ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಸ್ತಾನ ಕೋಡಿ: ಬಾರ್‌ಗೆ ಗ್ರಾಮಸ್ಥರ ವಿರೋಧ

Last Updated 16 ಜುಲೈ 2017, 5:09 IST
ಅಕ್ಷರ ಗಾತ್ರ

ಐರೋಡಿ(ಬ್ರಹ್ಮಾವರ) : ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಸ್ತಾನ ಕೋಡಿ ರಸ್ತೆಯ ಜನವಸತಿ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಹೊಸಬಾರ್‌ನ ಕಟ್ಟಡ ವಿಚಾರವಾಗಿ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ವಿರೋಧ ವ್ಯಕ್ತಪಡಿದ ಘಟನೆ ಶುಕ್ರವಾರ ನಡೆದಿದೆ.

‘ಈ ಹಿಂದೆ ಸ್ಥಳೀಯರ ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಟ್ಟಡ ನಿರ್ಮಾಣಕ್ಕೆ ತಡೆ ನೀಡಿದ್ದರು. ಆದರೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅನುಮತಿ ನೀಡಿದ್ದಾರೆ’ ಎಂದು ಸ್ಥಳೀಯರು ಮತ್ತೆ ಐರೋಡಿ ಪಂಚಾಯಿತಿಗೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು.

ಹೆದ್ದಾರಿ ಪಕ್ಕದಲ್ಲಿರುವ ಬಾರ್‌ಗಳ ಪೈಕಿ ಒಬ್ಬರು ಸಾಸ್ತಾನ ಕೋಡಿ ರಸ್ತೆಯಲ್ಲಿ ನೂತನ ಕಟ್ಟಡ ನಿರ್ಮಾಣ ಆರಂಭಿಸಿದ್ದರು. ಕೆಲವು ದಿನಗಳ ಹಿಂದೆ ಕಟ್ಟಡಕ್ಕೆ ಪಾಯ ತೆಗೆದು ಪಂಚಾಂಗ ನಿರ್ಮಿಸಿಸುತ್ತಿದ್ದಾಗಲೇ ಇಲ್ಲಿ ಬಾರ್ ನಿರ್ಮಾಣವಾಗಲಿದೆ ಎನ್ನುವ ಮಾಹಿತಿ ಅರಿತ ಸ್ಥಳೀಯರು ಐರೋಡಿ ಪಂಚಾಯಿತಿಗೆ ಮನವಿ ಸಲ್ಲಿಸಿ ಕಟ್ಟಡ ನಿರ್ಮಾಣಕ್ಕೆ ತಾತ್ಕಾಲಿಕವಾಗಿ ತಡೆಯುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಶುಕ್ರವಾರ ಮತ್ತೆ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿದ್ದನ್ನು ಗಮನಿಸಿ ಸ್ಥಳೀಯರು ಮತ್ತೆ ಐರೋಡಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ವಿರೋಧ ವ್ಯಕ್ತಪಡಿಸಿದರು. ಐರೋಡಿ ಪಂಚಾಯಿತಿ ಅಧ್ಯಕ್ಷ ಮೊಸೇಸ್ ರೊಡ್ರಿಗಸ್ ಅವರ ಅನುಮತಿಯ ಮೇರೆಗೆ ಬಾರ್ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎನ್ನುವ ಮಾಹಿತಿ ಅವರಿಗೆ ಲಭಿಸಿತ್ತು.

ಈ ಬಾರ್ ಕಟ್ಟಡವು ಜನವಸತಿ ಪ್ರದೇಶದ ಮಧ್ಯದಲ್ಲಿದ್ದು, ಅಕ್ಕಪಕ್ಕದಲ್ಲಿ ಮಸೀದಿ ಮತ್ತು ದೇವಸ್ಥಾನಗಳು ಇರುವುದರಿಂದ ಬಾರ್ ನಿರ್ಮಾಣಕ್ಕೆ ಯಾವುದೇ ಅವಕಾಶವಿರುವುದಿಲ್ಲ. ಇಲ್ಲಿ ಬಾರ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧವಿದ್ದರೂ ಪಂಚಾಯಿತಿ ಅಧ್ಯಕ್ಷರು ಬಾರ್ ನಿರ್ಮಾಣಕ್ಕೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಜ್ಯೋತಿ ಉದಯ ಪೂಜಾರಿ, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಹರಿಶಿವತ್ತಾಯ ಪಂಚಾಯಿತಿಗೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದರು. ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್ ಮತ್ತು ಕೋಟ ಪೊಲೀಸ್ ಠಾಣಾ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT