಕೊಡುವ ಕ್ರಮಗಳನ್ನು ಕೈಗೊಂಡಿರುವ ಸರ್ಕಾರ, ತೆರಿಗೆ ಭರಿಸುವ ಕಟ್ಟಕಡೆಯ ಗ್ರಾಹಕ ವರ್ಗವನ್ನು ಕಡೆಗಣಿಸಿದೆ. 

ಜಿಎಸ್‌ಟಿ ಬಗ್ಗೆ ಗೊಂದಲವಿದ್ದರೂ, ಗ್ರಾಹಕರಿಗೆ ಅದರ ಬಗ್ಗೆ ಪ್ರಾಥಮಿಕ ಮಾಹಿತಿ ಹಂಚುವ ಕ್ರಮ ಕೈಗೊಂಡಿಲ್ಲ. ಗ್ರಾಹಕರೂ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಕಾರಣ, ಯಾವುದೇ ಹೊಸ ತೆರಿಗೆ ಬರಲಿ, ಯಾವ ಹೆಸರಿನಿಂದಲೇ ಕರೆಯಲಿ ಅದರ ಭಾರವನ್ನು ಹೊರುವವರು ಅವರು ತಾನೆ? ಹೆಣ ಹೊರುವುದಕ್ಕೆ ಯಾವ ಕಡೆಯಾದರೇನು?

ತೆರಿಗೆಯ ವಿಷಯದಲ್ಲಿ ಯಾವುದೇ ಹೊಸ ಕಾಯ್ದೆ ಅಥವಾ ನಿಯಮ ಜಾರಿಗೊಂಡಾಗ ಅದರಿಂದ ಉಂಟಾಗುವ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕೆಂದು ಸರ್ಕಾರ ಹೇಳಿಕೆ ನೀಡಿದರೂ ಅದು ಎಷ್ಟರಮಟ್ಟಿಗೆ ಸಫಲವಾಗುತ್ತದೆ ಎಂಬುದರ ಬಗ್ಗೆ ನಿಗಾ ವಹಿಸುವ ಕ್ರಮ ನಮ್ಮಲ್ಲಿಲ್ಲ. ಉದಾಹರಣೆಗೆ ಪ್ರತೀ ಮುಂಗಡ ಪತ್ರ ಮಂಡನೆಯಾದಾಗಲೂ, ಇಳಿಕೆಯಾದ ತೆರಿಗೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕೆಂಬ ನಿಯಮ ಇರುತ್ತದೆ. ಆದರೆ ಉದ್ಯಮ ಇದನ್ನು ಎಷ್ಟರಮಟ್ಟಿಗೆ ಪಾಲಿಸುತ್ತಿದೆ? ಕೆಲವೊಂದು ಪ್ರತಿಷ್ಠಿತ ಕಂಪೆನಿಗಳನ್ನು ಹೊರತುಪಡಿಸಿದರೆ, ತೆರಿಗೆ ಇಳಿಕೆಯ  ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದಿರಲಿ, ಅದರ ಬಗ್ಗೆ ಮಾಹಿತಿಯನ್ನೂ ನೀಡುವುದಿಲ್ಲ. ಆದರೆ ಕೇವಲ ಒಂದು ಪೈಸೆಯಷ್ಟು ತೆರಿಗೆ ಹೆಚ್ಚಾದರೂ ಅದನ್ನು ಮಧ್ಯರಾತ್ರಿಯಿಂದಲೇ ಜಾರಿಗೊಳಿಸಲಾಗುತ್ತದೆ. ತೆರಿಗೆ ಹೆಚ್ಚಾಗಿರುವುದನ್ನು ತಿಳಿಸುವುದಕ್ಕಾಗಿಯೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ನೀಡಲಾಗುತ್ತದೆ.

ಆದರೆ ಜಿಎಸ್‌ಟಿ ವಿಷಯದಲ್ಲಿ ಸರ್ಕಾರ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಜಿಎಸ್‌ಟಿಯಿಂದ ಆಗಬಹುದಾದ ಇಳಿಕೆ ಮತ್ತು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕೆಂಬ (ಸೆಕ್ಷನ್ 171) ನಿಯಮವನ್ನು ಕಾಯ್ದೆಯಲ್ಲೇ ಸೇರಿಸಲಾಗಿದೆ. ಇದನ್ನು ಅನುಷ್ಠಾನಗೊಳಿಸಲು ಲಾಭಕೋರತನ ತಡೆ ಪ್ರಾಧಿಕಾರವನ್ನು (ಎಪಿಎ–Anti-profiteering Authority)  ರಚಿಸಲಾಗಿದೆ. ಎಪಿಎಯ ಸ್ವರೂಪ, ಸಂರಚನೆ, ಅಧಿಕಾರ, ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಸೂಚಿಸುವ ನಿಯಮ ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರದ ಕಾರ್ಯದರ್ಶಿ ಹುದ್ದೆಗೆ ಸಮನಾದವರೊಬ್ಬರು ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ ಹಾಗೂ ನಾಲ್ಕು ತಾಂತ್ರಿಕ ಸದಸ್ಯರನ್ನು ಇದು ಒಳಗೊಂಡಿರುತ್ತದೆ. ಜೊತೆಗೆ ಸ್ಥಾಯಿ ಸಮಿತಿಯನ್ನು ಸಹ ರಚಿಸಬಹುದಾಗಿದೆ. ಅಧ್ಯಕ್ಷರ ಸಂಬಳ (ತಿಂಗಳಿಗೆ ₹ 2.25 ಲಕ್ಷ) ಮತ್ತು ಸದಸ್ಯರ ಸಂಬಳದ (₹ 2.05 ಲಕ್ಷ) ಮೊತ್ತವನ್ನು ಗಮನಿಸಿದರೆ ಗ್ರಾಹಕ ಮಹಾಶಯ ಮೂರ್ಛೆ ಹೋದಾನು.  ನಿವೃತ್ತರ ಪುನರುತ್ಥಾನಕ್ಕೆ ಮತ್ತೊಂದು ಅವಕಾಶ. ಪ್ರಾಧಿಕಾರದ ಅವಧಿ ಎರಡು ವರ್ಷ.

ಜಿಎಸ್‌ಟಿಯಿಂದ ಉಂಟಾಗುವ ಇಳಿಕೆಯನ್ನು ಗ್ರಾಹಕರಿಗೆ ವರ್ಗಾಯಿಸದಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಎಪಿಎಗೆ ಅಧಿಕಾರ ನೀಡಲಾಗಿದೆ. ಆದರೆ ಅದನ್ನು ಪತ್ತೆ ಹಚ್ಚುವ ವಿಧಾನ ಯಾವುದು ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ಎಪಿಎಗೆ ಬಿಡಲಾಗಿದೆ. ಜಿಎಸ್‌ಟಿ ಕಾಯ್ದೆ ಅನುಸಾರ ಬೆಲೆಯನ್ನು ಕಡಿಮೆ ಮಾಡಬೇಕು, ಇಲ್ಲದಿದ್ದರೆ ಇಳಿಕೆಯ ಮೊತ್ತವನ್ನು ಶೇ 18ರಷ್ಟು ಬಡ್ಡಿ ಸಮೇತ ಸಂಬಂಧಪಟ್ಟವರಿಗೆ ಪಾವತಿಸುವಂತೆ ಆದೇಶ ನೀಡುವ ಅಧಿಕಾರ ಎಪಿಎಗೆ ಇದೆ. ಜೊತೆಗೆ ದಂಡ ವಿಧಿಸುವುದು ಹಾಗೂ ನೋಂದಣಿಯನ್ನು ರದ್ದುಗೊಳಿಸುವ ಅಧಿಕಾರವೂ ಇದೆ. ಆದೇಶದ ಅನುಸಾರ ಇಳಿಕೆ ಮಾಡಿದ ಹಣವನ್ನು ಸಂಬಂಧಪಟ್ಟವರು ಪಡೆಯದಿದ್ದರೆ ಆ ಮೊತ್ತವನ್ನು ಜಿಎಸ್‌ಟಿ ಕಾಯ್ದೆಯ (ಸೆಕ್ಷನ್ 57) ಪ್ರಕಾರ ಸ್ಥಾಪಿಸಲಾಗಿರುವ ನಿಧಿಗೆ ವರ್ಗಾಯಿಸಬೇಕು. ಎಪಿಎ ನೀಡುವ ಆದೇಶದ ಅನುಷ್ಠಾನದ ಬಗ್ಗೆ ನಿಗಾ ವಹಿಸಲು ಕೇಂದ್ರಾಡಳಿತ ಮತ್ತು ರಾಜ್ಯ ಸರ್ಕಾರದ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಳ್ಳಬಹುದಾಗಿದೆ.

‘ಎಪಿಎ, ದೇಶವನ್ನು ಮತ್ತೊಮ್ಮೆ ಲೈಸೆನ್ಸ್‌ರಾಜ್‌ಗೆ ಕೊಂಡೊಯ್ಯುತ್ತದೆ,  ಎಪಿಎಗೆ ನೀಡಿರುವ ಅಧಿಕಾರ ದುರುಪಯೋಗವಾಗುವ ಸಂಭವವಿದೆ, ಇದನ್ನು ಸ್ಥಾಪಿಸುವ ಮುನ್ನ ಸರಿಯಾಗಿ ಚರ್ಚೆ ನಡೆದಿಲ್ಲ...’ ಇತ್ಯಾದಿ ನೆಲೆಯಲ್ಲಿ ಉದ್ಯಮ ತನ್ನ ವಿರೋಧ ವ್ಯಕ್ತಪಡಿಸಿದೆ. ‘ಉದ್ಯಮವು ಸ್ವಯಂ ನಿಯಂತ್ರಣ ಹೊಂದಿದ್ದು ಯಾವುದೇ ಕಾರಣಕ್ಕೂ ಗ್ರಾಹಕರಿಗೆ ವಂಚಿಸುವುದಿಲ್ಲವಾದ್ದರಿಂದ ಎಪಿಎ ಅಗತ್ಯವಿಲ್ಲ’ ಎಂದು ಹೇಳಿದೆ. ಅಲ್ಲದೆ ಮಾರುಕಟ್ಟೆಯ ವಾತಾವರಣ ಬೆಲೆ ನಿಯಂತ್ರಿಸುವ ಸಾಧನವಾಗಿದ್ದು, ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಸರಕುಗಳು ದೊರೆಯುವಂತೆ ಮಾಡುತ್ತದೆ. ಅದ್ದರಿಂದ ಎಪಿಎ ಅನಗತ್ಯ ಎಂಬುದು ಉದ್ಯಮದ ಅಭಿಪ್ರಾಯ. 

ಇದೆಲ್ಲವೂ ಒಂದು ಮಟ್ಟಕ್ಕೆ ನಿಜ. ಆದರೆ ಇಲ್ಲಿರುವ ಮುಖ್ಯ ವಿಷಯವೇ ಬೇರೆ. ಇದುವರೆಗೆ ಉದ್ಯಮ ಎಷ್ಟರ ಮಟ್ಟಿಗೆ ಗ್ರಾಹಕಸ್ನೇಹಿಯಾಗಿ ವರ್ತಿಸಿದೆ? ಕೇಂದ್ರ ಅಥವಾ ರಾಜ್ಯ ಸರ್ಕಾರ ನೀಡುವ ವಿನಾಯಿತಿಯ ಲಾಭವನ್ನು ಎಷ್ಟು ಸಂದರ್ಭಗಳಲ್ಲಿ ಗ್ರಾಹಕರಿಗೆ ವರ್ಗಾಯಿಸಿದೆ? ಕಚ್ಚಾವಸ್ತುಗಳ ಬೆಲೆ ಕಡಿಮೆ
ಯಾದರೂ ಅಂತಿಮ ಸರಕಿನ ಬೆಲೆ ಕಡಿಮೆ ಆಗಿದೆಯೇ? ಮಾರುಕಟ್ಟೆಯಲ್ಲಿ ಸ್ಪರ್ಧೆ ಇದ್ದಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಗಳು ದೊರೆಯುತ್ತವೆ ಎಂಬ ಪಠ್ಯಪುಸ್ತಕದ ಪಾಠವನ್ನು ಈಗ ಯಾರು ನಂಬುತ್ತಾರೆ? ದಿನಬಳಕೆಯ ಯಾವುದೇ ಸರಕು, ವಸ್ತು ಅಥವಾ ಸೇವೆಯಲ್ಲಾಗಲಿ ಸ್ಪರ್ಧೆ ಎಲ್ಲಿದೆ? ಉದಾಹರಣೆಗೆ ಸಾಬೂನು, ಟೂತ್‌ಪೇಸ್ಟ್, ಸೌಂದರ್ಯವರ್ಧಕ, ಶೇವಿಂಗ್ ಕ್ರೀಮ್, ಸ್ಯಾನಿಟರಿ ನ್ಯಾಪ್‌ಕಿನ್, ದೂರಸಂಪರ್ಕ, ಬ್ಯಾಂಕ್, ವಿಮೆ ಇತ್ಯಾದಿ ಸೇವೆಗಳು ಕೆಲವೇ ಕಂಪೆನಿಗಳ ಹಿಡಿತದಲ್ಲಿವೆ. ಹೊಸ ಉದ್ಯಮಿಗಳು ಮಾರುಕಟ್ಟೆ ಪ್ರವೇಶಿಸುವುದು ಕಷ್ಟಸಾಧ್ಯವಾದ ವಾತಾವರಣ ಸೃಷ್ಟಿಯಾಗಿದೆ.

ಉದ್ಯಮ ಸ್ವನಿಯಂತ್ರಣಕ್ಕೆ ಒಳಪಟ್ಟಿದೆ ಎಂಬ ಕಾರಣಕ್ಕಾಗಿ ಎಪಿಎ ಅನಗತ್ಯ ಎಂಬ ವಾದ ಸತ್ಯಕ್ಕೆ ದೂರ. ಸ್ವನಿಯಂತ್ರಣಕ್ಕೆ ಸಂಬಂಧಪಟ್ಟ ನಿಯಮಗಳನ್ನು ಉದ್ಯಮ ಹೊಂದಿದೆ. ಆದರೆ ಅದು ಎಷ್ಟರಮಟ್ಟಿಗೆ ಜಾರಿಗೊಂಡಿದೆ? ಅದರಿಂದ ಗ್ರಾಹಕರಿಗೆ ಎಷ್ಟು ಲಾಭವಾಗಿದೆ? ಸ್ವನಿಯಂತ್ರಣ ಪರಿಣಾಮಕಾರಿಯಾಗಿದ್ದಿದ್ದರೆ ಗ್ರಾಹಕ ಸಂರಕ್ಷಣಾ ಕಾಯ್ದೆಗಳ ಅಗತ್ಯವಿರಲಿಲ್ಲ. ಗ್ರಾಹಕ ವೇದಿಕೆಗಳಲ್ಲಿ ಇಷ್ಟೊಂದು ದೂರುಗಳು ದಾಖಲು ಆಗುತ್ತಿರಲಿಲ್ಲ. ಕೇವಲ ₹ 25 ಸಾವಿರಕ್ಕೆ ಸ್ಟೆಂಟ್ ಖರೀದಿಸಿ ರೋಗಿಗಳಿಂದ ಒಂದು ಲಕ್ಷ ರೂಪಾಯಿ ಕಸಿದುಕೊಳ್ಳುವ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ ಲಾಭಕೋರತನ ಬಯಲಾಗಿದೆಯಲ್ಲ! ಏಕಪಕ್ಷೀಯ ಷರತ್ತುಗಳನ್ನು ವಿಧಿಸಿ ಸೈಟು, ಮನೆ, ಪ್ಲಾಟ್ ಮಾರಾಟ ಮಾಡಿ ಹಣ ದೋಚುತ್ತಿರುವ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸ್ವನಿಯಂತ್ರಣ ಎಲ್ಲಿದೆ? ಸೇಫ್ ಡಿಪಾಸಿಟ್ ಲಾಕರ್ ಎಂಬ ಆಕರ್ಷಕ ಹೆಸರನ್ನಿಟ್ಟು, ಅದಕ್ಕೆ ಬಾಡಿಗೆ ಪಡೆದು, ‘ಲಾಕರ್‌
ನಲ್ಲಿಟ್ಟ ವಸ್ತುಗಳ ಭದ್ರತೆಗೆ ಜವಾಬ್ದಾರರಲ್ಲ’ ಎಂದು ಹೇಳುವ ಬ್ಯಾಂಕ್‌ಗಳ ಸ್ವನಿಯಂತ್ರಣ ಯಾರಿಗೆ ತಿಳಿದಿಲ್ಲ? ಸ್ವನಿಯಂತ್ರಣ ವಿಫಲವಾಗಿರುವುದೇ ಎಪಿಎ ಮಾದರಿ ವ್ಯವಸ್ಥೆಗೆ ಕಾರಣ.

ಎಪಿಎ ವಿಷಯದಲ್ಲಿ ಉದ್ಯಮದ ಆತಂಕವನ್ನು ಸಂಪೂರ್ಣವಾಗಿ ಅಲ್ಲಗಳೆಯುವಂತಿಲ್ಲ. ಆದರೆ ಅಂತಿಮವಾಗಿ ಗ್ರಾಹಕರ ಹಿತದೃಷ್ಟಿಯಿಂದ ಎಪಿಎ ಅಗತ್ಯ. ಈ ಬಗ್ಗೆ ಚರ್ಚೆ ನಡೆಸಬೇಕಿತ್ತು.  ಭಾರತದಲ್ಲಿ ‘ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾ’ ಸ್ಥಾಪನೆಯಾಗಿದ್ದು ಮಾರುಕಟ್ಟೆಯಲ್ಲಿ ಆರೋಗ್ಯಪೂರ್ಣ ಸ್ಪರ್ಧೆ ಉಂಟು ಮಾಡಲು ಕ್ರಮ ಕೈಗೊಂಡಿದೆ. ಮುಂಬರುವ ದಿನಗಳಲ್ಲಿ ಎಪಿಎ ಕಾರ್ಯಾಚರಣೆಯನ್ನು ಈ ಸಂಸ್ಥೆಗೆ ವಹಿಸಬೇಕೆಂಬ ಅಭಿಪ್ರಾಯವನ್ನು ಸರ್ಕಾರ ಪರಿಗಣಿಸಬೇಕು. ಜಿಎಸ್‌ಟಿ ಮತ್ತು ಎಪಿಎ ಬಗ್ಗೆ ಗ್ರಾಹಕರಲ್ಲಿ ಅರಿವು ಉಂಟುಮಾಡುವುದು ಕೂಡಲೇ ಆಗಬೇಕಾದ ಕೆಲಸ.

ವೈ.ಜಿ. ಮುರಳೀಧರನ್
ಲೇಖಕ: ಸದಸ್ಯ, ಕೇಂದ್ರ ಗ್ರಾಹಕ ಹಿತರಕ್ಷಣಾ ಪರಿಷತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT