ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿಯಿಂದ ರೇಷ್ಮೆ ಬೆಲೆ ಇಳಿಕೆಯತ್ತ

ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರ ಬದುಕು ಮೂರಾಬಟ್ಟೆ: ಮಾರುಕಟ್ಟೆಯಲ್ಲಿ ಗೂಡಿನ ಆವಕ ಕಡಿಮೆ
Last Updated 17 ಜುಲೈ 2017, 6:24 IST
ಅಕ್ಷರ ಗಾತ್ರ

ಚಿಂತಾಮಣಿ: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಜಿಎಸ್‌ಟಿ ಪರಿಣಾಮ ಜಿಲ್ಲೆಯ ರೈತರ ಜೀವನಾಡಿಯಾದ ರೇಷ್ಮೆ ಬೆಳೆಗೂ ಸಂಚಕಾರ ಒದಗಿದೆ. ರೇಷ್ಮೆ ಬೆಲೆ ಕುಸಿತದಿಂದಾಗಿ ಬರಗಾಲದಲ್ಲಿ ಬೆಳೆಗಾರರ ಬದುಕು ಮೂರಾಬಟ್ಟೆಯಾಗುತ್ತಿದೆ.

ಒಂದು ಕಾಲದಲ್ಲಿ ಅವಿಭಜಿತ ಕೋಲಾರ ಜಿಲ್ಲೆ ಎಂದರೆ  ಗೋಲ್ಡ್‌, ಸಿಲ್ಕ್‌, ಮಿಲ್ಕ್‌ ಎಂದು ಪ್ರಸಿದ್ಧಿಯಾಗಿತ್ತು. ಚಿನ್ನದ ಗಣಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಕೇಂದ್ರ ಸರ್ಕಾರದ ಜಿಎಸ್‌ಟಿ  ಜಾರಿ ಈಗ ರೇಷ್ಮೆ ಕೃಷಿಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಕಳೆದ ತಿಂಗಳು ಒಂದು ಕೆ.ಜಿಗೆ ₹ 450 ರಿಂದ 500ರ ವರೆಗೂ ಮಾರಾಟವಾಗುತ್ತಿದ್ದ ರೇಷ್ಮೆಗೂಡಿನ ಬೆಲೆ ₹ 300ರಿಂದ 350ಕ್ಕೆ  ಕುಸಿದಿದೆ. ಜಿಎಸ್‌ಟಿ ಕಾರಣದಿಂದಲೆ  ಗೂಡಿನ ಬೆಲೆ ಕುಸಿತಕ್ಕೆ ಕಾರಣ ಎಂದು ರೈತ ಸಂಘಟನೆಗಳು ಆರೋಪಿಸಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 14,158 ಹೆಕ್ಟೇರ್‌ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯುತ್ತಾರೆ. ಸುಮಾರು 16,218 ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿದ್ದಾರೆ. ವಾರ್ಷಿಕ 11,583 ಮೆಟ್ರಿಕ್‌ ಟನ್‌ ರೇಷ್ಮೆ ಗೂಡನ್ನು ಉತ್ಪಾದಿಸುತ್ತಾರೆ.

ಚಿಂತಾಮಣಿ ತಾಲ್ಲೂಕಿನಲ್ಲಿ ಸುಮಾರು 4030 ರೈತರು 4023 ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೆ ಕೃಷಿಯನ್ನು ಕೈಗೊಂಡಿದ್ದು, 3063 ಮೆಟ್ರಿಕ್‌ ಟನ್‌ ರೇಷ್ಮೆ ಗೂಡನ್ನು ಉತ್ಪಾದಿಸುತ್ತಾರೆ.

ಜಿಲ್ಲೆಯಲ್ಲಿ ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳಲ್ಲಿ ಅಧಿಕ ರೇಷ್ಮೆ ಬೆಳೆಗಾರರಿದ್ದಾರೆ. ನಗರದ ರೇಷ್ಮೆಗೂಡು ಮಾರುಕಟ್ಟೆಗೆ ನಿತ್ಯ ಸರಾಸರಿ 1.5 ರಿಂದ 2 ಟನ್‌ ರೇಷ್ಮೆ ಗೂಡು ಸರಬರಾಜಾಗುತ್ತಿದೆ. ಬೆಲೆ ಕುಸಿತದಿಂದ ಗೂಡಿನ ಆವಕ ತುಂಬಾ ಕಡಿಮೆಯಾಗಿದೆ.

ದಿನಕ್ಕೆ 200 ಲಾಟ್‌ ಬರುತ್ತಿದ್ದ ಗೂಡು 30–40 ಗಳಿಗೆ ಇಳಿದಿದೆ. ವ್ಯಾಪಾರಕ್ಕಾಗಿ ಬರುತ್ತಿದ್ದ  ರೀಲರ್‌ಗಳ ಸಂಖ್ಯೆ 200 ರಿಂದ 40ಕ್ಕೆ ಕುಸಿದಿದೆ ಎನ್ನುತ್ತಿದ್ದಾರೆ ಮಾರಾಟಗಾರರು.

ರೇಷ್ಮೆ ಮೇಲೆ 15 ಸಾವಿರ  ಕುಟುಂಬಗಳು ಅವಲಂಬಿತವಾಗಿವೆ.  ರೇಷ್ಮೆ ಕೃಷಿ ಕೂಲಿಗಾರರು, ರೀಲರ್‌ಗಳು, ಮಾರುಕಟ್ಟೆಗಳಲ್ಲಿನ ಆಳುಗಳು, ರೇಷ್ಮೆ ತೆಗೆಯುವಲ್ಲಿ ನಿರತರಾಗಿರುವ ಕಾರ್ಮಿಕರ ಮೇಲೂ ಇದು ಪರಿಣಾಮ ಬೀರಿದೆ.

ಕಳೆದ 3 ವರ್ಷಗಳ ಹಿಂದೆ ಇದೇ ರೀತಿಯ ಸಂಕಷ್ಟ ಒದಗಿಬಂದಿತ್ತು. ಕೇಂದ್ರ ಸರ್ಕಾರ ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇ 35 ರಿಂದ ಶೇ 5ಕ್ಕೆ ಇಳಿಸಿತ್ತು. ಬಹುತೇಕ ರೈತರು ಹಿಪ್ಪುನೇರಳೆ ತೋಟಗಳನ್ನು ಬುಡಸಮೇತ ಕಿತ್ತುಹಾಕಿ, ಬೇರೆ ಬೆಳೆಗಳ ಕಡೆಗೆ ಗಮನಹರಿಸಿದ್ದರು. ರೈತರ ಪ್ರತಿಭಟನೆ, ಚಳುವಳಿಗೆ ಮಣಿದ ಸರ್ಕಾರವು ಸುಂಕವನ್ನು ಶೇ 5ರಿಂದ 15ಕ್ಕೆ ಏರಿಸಿತ್ತು. ಬೆಲೆಯ ಪರಿಸ್ಥಿತಿ ಉತ್ತಮಗೊಂಡಿತ್ತು.

ಬೆಲೆ ಕುಸಿತದ ಬಿಕ್ಕಟ್ಟಿಗೆ ಸಿಲುಕಿರುವ ರೈತರನ್ನು ಉಳಿಸಲು ಕೇಂದ್ರ ಸರ್ಕಾರ ರೇಷ್ಮೆ ಮೇಲೆ ವಿಧಿಸಿರುವ ಜಿಎಸ್‌ಟಿಯನ್ನು ತೆಗೆದುಹಾಕಬೇಕು. ರೇಷ್ಮೆ ಆಮದು  ಶುಲ್ಕವನ್ನು ಹೆಚ್ಚಿಸಬೇಕು. ರಾಜ್ಯ ಸರ್ಕಾರ ರೇಷ್ಮೆ ಗೂಡಿಗೆ ವೈಜ್ಞಾನಿಕವಾಗಿ ಬೆಲೆ ನಿಗಧಿ ಮಾಡಲು ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು ಎಂದು ಬೆಳೆಗಾರರ ಒತ್ತಾಯಿಸುತ್ತಿದ್ದಾರೆ.

**

ರೇಷ್ಮೆಗೆ ಶೇ 5ರಷ್ಟು ಜಿಎಸ್‌ಟಿ ವಿಧಿಸಿರುವುದರಿಂದ ರೇಷ್ಮೆ ಬೆಲೆ ಕುಸಿದಿದೆ. ರೇಷ್ಮೆ ವ್ಯಾಪಾರಿಗಳು ಅದನ್ನು  ರೀಲರ್‌ಗಳಿಗೆ ವರ್ಗಾಯಿಸುತ್ತಾರೆ. ರೀಲರ್‌ಗಳು ಗೂಡಿನ ಕೊಳ್ಳುವ ಬೆಲೆಯನ್ನು ಕಡಿಮೆ ಮಾಡಿ ರೈತರಿಗೆ ವರ್ಗಾಯಿಸುತ್ತಾರೆ. ಅಂತಿಮವಾಗಿ ಜಿ.ಎಸ್‌.ಟಿ ರೈತರ ಹೆಗಲಿಗೆ ಬೀಳುತ್ತದೆ.
–ಸಿ.ಕೆ.ಶಬ್ಬೀರ್‌, ರೀಲರ್‌

**

ಜಿಎಸ್‌ಟಿ ಕುರಿತು ಸೂಕ್ತ ಮಾಹಿತಿ ಇಲ್ಲದೆ ವ್ಯಾಪಾರಿಗಳು ರೇಷ್ಮೆಯನ್ನು ಹೆಚ್ಚಾಗಿ ಕೊಳ್ಳದೆ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಜಿಎಸ್‌ಟಿ ಬಗ್ಗೆ ಭಯ, ಅನುಮಾನವಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ.
–ಬಿ.ಆರ್‌.ಸುಧಾಕರ್‌,
ಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT