ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಹಂಚಿಕೆಯಲ್ಲಿ ತಾರತಮ್ಯ

Last Updated 18 ಜುಲೈ 2017, 5:12 IST
ಅಕ್ಷರ ಗಾತ್ರ

ಚನ್ನಗಿರಿ: ‘ಐಡಿಎಸ್‌ಎಂಟಿ ಯೋಜನೆಯಡಿ ₹ 28 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಿದ್ಧಪಡಿಸಿರುವ ಕ್ರಿಯಾ ಯೋಜನೆಯ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ’ ಎಂದು ಪುರಸಭೆ ಪ್ರತಿಪಕ್ಷದ ಸದಸ್ಯರಾದ ಕೆ.ಆರ್‌. ಮಾಲತೇಶ್‌, ಮಂಜುನಾಥ್‌ ಆರೋಪಿಸಿದರು.

ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಕ್ರಿಯಾಯೋಜನೆ ಪ್ರಸ್ತಾವವನ್ನು ಉಪ ವಿಭಾಗಾಧಿಕಾರಿಗೆ ಸಲ್ಲಿಸಲಾಗಿದೆ. ಆದರೆ, ಇದರಲ್ಲಿ 2, 3, 7, 11 ಹಾಗೂ 17ನೇ ವಾರ್ಡ್‌ಗಳಿಗೆ ಮಾತ್ರ ಅನುದಾನ ಹಂಚಿಕೆ ಮಾಡಲಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಒಂದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಸಮರ್ಪಕವಾಗಿ ನೀರು ಪೂರೈಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸಭೆಯ ಹಿಂದಿನ ತೀರ್ಮಾನದಂತೆ ಐದು ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದು ಪಟ್ಟಣದ ಎಲ್ಲಾ ವಾರ್ಡ್‌ಗಳಿಗೆ ಕುಡಿಯುವ ನೀರನ್ನು ಒದಗಿಸಬೇಕಾಗಿತ್ತು.

ಆದರೆ, ಏಕಾಏಕಿ ಹಿಂದಿನಂತೆ ಪೈಪ್‌ಲೈನ್ ಮೂಲಕ ವಾರಕ್ಕೆ ಒಮ್ಮೆ 30 ನಿಮಿಷ ನೀರು ಬಿಡಲಾಗುತ್ತಿದೆ’ ಎಂದು ಸದಸ್ಯರಾದ  ರುದ್ರಯ್ಯ, ಶಿವಕುಮಾರ್, ಮೆಹಬೂಬ್ ಪೀರಾನ್ ಒತ್ತಾಯಿಸಿದರು.

ಪುರಸಭೆಯ ನಲ್ಲಿಗಳಲ್ಲಿ ಹದಿನೈದು ದಿನಗಳಿಗೆ ಒಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಿರು ವಾಗ ಜನರು ನೀರಿನ ಕಂದಾಯವನ್ನು ಕಟ್ಟಲು ಸಾಧ್ಯವಿಲ್ಲ. ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವವರೆಗೂ ಕಂದಾಯವನ್ನು ಕಟ್ಟಿಸಿಕೊಳ್ಳಲು ಕಂದಾಯ ಅಧಿಕಾರಿಗಳು ಬರಬಾರದು ಎಂದು ಸದಸ್ಯ ರಾಮಚಂದ್ರ ಪ್ರಜಾಪತಿ, ಉಪಾಧ್ಯಕ್ಷೆ ಸುನೀತಾ ಗಣೇಶ್ ಆಗ್ರಹಿಸಿದರು.

ಐಡಿಎಸ್‌ಎಂಟಿ ಯೋಜನೆಯಡಿ ಪಟ್ಟಣದ ವಾರ್ಡ್‌ 7ರಲ್ಲಿನ ಹೆಲಿಪ್ಯಾಡ್ ಬಳಿ ಸಿಸಿ ಚರಂಡಿ ನಿರ್ಮಾಣಕ್ಕೆ ₹ 4.50 ಲಕ್ಷ, ಇದೇ ವಾರ್ಡ್‌ನಲ್ಲಿ ಮೂರು ಮಿನಿ ಟ್ಯಾಂಕ್ ಮತ್ತು ಪೈಪ್‌ಲೈನ್ ಅಳವಡಿಕೆಗೆ ₹ 3.50 ಲಕ್ಷ, ಸಿಸಿ ಚರಂಡಿಗೆ ₹ 2.50 ಲಕ್ಷ, ವಾರ್ಡ್‌ 4ರಲ್ಲಿ ಸಿಸಿ ರಸ್ತೆಗೆ ₹ 4 ಲಕ್ಷ, ವಾರ್ಡ್‌ 2ರಲ್ಲಿ ಕೊಳವೆಬಾವಿ ಕೊರೆದು, ಮೋಟಾರ್ ಅಳವಡಿಸಿ ಎರಡು ಮಿನಿ ಟ್ಯಾಂಕ್ ಮತ್ತು ಪೈಪ್‌ ಲೈನ್ ಅಳವಡಿಕೆಗೆ ₹ 3.50 ಲಕ್ಷ, ವಾರ್ಡ್‌ 11ರಲ್ಲಿ ಸಿಸಿ ರಸ್ತೆ ಹಾಗೂ ಎರಡು ಡೆಕ್‌ಸ್ಲಾಬ್ ನಿರ್ಮಾಣ ಕಾಮಗಾರಿಗೆ ₹ 5 ಲಕ್ಷ  ಅನುದಾನ ನೀಡಲಾಗಿದೆ ಎಂದು ಅಧ್ಯಕ್ಷ ಬಿ.ಆರ್. ಹಾಲೇಶ್ ಮಾಹಿತಿ ನೀಡಿದರು.

ಸ್ವಚ್ಛ ಭಾರತ ಯೋಜನೆಯಡಿ ಪಟ್ಟಣದ ವಾರ್ಡ್‌ 7ರಿಂದ 10 ಹಾಗೂ 12 ಮತ್ತು 14ರಿಂದ 18ರವರೆಗಿನ ವಾರ್ಡ್‌ಗಳನ್ನು ಬಯಲು ಶೌಚ ಮುಕ್ತ ವಾರ್ಡ್‌ಗಳೆಂದು ಘೋಷಿಸುವ ಬಗ್ಗೆ ಆರೋಗ್ಯ ಶಾಖೆಯಿಂದ ಮಾಹಿತಿ ಬಂದಿದೆ. ಹೀಗಾಗಿ ಈ ವಾರ್ಡ್‌ಗಳ ಎಲ್ಲಾ ಮನೆಗಳಲ್ಲಿ ಶೌಚಾಲಯಗಳು ಇರುವುದರಿಂದ ಬಯಲು ಶೌಚ ಮುಕ್ತ ವಾರ್ಡ್‌ಗಳೆಂದು ಘೋಷಿಸಲು ಸಭೆ ಸರ್ವಾ ನುಮತದಿಂದ ತೀರ್ಮಾನಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ವೈ. ರವಿಕುಮಾರ್, ಮುಖ್ಯಾಧಿಕಾರಿ ಎನ್. ನಾಗೇಂದ್ರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT