ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ, ಮಕ್ಕಳ ಆರೈಕೆಗೆ ಪ್ರತ್ಯೇಕ ಆಸ್ಪತ್ರೆ

Last Updated 19 ಜುಲೈ 2017, 6:10 IST
ಅಕ್ಷರ ಗಾತ್ರ

ರಾಯಚೂರು: ಇಲ್ಲಿರುವ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್‌) ಆವರಣದಲ್ಲಿ ಪ್ರತ್ಯೇಕವಾಗಿ ತಾಯಿ ಹಾಗೂ ಮಕ್ಕಳ ಆರೈಕೆ ಆಸ್ಪತ್ರೆ (ಎಂಸಿಎಚ್‌) ಸ್ಥಾಪಿಸಲು ಪ್ರಸ್ತಾವಯೊಂದನ್ನು ಸಿದ್ಧಪಡಿಸಿ ಕಳುಹಿಸಲಾಗಿದೆ.

ಕುಟುಂಬ ಮತ್ತು ಆರೋಗ್ಯ ಇಲಾಖೆ ಬೆಂಗಳೂರು ಕಚೇರಿಯ ಮೇಲಧಿಕಾರಿಗಳು ಸೂಚನೆ ಮೇರೆಗೆ ರಿಮ್ಸ್‌ ನಿರ್ದೇಶಕರು ಆಸ್ಪತ್ರೆ ಬೇಕು ಎಂಬ ಪ್ರಸ್ತಾವವನ್ನು ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ (ಡಿಎಂಇ) ಕಳುಹಿಸಿದ್ದು, ಹೊಸ ಆಸ್ಪತ್ರೆ ಆರಂಭಿಸಲು ಅನುಮೋದನೆ ಹಾಗೂ ಅನುದಾನಕ್ಕಾಗಿ ಕಾಯಲಾಗುತ್ತಿದೆ.

‘ತಾಯಿ ಹಾಗೂ ಮಕ್ಕಳ ಆರೈಕೆ ಆಸ್ಪತ್ರೆಯನ್ನು ಪ್ರತ್ಯೇಕ ಮಾಡುವುದಕ್ಕೆ ರಿಮ್ಸ್‌ ಆಸ್ಪತ್ರೆಯಲ್ಲಿ ಕಟ್ಟಡ ಲಭ್ಯವಿದೆ.  ಆಸ್ಪತ್ರೆಗೆ ಬೇಕಾಗುವ ವೈದ್ಯರು, ಸಿಬ್ಬಂದಿ ಹಾಗೂ ಇತರೆ ಸೌಕರ್ಯಕ್ಕಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಬೆಂಗಳೂರಿನ ಮೇಲಧಿಕಾರಿಗಳಿಗೆ ಪತ್ರ ಕಳುಹಿಸಿದ್ದೇನೆ’ ಎಂದು ರಿಮ್ಸ್‌ ನಿರ್ದೇಶಕಿ ಡಾ.ಕವಿತಾ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ರಿಮ್ಸ್‌ ಜಿಲ್ಲಾ ಆಸ್ಪತ್ರೆಯಲ್ಲಿ ಸದ್ಯ ಪ್ರತ್ಯೇಕ ಹೆರಿಗೆ ವಿಭಾಗವಿದೆ. ಭಾರತೀಯ ವೈದ್ಯಕೀಯ ಸಮಿತಿ (ಎಂಸಿಐ) ನಿಯಮಾನುಸಾರ ಈ ಆಸ್ಪತ್ರೆಯಲ್ಲಿ ಸದ್ಯಕ್ಕೆ 60 ಹಾಸಿಗೆಗಳ ಸೌಲಭ್ಯ ಇದೆ. ಆದರೆ, ಹೆರಿಗೆ ಬರುವವರಿಗೆ ಈ ಹಾಸಿಗೆಗಳು ಸಾಕಾಗುತ್ತಿಲ್ಲ.

ಆಸ್ಪತ್ರೆಯ ಬೇರೆ ವಿಭಾಗದ ಹಾಸಿಗೆಗಳಲ್ಲಿ ಹೊಂದಾಣಿಕೆ ಮಾಡಿ ಹೆರಿಗೆ ವಿಭಾಗದಲ್ಲಿ ಹೆಚ್ಚುವರಿ 30 ಹಾಸಿಗೆಗಳನ್ನು ಹೊಂದಿಸಲಾಗಿದೆ. ಹೆರಿಗೆಗಾಗಿ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ಸಂಖ್ಯೆಗೆ ಅನುಸಾರ ಹೆರಿಗೆ ವಿಭಾಗದಲ್ಲಿ ಹಾಸಿಗೆಗಳು ಸಾಕಾಗುತ್ತಿಲ್ಲ. ಹಾಸಿಗೆ ಹೊಂದಿಸುವುದು ಆಸ್ಪತ್ರೆ ಸಿಬ್ಬಂದಿಗೆ ದೊಡ್ಡ ತಲೆನೋವಿನ ವಿಷಯವಾಗಿ ಪರಿಣಮಿಸಿದೆ.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕುಟುಂಬ ಹಾಗೂ ಆರೋಗ್ಯ ಇಲಾಖೆಯು ತಾಯಿ ಹಾಗೂ ಮಕ್ಕಳ ಆರೈಕೆಗಾಗಿ ಪ್ರತ್ಯೇಕ ಆಸ್ಪತ್ರೆ ಸ್ಥಾಪಿಸಲು ಕ್ರಮ ವಹಿಸಿದೆ. ಹೆಚ್ಚುತ್ತಿರುವ ಹೆರಿಗೆಗಳು ಹಾಗೂ ಮಕ್ಕಳ ಆರೋಗ್ಯ ಕಾಪಾಡುವುದಕ್ಕಾಗಿ ಕಲಬುರ್ಗಿಯಲ್ಲಿ ತಾಯಿ ಹಾಗೂ ಮಕ್ಕಳ ಆರೈಕೆಗಾಗಿ ಪ್ರತ್ಯೇಕ ಆಸ್ಪತ್ರೆ ಸ್ಥಾಪಿಸಲು ಸರ್ಕಾರವು ಈ ಹಿಂದಿನ ಬಜೆಟ್‌ನಲ್ಲಿ ಘೋಷಿಸಿ ಕ್ರಮ ಕೈಗೊಂಡಿದೆ. ಇದೀಗ ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಪ್ರತ್ಯೇಕ ಆಸ್ಪತ್ರೆ ಸ್ಥಾಪಿಸಲಾಗುತ್ತಿದೆ.

ಪ್ರತಿದಿನ 20 ಹೆರಿಗೆಗಳು!
ರಿಮ್ಸ್‌ ಆಸ್ಪತ್ರೆಯಲ್ಲಿ ಪ್ರತಿದಿನ ಸರಾಸರಿ 20 ಹೆರಿಗೆಗಳು ಆಗುತ್ತಿವೆ. ಸಾಮಾನ್ಯ ಹೆರಿಗೆ ಆದ ಬಾಣಂತಿಯರು ಕನಿಷ್ಠ ಎರಡು ದಿನ ಆಸ್ಪತ್ರೆಯಲ್ಲಿ ಇರುತ್ತಾರೆ. ಹೆರಿಗೆಯಲ್ಲಿ ರಕ್ತಸ್ರಾವ ಸಮಸ್ಯೆ ಕಾಣಿಸಿಕೊಂಡವರು  ಹೆಚ್ಚು ದಿನ ಉಳಿದುಕೊಳ್ಳುತ್ತಾರೆ.

ಶಸ್ತ್ರಕ್ರಿಯೆ ಮೂಲಕ ಹೆರಿಗೆ ಮಾಡಿಸಿಕೊಂಡವರನ್ನು ಒಂದು ವಾರ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲಾಗುತ್ತದೆ. ಹೆರಿಗೆ ವಿಭಾಗದಲ್ಲಿ ಪ್ರತಿದಿನ 20 ಮಂದಿ ಹೊಸದಾಗಿ ದಾಖಲಾಗುವುದರಿಂದ ಒಟ್ಟು ಸಂಖ್ಯೆ 100 ದಾಟುತ್ತದೆ. ಇದರಿಂದ ಸಾಕಷ್ಟು ಒತ್ತಡ ನಿರ್ಮಾಣವಾಗುತ್ತಿದೆ ಎನ್ನುವುದು ರಿಮ್ಸ್‌ ಸಿಬ್ಬಂದಿಯ ಅಳಲು.

ಹೆಚ್ಚಿದ ಶಸ್ತ್ರಕ್ರಿಯೆ ಹೆರಿಗೆಗಳು
ರಿಮ್ಸ್‌ ಆಸ್ಪತ್ರೆ ದಾಖಲೆಗಳ ಪ್ರಕಾರ ಶಸ್ತ್ರಕ್ರಿಯೆ ಹೆರಿಗೆಗಳ ಪ್ರಮಾಣ ಹೆಚ್ಚಾಗುತ್ತಿದೆ. 2016ರ ಜನವರಿಯಿಂದ ಡಿಸೆಂಬರ್‌ವರೆಗೂ ಒಟ್ಟು 6,451 ಹೆರಿಗೆಗಳಾಗಿವೆ. ಅದರಲ್ಲಿ 1,691 ಶಸ್ತ್ರಕ್ರಿಯೆ ಹೆರಿಗೆಗಳು. 2017 ರ ಜನವರಿಯಿಂದ ಜೂನ್‌ ಅಂತ್ಯದವರೆಗೂ 2,910 ಹೆರಿಗೆಗಳಾಗಿವೆ. ಅದರಲ್ಲಿ 849 ಶಸ್ತ್ರಕ್ರಿಯೆ ಮೂಲಕ ಹೆರಿಗೆ ಮಾಡಿಸಲಾಗಿದೆ.

* * 

ಹೆರಿಗೆಗಾಗಿ ಬರುವವರ ಸಂಖ್ಯೆ ದಿನದಿನಕ್ಕೆ ಹೆಚ್ಚಾಗುತ್ತಿದೆ.  ಈ ಭಾಗದ ಮಹಿಳೆಯರಿಗೆ ಅನುಕೂಲ ಕಲ್ಪಿಸಲು ಹೆಚ್ಚು ಹಾಸಿಗೆ ಸೌಲಭ್ಯಗಳ ಅಗತ್ಯ ಇದೆ
ಡಾ.ಕವಿತಾ ಪಾಟೀಲ
ರಿಮ್ಸ್‌ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT