ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರಿಗೆ ಎನ್‌ಇಟಿ ಕಡ್ಡಾಯ

ಕಡ್ಡಾಯ ಅರ್ಹತೆ ಹೊಂದಿದವರಿಗೆ ಆದ್ಯತೆ; ಹಳಬರಿಗೆ ಉದ್ಯೋಗ ಕೈತಪ್ಪುವ ಭೀತಿ
Last Updated 15 ಜುಲೈ 2017, 9:03 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ), ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ (ಎಸ್‌ಎಲ್‌ಇಟಿ) ಮತ್ತು ಪಿಎಚ್‌.ಡಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಎಂ.ಎನ್. ಅಜಯ್‌ ನಾಗಭೂಷಣ್ ಸ್ಪಷ್ಟಪಡಿಸಿದರು.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಅದಕ್ಕಾಗಿ ಅತಿಥಿ ಉಪನ್ಯಾಸಕರಿಗೂ ಅರ್ಹತೆಗಳನ್ನು ಕಡ್ಡಾಯ ಮಾಡಲಾಗಿದೆ. ಈ ಪದವಿಗಳು ಇರುವವರಿಗೆ ಮಾತ್ರ  ಆದ್ಯತೆ ನೀಡಲಾಗುವುದು ಎಂದು ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

2017–18ನೇ ಸಾಲಿಗೆ ಅತಿಥಿ ಉಪನ್ಯಾಸಕ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಜುಲೈ 12 ಕೊನೆಯ ದಿನವಾಗಿತ್ತು. ಒಟ್ಟಾರೆ 35,000 ಅರ್ಜಿಗಳು ಬಂದಿವೆ. ಇದರಲ್ಲಿ ಹಳಬರಿಂದಲೇ ಸುಮಾರು 21,000 ಅರ್ಜಿ ಸಲ್ಲಿಕೆಯಾಗಿವೆ ಎಂದು ಮಾಹಿತಿ ನೀಡಿದರು.

‘ಹಿಂದಿನ ವರ್ಷ 13,000 ದಿಂದ 14,000 ಅತಿಥಿ ಉಪನ್ಯಾಸಕರನ್ನು ನೇಮಿಸಲಾಗುತ್ತಿತ್ತು. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಹೊಸ ನೇಮಕಾತಿ ಆಗುತ್ತಿರುವುದರಿಂದ ಈ ವರ್ಷ 9,000 ಅತಿಥಿ ಉಪನ್ಯಾಸಕರು ಮಾತ್ರ ಬೇಕಾಗಬಹುದು. ಈಗ ಅರ್ಜಿ ಸಲ್ಲಿಸಿದವರ ಪೈಕಿ ಎಲ್ಲ ಅರ್ಹತೆಗಳ ಜೊತೆಗೆ ಸೇವಾ ಹಿರಿತನ ಇರುವವರನ್ನೂ ಪರಿಗಣಿಸಲಾಗುವುದು’ ಎಂದರು.

ಹಳಬರಿಗೆ ಅನ್ಯಾಯ: ಅತಿಥಿ ಉಪನ್ಯಾಸಕ ಹುದ್ದೆಗೆ ಎನ್‌ಇಟಿ, ಎಸ್‌ಎಲ್‌ಇಟಿ, ಪಿಎಚ್‌.ಡಿ ಕಡ್ಡಾಯ ಮಾಡಿ ಹತ್ತಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಹಳಬರು ಆರೋಪಿಸುತ್ತಿದ್ದಾರೆ.

ಈ ಸಂಬಂಧ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದಿಂದ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನಾ ಧರಣಿ ನಡೆಸಲಾಯಿತು.

‘ಸ್ನಾತಕೋತ್ತರ ಪದವಿ ಮುಗಿಸಿ ಅತಿಥಿ ಉಪನ್ಯಾಸಕರಾಗಿ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವವರು ಇದ್ದಾರೆ. ಈಗ ಏಕಾಏಕಿ ನಿಯಮ ಬದಲಾಯಿಸುವುದರಿಂದ ಸುಮಾರು 5,000 ಅಭ್ಯರ್ಥಿಗಳು ಉದ್ಯೋಗ ಕಳೆದುಕೊಂಡು ಬೀದಿಗೆ ಬರಬೇಕಾಗುತ್ತದೆ. ಹೀಗಾಗಿ ಸೇವಾ ಹಿರಿತನಕ್ಕೆ ಮೊದಲ  ಆದ್ಯತೆ ನೀಡಬೇಕು’ ಎಂದು ಸಂಘದ ಅಧ್ಯಕ್ಷ ಎನ್‌. ಶ್ರೀನಿವಾಸಾಚಾರ್‌ ಹೇಳಿದರು.

ಕಳೆದ ಮೂರು ವರ್ಷಗಳಿಂದಲೂ ಸೇವಾ ಹಿರಿತನ ಪರಿಗಣಿಸಿಯೇ ನೇಮಕ ಮಾಡಲಾಗುತ್ತಿದೆ. ಆದರೆ, ಈ ಬಾರಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಪ್ರತಿಷ್ಠೆಗೆ ಬಿದ್ದು ಹಳಬರನ್ನು ಕೈಬಿಡಲು ನಿರ್ಧರಿಸಿದ್ದಾರೆ ಎಂದು ಅವರು ಆರೋಪಿಸಿದರು.

***

ಸೋಮವಾರ ಸಭೆ?
ಅತಿಥಿ ಉಪನ್ಯಾಸಕರ ನೇಮಕ ಸಂಬಂಧ ಉಂಟಾಗಿರುವ ಗೊಂದಲ ನಿವಾರಿಸಲು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ನೇತೃತ್ವದಲ್ಲಿ ಸೋಮವಾರ ಸಭೆ ನಡೆಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT