ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಕರು ಜಿಎಸ್‌ಟಿ ಮಾಹಿತಿ ಪಡೆದುಕೊಳ್ಳಿ

Last Updated 17 ಜುಲೈ 2017, 4:56 IST
ಅಕ್ಷರ ಗಾತ್ರ

ಬೀದರ್: ‘ಕೇಂದ್ರ ಸರ್ಕಾರ ಜುಲೈ 1 ರಿಂದ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆ ಪ್ರಕಾರ ಯಾವ ವಸ್ತುಗಳ ಮೇಲೆ ಎಷ್ಟು ತೆರಿಗೆ ದರ ನಿಗದಿಪಡಿಸಲಾಗಿದೆ ಎಂಬುವುದನ್ನು ಮೊದಲು ವರ್ತಕರು ಅರಿತುಕೊಳ್ಳಬೇಕು’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ(ಎಫ್‌ಕೆಸಿಸಿಐ) ಜಿಎಸ್‌ಟಿ ಸಮಿತಿಯ ಅಧ್ಯಕ್ಷ ಬಿ.ಟಿ.ಮನೋಹರ ಸಲಹೆ ಮಾಡಿದರು.

ಬೀದರ್‌ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತು ನಗರದ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಜಿಎಸ್‌ಟಿ ಕಾಯ್ದೆಯ ನಿಯಮಗಳು ಕನ್ನಡದಲ್ಲೂ ಲಭ್ಯ ಇದೆ. ಕಾಯ್ದೆಯಲ್ಲಿ 92 ಅಧ್ಯಾಯಗಳು, 174 ಭಾಗಗಳು ಇವೆ. ಹೀಗಾಗಿ ವರ್ತಕರು ಓದುವ ಮೂಲಕ ಕಾಯ್ದೆಯ ನಿಯಮಗಳನ್ನು ಸಮರ್ಪಕವಾಗಿ ತಿಳಿದುಕೊಳ್ಳಬೇಕು’ ಎಂದು ತಿಳಿಸಿದರು.

‘ಗ್ರಾಹಕರಿಂದ ತೆರಿಗೆ ಸಂಗ್ರಹ ಮಾಡುವಲ್ಲಿ ವಾಣಿಜ್ಯೋದ್ಯಮಿಗಳ ಪಾತ್ರ ಬಹಳ ಮಹತ್ವದ್ದು, ಆದ್ದರಿಂದ ವಾಣಿಜ್ಯೋದ್ಯಮಿಗಳು ತಾವು ಮಾರಾಟ ಮಾಡುತ್ತಿರುವ ವಸ್ತುವಿನ ಮೇಲೆ ಜಿಎಸ್‌ಟಿ ಪ್ರಕಾರ ನಿಗದಿಪಡಿಸಲಾಗಿದ ತೆರಿಗೆ ದರದ ಬಗ್ಗೆ ಸರಿಯಾಗಿ ತಿಳಿದುಕೊಂಡು ವ್ಯಾಪಾರ ನಡೆಸಬೇಕು. ಇದಕ್ಕಾಗಿಯೇ ಬಹುತೇಕ ಎಲ್ಲಾ ಕಡೆ ಜಿಎಸ್‌ಟಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೇಂದ್ರಗಳ ಸದುಪಯೋಗ ಪಡೆದುಕೊಳ್ಳಬಹುದು’ ಎಂದು ಹೇಳಿದರು.

‘ಜಿಎಸ್‌ಟಿ ಅಡಿ ನೋಂದಣಿ ಮಾಡಿಸುವಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿ ಇದೆ. ಶೇ 86 ರಷ್ಟು ವಾಣಿಜ್ಯೋದ್ಯಮಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ಕೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದರು.

ಬೆಂಗಳೂರಿನ ಇ–ಆಡಿಟ್‌ನ ಜಂಟಿ ಆಯುಕ್ತ ಕೆ.ಎಸ್‌. ಬಸವರಾಜು ಮಾತನಾಡಿ,‘ವರ್ತಕರು ತಾವು ಮಾರಾಟ ಮಾಡುವ ವಸ್ತುವಿನ ಮೇಲಿನ ತೆರಿಗೆ ದರ ಅರಿಯದಿದ್ದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಒಂದು ವಸ್ತುವಿನ ಮೇಲೆ ಜಿಎಸ್‌ಟಿ ಪ್ರಕಾರ ನಿಗದಿಪಡಿಸಿದ ತೆರಿಗೆ ದರಕ್ಕಿಂತ ಕಡಿಮೆ ತೆರಿಗೆ ಪಡೆದಲ್ಲಿ ಉಳಿದ ತೆರಿಗೆಯನ್ನು ವರ್ತಕರೇ ನೀಡಬೇಕಾಗುತ್ತದೆ’ ಎಂದು ತಿಳಿಸಿದರು.

‘ವರ್ತಕರು, ಹೊರ ರಾಜ್ಯದಿಂದ ಖರೀದಿ ಮಾಡಿದ ಸರಕುಗಳಿಗೆ ಐಜಿಎಸ್‌ಟಿ (ಅಂತರರಾಜ್ಯ ತೆರಿಗೆ) ಸಂಖ್ಯೆಯ ರಸೀದಿ ಪಡೆಯಬೇಕು. ರಾಜ್ಯದೊಳಗೆ ಖರೀದಿ ಹಾಗೂ ಮಾರಾಟ ಮಾಡುವ ಸರಕುಗಳಿಗೆ ಸಿಜಿಎಸ್‌ಟಿ (ಕೇಂದ್ರ ತೆರಿಗೆ) ಮತ್ತು ಎಸ್‌ಜಿಎಸ್‌ಟಿ (ರಾಜ್ಯ ತೆರಿಗೆ) ಸಂಖ್ಯೆಗಳಿರುವ ರಸೀದಿ ಪಡೆಯಬೇಕು’ ಎಂದು ತಿಳಿಸಿದರು.

‘ಜಿಎಸ್‌ಟಿಯಲ್ಲಿ ಏಕರೂಪ ತೆರಿಗೆ ವ್ಯವಸ್ಥೆ ಇದೆ. ಆರಂಭದಲ್ಲಿ ಈ ಬಗೆಗೆ ಸ್ವಲ್ಪ ಗೊಂದಲ ಇರಬಹುದು. ಇದರಿಂದ ಗ್ರಾಹಕರು ಮತ್ತು ವ್ಯಾಪಾರಿಗಳು ಯಾವುದೇ ರೀತಿಯ ಆತಂಕ ಪಡಬೇಕಿಲ್ಲ’ ಎಂದು ಕಲಬುರ್ಗಿಯ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಪದ್ಮಾಕರ ಕುಲಕರ್ಣಿ ಹೇಳಿದರು.

‘ವಾರ್ಷಿಕ ₹ 20 ಲಕ್ಷಕ್ಕೂ ಕಡಿಮೆ ವ್ಯವಹಾರ ನಡೆಸುವವರು ಜಿಎಸ್‌ಟಿ ಅಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಇಲ್ಲ. ಆದರೆ, ವಾರ್ಷಿಕ ₹ 20 ಲಕ್ಷಕ್ಕೂ ಹೆಚ್ಚು ವ್ಯವಹಾರ ನಡೆಸುವವರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಬೀದರ್‌ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಜಿ.ಪಿ. ಶ್ರೀನಿವಾಸ, ಎಸ್‌.ಎಂ. ಇನಾಮದಾರ, ಪ್ರಮುಖರಾದ ರಜನಿಶ್‌ ವಾಲಿ, ಡಾ. ವೀರೇಂದ್ರ ಶಾಸ್ತ್ರಿ, ಮಡಿವಾಳಪ್ಪ ಗಂಗಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT