ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರಿಂದ ಆಸ್ಪತ್ರೆ ವೆಚ್ಚ ಭರಿಸುವ ಭರವಸೆ

Last Updated 19 ಜುಲೈ 2017, 6:18 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನ ಮುಗನೂರು ಗ್ರಾಮದಲ್ಲಿನ ಜಮೀನು ವಿವಾದದಲ್ಲಿ ಮೃತಪಟ್ಟ ಕೋಲಿ ಕುಟುಂಬದ ಪರಿವಾರಕ್ಕೆ ಮಂಗಳವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಭೇಟಿ ನೀಡಿ ಸಾಂತ್ವನ ಹೇಳಿದರು.

‘ಜಮೀನು ವಿವಾದದಲ್ಲಿ ಮೂವರು ಮೃತಪಟ್ಟಿರುವುದು ದುರ್ದೈವ ಸಂಗತಿ. ಹೊಡೆದಾಟವೇ ನ್ಯಾಯಕ್ಕೆ ಪರಿಹಾರವಲ್ಲ. ಬದಲಾಗಿ ಕಾನೂನು ಪ್ರಕಾರ ನ್ಯಾಯಯುತವಾಗಿ ಹೋರಾಟ ಮಾಡಬೇಕಿತ್ತು. ಆದರೆ ಈ ರೀತಿಯ ದಾರುಣ ಹಲ್ಲೆ ಮಾಡಿ ಕೊಲೆ ಮಾಡಿರುವುದು ಖಂಡನೀಯ. ಮೃತಪಟ್ಟವರು ಮರಳಿ ಬರುವುದಿಲ್ಲ. ಇರುವವರು ಧೈರ್ಯದಿಂದ ಇರಬೇಕು. ಸರ್ಕಾರ ಯಾವತ್ತೂ ಕೂಡ ನಿಮ್ಮ ಬೆಂಬಲಕ್ಕೆ ಇರುತ್ತದೆ’ ಎಂದು ಸಚಿವರು ಸಂತೈಸಿದರು.

‘ಕಲಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿರುವ ನಮ್ಮ ಕುಟುಂಬದಲ್ಲಿನ ಗಾಯಗೊಂಡ ಸದಸ್ಯರಿಗೆ ಚಿಕಿತ್ಸೆ ನೀಡಲು ಹಣ ಕೇಳುತ್ತಿದ್ದಾರೆ. ಬೆಳಿಗ್ಗೆಯಿಂದ ನಾಲ್ಕೈದು ಬಾರಿ ದೂರವಾಣಿ ಕರೆ ಮಾಡಿ ಹಣ ಕಟ್ಟಿ ಎಂದು ಸತಾಯಿಸುತ್ತಿದ್ದಾರೆ’ ಎಂದು ಮೃತ ದೇವರಾಯನ ಮಗಳಾದ ಶೋಭಾ ಅವರು ಸಚಿವರ ಬಳಿ ತಮ್ಮ ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ನಾನು ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಪರಿಸ್ಥಿತಿಯನ್ನು ಅವಲೋಕಿಸಿ ಬಂದಿದ್ದೇನೆ. ಯಾವುದೇ ರೀತಿಯಲ್ಲಿ ಪ್ರಾಣಕ್ಕೆ ಹಾನಿಯಿಲ್ಲ ಎಂಬ ಮಾಹಿತಿ ಇದೆ. ಅಲ್ಲದೆ, ಆಸ್ಪತ್ರೆಯ ಖರ್ಚನ್ನು ಸರ್ಕಾರದಿಂದ ಭರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದು ಹೇಳಿದರು.

ತಾಲ್ಲೂಕಿನ ಬಿಬ್ಬಳ್ಳಿ ಗ್ರಾಮಕ್ಕೆ ತೆರಳಿದ ಸಚಿವರು, ದಾರಿಯ ವಿವಾದದಿಂದ ಉದ್ಭವಿಸಿದ ಜಗಳದಿಂದ ಮೃತಪಟ್ಟ ದೇವಿಂದ್ರಪ್ಪ ಹರಿಜನ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಘಟನೆ ವಿವರ: ದೇವಿಂದ್ರಪ್ಪ ಅವರ ಮನೆಯ ದಾರಿ ವಿವಾದದಿಂದ ಬಡಾವಣೆಯಲ್ಲಿನ ಕೆಲವರ ಜೊತೆ ಈ ಹಿಂದೆ ಹೊಡೆದಾಟವಾಗಿತ್ತು. ಅದರಲ್ಲಿ ದೇವಿಂದ್ರಪ್ಪ ಅವರಿಗೆ ಗಾಯವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಕೊಲೆಯ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲಾಗಿದೆ.

‘ಕಾಡಾ’ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಎಪಿಎಂಸಿ ಮಾಜಿ ಸದಸ್ಯ ಕರೆಪ್ಪ ಪಿಲ್ಲಿ, ಕಾಂಗ್ರೆಸ್ ಮುಖಂಡ ರಾಜಶೇಖರ ಪುರಾಣಿಕ, ಎಪಿಎಂಸಿ ಸದಸ್ಯ ಸಿದ್ದು ಬಾನಾರ್, ಕೋಲಿ ಸಮಾಜ ಯುವಶಕ್ತಿ ಕೇಂದ್ರದ ಅಧ್ಯಕ್ಷ ರುದ್ರು ಪಿಲ್ಲಿ, ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಜಗನ್ನಾಥ ಪಾಟೀಲ ಬಿಬ್ಬಳ್ಳಿ, ರಾಚಪ್ಪ ಸಾಹುಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT