ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಕೌಶಲ ಕೊರತೆಯಿಂದ ನಿರುದ್ಯೋಗ

ಪ್ರಧಾನಮಂತ್ರಿ ಕೌಶಲ ಕೇಂದ್ರ ಉದ್ಘಾಟನೆ: ನಗರಸಭೆ ಅಧ್ಯಕ್ಷೆ ಕಳವಳ
Last Updated 18 ಜುಲೈ 2017, 6:25 IST
ಅಕ್ಷರ ಗಾತ್ರ

ಕೋಲಾರ: ‘ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದರೂ ವೃತ್ತಿ ಕೌಶಲದ ಕೊರತೆಯಿಂದ ಸಾಕಷ್ಟು ಮಂದಿಗೆ ಉದ್ಯೋಗ ಸಿಗದೆ ನಿರುದ್ಯೋಗಿಗ ಳಾಗಿಯೇ ಉಳಿಯುತ್ತಿದ್ದಾರೆ’ ಎಂದು ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಇತ್ತೀಚೆಗೆ ಪ್ರಧಾನಮಂತ್ರಿ ಕೌಶಲ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ‘ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಸಾಕು ಎಂಬ ಭಾವನೆಯಿಂದ ಪೋಷಕರು ಹೊರಬರಬೇಕು. ಮಕ್ಕಳಿಗೆ ಶಿಕ್ಷಣದ ಜತೆ ವೃತ್ತಿಪರ ತರಬೇತಿ ಕೊಡಿಸುವುದರಿಂದ ಸುಲಭವಾಗಿ ಉದ್ಯೋಗ ಪಡೆಯಲು ಸಾಧ್ಯವಾ ಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಮಾಲೂರು ಮತ್ತು ಕೋಲಾರ ತಾಲ್ಲೂಕಿನಲ್ಲಿ ಅನೇಕ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಆದರೆ, ಈ ಕೈಗಾರಿಕೆಗಳಿಗೆ ಅಗತ್ಯವಿರುವ ವೃತ್ತಿ ಕೌಶಲ ಸ್ಥಳೀಯರಲ್ಲಿ ಇಲ್ಲದ ಕಾರಣ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಜಿಲ್ಲಾ ಕೇಂದ್ರದಲ್ಲಿ ವೃತ್ತಿ ಕೌಶಲ ತರಬೇತಿ ಕೇಂದ್ರ ಸ್ಥಾಪಿಸಿರುವುದು ಒಳ್ಳೆಯದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣವೊಂದೇ ಸಾಲದು: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವೊಂದೇ ಸಾಲದು. ಜತೆಗೆ ಸಾಮಾನ್ಯಜ್ಞಾನವು ಉದ್ಯೋಗ ಆಕಾಂಕ್ಷಿಗಳಲ್ಲಿ ಇರಬೇಕು. ಅನೇಕ ಸಂದರ್ಶನಗಳಲ್ಲಿ ಅಭ್ಯರ್ಥಿಗಳ ನಡತೆ, ಮಾತಿನ ಶೈಲಿ, ಧರಿಸಿರುವ ಉಡುಪು, ಭಾಷೆ, ಸಾಮಾನ್ಯ ಮತ್ತು ಸಾಮಾಜಿಕ ಜ್ಞಾನ ಗಮನಿಸಿ ನೇಮಕಾತಿ ಮಾಡಲಾಗುತ್ತದೆ. ಹೀಗಾಗಿ ತರಗತಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿದ್ದರೂ ಸಂದರ್ಶನದಲ್ಲಿ ಆಯ್ಕೆಯಾಗುವುದಿಲ್ಲ. ಇದಕ್ಕೆ ವೃತ್ತಿ ಕೌಶಲದ ಕೊರತೆ ಪ್ರಮುಖ ಕಾರಣ’ ಎಂದರು.

‘ವಿದ್ಯಾವಂತ ನಿರುದ್ಯೋಗಿಗಳಿಗೆ ಉಚಿತವಾಗಿ ಕೌಶಲ ತರಬೇತಿ ನೀಡುವುದರ ಜತೆಗೆ ಉದ್ಯೋಗಾವಕಾಶ ಕಲ್ಪಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಮಹಿಳಾ ಸಮುದಾಯ ಧಾರಾವಾಹಿ ನೋಡುತ್ತಾ ಮನೆಯಲ್ಲಿ ಕಾಲಹರಣ ಮಾಡದೆ ಸಾಧಕ ಮಹಿಳೆಯರನ್ನು ಆದರ್ಶವಾಗಿಟ್ಟುಕೊಂಡು ಜೀವನದಲ್ಲಿ ಏನಾದರೂ ಸಾಧಿಸಬೇಕು. ತಮಗೆ ಇಷ್ಟವಾದ ಕೌಶಲ ತರಬೇತಿ ಪಡೆದು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ಕರೆ ನೀಡಿದರು.

ಸದುಪಯೋಗ ಪಡೆಯಬೇಕು: ‘ಸಂಸ್ಥೆಯ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದ ನಿರುದ್ಯೋಗಿಗಳ ಪೈಕಿ ಶೇ 80ರಷ್ಟು ಮಂದಿ ಕೆಲಸಕ್ಕೆ ಸೇರಿದ್ದಾರೆ. ಶೇ 20ರಷ್ಟು ಮಂದಿ ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಂಡಂತೆ 3 ತಿಂಗಳಿಂದ 6 ತಿಂಗಳವರೆಗೆ ತರಬೇತಿ ನೀಡಲಾಗುತ್ತದೆ’ ಎಂದು ಬೆಂಗಳೂರಿನ ರೂಮನ್ ಟೆಕ್ನಾಲಜೀಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೀಶ್‌ ಕುಮಾರ್ ಕಿವಿಮಾತು ಹೇಳಿದರು.

‘ಕೆಲ ನಿರುದ್ಯೋಗಿಗಳು ಪದವಿ ಪ್ರಮಾಣಪತ್ರದೊಂದಿಗೆ ಉದ್ಯೋಗ ಹುಡುಕಿಕೊಂಡು ಹೋಗಿ ವಂಚನೆಗೆ ಒಳಗಾಗುತ್ತಿದ್ದಾರೆ. ವಿದ್ಯಾವಂತ ನಿರುದ್ಯೋಗಿಗಳಿಗೆ ವೃತ್ತಿ ಕೌಶಲ ತರಬೇತಿ ನೀಡುವ ಉದ್ದೇಶಕ್ಕಾಗಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಉದ್ಯೋಗ ಆಕಾಂಕ್ಷಿಗಳು ತರಬೇತಿಯ ಸದುಪಯೋಗ ಪಡೆಯಬೇಕು’ ಎಂದು ಸಲಹೆ ನೀಡಿದರು.

ದಾಖಲಾತಿ ಆರಂಭ: ಕೇಂದ್ರದ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ‘ಕೇಂದ್ರದಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತರು ಅರ್ಜಿ ಸಲ್ಲಿಸಿ ತರಗತಿಗೆ ಹಾಜರಾಗಬಹುದು. ಬ್ಯಾಂಕಿಂಗ್, ಕಂಪ್ಯೂಟರ್, ಮಾಹಿತಿ ತಂತ್ರಜ್ಞಾನ ಕುರಿತು ತರಬೇತಿ ನೀಡುವುದರ ಜತೆಗೆ ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾಗಿ ತರಗತಿಗಳನ್ನು ನಡೆಸಲಾಗುತ್ತದೆ’ ಎಂದು ವಿವರಿಸಿದರು.

‘ತರಬೇತಿಯು 3 ತಿಂಗಳಿಂದ 4 ತಿಂಗಳ ಅಲ್ಪಾವಧಿಯದಾಗಿದ್ದು, ಇದಕ್ಕೆ ಅಭ್ಯರ್ಥಿಗಳು ಕನಿಷ್ಠ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದರೆ ಸಾಕು. 18 ವರ್ಷ ದಿಂದ 35 ವರ್ಷದೊಳಗಿನ ತರಬೇತಿ ಪಡೆಯಬಹುದು’ ಎಂದರು.

ನಗರಸಭೆ ಸದಸ್ಯ ಪ್ರಸಾದ್‌ಬಾಬು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

**

ಕೇಂದ್ರ, ರಾಜ್ಯ ಸರ್ಕಾರ ಹಲವು ಕಡೆ ವೃತ್ತಿ ಕೌಶಲ ತರಬೇತಿ ಕೇಂದ್ರಗಳನ್ನು ಆರಂಭಿಸು ತ್ತಿವೆ. ವಿದ್ಯಾರ್ಥಿಗಳು ಕೇಂದ್ರಗಳ ಸದುಪಯೋಗಕ್ಕೆ ಮುಂದಾಗುತ್ತಿಲ್ಲ.
-ಮನೀಶ್‌ಕುಮಾರ್, ರೂಮನ್ ಟೆಕ್ನಾಲಜೀಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT