ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಭೀತಿಗೆ ತತ್ತರಿಸುತ್ತಿರುವ ಕ್ಷೇತ್ರ

Last Updated 19 ಜುಲೈ 2017, 7:32 IST
ಅಕ್ಷರ ಗಾತ್ರ

ಗೋಕಾಕ: ಮೂರು ಶತಮಾನಗಳ ಮೊದಲು ನಗರ ಹೊರವಲಯದ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ಸಂಗಮ ಸ್ಥಳದಲ್ಲಿ ನಿರ್ಮಿಸಲ್ಪಟ್ಟ ಸಂಗಮೇಶ್ವರ ದೇವಾಲಯ ಇಂದು ಜೀರ್ಣೋದ್ಧಾರಕ್ಕಾಗಿ ಕಾದಿದೆ.

ಈ ಮೊದಲು ಸಂಗಮೇಶ್ವರ ದೇವಾಲಯಕ್ಕೆ ಪ್ರತಿ ಸೋಮವಾರ ಭಕ್ತರ ಮಹಾಪೂರವೇ ಹರಿದು ಬರುತ್ತಿತ್ತು. ಕಾಲ ಕ್ರಮೇಣ ಸಂಪರ್ಕ ರಸ್ತೆಯ ಕೊರತೆ ಹಾಗೂ ಪ್ರತಿವರ್ಷ ಉಭಯ ನದಿಗಳಿಗೆ ಮಹಾಪೂರ ಬಂದಾಗಲೆಲ್ಲ ದೇವಾಲಯದ ಸಮುಚ್ಚಯ ಸಂಪೂರ್ಣವಾಗಿ ಮುಳುಗುತ್ತಿದ್ದರಿಂದ ಆವರಣ ಗೋಡೆ ಮತ್ತು ಪ್ರವೇಶ ದ್ವಾರ ಧ್ವಂಸಗೊಂಡಿದ್ದರಿಂದ ಆ ಬಗ್ಗೆ ಯಾವುದೇ ಕುರುಹುಗಳೂ ಇಲ್ಲದಂತಾಗಿವೆ.

ಇದನ್ನರಿತ ದೇವಾಲಯದ ಅರ್ಚಕರಾದ ಬಸಯ್ಯ ಪೂಜಾರಿ ಮತ್ತು ಶ್ರೀಶೈಲ ಪೂಜಾರಿ ಕಳೆದ ಹಲವು ತಿಂಗಳಿಂದ ಅದರ ಜೀರ್ಣೋದ್ಧಾರದ ಭಾಗವಾಗಿ ಭಕ್ತರ ಟ್ರಸ್ಟ್‌ ರಚಿಸಿದ್ದಾರೆ. ಆ ಮೂಲಕ ದೇವಾಲಯ ತಲುಪಲು ಸಾಧ್ಯವಾಗುವಂತೆ, ಈಗಿರುವ ವೀರಶೈವ ಸಮಾಜದ ರುದ್ರಭೂಮಿಯ ಹಿಂಭಾಗದಿಂದ ನದಿಯಾಚೆಯ ಸಂಗಮೇಶ್ವರ ದೇವಾಲಯ ತಲುಪಲು ₹ 20 ಲಕ್ಷ ವೆಚ್ಚದಲ್ಲಿ 61 ಮೀಟರ್‌ ಉದ್ದದ ತೂಗು ಸೇತುವೆ ನಿರ್ಮಿಸಲು ನೀಲನಕ್ಷೆ ತಯಾರಿಸಿದ್ದಾರೆ.

ಪ್ರವಾಹದ ನೀರಿನಿಂದ ದೇವಸ್ಥಾನದ ಆವರಣ ಗೋಡೆ ಹಾಳಾಗುತ್ತಿದೆ, ಇದನ್ನು ತಡೆಗಟ್ಟಲು  250 ಟ್ರ್ಯಾಲಿಗಳ ಮೂಲಕ ಭಾರವಾದ ಕಲ್ಲು–ಮಣ್ಣನ್ನು ಸುರಿದು ದೇವಾಲಯದ ಅಂಗಳಕ್ಕೆ ಭವಿಷ್ಯದಲ್ಲಿ ಧಕ್ಕೆ ಉಂಟಾಗದಂತೆ ಕ್ರಮಗಳನ್ನು ಕೈಗೊಂಡಿರುವ ಉಭಯ ಅರ್ಚಕರ ಯತ್ನ ಶ್ಲಾಘನೀಯ ಎನ್ನುತ್ತಾರೆ ಭಕ್ತರು.

ಟ್ರಸ್ಟ್‌ಗೆ ಈಗಾಗಲೇ ಸಂಗಮನಾಥನ ಅನೇಕ ಭಕ್ತರು ಸ್ವಯಂ ಪ್ರೇರಿತರಾಗಿ ಆರ್ಥಿಕ ನೆರವು ನೀಡುವ ವಾಗ್ದಾನವನ್ನು ನೀಡಿದ್ದಾರೆ ಎನ್ನಲಾಗಿದೆ. ಸರ್ಕಾರದ ಮುಜರಾಯಿ ಇಲಾಖೆ, ಸಂಘ–ಸಂಸ್ಥೆಗಳು ಹಾಗೂ ದಾನಿಗಳು ಜೀರ್ಣೋದ್ಧಾರ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಲು ಮುಂದಾದಲ್ಲಿ ಕೇವಲ ಮುಂದಿನ 12 ತಿಂಗಳ ಕಾಲಾವಧಿಯಲ್ಲಿ ನೂತನ ತೂಗು ಸೇತುವೆ ನಿರ್ಮಾಣಗೊಂಡು 2018ರ ಶ್ರಾವಣ ಮಾಸದ ವೇಳೆಗೆ ಭಕ್ತರು ಸಂಗಮೇಶ್ವರ ದೇವಾಲಯ ತಲುಪುವುದು ಸಾಧ್ಯವಾಗಲಿದೆ ಎನ್ನುತ್ತಾರೆ ಅರ್ಚಕ ಬಸಯ್ಯ ಪೂಜಾರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT