ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಮಹಾಸಭಾದಿಂದ ಸಚಿವ ಖಂಡ್ರೆ ಹೊರಬರಲಿ

Last Updated 18 ಜುಲೈ 2017, 5:40 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಲಿಂಗಾಯತ ಸ್ವತಂತ್ರ ಧರ್ಮಕ್ಕೆ ವೀರಶೈವ ಮಹಾಸಭಾ ದೊಡ್ಡ ಅಡ್ಡಿಯಾಗಿದೆ ಹಾಗಾಗಿ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರು ವೀರಶೈವ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯ ಹೋರಾಟಕ್ಕೆ ಬೆಂಬಲಿಸಬೇಕು’ ಎಂದು ಕೂಡಲ ಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಆಗ್ರಹಿಸಿದರು.

ಸೋಮವಾರ ಇಲ್ಲಿನ ಬಸವ ಮಹಾಮನೆಯಲ್ಲಿ ಆಯೋಜಿಸಿದ್ದ ಬೀದರ್‌ನಲ್ಲಿ ಜುಲೈ 19ರಂದು ಹಮ್ಮಿಕೊಂಡಿರುವ ಬೃಹತ್‌ ರ್‍ಯಾಲಿಯ ಪೂರ್ವಭಾವಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಬೆಂಗಳೂರಿನಲ್ಲಿ ವೀರಶೈವ ಮಹಾಸಭಾ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಶಿಫಾರಸು ಮಾಡುವ ಭರವಸೆ ನೀಡಿದ್ದಾರೆ. ಆದರೆ ಆ ಸಭೆಯಲ್ಲಿ ಮುಖ್ಯಮಂತ್ರಿಗಳ ಎದುರು ಈಶ್ವರ ಖಂಡ್ರೆಯವರು ವೀರಶೈವ ಲಿಂಗಾಯತ ಧರ್ಮದ ಪ್ರಸ್ತಾಪ ಮಾಡಿರುವುದು ಸರಿಯಲ್ಲ. ಖಂಡ್ರೆ ಅವರ ಜಾತಿ ಪ್ರಮಾಣಪತ್ರದಲ್ಲಿ ಲಿಂಗಾಯತ ಎಂದು ನಮೂದಿಸಲಾಗಿದೆ’ ಎಂದಿದ್ದಾರೆ.

‘ಲಿಂಗಾಯತ ಧರ್ಮವು ವೈಜ್ಞಾನಿಕ ತಳಹದಿ ಹೊಂದಿದ್ದು ಮೂಢನಂಬಿಕೆ ಮತ್ತು ವೈದಿಕ ಆಚರಣೆ ನಂಬುವುದಿಲ್ಲ. ಸಮಾನತೆ ಸಾರುವ ಬಸವಧರ್ಮದಲ್ಲಿ ಇಷ್ಟಲಿಂಗದ ಪೂಜೆಗೆ ಪ್ರಾಧಾನ್ಯತೆಯಿದೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ವೀರಶೈವರೇ ಇಲ್ಲ. ಈ ನಡುವೆ ಕೆಲವರು ಲಿಂಗಾಯತ ಬಾಟಲ್ ಮೇಲೆ ವೀರಶೈವದ ಲೇಬಲ್ ಹಚ್ಚಿ ಎಲ್ಲರೂ ವೀರಶೈವರು ಎಂದು ನಂಬಿಸಲು ಹೊರಟಿದ್ದಾರೆ. ಈ ನಿಟ್ಟಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯು ಘೋರ ಅಪರಾಧ ಎಸಗುತ್ತಿದೆ’ ಎಂದು ದೂರಿದರು.

‘ರಂಭಾಪುರಿ ಪೀಠದ ವೀರ ಸೋಮೇಶ್ವರ ಶಿವಾಚಾರ್ಯರು, ಶ್ರೀಶೈಲ ಪೀಠದ ಶಿವಾಚಾರ್ಯರು ಹಾಗೂ ಸಂಶೋಧಕ ಡಾ.ಚಿದಾನಂದ ಮೂರ್ತಿ ಅವರು ಲಿಂಗಾಯತ ಧರ್ಮವು ಪ್ರತ್ಯೇಕ ಧರ್ಮ ಅಲ್ಲ ಎಂದು ಹೇಳಿ ಸಮಾಜದ ದಿಕ್ಕು ತಪ್ಪಿಸುತ್ತಿದ್ದಾರೆ. ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬೀದರ್‌ನಲ್ಲಿ ಜುಲೈ 19ರಂದು ಇದಕ್ಕಾಗಿ ಆಗ್ರಹಿಸಿ ಮಹಾರ್‍ಯಾಲಿ ನಡೆಯಲಿದ್ದು, ಒಳ ಪಂಗಡಗಳನ್ನು ಮರೆತು ಎಲ್ಲರೂ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲು ಸೂಚಿಸಿದ್ದಾರೆ. ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರಿಟ್ಟಿದ್ದಾರೆ. ಅದರಂತೆ ಗುಲಬುರ್ಗಾ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರು ಇಡಬೇಕು’ ಎಂದು ಮಾತೆ ಮಹಾದೇವಿ ಆಗ್ರಹಿಸಿದ್ದಾರೆ.

ಬಸವ ಮಹಾಮನೆಯ ಸಿದ್ದರಾಮೇಶ್ವರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ, ರಾಷ್ಟ್ರೀಯ ಬಸವದಳ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಶಿವಪುರ, ಲಿಂಗಾಯತ ಧರ್ಮ ಸಭಾದ ಮಲ್ಲಣ್ಣ ಹಳ್ಳಿಖೇಡ್, ಶಿವಲಿಂಗಯ್ಯ ಕನಾಡೆ, ಶಿವರಾಜ ಖಪಲೆ, ಬಸವಕುಮಾರ ಕೌಠೆ, ಚಂದ್ರ ಶೇಖರಸ್ವಾಮಿ ಪಾಲ್ಗೊಂಡಿದ್ದರು.

* * 

ವೀರಶೈವವು ವೇದಾಗಮಗಳನ್ನು ಒಪ್ಪುವ ಶೈವ ಪಂಥವಾಗಿದೆ. ಅದು ಹಿಂದೂ ಧರ್ಮದ ಒಂದು ಅಂಗ. ಲಿಂಗಾಯತ ಧರ್ಮವನ್ನು ಬಸವಣ್ಣ  ಸ್ಥಾಪಿಸಿದ್ದಾರೆ.
ಮಾತೆ ಮಹಾದೇವಿ
ಕೂಡಲ ಸಂಗಮ ಬಸವಧರ್ಮ ಪೀಠಾಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT