ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಾಹಿತ್ಯ ಕಡೆಗಣನೆ ಸರಿಯಲ್ಲ

Last Updated 16 ಜುಲೈ 2017, 8:23 IST
ಅಕ್ಷರ ಗಾತ್ರ

ಸಾಗರ: ಮಕ್ಕಳ ಸಾಹಿತ್ಯ ಕೂಡ ಹಲವು ಮೌಲಿಕ ಅಂಶಗಳನ್ನು ಒಳಗೊಂಡಿದೆ. ಮಕ್ಕಳ ಸಾಹಿತ್ಯವನ್ನು ಕಡೆಗಣಿಸುವ ಪ್ರವೃತ್ತಿ ಸರಿಯಲ್ಲ ಎಂದು ಸಾಹಿತಿ ನಾ.ಡಿಸೋಜ ಹೇಳಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಮಕ್ಕಳ 3ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

’ಕೆಲವು ಸಾಹಿತಿಗಳು ಮಕ್ಕಳ ಸಾಹಿತ್ಯ ರಚಿಸಿದರೆ ನಮಗೆ ಹೆಚ್ಚಿನ ಮಾನ್ಯತೆ ದೊರಕುವುದಿಲ್ಲ ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ’ ಎಂದು ಟೀಕಿಸಿದರು. ಪಶ್ಚಿಮ ಬಂಗಾಳದಲ್ಲಿ ಮಕ್ಕಳ ಸಾಹಿತ್ಯವನ್ನು ರಚನೆ ಮಾಡದ ಸಾಹಿತಿಗಳಿಗೆ ಸರ್ಕಾರ ಯಾವುದೇ ಪ್ರಶಸ್ತಿ ಅಥವಾ ಸೌಲಭ್ಯಗಳನ್ನು ನೀಡುವುದಿಲ್ಲ.

ಪ್ರಶಸ್ತಿ ಅಥವಾ ಸೌಲಭ್ಯಗಳಿಗಾಗಿ ಅಲ್ಲದೆ ಇದ್ದರೂ ಮಕ್ಕಳ ಸಾಹಿತ್ಯ ಲೋಕವನ್ನು ವಿಸ್ತಾರಗೊಳಿಸುವ ದೃಷ್ಟಿಯಿಂದ ಇಂತಹ ಪದ್ಧತಿ ದೇಶದ ಇತರ ರಾಜ್ಯಗಳಲ್ಲೂ ಜಾರಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಸಾಹಿತ್ಯದ ಓದು ಮಕ್ಕಳಲ್ಲಿ ಜೀವನದ ಬಗೆಗಿನ ದೃಷ್ಟಿಕೋನವನ್ನೇ ಬದಲಿಸುತ್ತದೆ. ಮಕ್ಕಳಲ್ಲಿ ಮಾನವೀಯ ಅಂತಃಕರಣವನ್ನು ಅದು ಬೆಳೆಸುತ್ತದೆ. ಪ್ರತಿಯೊಂದು ವಿಷಯದ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲವನ್ನು ಸಾಹಿತ್ಯದ ಓದು ಮೂಡಿಸುತ್ತದೆ ಎಂದು ಹೇಳಿದರು.

ಕಂಪ್ಯೂಟರ್‌, ಮೊಬೈಲ್‌ ಮೊದಲಾದ ಆಧುನಿಕ ತಂತ್ರಜ್ಞಾನದ ಸೌಲಭ್ಯಗಳಿಂದ ಮಕ್ಕಳಿಗೆ ದೊರಕುವ ಜ್ಞಾನ ಸೀಮಿತವಾದದ್ದು. ಇವುಗಳನ್ನು ಮೀರಿದ ಕಲ್ಪನಾಲೋಕವನ್ನು ವಿಸ್ತರಿಸುವ ಶಕ್ತಿ ಸಾಹಿತ್ಯಕ್ಕೆ ಇದೆ. ಈ ಕಾರಣ ಪೋಷಕರು ಮಕ್ಕಳಿಗೆ ಸಾಹಿತ್ಯ ಕೃತಿಗಳ ಓದಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ನಗರಸಭೆ ಅಧ್ಯಕ್ಷೆ ಎನ್‌.ಉಷಾ ಮಾತನಾಡಿ, ‘ಎಲ್ಲಾ ಕ್ಷೇತ್ರಗಳು ವ್ಯಾಪಾರೀಕರಣಗೊಳ್ಳುತ್ತಿರುವುದು ಮಕ್ಕಳ ಸಾಹಿತ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದು ಮಕ್ಕಳ ಸೃಜನಶೀಲತೆಯ ಬೆಳವಣಿಗೆಗೆ ಅಡ್ಡಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ಸಮ್ಮೇಳನದ ಸರ್ವಾಧ್ಯಕ್ಷೆ ಸಾನಿಧ್ಯ ಪಿ.ಎನ್‌., ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಅನೀಶ್‌ ಎಸ್.ಶರ್ಮ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್‌.ವಿ.ಹಿತಕರ ಜೈನ್‌, ಹಿರಿಯ ಸಾಹಿತಿ ಪ.ಬಂಗಾರಿ ಭಟ್ಟ, ಅಶ್ವಿನಿಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ ಹಾಜರಿದ್ದರು. ಆಯಿಷಾ ಬಾನು ಸ್ವಾಗತಿಸಿದರು. ಗಣಪತಿ ಶಿರಳಗಿ ವಂದಿಸಿದರು. ಶ್ರೇಯಾ ಮತ್ತು ನಾರಾಯಣ ಮೂರ್ತಿ ಕಾನುಗೋಡು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT