ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಹೊಣೆಗಾರಿಕೆಗೆ ₹12 ಕೋಟಿ ವೆಚ್ಚ

Last Updated 18 ಜುಲೈ 2017, 5:37 IST
ಅಕ್ಷರ ಗಾತ್ರ

ಚಿಂಚೋಳಿ: ದೇಶದ ಏಕೈಕ ಪೂರ್ಣಪ್ರಮಾಣದ ಫ್ರೆಂಚ್‌ ಮೂಲದ ಸಿಮೆಂಟ್‌ ಕಂಪೆನಿ ದಿ ಕಲಬುರ್ಗಿ ಸಿಮೆಂಟ್‌ ಘಟಕ ಸ್ಥಾಪನೆಯಾದ ದತ್ತು ಗ್ರಾಮಗಳಲ್ಲಿ ಸಮುದಾಯ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಲು ₹12 ಕೋಟಿ ವೆಚ್ಚ ಮಾಡಲಾಗಿದೆ ಎಂದು ಕಂಪೆನಿಯ ಸಿಇಒ ಅನುಪ್‌ ಸಕ್ಸೆನಾ ತಿಳಿಸಿದರು.

ಅವರು ಸೋಮವಾರ ಚತ್ರಸಾಲ್‌ ಗ್ರಾಮದಿಂದ ಕರನಕೋಟ್‌ ಗ್ರಾಮದವರೆಗೆ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 6 ಕಿ.ಮೀ ಉದ್ದದಲ್ಲಿ 7 ಸಾವಿರ ದುಬೈ ತಳಿಯ ಸದಾ ಹಸಿರಾಗಿರುವ ಸಸಿ ನೆಡಲು ಚಾಲನೆ ನೀಡಿ ಮಾತನಾಡಿದರು.

ಸಿಮೆಂಟ್‌ ಕಂಪೆನಿಗಳ ಬಗ್ಗೆ ಜನರಲ್ಲಿ ತಪ್ಪು ಭಾವನೆಯಿದೆ. ಅವು ಪರಿಸರ ಮಾಲಿನ್ಯ ಉಂಟು ಮಾಡುತ್ತವೆ ಎಂಬುದಾಗಿದೆ. ಆದರೆ, ಕಂಪೆನಿಯ ಹಸಿರು ಯಾವುದೇ ರೆಸಾರ್ಟ್‌ಗಿಂತಲೂ ಕಡಿಮೆಯಿಲ್ಲ. ಕಂಪೆನಿ ಸ್ಥಾಪನೆಯ ಜತೆಗೆ ನಾವು ಪರಿಸರ ಸಂರಕ್ಷಣೆಗೆ ಒತ್ತು ನೀಡಿದ್ದೇವೆ. ಒಂದೆಡೆ ಕಂಪೆನಿ ಸ್ಥಾಪನೆಯ ಚಟುವಟಿಕೆ ಜತೆಯಲ್ಲಿಯೇ ಸಸಿ ನೆಟ್ಟು ಬೆಳೆಸುವುದು ಎರಡನ್ನು ಮಾಡಿದ್ದರಿಂದಲೇ ಚತ್ರಸಾಲ್‌ ಗ್ರಾಮದ  ಕಂಪೆನಿ ಪರಿಸರ ಸ್ನೇಹಿಯಾಗಿ ಮೈದಳೆಯುವಂತೆ ಮಾಡಿದ್ದೇವೆ ಎಂದರು.

ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಿದ ಅವರು, ಎರಡು ತಿಂಗಳಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಂಡು ಜನರನ್ನು ಕರೆಸಿ ಉದ್ಘಾಟಿಸಬೇಕೆಂದರು. ಗ್ರಾಮದಲ್ಲಿ ಕಬ್ಬಿಣದ ವಿದ್ಯುತ್‌ ಕಂಬ ಸ್ಥಳಾಂತರ, ಸಿಸಿ ರಸ್ತೆ, ಚರಂಡಿ, ಸಾಮೂಹಿಕ ಶೌಚಾಲಯ, ಪ್ರತಿದಿನ 1 ಸಾವಿರ ಲೀಟರ್‌ ನೀರು ಶುದ್ಧಿಕರಣ ಘಟಕ ಸ್ಥಾಪಿಸಿ ಜನತೆಗೆ ಉಚಿತವಾಗಿ ಪೂರೈಸಲಾಗುತ್ತಿದೆ ಎಂದರು.

ಕಂಪೆನಿಯ 8 ಎಕರೆ ಜಮೀನಿನಲ್ಲಿ ಪ್ರಾಯೋಗಿಕವಾಗಿ ತೊಗರಿ ಬಿತ್ತನೆ ನಡೆಸಲಾಗಿತ್ತು. ಇದರಿಂದ ಹಸಿರು ಬೆಳೆಸುವುದರ ಜತೆಗೆ 25 ಕ್ವಿಂಟಲ್‌ ತೊಗರಿ ಬೇಳೆ ಇಳುವರಿ ಪಡೆಯಲಾಗಿದೆ. ಇದನ್ನು ಕಂಪೆನಿಯ ನೌಕರರಿಗೆ ಉಚಿತವಾಗಿ ನೀಡಿದರು.

ಗ್ರಾಮದಲ್ಲಿ ಈಗಾಗಲೇ 120 ವೈಯಕ್ತಿಕ ಶೌಚಾಲಯ ನಿರ್ಮಿಸಲಾಗಿದೆ. ಇನ್ನೂ 100 ಶೌಚಾಲಯ ನಿರ್ಮಾಣ ಪ್ರಗತಿಯಲ್ಲಿವೆ. ಮುಂದಿನ ಜನವರಿಯಿಂದ ನೆರೆಯ ತೆಲಂಗಾಣ ರಾಜ್ಯದ ಓಗಿಪುರ ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಆರಂಭಿಸಲಾಗುವುದು ಎಂದರು. ಗ್ರಾಮದಲ್ಲಿ ಆಸ್ಪತ್ರೆ ತೆರೆಯಲಾಗಿದ್ದು ಪ್ರತಿದಿನ 50 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದಲ್ಲಿ ರುದ್ರಭೂಮಿ ಅಭಿವೃದ್ಧಿಪಡಿಸಬೇಕು, ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಾಯಕಲ್ಪ ಮಾಡಬೇಕು. ಘನತ್ಯಾಜ್ಯ ವಿಲೇವಾರಿ ಘಟಕ ಗುಣಮಟ್ಟದಿಂದ ನಡೆಸಬೇಕೆಂದು ಗ್ರಾಮದ ಮುಖಂಡ ಮೋಯಿನ್‌ ಪಾಷಾ ಒತ್ತಾಯಿಸಿದರು.

ಕಂಪೆನಿಯ ಸಿಒಒ ಲೌರೆಂಟ್‌, ಕಂಪೆನಿಯ ಮುಖ್ಯಸ್ಥ ಅನುಭವ ವರ್ಮಾ, ಹಿರಿಯ ಮುಖ್ಯ ವ್ಯವಸ್ಥಾಪಕ ಪವನ್‌, ಉಪ ಪ್ರಧಾನ ವ್ಯವಸ್ಥಾಪಕ ಅಂಜನಕುಮಾರ ದಾಸ, ಗ್ರಾಮ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ, ಲಕ್ಷ್ಮಿಕಾಂತರೆಡ್ಡಿ, ಪರಿಸರ ಅಧಿಕಾರಿ  ಸುನಿಲಕುಮಾರ, ಗೋಪಾಲರೆಡ್ಡಿ ಕಲ್ಲೂರು, ಗ್ರಾಮದ ಮುಖಂಡರಾದ ರಾಮರೆಡ್ಡಿ ಪಾಟೀಲ, ಆನಂದರೆಡ್ಡಿ ಪಾಟೀಲ, ಮೋಮಿನ್‌ ಪಾಷಾ, ಗೋಪಾಲ ಮಡಗ, ಬಸವರಾಜ ಪಾಟೀಲ ಇದ್ದರು.

* * 

ಚತ್ರಸಾಲ್‌ ಗ್ರಾಮದಲ್ಲಿ ನನೆಗುದಿಗೆ ಬಿದ್ದಿರುವ ರುದ್ರಭೂಮಿ ಅಭಿವೃದ್ಧಿಗೆ ಕಂಪೆನಿ ಗಮನಹರಿಸಿ, ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಬೇಕು.
ರಾಮರೆಡ್ಡಿ ಪಾಟೀಲ
ಗ್ರಾಮದ ಮುಖಂಡರು, ಚತ್ರಸಾಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT