ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ.ಗಳಲ್ಲಿ ರೂಪುಗೊಂಡ ಒಬ್ಬ ಸಂಗೀತಗಾರನನ್ನು ತೋರಿಸಿ

Last Updated 15 ಜುಲೈ 2017, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಗೀತ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಕಾಲೇಜುಗಳಲ್ಲಿ ರೂಪುಗೊಂಡ ಒಬ್ಬ ಸಂಗೀತಗಾರನನ್ನು ತೋರಿಸಿ’ ಎಂದು ಹಿಂದೂಸ್ತಾನಿ ಸಂಗೀತಗಾರ  ರಾಜಶೇಖರ ಮನ್ಸೂರ್‌ ಸವಾಲು ಹಾಕಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂಗೀತ ವಿ.ವಿ.ಗಳು ನಿಜವಾದ ಸಂಗೀತಗಾರರನ್ನು ಹುಟ್ಟು ಹಾಕಿಲ್ಲ. ಅವು ಸಂಗೀತ ಕೇಳುವವರನ್ನು ಮಾತ್ರ ತಯಾರು ಮಾಡುತ್ತಿವೆ. ವಿ.ವಿ.ಗಳಲ್ಲಿ ಒಂದು ಗಂಟೆಯ ಅವಧಿಯಲ್ಲಿ ಸಂಗೀತ ಹೇಳಿಕೊಟ್ಟು, ಮತ್ತೊಂದು ಅವಧಿಯಲ್ಲಿ ಬೇರೆ ವಿಷಯವನ್ನು ಹೇಳಿಕೊಟ್ಟರೆ ವಿದ್ಯಾರ್ಥಿಗಳಿಗೆ  ಸಂಗೀತ ಒಲಿಯುವುದಿಲ್ಲ. ಇದಕ್ಕಾಗಿ ಸರ್ಕಾರ ಖರ್ಚು ಮಾಡುತ್ತಿರುವ ಹಣ ವ್ಯರ್ಥವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನನ್ನ ಬಳಿ ಏಳು ಶಿಷ್ಯರಿದ್ದಾರೆ. ಒಬ್ಬರಿಗೆ ಒಂದು ದಿನ ಸಂಗೀತ ಹೇಳಿಕೊಡುತ್ತೇನೆ. ಸಂಗೀತದಲ್ಲಿ ಸಂಯಮ ಅತಿಮುಖ್ಯ. ಶಿಷ್ಯರು ಗುರುವಿನ ಹಾಡುಗಳನ್ನು ಸಂಯಮದಿಂದ ಕೇಳಬೇಕು’ ಎಂದು ಹೇಳಿದರು. ‘ಸಂಗೀತಗಾರರು ಬೇರೆಯವರನ್ನು ಅನುಕರಣೆ ಮಾಡಬಾರದು. ತಮ್ಮ ಸ್ವಂತಿಕೆ ತೋರಿಸಬೇಕು’ ಎಂದರು.

‘ರಿಯಾಲಿಟಿ ಶೋಗಳಲ್ಲಿ ಮಕ್ಕಳನ್ನು ಸ್ಪರ್ಧಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಇದರಿಂದ ಬೇಸರವಾಗುತ್ತಿದೆ. ಸಂಗೀತದಲ್ಲಿ ಸ್ಪರ್ಧೆ ಎನ್ನುವುದು ಇಲ್ಲ’ ಎಂದರು. ‘ನಾನು ಸಂಗೀತಗಾರನಾಗುತ್ತೇನೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ. ವೈದ್ಯನಾಗಬೇಕು ಎಂಬುದು ನನ್ನ ತಂದೆ ಮಲ್ಲಿಕಾರ್ಜುನ ಮನ್ಸೂರ್‌ ಅವರ ಆಸೆಯಾಗಿತ್ತು. ಆದರೆ, ನಾನು ಇಂಗ್ಲಿಷ್‌ ಅಧ್ಯಾಪಕನಾದೆ. 25 ವರ್ಷ ಸೇವೆ ಸಲ್ಲಿಸಿದ ಬಳಿಕ ನಿವೃತ್ತನಾಗಿ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಅವರ ಬಳಿ ಹೇಳಿದ್ದೆ. ಆದರೆ, ವೃತ್ತಿಯನ್ನು ಬಿಡದೆ ಪ್ರವೃತ್ತಿಯಾಗಿ ಸಂಗೀತವನ್ನು ಕಲಿಯುವಂತೆ ಹೇಳಿದ್ದರು. ಅದರಂತೆ ನಡೆದುಕೊಂಡೆ’ ಎಂದರು.

 ‘ನನಗೆ ಸಂಗೀತದ ವ್ಯಾಕರಣ ಗೊತ್ತಿಲ್ಲ. ಆದರೆ, ರಾಗವನ್ನು ಹೇಗೆ ಹಾಡಬೇಕು ಎಂಬುದು ಗೊತ್ತಿದೆ. ಭಾರತೀಯ ಸಂಗೀತವನ್ನೇ ನಂಬಿಕೊಂಡು ಜೀವನ ನಡೆಸಲು ಸಾಧ್ಯವಿಲ್ಲ. ಆದರೆ, ಉಪ ಜೀವನ ನಡೆಸಬಹುದು’ ಎಂದು ಹೇಳಿದರು.

ನಾನು ಬಾಲ್ಯದಲ್ಲಿ ಅಮ್ಮನ ಲಾಲಿಯನ್ನು ಕೇಳಲಿಲ್ಲ. ಆದರೆ, ಅಪ್ಪನ ಸಂಗೀತವನ್ನೇ ಲಾಲಿಯಂತೆ ಕೇಳಿ ಬೆಳೆದೆ.
ರಾಜಶೇಖರ ಮನ್ಸೂರ್‌
ಹಿಂದೂಸ್ತಾನಿ ಸಂಗೀತಗಾರ

‘ಸ್ವತಃ ಹಾಡಿದ್ದ ಅ.ನ.ಕೃಷ್ಣರಾಯ’

‘ಸಾಹಿತಿ ಅ.ನ.ಕೃಷ್ಣರಾಯ ಹಾಗೂ ಮಲ್ಲಿಕಾರ್ಜುನ ಮನ್ಸೂರ್‌ ಅವರು ಧಾರವಾಡದ ಕೆರೆಯೊಂದರ ದಂಡೆ ಮೇಲೆ ಕುಳಿತಿದ್ದರು. ಆಗ, ವಚನಗಳನ್ನು ಹಿಂದೂಸ್ತಾನಿ ಸಂಗೀತಕ್ಕೆ ಅಳವಡಿಸಿ ಏಕೆ ಹಾಡಬಾರದು ಎಂದು ಅ.ನ.ಕೃ ಅವರು ಪ್ರಶ್ನಿಸಿದರು. ಅಲ್ಲದೆ, ಸ್ವತಃ ಅವರೇ ಹಾಡಿ ತೋರಿಸಿದ್ದರು. ಬಳಿಕ ನನ್ನ ತಂದೆಯು ವಚನಗಳನ್ನು ಓದಿ, ಅರ್ಥೈಸಿಕೊಂಡು ಅದಕ್ಕೆ ಹಿಂದೂಸ್ತಾನಿ ಸಂಗೀತವನ್ನು ಅಳವಡಿಸಿದ್ದರು’ ಎಂದು ರಾಜಶೇಖರ ಮನ್ಸೂರ್‌ ನೆನಪು ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT