ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಜಿಎಸ್‌ಟಿ ಮಂಡಳಿ ಸಭೆ

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದು ಎರಡು ವಾರಗಳು ಕಳೆದಿದ್ದು, ಜಿಎಸ್‌ಟಿ ಮಂಡಳಿಯು ನಾಳೆ ಸಭೆ ಸೇರಿ  ಪರಿಸ್ಥಿತಿಯ ಪರಾಮರ್ಶೆ ನಡೆಸಲಿದೆ.

ಆಗಸ್ಟ್‌ 5ರಂದು ಸಭೆ ಸೇರುವ ಬಗ್ಗೆ ಜೂನ್‌ 30ರ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಹೊಸ ಪರೋಕ್ಷ ತೆರಿಗೆ ಜಾರಿಗೆ ಬಂದ ನಂತರ ದೇಶದ ವಿವಿಧ ಕಡೆಗಳಿಂದ ಬಂದಿರುವ ವರದಿಗಳನ್ನು ಪರಾಮರ್ಶಿಸಲು ನಾಳೆಯೇ ಸಭೆ  ನಡೆಸಲು ತೀರ್ಮಾನಿಸಲಾಗಿದೆ.

ಉದ್ಯಮ ವಲಯದಿಂದ ಕೇಳಿ ಬಂದ ಹಲವಾರು ಅನುಮಾನಗಳಿಗೆ ಹಣಕಾಸು ಸಚಿವಾಲಯ ವಿವರಣೆ ನೀಡುತ್ತಲೇ ಬಂದಿದೆ.  ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ಅವರೂ  ಹೊಸ ತೆರಿಗೆ ವ್ಯವಸ್ಥೆಯ ನಿಯಮಗಳನ್ನು ಮನದಟ್ಟು ಮಾಡಿಸಲು  ಪ್ರಯತ್ನಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅಧ್ಯಕ್ಷತೆಯಲ್ಲಿನ ಈ 19ನೇ ಸಭೆಯು ವಿಡಿಯೊ ಕಾನ್‌ಫೆರನ್ಸ್‌ ಮೂಲಕ ನಡೆಯಲಿದೆ.

ವಕೀಲರ ಸೇವೆಗೆ ಜಿಎಸ್‌ಟಿ: ವಕೀಲರು  ಒದಗಿಸುವ ಸೇವೆಗಳಿಗೆ ಜಿಎಸ್‌ಟಿ ಅನ್ವಯವಾಗಲಿದೆ ಎಂದು ತೆರಿಗೆ ಇಲಾಖೆ ವಿವರಣೆ ನೀಡಿದೆ. ಈ ತೆರಿಗೆ ಹೊರೆ ಕಕ್ಷಿದಾರರ ಮೇಲೆ ಬೀಳಲಿದೆ.

ಕಾನೂನು ಸೇವೆಗಳ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಜಿಎಸ್‌ಟಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಾನೂನು ಸಲಹೆ ನೀಡುವುದು ಮತ್ತು ಯಾವುದೇ ಕೋರ್ಟ್‌, ನ್ಯಾಯಮಂಡಳಿ ಮುಂದೆ ವಕೀಲರು ಹಾಜರಾಗುವುದು ತೆರಿಗೆ ವ್ಯಾಪ್ತಿಗೆ ಬರಲಿದೆ.  ವಕೀಲರು ಮತ್ತು ಒಬ್ಬರಿಗಿಂತ ಹೆಚ್ಚು ವಕೀಲರನ್ನು ಒಳಗೊಂಡ ಕಾನೂನು ಸಲಹಾ ಸಂಸ್ಥೆಗಳೂ ಜಿಎಸ್‌ಟಿ ವ್ಯಾಪ್ತಿಗೆ ಬರಲಿವೆ.

ಬಳಸಿದ ಸರಕುಗಳಿಗೆ ಜಿಎಸ್‌ಟಿ  ಇಲ್ಲ: ಬಳಸಿದ ಸರಕುಗಳ (ಸೆಕೆಂಡ್‌ ಹ್ಯಾಂಡ್‌) ಮರು ಖರೀದಿ ಮತ್ತು ಮಾರಾಟ ದರವು, ಮೂಲ ಖರೀದಿ ಬೆಲೆಗಿಂತ ಕಡಿಮೆ ಇದ್ದರೆ ಜಿಎಸ್‌ಟಿ ಅನ್ವಯವಾಗುವುದಿಲ್ಲ ಎಂದು  ಕೇಂದ್ರ ಸರ್ಕಾರ ತಿಳಿಸಿದೆ.

ಬಳಸಿದ ಕಾರು, ಟೆಲಿವಿಷನ್‌, ಮೊಬೈಲ್‌ಗಳ ಮರು ಮಾರಾಟ ಸಂದರ್ಭದಲ್ಲಿ ಸಿಜಿಎಸ್‌ಟಿಯ 32(5) ನಿಯಮವು ಅನ್ವಯವಾಗುವುದಿಲ್ಲ. ಬಹುತೇಕ ಬಳಸಿದ ಸರಕುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದರಿಂದ ತೆರಿಗೆ ಪಾವತಿಸಬೇಕಾಗಿಲ್ಲ.

ಹಳೆಯ, ಖಾಲಿ ಬಾಟಲಿಗಳೂ ಸೇರಿದಂತೆ ಬಳಸಿದ ಸರಕುಗಳಿಗೂ ಜಿಎಸ್‌ಟಿ ಅನ್ವಯಗೊಳ್ಳುವ ಕುರಿತು ಉದ್ಯಮ ವಲಯದಿಂದ ವ್ಯಕ್ತವಾದ ಅನುಮಾನಗಳಿಗೆ ಹಣಕಾಸು ಸಚಿವಾಲಯ ಈ ಸ್ಪಷ್ಟನೆ ನೀಡಿದೆ.

ಪೂರೈಕೆಯ ಮೌಲ್ಯದ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತಿದೆ.  ಖರೀದಿ ಮತ್ತು ಮಾರಾಟ ಬೆಲೆಯ ನಡುವಣ ವ್ಯತ್ಯಾಸವು ಪೂರೈಕೆಯ ಮೌಲ್ಯವಾಗಿರುತ್ತದೆ. ಖರೀದಿಸಿದ ಬೆಲೆಗಿಂತ ಕಡಿಮೆ ಮೊತ್ತಕ್ಕೆ ಯಾವುದೇ ಸರಕು ಮಾರಾಟ ಮಾಡಿದರೆ ಅದಕ್ಕೆ ಜಿಎಸ್‌ಟಿ ಅನ್ವಯಗೊಳ್ಳುವುದಿಲ್ಲ ಎಂದು ತಿಳಿಸಲಾಗಿದೆ.

24 ರಿಂದ ಇನ್‌ವೈಸ್‌ ಅಪ್‌ಲೋಡ್‌
ವರ್ತಕರು ಮತ್ತು ಉದ್ದಿಮೆದಾರರು ಸರಕು ಮತ್ತು ಸೇವೆಗಳ ಖರೀದಿ ಹಾಗೂ ಮಾರಾಟದ ವಿವರಗಳನ್ನು (ಇನ್‌ವೈಸ್‌) ಜಿಎಸ್‌ಟಿಎನ್‌ ಅಂತರ್ಜಾಲ ತಾಣದಲ್ಲಿ ಇದೇ 24ರಿಂದ ಭರ್ತಿ ಮಾಡಬಹುದಾಗಿದೆ.

‘ವರ್ತಕರು ಪ್ರತಿ ದಿನ ಇಲ್ಲವೇ ವಾರಕ್ಕೊಮ್ಮೆ ತಮ್ಮ ಇನ್‌ವೈಸ್‌ಗಳನ್ನು ಅಪ್‌ಲೋಡ್‌ ಮಾಡಬಹುದು. ತಿಂಗಳಾಂತ್ಯದವರೆಗೆ ಕಾಯಬೇಕಾಗಿಲ್ಲ’ ಎಂದು ಜಿಎಸ್‌ಟಿಎನ್‌ ಅಧ್ಯಕ್ಷ ನವೀನ್‌ ಕುಮಾರ್‌ ತಿಳಿಸಿದ್ದಾರೆ.

ಹೂಡುವಳಿ ತೆರಿಗೆ ಹಿಂದೆ ಪಡೆಯಲು  ₹ 200ಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟಿನ ಇನ್‌ವೈಸ್‌ಗಳನ್ನು ಅನುಕ್ರಮ ಸಂಖ್ಯೆಯಲ್ಲಿ ಹೊಂದಿರುವುದು ಕಡ್ಡಾಯವಾಗಿದೆ. ಇನ್‌ವೈಸ್‌ಗಳನ್ನು ಆಫ್‌ಲೈನ್‌ನಲ್ಲಿ ತೆಗೆದು ಇರಿಸಲು ಜಿಎಸ್‌ಟಿಎನ್‌ ಎಕ್ಸೆಲ್‌  ಮಾದರಿ ಒದಗಿಸಿತ್ತು.  ಇದೇ 24 ರಿಂದ ಈ ಮಾಹಿತಿಯನ್ನೂ ಅಪ್‌ಲೋಡ್‌ ಮಾಡಬಹುದು.

ಎಚ್‌ಪಿ: ಪ್ರಿಂಟರ್‌ ಕಾಟ್ರಿಡ್ಜ್‌ ದುಬಾರಿ

ಜಿಎಸ್‌ಟಿಯಿಂದ ಎಚ್‌ಪಿ ಕಂಪೆನಿಯು ತನ್ನ ಬಹೂಪಯೋಗಿ ಪ್ರಿಂಟರ್‌ (ಎಂಎಫ್‌ಪಿ) ಮತ್ತು ಕಾಟ್ರಿಡ್ಜ್‌ಗಳ ಬೆಲೆಯನ್ನು ಶೇ 15 ರವರೆಗೂ ಏರಿಕೆ ಮಾಡಿದೆ.

ಎಫ್ಎಫ್‌ಪಿ ಗರಿಷ್ಠ ಚಿಲ್ಲರೆ ಮಾರಾಟ  ಬೆಲೆ ಶೇ 8 ರಿಂದ ಶೇ 10ರವರೆಗೆ ಮತ್ತು ಇಂಕ್‌ ಕಾಟ್ರಿಡ್ಜ್‌ ಬೆಲೆ ಶೇ 12 ರಿಂದ ಶೇ 15ರವರೆಗೆ ತುಟ್ಟಿಯಾಗಿವೆ.

ಎಚ್‌ಪಿ ನೋಟ್‌ಬುಕ್‌ ಮತ್ತು ಡೆಸ್ಕ್‌ಟಾಪ್‌ ಬೆಲೆಯಲ್ಲಿ ಬದಲಾವಣೆ ಮಾಡಿಲ್ಲ.  ಈ ಹಿಂದೆ ಇಂಕ್‌ ಕಾಟ್ರಿಡ್ಜ್‌ಗೆ ಶೇ 15 ರಿಂದ ಶೇ 18ರಷ್ಟು ತೆರಿಗೆ ಇತ್ತು. ಜಿಎಸ್‌ಟಿಯಲ್ಲಿ ಶೇ 28ಕ್ಕೆ ಏರಿಕೆಯಾಗಿದೆ  ಎಂದು ಕಂಪೆನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT