ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಕಟ್ಟಡಗಳ ಕುರಿತಂತೆ ಮೌನ: ಆರೋಪ

Last Updated 18 ಜುಲೈ 2017, 4:53 IST
ಅಕ್ಷರ ಗಾತ್ರ

ಹೊಸನಗರ: ‘ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದ ಅಕ್ರಮ ಕಟ್ಟಡಗಳು ಮೇಲೇಳುತ್ತಿವೆ. ಆಡಳಿತ ನಡೆಸುತ್ತಿರುವವರು ಇತ್ತ ಗಮನ ನೀಡುತ್ತಿಲ್ಲ’ ಎಂದು ಆರೋಪಿಸಿದ ಪ್ರತಿಪಕ್ಷದ ಸದಸ್ಯರು ಸೋಮವಾರ ನಡೆದ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಗೆ ಆರಂಭದಲ್ಲಿ ಅಡ್ಡಿ ಪಡಿಸಿದರು.

ಇಲ್ಲಿನ ಜೆಸಿಎಂ ರಸ್ತೆಯಲ್ಲಿ ಖಾಸಗಿ ವ್ಯಕ್ತಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಜನ ಸಾಮಾನ್ಯರು ಸಣ್ಣ ತಪ್ಪು ಮಾಡಿದರೆ ಕಾನೂನು ಕಟ್ಟಳೆ ಎಂದು ದಂಡಿಸುವ, ಅಲೆದಾಡಿಸುವ ಪಟ್ಟಣ ಪಂಚಾಯ್ತಿ ಆಡಳಿತ ಪಕ್ಷದ ಸದಸ್ಯರು ಈ ವಿಚಾರದಲ್ಲಿ ಮೌನ ಆಗಿರುವುದೇಕೆ ಎಂದು ಪ್ರತಿಪಕ್ಷದ ನಾಯಕ ಶ್ರೀಪತಿರಾವ್ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷ ಹಾಲಗದ್ದೆ ಉಮೇಶ್, ‘ತಮ್ಮ ಅವಧಿಯಲ್ಲಿ ಈ ಕಟ್ಟಡ ನಿರ್ಮಾಣ ಆಗಿದ್ದು ಅಲ್ಲ. ಈಗ ಆರೋಪಿಸುತ್ತಿರುವರೇ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದಾಗ ಈ ಕಟ್ಟಡದ ನಿರ್ಮಾಣ ಕಾರ್ಯ ಆರಂಭವಾಗಿದೆ’ ಎಂದು ಉತ್ತರಿಸಿದರು.

ಸುಮಾರು ₹ 2 ಕೋಟಿ ಅನುದಾನ ದಲ್ಲಿ ನಿರ್ಮಿಸಲು ಉದ್ದೇಶಿಸಿರುವ  ಪಟ್ಟಣ ಪಂಚಾಯ್ತಿ ನೂತನ ಕಾರ್ಯಾಲಯವನ್ನು ಹಳೆ ಗೀತಾ ಟಾಕೀಸ್ ಇದ್ದ ಸ್ಥಳದಲ್ಲಿ ನಿರ್ಮಿಸಲು ನಿರ್ಣಯ ಕೈಗೊಳ್ಳಲಾಯಿತು. ಸದಸ್ಯ ಎಚ್.ಎನ್. ಶ್ರೀಪತಿರಾವ್ ಈಗ ಹಾಲಿ ಇರುವ ಪುರಭವನವನ್ನು ಕೆಡವಿ ಅಲ್ಲಿ ಹೊಸ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿದರು. ಈಗ ಹಾಲಿ ಇರುವ ಪುರಭವನವನ್ನು ಸ್ಮಾರಕವಾಗಿ ಹಾಗೆ ಉಳಿಸಿಕೊಳ್ಳಬೇಕು ಎಂದು ಸದಸ್ಯ ಚಂದ್ರಶೇಖರ ಶೇಟ್ ಮನವಿ ಮಾಡಿದರು.

ಉರಿಯದ ಬೀದಿ ದೀಪ ಒಡೆದು ಹಾಕುವೆ: ‘ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ದೀಪ ಉರಿಯುತ್ತಿಲ್ಲ. ಅಂಚೆ ಕಚೇರಿ ರಸ್ತೆಯಲ್ಲಿ ಬೆಳಗದ ದೀಪಗಳು ಇವೆ. ಕೆಲವೊಂದು ಕಡೆಗಳಲ್ಲಿ ದುರಸ್ತಿ ಕಾಣದೆ ವರ್ಷವಾಗಿದೆ. ಈ ಕೂಡಲೇ ಬೀದಿದೀಪಗಳನ್ನು ದುರಸ್ತಿ ಮಾಡಬೇಕು. ಇಲ್ಲವಾದರೆ ತಾವೇ ಉರಿಯದ ಬಲ್ಬುಗಳನ್ನು ಒಡೆದು ಹಾಕುವೆ’ ಎಂದು  ಸದಸ್ಯೆ ಕೃಷ್ಣವೇಣಿ ಆಕ್ರೊಶ ವ್ಯಕ್ತಪಡಿಸಿದರು.

ಸ್ಚಚ್ಚ ಭಾರತ್ ಯೋಜನೆ ಅಡಿಯಲ್ಲಿ ಕೈಗೊಂಡ ಶೌಚಾಲಯ ವಿತರಣೆ ಕಾರ್ಯದಲ್ಲಿ ಅಕ್ರಮ ನಡೆದಿದೆ. ಯಾವ ಮಾನದಂಡದ ಆಧಾರದ ಮೇಲೆ  ಫಲಾನುಭವಿಗಳ ಆಯ್ಕೆ ನಡೆದಿದೆ ಎಂದು ಪ್ರತಿಪಕ್ಷದ ಸದಸ್ಯರು ಪ್ರಶ್ನಿಸಿದರು. ಊಹಾಪೋಹದ ಆಧಾರದ ಮೇಲೆ ಸದಸ್ಯರು ಸುಳ್ಳು ಆರೋಪ ಮಾಡುವುದನ್ನು ಕೈ ಬಿಡಬೇಕು. ಯಾವುದೇ ಗೊತ್ತುಗುರಿ ಇಲ್ಲದೇ ಮಾತನಾಡುವುದು ಶೋಭೆ ತರದು. ಅವ್ಯವಹಾರ ಆಗಿದ್ದರೆ ಸಾಕ್ಷ್ಯ ನೀಡಿ ಎಂದು ಅಧ್ಯಕ್ಷರು ಸವಾಲು ಹಾಕಿದರು.

ಪಟ್ಟಣದ ಪ್ರಮುಖ ರಸ್ತೆಗಳಾದ ಚೌಡಮ್ಮರಸ್ತೆ, ಶಿವಪ್ಪನಾಯಕ ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಅದರ ಮಧ್ಯೆ ಹಣ್ಣಿನ ವ್ಯಾಪಾರಿಗಳು ಅಲ್ಲೇ ಬಿಡಾರ ಹೋಡುವುದರಿಂದ ನಾಗರಿಕರ ಓಡಾಟಕ್ಕೆ ತೊಂದರೆ ಆಗುತ್ತಿದೆ. ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದು ಕೆಲವು ಸದಸ್ಯರು ಪಟ್ಟು ಹಿಡಿದರು.
ಅಣೆ–ಪ್ರಮಾಣ: ಸಭೆಯಲ್ಲಿ ಕೆಲವೊಂದು ವಿಚಾರದ ಚರ್ಚೆಗೆ ಬಂದಾಗ ಅಧ್ಯಕ್ಷ ಹಾಲಗದ್ದೆ ಉಮೇಶ ಹಾಗೂ ಶ್ರೀಪತಿರಾವ್ ನಡುವೆ ದೇವರ ಹೆಸರಿನಲ್ಲಿ ಆಣಿ –ಪ್ರಮಾಣ ಹಾಕಿದ ಘಟನೆಯೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT