ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂಗೆಡ್ಡೆ ಬೆಳೆ ವಿಮೆ ಪಾವತಿ ಅವಧಿ ವಿಸ್ತರಿಸಿ

Last Updated 16 ಜುಲೈ 2017, 8:06 IST
ಅಕ್ಷರ ಗಾತ್ರ

ಹಾಸನ: ಫಸಲ್ ಬಿಮಾ ಯೋಜನೆಯಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿ ಆಲೂಗೆಡ್ಡೆ ಬೆಳೆಗೆ ವಿಮೆ ಪಾವತಿಸುವ ಅವಧಿಯನ್ನು 15 ದಿನ ವಿಸ್ತರಿಸಬೇಕು ಎಂದು ಶಾಸಕ ಎಚ್‌.ಡಿ.ರೇವಣ್ಣ ಆಗ್ರಹಿಸಿದರು. ಬೆಳೆ ವಿಮೆ ಪಾವತಿಗೆ ಜುಲೈ 15 ಕಡೆ ದಿನ. ಆದರೆ ರೈತರಿಗೆ ಸಮಯಕ್ಕೆ ಪಹಣಿ ಸಿಗುತ್ತಿಲ್ಲ. ಬ್ಯಾಂಕ್‌ನವರು ಹಣ ಕಟ್ಟಿಸಿಕೊಳ್ಳುತ್ತಿಲ್ಲ. ಪಹಣಿ ವಿತರಿಸಲು ಎರಡು ಕೌಂಟರ್‌ ತೆರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಉದಯಪುರದಲ್ಲಿ ದಿನಕ್ಕೆ 5 ಪಹಣಿ ನೀಡಲಾಗುತ್ತಿದೆ.

ದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ತಲೆ ಕೆಡಿಸಿಕೊಂಡಿಲ್ಲ. ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚರ್ಚೆ ನಡೆಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಮತ್ತು ಕೃಷಿ ಅಧಿಕಾರಿಗಳಿಗೆ ಬೆಳೆ ವಿಮೆ ಕುರಿತು ಜಾಗೃತಿ ಮೂಡಿಸಲು ಸೂಚಿಸಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಲಹೆ ನೀಡಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆರೆ, ಕಟ್ಟೆಗಳಲ್ಲಿ ಹೂಳು ತೆಗೆಯುವ ಕೆಲಸ ಆರಂಭಿಸಬೇಕು. ತೆಂಗು, ಅಡಿಕೆ ಅಪಾರ ಪ್ರಮಾಣದಲ್ಲಿ ನಾಶವಾಗಿದೆ. 13 ಸಾವಿರ ಹೆಕ್ಟೇರ್‌ನಲ್ಲಿ ಆಲೂಗೆಡ್ಡೆ ಬಿತ್ತನೆ ಮಾಡಲಾಗಿದೆ. ಇದರಲ್ಲಿ 2 ಸಾವಿರ ಹೆಕ್ಟೇರ್‌ ದೃಢೀಕೃತ ಆಲೂ ಬಿತ್ತನೆ ಮಾಡಿದ್ದು, ಎಲ್ಲ ನಾಶವಾಗಿದೆ. ಕಳೆದ ವರ್ಷ ಬೆಳೆ ನಷ್ಟ ಪರಿಹಾರ ಇನ್ನೂ ವಿತರಿಸಿಲ್ಲ. ಕೆಲವು ಕಡೆ ಪರಿಹಾರವಾಗಿ   ₹ 1, ₹ 5, ₹ 10, ₹ 25 ಚೆಕ್‌ ನೀಡ ಲಾಗಿದೆ. ₹ 1 ಬೆಳೆ ಪರಿಹಾರ ನೀಡುತ್ತಾರೆ ಅಂದರೆ ಯಾವ ಬೆಳೆ ಬೆಳೆಯಲು ಸಾಧ್ಯ ಯೋಚನೆ ಮಾಡಿ ಎಂದು ಪ್ರಶ್ನಿಸಿದ ಅವರು, ತಕ್ಷಣ ಬೆಳೆ ಪರಿಹಾರ ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಮಳೆ ಇಲ್ಲದೆ ಮೂರು ವರ್ಷದಿಂದ ಜಿಲ್ಲೆಯಲ್ಲಿ ₹ 1 0 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ಈ ವರ್ಷವೂ ಏಳು ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿ, ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ‘ಜಿಲ್ಲೆ ಅಭಿವೃದ್ಧಿಯಿಂದ ವಂಚಿತವಾಗಲು ಕಾಂಗ್ರೆಸ್ ಪಕ್ಷವೇ ಕಾರಣ.

ಮೈಸೂರು-ಹಾಸನ ರೈಲು ಮಾರ್ಗ ಕಾರ್ಯಸಾಧುವಲ್ಲ ಎಂದು ಅಂದಿನ ಯುಪಿಎ ಸರ್ಕಾರ ಅನುಮತಿ ನೀಡಿರಲಿಲ್ಲ. ದೇವೇಗೌಡರು ಪ್ರಧಾನಿಯಾದ ಬಳಿಕ ಇದಕ್ಕೆ ಚಾಲನೆ ಕೊಡಿಸಿದರು.  ಸಚಿವ ಮಂಜು ತಿಳುವಳಿಕೆ ಇಲ್ಲದೆ ಮಾತನಾಡುತ್ತಿದ್ದಾರೆ. ಚನ್ನಪಟ್ಟಣ ಕೆರೆ ಜಾಗವನ್ನು ಕಾಂಗ್ರೆಸ್‌ ಸರ್ಕಾರ ಇದ್ದಾಗ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳಿಂದ ವಸೂಲಿ ಮಾಡುವುದೇ ಜಿಲ್ಲಾ ಉಸ್ತುವಾರಿ ಸಚಿವರ ಕೆಲಸವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ದೇವೇಗೌಡರು ಕಷ್ಟದಲ್ಲಿದ್ದಾಗ ಜತೆಯಲ್ಲಿದ್ದೆ ಎಂಬ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ಮಂಜು ಅವರು ಕಾಂಗ್ರೆಸ್‌ನಲ್ಲಿದ್ದಾಗ ಬಿಜೆಪಿಗೆ, ಬಿಜೆಪಿಯಲ್ಲಿದ್ದಾಗ ಕಾಂಗ್ರೆಸ್‌ಗೆ ಸಹಾಯ ಮಾಡಿದ್ದಾರೆ’ ಎಂದು ಲೇವಡಿ ಮಾಡಿದರು.

ಮಹಾಮಸ್ತಕಾಭಿಷೇಕ ಮಹೋತ್ಸವ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಸಿಎಲ್‌) ವಹಿಸಲು ಕಾರಣವೇನು ಎಂದು ಸಚಿವರು ತಿಳಿಸಬೇಕು. ಕೆಆರ್‌ಡಿಸಿಎಲ್‌ನಲ್ಲಿ ಅಧಿಕಾರಿಗಳು ಇಲ್ಲ, ವಿಭಾಗೀಯ ಕಚೇರಿಯೂ ಇಲ್ಲ. ಸಂಪುಟ ಸಭೆ ತೀರ್ಮಾನವನ್ನೇ ಸಚಿವರು ಬದಲಿಸಿರುವ ಹಿಂದೆ ಹುನ್ನಾರ ಇದೆ. ಈ ರೀತಿ ಮಾಡುವುದರಿಂದ ಕಾಮಗಾರಿ ವಿಳಂಬ ಮತ್ತು ಲೋಪವಾಗಲಿದೆ ಎಂದು ರೇವಣ್ಣ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT