ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಪೂರೈಕೆಗೆ ಸೂಚನೆ

Last Updated 18 ಜುಲೈ 2017, 5:50 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಯರಗೋಳ ಗ್ರಾಮದಲ್ಲಿನ ಬಾಲಕರ ವಸತಿ ನಿಲಯದಲ್ಲಿ ಒಂದು ವರ್ಷದಿಂದ ನೀರಿನ ತೊಂದರೆಯಾಗಿರುವ ಕುರಿತು ದೂರುಗಳು ಬಂದ ಕಾರಣ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿ ಎಂ.ಪಾಟೀಲ ಸೋಮವಾರ ಭೇಟಿ ನೀಡಿ ವಸತಿ ನಿಲಯದಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಕುಡಿಯುವ ನೀರಿನ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದ ಅವರು, ಕೊಳವೆಬಾವಿಯನ್ನು ಕೂಡಲೇ ದುರಸ್ತಿಪಡಿಸಲು ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
‘ನೀರಿನ ವ್ಯವಸ್ಥೆ ಇಲ್ಲದೇ ವರ್ಷ ಕಳೆದರೂ ಏನು ಮಾಡುತ್ತಿದ್ದೀರಿ? ಮೇಲಧಿಕಾರಿಗಳಿಗೆ ಏಕೆ ವರದಿ ಸಲ್ಲಿಸಿಲ್ಲ’ ಎಂದು ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡರು.

‘ಕೊಳವೆಬಾವಿ ಕೆಟ್ಟಿದ್ದು ಪಕ್ಕದ ಹಿಂದುಳಿದ ವರ್ಗಗಳ ವಸತಿ ನಿಲಯದಿಂದ ತಾತ್ಕಾಲಿಕವಾಗಿ ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂದು  ಮೇಲ್ವಿಚಾಕರು  ಉತ್ತರಿಸಿದರು.
ವರ್ಷದ ಹಿಂದೆ ನಿರ್ಮಾಣವಾಗಿರುವ ಕಟ್ಟಡದ ಅಡುಗೆ ಕೋಣೆ ಸೋರುತ್ತಿರುವುದನ್ನು ಗ್ರಾಮಸ್ಥರು ಅಧ್ಯಕ್ಷರ ಗಮನಕ್ಕೆ ತಂದರು. ಹೊಸ ಕಟ್ಟಡಕ್ಕೆ ಪ್ರಸ್ತಾವ ಸಲ್ಲಿಸುವಂತೆ ಸ್ಥಳದಲ್ಲಿಯೇ ಇದ್ದ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ವಸತಿ ನಿಲಯದ ಆವರಣದಲ್ಲಿ ನಿರುಪಯುಕ್ತ ಕಟ್ಟಡವನ್ನು ತೆರವುಗೊಳಿಸಿ ಅಡುಗೆ ಕೋಣೆ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಕ್ರಮದ ಭರವಸೆ ನೀಡಿದರು. ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಸತಿ ನಿಲಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಭೇಟಿ:  ಯರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು. ಸಂದರ್ಶಕರ ಪುಸ್ತಕ ಇಲ್ಲದಿರುವುದಕ್ಕೆ ಸಿಬ್ಬಂದಿಯನ್ನು ಪ್ರಶ್ನಿಸಿದರು. ಬಳಿಕ ಹೆರಿಗೆ ಆಸ್ಪತ್ರೆಯಲ್ಲಿ ನೀಡುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

ಆಸ್ಪತ್ರೆಯಲ್ಲಿ ಹಾವು ಮತ್ತು ನಾಯಿ ಕಡಿತದ ಔಷಧಗಳ ಲಭ್ಯತೆಯ ಕುರಿತು ಸಿಬ್ಬಂದಿಯಿಂದ ಮಾಹಿತಿ ಪಡೆದರು. ಆಸ್ಪತ್ರೆ ಆವರಣದಲ್ಲಿ ಬೆಳೆದಿರುವ ನಿರುಪಯುಕ್ತ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಿಶನ ರಾಠೋಡ, ಶಿವಲಿಂಗಪ್ಪ ಪುಟಗಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT